ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

Last Updated 21 ಫೆಬ್ರುವರಿ 2013, 20:13 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ರಾಜಧಾನಿಯಲ್ಲಿ ಗುರುವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೊದಲ ದಿನವಾದ ಬುಧವಾರ ಮುಷ್ಕರಕ್ಕೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಾಹನ ಸಂಚಾರ ಕಡಿವೆು ಇದ್ದು ಬಂದ್ ವಾತಾವರಣ ಕಂಡುಬಂದಿತ್ತು. ಗುರುವಾರ ಜನಜೀವನ ಸಹಜಸ್ಥಿತಿಗೆ ಮರಳಿತ್ತು. ಎಲ್ಲಿಯೂ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಎಲ್ಲ ಅಗತ್ಯ ಸೇವೆಗಳು ಲಭ್ಯವಿತ್ತು. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರ ಯಥಾಸ್ಥಿತಿಯಲ್ಲಿತ್ತು. ಬಿಎಂಟಿಸಿ, ಎಲ್ಲ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಒದಗಿಸಿತ್ತು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಇತರ ದಿನಗಳಿಗೆ ಹೋಲಿಸಿದರೆ ನಗರದ ರಸ್ತೆಗಳಲ್ಲಿ ವಾಹನಗಳ ಭರಾಟೆ ಅಷ್ಟಾಗಿ ಇರಲಿಲ್ಲ.

ನಗರದಲ್ಲಿ ಹೆಚ್ಚಿನ ರಿಕ್ಷಾಗಳು ಸಂಚಾರ ನಡೆಸಿವೆ. ಬುಧವಾರಕ್ಕೆ ಹೋಲಿಸಿದರೆ ಗುರುವಾರ ರಿಕ್ಷಾಗಳ ಓಡಾಟ ದುಪ್ಪಟಾಗಿತ್ತು. ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ರಿಕ್ಷಾಗಳ ಭರಾಟೆ ಕಡಿಮೆ ಇತ್ತು. ಬಸ್‌ಗಳ ಸೇವೆ ಲಭ್ಯ ಇದ್ದುದರಿಂದ ಪ್ರಯಾಣಿಕರಿಗೆ ಇದರ ಬಿಸಿ ಅಷ್ಟಾಗಿ ತಟ್ಟಲಿಲ್ಲ.

`ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿರುವ 80,000 ರಿಕ್ಷಾಗಳ ಪೈಕಿ ಶೇ 30ಕ್ಕೂ ಅಧಿಕ ರಿಕ್ಷಾಗಳು ಸಂಚರಿಸಿವೆ' ಎಂದು ಸಿಐಟಿಯು ಆಟೋ ಚಾಲಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ತಿಳಿಸಿದರು.

ವಿವಿಧ ಕಾರ್ಮಿಕ ಸಂಘಟನೆಗಳು ನಗರದಲ್ಲಿ ವಿವಿಧೆಡೆ ಪ್ರತಿಭಟನೆ ನಡೆಸಿದವು. ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ವಿರೋಧಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟ ಕಾರ್ಮಿಕ ಸಂಘಟನೆಗಳ ನೂರಾರು ಕಾರ್ಯಕರ್ತರನ್ನು ಪೊಲೀಸರು ಮಾರ್ಗಮಧ್ಯದಲ್ಲಿ ತಡೆದರು. ಈ ಸಂದರ್ಭ ಕಾರ್ಮಿಕ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಶಾಲಾ ಕಾಲೇಜುಗಳಲ್ಲಿ ಎಂದಿನಂತೆ ಪಾಠ ಪ್ರವಚನಗಳು ನಡೆದವು. ಸರ್ಕಾರಿ ಶಾಲೆಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಕೆಲವು ಖಾಸಗಿ ಶಾಲೆಗಳು ಮುನ್ನೆಚ್ಚರಿಕೆಯ ಕ್ರಮವಾಗಿ ರಜಾ ಘೋಷಿಸಿದ್ದವು. ನಗರದ ಮಹಾರಾಣಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಗೈರುಹಾಜರಾಗಿದ್ದರು. ಶಾಲಾ ಆಟೊಗಳು ಮತ್ತು ವ್ಯಾನ್‌ಗಳು ಸೇವೆಗೆ ಲಭ್ಯ ಇರಲಿಲ್ಲ. ಹೀಗಾಗಿ ಪೋಷಕರೇ ಮಕ್ಕಳನ್ನು ತಮ್ಮ ಸ್ವಂತ ವಾಹನದಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಚಲನಚಿತ್ರ ಮಂದಿರ, ಹೋಟೆಲ್‌ಗಳು, ಮಾರುಕಟ್ಟೆಗಳಲ್ಲಿ ಮುಷ್ಕರದ ಬಿಸಿ ತಟ್ಟಲಿಲ್ಲ. ಪೆಟ್ರೋಲ್ ಬಂಕ್‌ಗಳು, ಆಸ್ಪತ್ರೆಗಳು, ಔಷಧಿ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT