ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷರಫ್‌ಗೆ ತಾಕೀತು

ಬೆನಜೀರ್ ಹತ್ಯೆ ಪ್ರಕರಣದ ತನಿಖೆಗೆ ಸಹಕರಿಸಿ: ಕೋರ್ಟ್
Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಯು ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕೆಂದು ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಮಂಗಳವಾರ ನಿರ್ದೇಶನ ನೀಡಿದೆ.

ತನಿಖಾ ಸಂಸ್ಥೆಗೆ ಸಹಕಾರ ನೀಡುವಂತೆಯೂ ಮುಷರಫ್ ಅವರಿಗೆ ನ್ಯಾಯಮೂರ್ತಿ ಹಬೀಬ್-ಉರ್-ರೆಹಮಾನ್ ಸೂಚನೆ ನೀಡಿದರು. ಅಲ್ಲದೇ ಪ್ರಕರಣದ ವಿಚಾರಣೆಯನ್ನು ಮೇ 3ಕ್ಕೆ ಮುಂದೂಡಿದರು.

ರಾಜದ್ರೋಹ ಆರೋಪ ಸಂಬಂಧ ನಗರ ಹೊರವಲಯದ ತೋಟದ ಮನೆಯಲ್ಲಿ ಬಂಧನದಲ್ಲಿರುವ ಮುಷರಫ್ ಅವರನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ವಾಪಸ್ ಕರೆದೊಯ್ಯಲಾಯಿತು.

ಮುಷರಫ್ ಮೇಲಿನ ದೇಶಭ್ರಷ್ಟ ಆರೋಪ ಮತ್ತು ಅವರ ಆಸ್ತಿ, ಬ್ಯಾಂಕ್ ಖಾತೆ ಮುಟ್ಟುಗೋಲು ಆದೇಶವನ್ನು ವಾಪಸ್ ಪಡೆದುಕೊಳ್ಳುವಂತೆ ಅವರ ಪರ ವಕೀಲರು ನ್ಯಾಯಮೂರ್ತಿಯನ್ನು ಕೋರಿದರು. ಮುಷರಫ್ ಈಗ ನ್ಯಾಯಾಲಯಕ್ಕೆ ಹಾಜರಾಗಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹಿಂಪಡೆಯಬೇಕೆಂದು ಅವರು ಮನವಿ ಮಾಡಿದರು.

ಅರ್ಜಿಯ ವಿಚಾರಣೆ: ಇನ್ನೊಂದು ಬೆಳವಣಿಗೆಯಲ್ಲಿ ರಾಜದ್ರೋಹಕ್ಕೆ ಸಂಬಂಧಿಸಿ ಸಲ್ಲಿಸಿದ ಅರ್ಜಿ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು.

ದೊಡ್ಡ ಪೀಠದಿಂದ ವಿಚಾರಣೆ ನಡೆಸುವುದು ಅಥವಾ ಪೂರ್ಣ ಪ್ರಮಾಣದ ನ್ಯಾಯಾಲಯಕ್ಕೆ ಪ್ರಕರಣವನ್ನು ಒಪ್ಪಿಸುವ ಬಗ್ಗೆ ಮೊದಲು ನಿರ್ಧರಿಸಬೇಕೆಂದು ಮುಷರಫ್ ಪರ ವಕೀಲರ ತಂಡದ ಮುಖ್ಯಸ್ಥ ಅಹಮ್ಮದ್ ರಜಾ ಕಸೂರಿ ಕೋರಿದರು.

ಮುಷರಫ್ ಬೆಂಬಲಿಗರು- ವಕೀಲರ ಮಧ್ಯೆ ಘರ್ಷಣೆ: ಬೆನಜೀರ್ ಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೋರ್ಟ್ ಹೊರಗಡೆ ಮುಷರಫ್ ಬೆಂಬಲಿಗರು ಮತ್ತು ವಕೀಲರ ಮಧ್ಯೆ ಘರ್ಷಣೆ ನಡೆಯಿತು. ವಕೀಲರ ಗುಂಪು ಮುಷರಫ್ ಬೆಂಬಲಿಗರನ್ನು ಬೆತ್ತದಿಂದ ಮನಬಂದಂತೆ ಥಳಿಸಿದರು.
ಪರಸ್ಪರ ಕಲ್ಲು ತೂರಾಟದಿಂದ ಹಲವು ವಾಹನಗಳು ಹಾನಿಗೊಳಗಾದವು.

ಹೈಕೋರ್ಟ್ ನೋಟಿಸ್: ಮುಷರಫ್ ಅವರ ತೋಟದ ಮನೆಯನ್ನೇ `ಉಪ ಕಾರಾಗೃಹ' ಎಂದು ಘೋಷಿಸಿರುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳಿಗೆ ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ಅಧಿಕಾರಿಗಳ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳು, ಏಪ್ರಿಲ್ 29ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದರು.

ಪೊಲೀಸರಿಗೆ ಹೈಕೋರ್ಟ್ ತರಾಟೆ
ಮುಷರಫ್ ನ್ಯಾಯಾಲಯದಿಂದ ಓಡಿ ಹೋಗುವ ವೇಳೆ ಅವರನ್ನು ತಡೆದು, ವಶಕ್ಕೆ ಪಡೆಯುವಲ್ಲಿ ವಿಫಲರಾದ ಪೊಲೀಸ್ ಅಧಿಕಾರಿಗಳನ್ನು ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.

2007ರಲ್ಲಿ ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಹೇರಿ 60 ನ್ಯಾಯಮೂರ್ತಿಗಳನ್ನು ವಜಾಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಏಪ್ರಿಲ್ 18ರಂದು ಮುಷರಫ್ ಕೋರ್ಟ್‌ಗೆ ಆಗಮಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೌಕತ್ ಅಜೀಜ್ ಸಿದ್ದಿಕಿ ಅವರು, ಮುಷರಫ್ ಅವರನ್ನು ಕೂಡಲೇ ಬಂಧಿಸುವಂತೆ ಆದೇಶ ನೀಡಿದ್ದರು. ಆದರೆ, ಮುಷರಫ್ ತಮ್ಮ ಅಂಗರಕ್ಷಕರ ನೆರವಿನೊಂದಿಗೆ ಅಲ್ಲಿಂದ ಪರಾರಿಯಾಗಿದ್ದರು. ಈ ವೇಳೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು.

ಆ ದಿನ ಕರ್ತವ್ಯದಲ್ಲಿದ್ದ ಉಪ ಪೊಲೀಸ್ ಅಧೀಕ್ಷಕ (ಡಿವೈಎಸ್‌ಪಿ) ಇದ್ರೀಸ್ ರಾಥೋಡ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಡೆಪ್ಯುಟಿ ಅಟಾರ್ನಿ ಜನರಲ್ ತಾರೀಕ್ ಜಹಾಂಗೀರಿ ಕೋರ್ಟ್‌ಗೆ ಮಾಹಿತಿ ನೀಡಿದರು. ಇಸ್ಲಾಮಾಬಾದ್ ಪೊಲೀಸ್ ಮುಖ್ಯಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಂತರಿಕ ಭದ್ರತಾ ಇಲಾಖೆಯ ಕಾಯದರ್ಶಿ ಈಗಾಗಲೇ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT