ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ ತಪ್ಪು. ಬೇರೆ ದಾರಿ ಇರಲಿಲ್ಲ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

* ವಕೀಲರು ಮುಷ್ಕರ ಮಾಡಿದ್ದು ಸರಿಯೇ?
ಸರಿ ಎಂದು ನಾನು ಹೇಳುವುದಿಲ್ಲ. ಆದರೆ ಅದು ತಪ್ಪು ಎಂದೂ ಹೇಳಲಾಗದು. ಏಕೆಂದರೆ ಅದು ಪೂರ್ವ ನಿಯೋಜಿತ ಮುಷ್ಕರ ಅಲ್ಲ. ಪೊಲೀಸರು ನಡೆಸಿರುವ ದೌರ್ಜನ್ಯ ಖಂಡಿಸಿ ರೊಚ್ಚಿಗೆದ್ದು ಏಕಾಏಕಿ ವಕೀಲರು ಬೀದಿಗಿಳಿಯುವ ಪ್ರಸಂಗ ಉಂಟಾಯಿತು.

ವಕೀಲರ ಮುಷ್ಕರಿಂದ ಎರಡು ದಿನ ಜನರಿಗೆ ಹಾಗೂ ಕಕ್ಷಿದಾರರಿಗೆ ತೊಂದರೆಯಾಗಿದೆ. ಅದರಂತೆ ಮಾಧ್ಯಮದವರಿಗೂ ವಕೀಲರ ವರ್ತನೆಯಿಂದ ನೋವಾಗಿದೆ. ಈ ಎಲ್ಲ ತೊಂದರೆಗಳಿಗೆ ಕಾರಣ ಏನೇ ಇದ್ದರೂ ವಕೀಲರ ಪರವಾಗಿ ನಾನು ಕ್ಷಮಾಪಣೆ ಕೇಳುತ್ತೇನೆ~

* ನಿಮಗೆ ಮುಷ್ಕರ ಮಾಡುವುದು ತಿಳಿದಿತ್ತೇ?
ಇಲ್ಲ. ಖಂಡಿತ ಗೊತ್ತಿರಲಿಲ್ಲ.  ಮುಷ್ಕರ ನಡೆಸುವ ಸಂಬಂಧ ಯಾವುದೇ ಸಭೆಯೂ ಕರೆದಿರಲಿಲ್ಲ. ಆದರೆ ವಕೀಲ ಬಾಲಕೃಷ್ಣ ಅವರ ಮೇಲೆ ಪೊಲೀಸರು ನಡೆಸಿದ್ದ ಹಲ್ಲೆ ಕಂಡು ವಕೀಲರು ಮುಷ್ಕರ ಆರಂಭಿಸಿದರು. ಸುಮಾರು ಒಂದು ಗಂಟೆ ನಂತರ ವಿಷಯ ಗೊತ್ತಾಯಿತು.

* ಮುಷ್ಕರ ನಿಲ್ಲಿಸಲು ಪ್ರಯತ್ನ ಮಾಡಲಿಲ್ಲವೇ?
ಮಾಡಿದೆ. ಆದರೆ ಆಗ ಪರಿಸ್ಥಿತಿ ಕೈಮೀರಿ ಹೋಗಿತ್ತು. ನನ್ನ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಯುವ ವಕೀಲರು ಇರಲಿಲ್ಲ. ಏಕೆಂದರೆ ಅವರಿಗೆ ನನ್ನ ಮಾತಿಗಿಂತ ಪೊಲೀಸರು ವಿನಾಕಾರಣ ನಡೆಸಿದ್ದ ದೌರ್ಜನ್ಯವೇ ಹೆಚ್ಚಾಗಿ ಕಾಣಿಸಿತು.

ಅಷ್ಟೇ ಅಲ್ಲದೇ ಕೂಡಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ವಕೀಲರ ಮನವಿಗೆ ಸ್ಪಂದಿಸಿದ್ದರೆ ಪರಿಸ್ಥಿತಿ ಇಷ್ಟು ಕೈ ಮೀರುತ್ತಲೂ ಇರಲಿಲ್ಲ. ವಕೀಲ ಬಾಲಕೃಷ್ಣ ಅವರ ಮೇಲೆ ದೌರ್ಜನ್ಯ ನಡೆಸಿರುವ ಒಬ್ಬರೇ ಒಬ್ಬ ಪೊಲೀಸರ ವಿರುದ್ಧವೂ ಅವರು ಕ್ರಮ ಕೈಗೊಳ್ಳಲಿಲ್ಲ ಎಂದರೆ ಏನರ್ಥ?

* ಪೊಲೀಸರು ಜೊತೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತಲ್ಲವೇ?
`ಒಂದೋ, ಎರಡೋ ಬಾರಿ ಈ ರೀತಿ ಪೊಲೀಸರು ವಕೀಲರ ಮೇಲೆ ದೌರ್ಜನ್ಯ ನಡೆಸಿದ್ದರೆ ಮಾತುಕತೆಯೇ ಪರಿಹಾರ ಆಗುತ್ತಿತ್ತೇನೋ. ಆದರೆ ಇದು ಹಾಗಲ್ಲ.   ಬಹಳ ಹಿಂದಿನಿಂದಲೂ ವಕೀಲರ ಮೇಲೆ ಪೊಲೀಸರ ದೌರ್ಜನ್ಯ ಹೆಚ್ಚುತ್ತಲೇ ಇದೆ. ಕಕ್ಷಿದಾರರ ಪರವಾಗಿ ಠಾಣೆಗಳಿಗೆ ಹೋಗುವುದರಿಂದ ಹಿಡಿದು ಯಾವುದೇ ಕೆಲಸಕ್ಕೆ ಹೋದರೂ ಪೊಲೀಸರು ಅವರನ್ನು ಕೆಂಗಣ್ಣಿನಿಂದ ನೋಡುತ್ತಾರೆ.

ಈ ಹಿಂದೆ ತಿಲಕನಗರ, ಕಬ್ಬನ್ ಪಾರ್ಕ್ ಹೀಗೆ ಹಲವು ಠಾಣೆಗಳಲ್ಲಿ ವಕೀಲರಿಗೆ ಕಹಿ ಅನುಭವ ಆಗಿದೆ. ಈ ಸಿಟ್ಟುಗಳು ವಕೀಲರಲ್ಲಿ ಒಳಗೊಳಗೇ ಕುದಿಯುತ್ತಿತ್ತು. ಆ ದಿನ ಅದು ಭುಗಿಲೆದ್ದಿತು.

* ತಾವು ಏನು ಮಾಡಿದರೂ ನಡೆಯುತ್ತದೆ ಎಂಬಂತೆ ವಕೀಲರು ವರ್ತಿಸುತ್ತಾರೆ ಎನ್ನುವುದು ಪೊಲೀಸರ ಆರೋಪ ಇದೆಯಲ್ಲ?
ಇದು ಸುಳ್ಳು ಆರೋಪ. ವಕೀಲರ ಮೇಲೆ ಪೊಲೀಸರು ನಿರಂತರವಾಗಿ ದೌರ್ಜನ್ಯ ನಡೆಸುತ್ತಲೇ ಬಂದಿದ್ದಾರೆ. ಕಳೆದ ವಾರ ನಡೆದ ಘಟನೆಯೂ ಅಷ್ಟೇ. ಅದರಲ್ಲಿ ವಕೀಲ ಬಾಲಕೃಷ್ಣ ಅವರದ್ದು ಯಾವುದೇ ತಪ್ಪು ಇಲ್ಲ.

* ಮಾರನೆಯ ದಿನ ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ್ದು ಸರಿಯೇ, ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಅಲ್ಲವೇ?
ನಾವು ಬಹಿಷ್ಕಾರ (`ಬೈಕಾಟ್~) ಅಂತೇನೂ ಮಾಡಿರಲಿಲ್ಲ. ನ್ಯಾಯಾಂಗದ ಕಲಾಪದಿಂದ ದೂರ ಉಳಿದಿದ್ದೆವು ಅಷ್ಟೇ. ಇದು ಕೋರ್ಟ್ ಆದೇಶ ಉಲ್ಲಂಘನೆ ಅನ್ನುವುದಕ್ಕಿಂತ, ನಮಗೆ (ವಕೀಲರಿಗೆ) ಪೊಲೀಸರಿಂದ ಅನ್ಯಾಯ ಆಗಿದೆ ಎಂದು ಅಧಿಕಾರಿಗಳ ಗಮನ ಸೆಳೆಯಲು ಬೇರೆ ದಾರಿ ಇರಲಿಲ್ಲ.

* ವಕೀಲರ ಸಿಟ್ಟು ಇದ್ದುದು ಪೊಲೀಸರ ಮೇಲೆ. ಆದರೆ ಕೆಲ ವಕೀಲರು ಮಾಧ್ಯಮ ಪ್ರತಿನಿಧಿಗಳ ಮೇಲೆ ಕಲ್ಲು ಕೂಡ ಎಸೆದರು. ಹಿಂದೆ ಕೂಡ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಉದಾಹರಣೆಗಳೂ ಇವೆಯಲ್ಲ?
ಅದು ಯಾವುದೋ ಕೆಟ್ಟ ಗಳಿಗೆಯಲ್ಲಿ ಹಾಗೆ ಆಯಿತು. ಮಾಧ್ಯಮದವರು ಸಂವಿಧಾನದ ನಾಲ್ಕನೇ ಅಂಗ. ಅವರ ಮೇಲೆ ನಮಗೆ ಗೌರವ ಇದೆ. ಇದೊಂದು ಬಾರಿ ಕ್ಷಮಿಸಿ. ಮುಂದೆ ಆ ರೀತಿ ಆಗದಂತೆ ನಾನೇ ನಿಭಾಯಿಸುತ್ತೇನೆ.

* ಮುಷ್ಕರದಿಂದ ಜನತೆಗೆ ಹಾಗೂ ಕಕ್ಷಿದಾರರಿಗೆ ಉಂಟಾದ ತೊಂದರೆಗಳ ಬಗ್ಗೆ ಅವರ ಬಾಯಿಯಿಂದಲೇ ಕೇಳಿ ಅವರ ಅಭಿಪ್ರಾಯ ಪಡೆದು ಪ್ರಕಟಿಸಿದ ಮಾಧ್ಯಮಗಳಿಗೆ ನ್ಯಾಯಾಂಗ ನಿಂದನೆ, ಮಾನಹಾನಿ ನೋಟಿಸ್ ಜಾರಿ ಮಾಡಲು ಕೆಲ ವಕೀಲರು ಮುಂದಾಗಿದ್ದಾರಲ್ಲ?
ಅದು ತಪ್ಪು. ಹಾಗೆ ಆಗಲು ನಾನು ಬಿಡುವುದಿಲ್ಲ. ತೊಂದರೆ ಅನುಭವಿಸಿದ ಜನರ ಅಳಲು, ಅವರ ಅಭಿಪ್ರಾಯ ಮಾಧ್ಯಮಗಳು ಪ್ರಕಟಿಸಿವೆ ಅಷ್ಟೇ. ಅದರಲ್ಲಿ ತಪ್ಪು ಎಂದು ನನಗೇನು ಎನಿಸುವುದಿಲ್ಲ. ಅದರಲ್ಲಿ ಕೆಲವು ಅಂಶ ವಕೀಲರ ಅಸಮಾಧಾನಕ್ಕೆ ಗುರಿಯಾಗಿರಬಹುದು. ಆ ಬಗ್ಗೆ ನಾನೇ ಖುದ್ದಾಗಿ ಮುತುವರ್ಜಿ ವಹಿಸಿ ಕ್ರಮ ತೆಗೆದುಕೊಳ್ಳುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT