ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ಬೆಂಬಲ ಗಳಿಸಲು ಎಎಪಿ, ಕಾಂಗ್ರೆಸ್‌ ಪೈಪೋಟಿ

Last Updated 10 ಮೇ 2014, 19:30 IST
ಅಕ್ಷರ ಗಾತ್ರ

ವಾರಾಣಸಿ (ಉತ್ತರ ಪ್ರದೇಶ): ಕಾಶಿ ಅಕ್ಷರಶಃ ‘ಕುರುಕ್ಷೇತ್ರ’ವಾಗಿ ಮಾರ್ಪಟ್ಟಿದೆ. ನರೇಂದ್ರ ಮೋದಿ, ಅರವಿಂದ್‌ ಕೇಜ್ರಿವಾಲ್‌, ರಾಹುಲ್‌ ಗಾಂಧಿ ಮತ್ತು ಅಖಿಲೇಶ್‌ ಯಾದವ್‌ ಪೈಪೋಟಿಯ ಮೇಲೆ ಬಲ ಪ್ರದರ್ಶಿಸಿದ್ದಾರೆ.

ಗುರುವಾರ ಮೋದಿ, ಶುಕ್ರವಾರ ಕೇಜ್ರಿವಾಲ್‌, ಶನಿವಾರ ರಾಹುಲ್‌ ಹಾಗೂ ಅಖಿಲೇಶ್‌ ‘ರೋಡ್‌ ಷೋ’ ನಡೆಸಿ ಮತದಾರರ ಮನೆ ಬಾಗಿಲು  ತಟ್ಟಿದ್ದಾರೆ. ವಾರಾಣಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ ಜಂಗುಳಿ ನೋಡಿರುವ ಮತದಾರರು ಯಾರ ಹೆಚ್ಚು ‘ಶಕ್ತಿ’ವಂತರು ಎಂದು ಅಳೆಯಲಾಗದೆ ಗೊಂದಲಕ್ಕೆ ಸಿಕ್ಕಿದ್ದಾರೆ.

‘ಅಮೇಠಿಗೆ ಮೋದಿ ಲಗ್ಗೆ ಹಾಕಿ ಸವಾಲೆಸೆದ ಬಳಿಕ ರಾಹುಲ್‌ ವಾರಾಣಸಿಗೆ ಬಂದಿದ್ದಾರೆ. ಇದು ಅವಸರ­ದಲ್ಲಿ ರೂಪಿಸಿದ ಕಾರ್ಯಕ್ರಮ. ಬಿಜೆಪಿ ಪ್ರಧಾನಿ ಅಭ್ಯರ್ಥಿ ಅಮೇಠಿಗೆ ಹೋಗಿ ಕಾಂಗ್ರೆಸ್‌ ಯುವರಾಜನ ಕಾಲೆಳೆ­­ಯಲು ಹುನ್ನಾರ ನಡೆಸಿದರು.  ಇದಾದ ಬಳಿಕ ರಾಹುಲ್‌ ವಾರಾಣಸಿಗೆ ಧಾವಿಸಿದ್ದಾರೆ. ಬಿಜೆಪಿ ಸವಾಲಿಗೆ ದಿಟ್ಟ ಉತ್ತರ ನೀಡಿದ್ದಾರೆ’ ಎಂಬುದು ಕಾಂಗ್ರೆಸ್‌ ವಲಯದ ವ್ಯಾಖ್ಯಾನ.

ಮುಸ್ಲಿಮರು ಸೇರಿದಂತೆ ಬಿಜೆಪಿ­ಯನ್ನು ವಿರೋಧಿಸುವವರೆಲ್ಲರ ಮತಗಳನ್ನು ಕಾಂಗ್ರೆಸ್‌ಗೆ ಸೆಳೆಯುವುದು ರಾಹುಲ್‌ ರೋಡ್‌ ಷೋ ಉದ್ದೇಶ. ಕೇಜ್ರಿವಾಲ್‌ ಇದೇ ಕೆಲಸ ಮಾಡಿದ್ದಾರೆ. ವಾರಾಣಸಿ ಚುನಾವಣೆಯಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ. ಮೂರು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರು ಬೇಲಿ ಮೇಲೆ ಕೂತು ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿ­ಸುತ್ತಿದ್ದಾರೆ. ‘ಯಾರನ್ನು ಬೆಂಬಲಿಸ­ಬೇಕು. ಕೇಜ್ರಿವಾಲ್ ಅವರನ್ನೋ ಅಥವಾ ಕಾಂಗ್ರೆಸ್‌ನ ಅಜಯ್‌ ರಾಯ್‌ ಅವರನ್ನೋ’ ಎಂಬ ಚಿಂತೆಯಲ್ಲಿದ್ದಾರೆ.

ಮೋದಿ ಅವರನ್ನು ಸೋಲಿಸುವ ತಾಕತ್ತು ಯಾರಿಗಿದೆ ಎಂದು ಲೆಕ್ಕ ಹಾಕುತ್ತಿದ್ದಾರೆ. ಮುಸ್ಲಿಮರ ಮತ
ಗಳನ್ನು ಹೆಚ್ಚು ಪಡೆದವರು ಮೋದಿ ಅವರಿಗೆ ಪ್ರಬಲ ಪೈಪೋಟಿಯನ್ನೇ ನೀಡುತ್ತಾರೆ.

‘ಯಾವ ಪಕ್ಷವನ್ನು ಬೆಂಬಲಿಸಬೇಕು ಎಂದು ಮುಸ್ಲಿಮರು ಇನ್ನೂ ನಿರ್ಧಾರ ಮಾಡಿಲ್ಲ. ಸೋಮವಾರ ವಾರಾಣಸಿ ಮತದಾನ. ಭಾನುವಾರ ಸಂಜೆಯೊಳಗೆ ತೀರ್ಮಾನ ಮಾಡಿ ಸಮುದಾಯಕ್ಕೆ ತಲುಪಿಸುವ ಕೆಲಸವನ್ನು ಸಮಾಜದ ಮುಖ್ಯಸ್ಥರು ಮಾಡಲಿದ್ದಾರೆ. ಇದೇ ಕಾರಣಕ್ಕೆ ಕೇಜ್ರಿವಾಲ್‌, ರಾಹುಲ್‌ ತಮ್ಮ ಬಲ ಪ್ರದರ್ಶಿಸಿದ್ದಾರೆ. ಎರಡೂ ಪಕ್ಷಗಳ ಬಲವನ್ನು ಅಳೆದು ತೂಗುವ ಕೆಲಸವನ್ನು ಮುಸ್ಲಿಮರು ಮಾಡಲಿ­ದ್ದಾರೆ’ ಎಂದು ಸ್ಥಳೀಯ ಕೆಲ ಮುಖಂಡರು ಹೇಳುತ್ತಾರೆ.

‘ಮೋದಿ ಹಾಗೂ ಕೇಜ್ರಿವಾಲ್‌ ರೋಡ್‌ ಷೋನಲ್ಲಿದ್ದವರು ಬಹುತೇ­ಕರು ಹೊರಗಿನವರು. ರಾಹುಲ್‌ ಜತೆ­ಯಲ್ಲಿ ಹೆಜ್ಜೆ ಹಾಕಿದವರು ಸಂಪೂರ್ಣ ಸ್ಥಳೀಯರು ಎಂಬ ಪ್ರಚಾರವನ್ನು ಕಾಂಗ್ರೆಸ್‌ ನಾಯಕರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಚಿತ್ರನಟ ರಾಜ್‌ಬಬ್ಬರ್‌, ಸಚಿವರಾದ ಗುಲಾಂನಬಿ ಆಜಾದ್‌, ಮುಕುಲ್‌ ವಾಸ್ನಿಕ್‌, ಪಕ್ಷದ ಮುಖಂಡ ರಶೀದ್‌ ಅಲ್ವಿ ಎಲ್ಲರೂ ವಾರಾಣಸಿಯಲ್ಲಿ ಇದನ್ನೇ ಪ್ರತಿಪಾದಿಸಿದ್ದಾರೆ.

‘ನಾವು ಯಾರಿಗೆ ಮತ ಹಾಕಬೇಕು ಎಂದು ನಿಶ್ಚಯಿಸಿಲ್ಲ. ಭಾನುವಾರ ಸಂಜೆಯೊಳಗೆ ನಿರ್ಧಾರ ಆಗಬಹುದು. ಸಮಾಜದ ಸ್ಥಳೀಯ ನಾಯಕರು ಚರ್ಚಿಸಿ ತೀರ್ಮಾನ ತಿಳಿಸುತ್ತಾರೆ’ ಎಂದು 55ವರ್ಷದ ನಫೀಜ್‌ ಅಹಮದ್‌ ಹೇಳಿದರು. ಬಡೇ ಬಜಾರ್‌ ನೇಕಾರ ಖಲೀಮುದ್ದೀನ್‌ ಕೂಡಾ ನಫೀಜ್‌ ಅವರ ಮಾತನ್ನೇ ಪುನರುಚ್ಚರಿಸಿ­ದರು. ಮುಸ್ಲಿಂ ಮತಗಳು ಕಾಂಗ್ರೆಸ್‌ ಮತ್ತು ಕೇಜ್ರಿವಾಲ್‌ ನಡುವೆ ಹಂಚಿಕೆ ಆಗಬಹುದೆಂದು ಮುಗೀಶ್‌ ಅನ್ಸಾರಿ ಅಭಿಪ್ರಾಯಪಟ್ಟರು.

ಬಿಸ್ಮಿಲ್ಲಾಖಾನ್‌ ಕುಟುಂಬದ ಬೆಂಬಲ: ಖ್ಯಾತ ಶಹನಾಯ್‌ ಮಾಂತ್ರಿಕ ಬಿಸ್ಮಿಲ್ಲಾಖಾನ್‌ ಅವರ ಕುಟುಂಬದ ಸದಸ್ಯರು ಮುಸ್ಲಿಂ ಸಮುದಾಯವನ್ನು ಮನ­ವೊಲಿಸುವ ಕಾಂಗ್ರೆಸ್‌ ಪ್ರಯತ್ನಕ್ಕೆ ಸಾಂಕೇತಿಕವಾಗಿ ಕೈ ಜೋಡಿಸಿದರು.
ಬೇನಿಯಾ ಬಾಗ್‌ನಲ್ಲಿರುವ ಮನೆ­ಯಿಂದ ಹೊರಬಂದ ಖಾನ್‌ ಕುಟುಂಬದ ಸದಸ್ಯರು ರಾಹುಲ್‌ ಸಾಗಿದ ರಸ್ತೆಯಲ್ಲಿ ‘ರಘುಪತಿ ರಾಘವ ರಾಜಾರಾಂ’ ನುಡಿಸಿದರು. ಮೋದಿ ಅವರ ನಾಮಪತ್ರಕ್ಕೆ ಖಾನ್‌ ಕುಟುಂಬದ ಸದಸ್ಯರು ಸೂಚಕರಾಗಬೇಕೆಂದು ಬಿಜೆಪಿ ಬಯಸಿತ್ತು. ಬಿಸ್ಮಿಲ್ಲಾ ಖಾನ್‌ ಅವರ ಮೊಮ್ಮಗ ಅಫಖ್‌ ಖಾನ್‌, ‘ರಾಜಕೀಯ ಪಕ್ಷಗಳ ಜತೆ ಗುರುತಿಸಿ­ಕೊಳ್ಳಲು ಇಷ್ಟವಿಲ್ಲ’ವೆಂದು ಖಚಿತವಾಗಿ ಹೇಳಿದ್ದರು.

ವಾರಾಣಸಿಯ ಪಿಲಿಕೋಠಿಯಿಂದ ಬೆಳಿಗ್ಗೆ ಎಂಟು ಗಂಟೆಗೆ ಮಿನಿ ಟ್ರಕ್‌ನಲ್ಲಿ ಆರಂಭಿಸಿದ ಯಾತ್ರೆಯನ್ನು ರಾಹುಲ್‌ ಅವರು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ‘ಲಂಕಾ ದ್ವಾರದ ಬಳಿ ಅಂತ್ಯಗೊಳಿಸಿದರು. ವಾರಾಣಸಿ ಅಭ್ಯರ್ಥಿ ಅಜಯ್‌ ರಾಯ್‌, ಚಿತ್ರತಾರೆ­ಯರಾದ ರಾಜ್‌ಬಬ್ಬರ್‌ ಹಾಗೂ ನಗ್ಮಾ ಮತ್ತಿತರರು ಐದು ಗಂಟೆಗಳ ಈ ಯಾತ್ರೆಗೆ ಸಾಥ್‌ ನೀಡಿದರು. ಹಸ್ತದ ಚಿಹ್ನೆ ಇರುವ ಧ್ವಜಗಳನ್ನು ಹಿಡಿದಿದ್ದ ನೂರಾರು ಕಾರ್ಯಕರ್ತರು ತಮ್ಮ ನಾಯಕನ ಜತೆ ಹೆಜ್ಜೆ ಹಾಕಿದರು.

ಶತಮಾನದ ಹಿಂದೆ ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ಸ್ಥಾಪಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮದನ­ಮೋಹನ ಮಾಳವೀಯ ಪ್ರತಿಮೆಗೆ ರಾಹುಲ್‌ ಗೌರವ ಸಮರ್ಪಿಸಿದರು. ಲಂಕಾ ದ್ವಾರದಲ್ಲಿ ಮಾಳವೀಯ ಪ್ರತಿಮೆ ಇದೆ.

ವಾರಾಣಸಿಯಲ್ಲಿ ಮೋದಿ ಹಾಗೂ ಕೇಜ್ರಿವಾಲ್‌ ಅಖಾಡಕ್ಕಿಳಿದ ಬಳಿಕ ಲಂಕಾ ದ್ವಾರಕ್ಕೆ ವಿಶೇಷ ಮಹತ್ವ ಬಂದಿದೆ. ಅದು ರಾಜಕೀಯ ಚಟುವಟಿಕೆ ಕೇಂದ್ರವಾಗಿದೆ. ಗುರುವಾರ ಮೋದಿ ಇದೇ ದ್ವಾರದಿಂದ ರೋಡ್‌ ಷೋ ಆರಂಭಿಸಿದರು. ಶುಕ್ರವಾರ ಕೇಜ್ರಿವಾಲ್‌ ರೋಡ್‌ ಷೋ ಇಲ್ಲಿಂದಲೇ ಶುರು­ವಾಯಿತು. ರಾಹುಲ್‌ ಗಾಂಧಿ ಅವರ ಯಾತ್ರೆ ಅಂತ್ಯಗೊಂಡಿದ್ದು ಲಂಕಾ ಗೇಟ್‌ ಬಳಿ.

ಅಖಿಲೇಶ್‌ ಯಾದವ್‌ ಶನಿವಾರ ಮಧ್ಯಾಹ್ನ ವಾರಾಣಸಿಯಲ್ಲಿ ರೋಡ್‌ ಷೋ ನಡೆಸಿದರು. ಕಾಶಿ ನಗರದಲ್ಲಿ ಕಳೆದ ಒಂದು ವಾರದಿಂದ ರಾಜಕೀಯ ಬಿಟ್ಟರೆ ಮತ್ಯಾವ ಚಟುವಟಿಕೆ ನಡೆಯು­ತ್ತಿಲ್ಲ. ರಾಜಕೀಯ ನಾಯಕರು, ಅವರ ಹಿಂಬಾಲಕರ ಚಟುವಟಿಕೆ ಜನ ಸಾಮಾನ್ಯರಿಗೆ, ವರ್ತಕರಿಗೆ ಸಿಕ್ಕಾಪಟ್ಟೆ ಕಿರಿಕಿರಿ ಉಂಟುಮಾಡುತ್ತಿದೆ. ರಾಜ­ಕೀಯ ಪಕ್ಷಗಳ ಮೆರವಣಿಗೆ ನಡುವೆ ಸಿಕ್ಕಿಕೊಂಡಿದ್ದ ಕೆಲವರು, ‘ಚುನಾವಣಾ ಪ್ರಚಾರವನ್ನು ಕೆಲವು ಮುಂದುವರಿದ ದೇಶಗಳಂತೆ ಎಲೆಕ್ಟ್ರಾನಿಕ್‌ ಮಾಧ್ಯಮಗಳಿಗೆ ಸೀಮಿತ­ಗೊಳಿಸಬೇಕು’ ಎಂದು ಗೊಣಗುತ್ತಿದ್ದರು.

ಜಿಲ್ಲಾಧಿಕಾರಿ ನಡೆಗೆ ವ್ಯಾಪಕ ಟೀಕೆ
ಗುರುವಾರ ಮೋದಿ ಅವರ ಯಾತ್ರೆ ಬೇನಿಯಾ ಬಾಗ್‌ ಪ್ರವೇಶಿಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಮೋದಿ ಆ ಮಾರ್ಗವಾಗಿ ಹೋದರೆ ಕಾನೂನು– ಸುವ್ಯವಸ್ಥೆ ಸಮಸ್ಯೆ ಆಗಲಿದೆ ಎನ್ನುವ ಕಾರಣ ನೀಡಿತ್ತು. ಶನಿವಾರ ರಾಹುಲ್‌, ಅಖಿಲೇಶ್‌ ಅವರಿಗೆ ಈ ಮಾರ್ಗದಲ್ಲೇ ಹೋಗಲು ಒಪ್ಪಿಗೆ ನೀಡಲಾಯಿತು. ಜಿಲ್ಲಾಧಿಕಾರಿ  ಅವರ ಈ ನಡೆ ವ್ಯಾಪಕ ಟೀಕೆಗೊಳಗಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT