ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳುಹಂದಿ ಬೇಟೆಗೆ ಹೋದ ಚಿರತೆ ಸಾವು

Last Updated 21 ಫೆಬ್ರುವರಿ 2011, 16:30 IST
ಅಕ್ಷರ ಗಾತ್ರ

ಹರಪನಹಳ್ಳಿ (ದಾವಣಗೆರೆ ಜಿಲ್ಲೆ): ಹಸಿವಿನಿಂದ ಬಳಲಿದ್ದ ಗಂಡು ಚಿರತೆಯೊಂದು ಮುಳ್ಳುಹಂದಿಯನ್ನು ಬೇಟೆಯಾಡಲು ಹೋಗಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಉಚ್ಚಂಗಿದುರ್ಗದ ಉತ್ಸವಾಂಬ ದೇವಿಯ ಗುಡ್ಡದಲ್ಲಿ ನಡೆದಿದ್ದು, ಚಿರತೆಯ ಶವ ಸೋಮವಾರ ಪತ್ತೆಯಾಗಿದೆ.

ಗ್ರಾಮಕ್ಕೆ ಹೊಂದಿಕೊಂಡಿರುವ ಉತ್ಸವಾಂಬೆಯ ಗುಡ್ಡದಲ್ಲಿ ನಾಲ್ಕೈದು ದಿನಗಳ ಹಿಂದೆ ಚಿರತೆಯೊಂದು ಮುಳ್ಳುಹಂದಿಯ ಮೇಲೆ ದಾಳಿ ನಡೆಸಿದೆ. ಚಿರತೆಯ ಬಾಯಿಂದ ತಪ್ಪಿಸಿಕೊಳ್ಳಲು ಮುಳ್ಳುಹಂದಿ ತನ್ನ ಮೈಮೇಲಿನ ಮುಳ್ಳುಗಳಿಂದ ಚಿರತೆಯ ಹೊಟ್ಟೆ, ಎದೆಯ ಭಾಗದಲ್ಲಿ ಬಲವಾಗಿ ಚುಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಗಾಯಗೊಂಡ ಚಿರತೆ ಮುಳ್ಳುಗಳನ್ನು ಕಿತ್ತೆಸೆಯಲು ಅಕ್ಕಪಕ್ಕದ ಕಲ್ಲುಗಳಿಗೆ ಮೈ ಉಜ್ಜಿಕೊಂಡಿದೆ. ಆದರೂ ಮುಳ್ಳುಗಳು ಬಲವಾಗಿ ದೇಹದ ಒಳಭಾಗಕ್ಕೆ ಗಾಯಗೊಳಿಸಿದ್ದರಿಂದ ಚಿರತೆ ಪ್ರಾಣ ಬಿಟ್ಟಿದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.ಭಾನುವಾರ ಸಂಜೆ ಜಾನುವಾರು ಮೇಯಿಸಲೆಂದು ಗುಡ್ಡದ ಮೇಲೆ ಅವಳಿ ನಾಗರಾಜ ಎಂಬುವವರು ಹೋದಾಗ ಸತ್ತುಬಿದ್ದಿರುವ ಚಿರತೆಯ ದೇಹ ಕಾಣಿಸಿದೆ. ಅರಸೀಕೆರೆ ಠಾಣೆಯ ಪಿಎಸ್‌ಐ ಲಕ್ಷ್ಮಣ ನಾಯ್ಕ ಸ್ಥಳ ಪರಿಶೀಲಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದರು.

ವಲಯ ಅರಣ್ಯಾಧಿಕಾರಿ ಮೋಹನ್ ‘ಹಸಿವಿನಿಂದ ಕಂಗಾಲಾಗಿದ್ದ ಚಿರತೆಯು ಮುಳ್ಳುಹಂದಿಯ ಮೇಲೆ ದಾಳಿ ನಡೆಸಿರಬಹುದು. ಅದರಿಂದ ತಪ್ಪಿಸಿಕೊಳ್ಳಲು ಮುಳ್ಳಿನಿಂದ ಹೊಡೆದ ಪರಿಣಾಮ, ಚಿರತೆ ಸಾವನ್ನಪ್ಪಿದೆ. ಬಹು ದಿನಗಳಿಂದಲೂ ಈ ಭಾಗದಲ್ಲಿ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಜಾನುವಾರುಗಳನ್ನು ತಿಂದು ಹಾಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದರು. ಇದುವರೆಗೂ ಯಾರೂ ಇಲಾಖೆಗೆ ದೂರು ಸಲ್ಲಿಸಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿರತೆ ದೇಹದಲ್ಲಿ ಹಂದಿಯ ಮುಳ್ಳುಗಳು ಚುಚ್ಚಿ ಒಂದೆಡೆ ರಕ್ತದ ಚಲನೆ ಸ್ಥಗಿತವಾಗಿದೆ, ಇನ್ನೊಂದೆಡೆ ನಂಜು ದೇಹಕ್ಕೆ ಏರಿ ಚಿರತೆ ಸಾವನ್ನಪ್ಪಿದೆ’ ಎಂದು ಕಮ್ಮತ್ತಹಳ್ಳಿ ಪಶು ಚಿಕಿತ್ಸಾಲಯದ ಡಾ.ಗಿರಿರಾಜ ಮಾಹಿತಿ ನೀಡಿದರು.ಮರಣೋತ್ತರ ಪರೀಕ್ಷೆ ಬಳಿಕ ಚಿರತೆಯ ದೇಹವನ್ನು ಸುಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT