ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸುರೆ ಜೊತೆ ಮುಪ್ಪಿನ ಜೀವನ

Last Updated 1 ಜುಲೈ 2012, 9:45 IST
ಅಕ್ಷರ ಗಾತ್ರ

ಉಂಡಮೇಲೆ ಬಾಳೆ ಎಲೆ ನೋಡೋದಕ್ಕೆ ಆಗುವುದಿಲ್ಲ. ಅದು ಮುಸುರೆ. ಆ ಮುಸುರೆಯನ್ನು ಉಂಡೂ ಹೊಟ್ಟೆ ತುಂಬಿಸಿಕೊಳ್ಳುವ ಜೀವಗಳಿವೆ; ಹೊಟ್ಟೆ ತುಂಬಿದವರಿಗೆ ಹಸಿದವರ ಚಿಂತೆ ಇರುವುದಿಲ್ಲ. ಇನ್ನು ಉಂಡುಬಿಟ್ಟ ತಟ್ಟೆಯ ಬಗ್ಗೆಯಾಗಲೀ ಅದರಲ್ಲಿರುವ ಮುಸುರೆಯ ಬಗೆಗಾಗಲೀ ಚಿಂತಿಸುವ ಮಾತೆಲ್ಲಿ?

ಆದರೆ ಇಲ್ಲೊಬ್ಬರನ್ನು ನೋಡಿ. ಸಾರ್ವಜನಿಕರು ಊಟ ಮಾಡಿ ತಟ್ಟೆಯಲ್ಲಿ ಬಿಟ್ಟ ಮುಸುರೆಯನ್ನು ಸಂಗ್ರಹಿಸಿ ದನಕರುಗಳಿಗೆ ಹಂಚುತ್ತಿದ್ದಾರೆ. ಈ ಪುಣ್ಯಕಾರ್ಯದಿಂದ ತಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯ ಮೇಲೆ ಅವರ ಬಾಳರಥ ಸಾಗುತ್ತಿದೆ.

ಹೌದು! ಇಂತಹ ವಿಭಿನ್ನ ಹಾಗೂ ವಿಶೇಷ ಕಾರ್ಯ ಮಾಡುತ್ತಿರುವ ಈ ಸೇವಕರ ಹೆಸರು ದಶರಥ ಗೋಲವಾಡೆ. ಹುಬ್ಬಳ್ಳಿಯ ಉಣಕಲ್‌ನಲ್ಲಿ ವಾಸವಾಗಿರುವ ದಿನಾ ನಸುಕಿನ ಐದು ಗಂಟೆಗೆ ಎದ್ದು ತಮ್ಮ ರಾಮ ಭಾಮ ಶಾಮ ಎಂಬ ಹೆಸರಿನ ಮೂರು ಎತ್ತುಗಳ ಜೊತೆ ನಗರದಲ್ಲಿರುವ ಎಲ್ಲ ಹೋಟೆಲ್‌ಗಳಿಗೆ ಒಂದು ಸುತ್ತು ಹಾಕುತ್ತಾರೆ. ಅಲ್ಲಿ ಶೇಖರಿಸಿ ಇಟ್ಟಿದ್ದ ಮುಸುರೆಯನ್ನು ಸಂಗ್ರಹಿಸುತ್ತಾರೆ. ಅವುಗಳನ್ನು ತಂದು ತಾನು ಸಾಕಿದ ದನಕರಗಳಿಗೆ ಹಾಕುತ್ತಾರೆ. ಅಷ್ಟೇ ಅಲ್ಲದೇ ಪಕ್ಕದ ಮನೆಯಲ್ಲಿರುವ ದನಕರುಗಳಿಗೆ ನೀಡುತ್ತಾರೆ. ಹೀಗೇಕೆ ಮಾಡುತ್ತಿರಿ ಎಂದು ಕೇಳಿದರೆ ಇದು ಸಾರ್ವಜನಿಕ ಆಸ್ತಿ. ಹೀಗಾಗಿ ಅದು ಎಲ್ಲರಿಗೂ ಸೇರಬೇಕು~ ಎನ್ನುವುದು ದಶರಥ ಅವರ ಅಭಿಪ್ರಾಯ. 

ಅಲ್ಲದೇ ಅವರು ಸಮಯ ಸಿಕ್ಕಾಗಲೆಲ್ಲ ಯಾವುದೇ ಮದುವೆ ಅಥವಾ ಜಾತ್ರೆ, ಮಹೋತ್ಸವ ಇರಲಿ. ಅಲ್ಲಿ ಸಾರ್ವಜನಿಕರು ಮಾಡಿ ಬಿಟ್ಟ ಊಟದ ಎಲೆಗಳನ್ನು ತೆಗೆಯುತ್ತಾರೆ. ಇದು ಕೂಡ ಒಂಥರಾ ಸೇವೆ ಎನ್ನುವುದು ಅವರ ದಶರಥ ಅವರ ಅಭಿಪ್ರಾಯ. ಅಲ್ಲದೇ ಈ ಕಾರ್ಯದಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎನ್ನುತ್ತಾರೆ ದಶರಥ ಅವರು.

`ಹೊಟ್ಟೆ ಪಾಡಿಗಾಗಿ ನಾನು ಹಮಾಲಿ ಕೆಲಸ ಮಾಡುತ್ತೇನೆ. ಆವಾಗವಾಗ ನನ್ನ ಮಕ್ಕಳು ನನಗೆ ಸಹಾಯ ಮಾಡುತ್ತಾರೆ. ಅದಕ್ಕೆ ನಾನು ಬೇರೆ ಕೆಲಸ ಮಾಡುವ ಉಸಾಬರಿಗೆ ಇದುವರೆಗೂ ಹೋಗಿಲ್ಲ. ಏಕೆಂದರೆ ಈ ಕೆಲಸದಿಂದ ನನ್ನ ಕುಟುಂಬ ಸಾಗುತ್ತಿದೆ. ಅದರ ಜೊತೆಗೆ ಸೇವೆ ಮಾಡುವುದಕ್ಕೋಸ್ಕರ ಸಾರ್ವಜನಿಕರು ಊಟ ಮಾಡಿದ ಎಲೆಯನ್ನು ಹಾಗೂ ಹೋಟೆಲ್‌ನಲ್ಲಿ ಸಾರ್ವಜನಿಕರು ಉಂಡುಬಿಟ್ಟ ಮುಸುರೆಯನ್ನು ಸಂಗ್ರಹಿಸುತ್ತೇನೆ. ಇದರಿಂದ ನನ್ನ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎನ್ನುವುದು ನನ್ನ ಭಾವನೆ. ಈ ಸೇವೆಯನ್ನು ಮೊದಲು ನನ್ನ ಅಜ್ಜ ಹಾಗೂ ತಂದೆ ಕೂಡ ಮಾಡುತ್ತಿದ್ದರು. ಅದನ್ನೇ ನಾನು ಮುಂದುವರಿಸಿಕೊಂಡು ಹೋಗುತ್ತ್ದ್ದಿದೇನೆ~ ಎನ್ನುತ್ತಾರೆ ದಶರಥ ಅವರು.

 `ಮುಪ್ಪಿನ ವಯಸ್ಸಿನಲ್ಲಿಯೂ ಹಗಲು-ರಾತ್ರಿಯೆನ್ನದೇ ನಮ್ಮ ತಂದೆ ದುಡಿಯುತ್ತಿದ್ದಾರೆ. ದುಡಿಯುವುದನ್ನು ನಿಲ್ಲಿಸಿ ಎಂದು ನಮ್ಮ ಸಹೋದರೆಲ್ಲರೂ ಎಷ್ಟೋ ಸಾರಿ ಹೇಳಿದರೂ ನಮ್ಮ ಮಾತು ಕೇಳುತ್ತಿಲ್ಲ. ಬದಲಾಗಿ ನನಗೆ ದೇವರು ಇನ್ನೂ ದುಡಿಯುವ ಶಕ್ತಿ ಕೊಟ್ಟಿದ್ದಾನೆ. ನನಗೆ ಯಾವಾಗ ದುಡಿಯುವುದನ್ನು ನಿಲ್ಲಿಸಬೇಕು ಅನಿಸುತ್ತದೆಯೋ ಆವಾಗ ನಿಲ್ಲಿಸುತ್ತೇನೆ ಎನ್ನುತ್ತಾರೆ. ಹೀಗಾಗಿ ನಾವು ಅವರಿಗೆ ಒತ್ತಾಯಿಸುವುದಿಲ್ಲ~ ಎನ್ನುತ್ತಾರೆ ದಶರಥ ಅವರ ಕಿರಿಯ ಮಗ ಸುನೀಲ.

`ಸುಮಾರು 50 ವರ್ಷದಿಂದ ನಮ್ಮ ಹೋಟೆಲ್ಲಿಗೆ ಬಂದು ಸಂಗ್ರಹಿಸಿ ಇಟ್ಟ ಮುಸುರಿಯನ್ನು ಶೇಖರಿಸಿಕೊಂಡು ಹೋಗುತ್ತಾರೆ. ಎಷ್ಟೋ ಬಾರಿ ದುಡ್ಡು ಕೊಡಲು ಹೋದರೂ ಪಡೆಯುವುದಿಲ್ಲ. ಅಷ್ಟೇ ಅಲ್ಲದೇ ಚಹಾ ಕುಡಿದು ದುಡ್ಡು ಕೊಟ್ಟು ಹೋಗುತ್ತಾರೆ. ಇಂದಿನ ಕಾಲದಲ್ಲಿ ಇಂತಹ ಸೇವಕರು ಸಿಗುವುದು ಅಪರೂಪ~ ಎನ್ನುತ್ತಾರೆ ವಿದ್ಯಾನಗರ ಕ್ಷೀರಸಾಗರ ಹೋಟೆಲ್ ಮಾಲೀಕ ದಿನೇಶ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT