ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕ ಪ್ರಾಣಿಗಳ ಆಶಯ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಕುದುರೆ ಟಾಂಗಾದಲ್ಲಿ ಪಯಣಿಸುವುದೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದು ಒಂಥರಾ ಮೋಜಿನ ಪಯಣ. ಆದರೆ, ಡಾಂಬರು ರಸ್ತೆಯಲ್ಲಿ ನಾಲ್ಕು ಜನರನ್ನು ತನ್ನ ಮೇಲೆ ಹೇರಿಕೊಂಡು ಓಡುವ ಕುದುರೆಯ ಕಷ್ಟ ಕೇಳುವರಾರು? ಅದರ ಒಡೆಯ ಊಟ ನೀಡದೆ, ಬರೀ ಕೆಲಸ ಮಾಡಿಸಿಕೊಳ್ಳುವಲ್ಲಿ ನಿರತನಾಗಿರುತ್ತಾನೆ.

ಇನ್ನು ಬೆಂಗಳೂರಿನಲ್ಲಿ ಬೀದಿ ನಾಯಿಗಳ ಕಥೆಯಂತೂ ಕೇಳುವುದೇ ಬೇಡ. ನಾಯಿ ಯಾವಾಗಲೂ ಪ್ರಾಮಾಣಿಕವಾದದ್ದು ಎಂಬುದರ ಬಗ್ಗೆ ಹಲವು ಕಥೆಗಳೇ ಇವೆ. ಆದರೆ, ಮನುಷ್ಯ ಮತ್ತು ನಾಯಿಗಳಲ್ಲಿ ಹೇಳಿಕೊಳ್ಳಲಾಗದ ಶತ್ರುತ್ವ ಬೆಳೆಯುತ್ತಿದೆ.

ಮನುಷ್ಯನಿಗೆ ಹಿಂಸೆ ನೀಡಿದರೆ, ಅವನು ಮಾತಿನ ಮೂಲಕ ಅಥವಾ ಭಾವನೆಗಳ ಮೂಲಕ ತೋರಿಸಿಕೊಳ್ಳಬಹುದು. ಆದರೆ, ಮೂಕ ಪ್ರಾಣಿಗಳಿಗೆ ಹಿಂಸೆ ನೀಡಿದರೆ ಅವುಗಳು ಯಾರ ಹತ್ತಿರ ಹೇಳಿಕೊಳ್ಳಬೇಕು. ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಳ್ಳುತ್ತ ಕುಳಿತಿರುವ ಆ ದೇವರ ಹತ್ತಿರ ಮಾತ್ರ ತಮ್ಮ ಮೂಕ ರೋದನ ಸಲ್ಲಿಸಬಹುದೇನೋ.
ಬೀದಿ ನಾಯಿಗಳು ಕಚ್ಚುವ ಹಾವಳಿ ಹೆಚ್ಚಾಗಿದ್ದರಿಂದ ಕಂಡಲ್ಲಿ ಗುಂಡು ಎನ್ನುವಂತೆ, ಪಾಲಿಕೆಯವರು ಬೀದಿ ನಾಯಿಗಳನ್ನು ಅಮಾನುಷವಾಗಿ ಚಿತ್ರ ಹಿಂಸೆ ನೀಡಿ ಸಾಯಿಸುತ್ತಿದ್ದಾರೆ.

ಇಂತಹ ಮನಕಲಕುವ ಘಟನೆಗಳಿಂದ ಮನ ನೊಂದಿರುವ ರಾಧಿಕಾ ಸತ್ಯಮೂರ್ತಿ ಮೂಕ ಪ್ರಾಣಿಗಳ ಬಗೆಗೆ ಜಾಗೃತಿ ಮೂಡಿಸುವ ಆಶಯವನ್ನು  ಹೊಂದಿದ್ದಾರೆ.

ಈ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸ್ಫೂರ್ತಿಯಾಗಿದ್ದು  ಅವರ ಸಾಕು ನಾಯಿ `ಪಾಂಡು~. ಅವರ ಅಚ್ಚುಮೆಚ್ಚಿನ ಸ್ನೇಹಿತನಾದ ಪಾಂಡು ಅವರ ಎಲ್ಲ ದಿನಚರಿಯಲ್ಲೂ ಭಾಗಿದಾರಿ.
ಒಂದು ದಿನ ಅವರ ಮನೆಯ ಮುಂದಿರುವ ಬೀದಿ ನಾಯಿಗಳನ್ನು ಪಾಲಿಕೆಯವರು ನಿರ್ದಾಕ್ಷಿಣ್ಯವಾಗಿ, ಅತಿ ಹಿಂಸೆ ನೀಡುತ್ತ ಹಿಡಿದುಕೊಂಡು ಹೋಗುತ್ತಿದ್ದರು. ಅದನ್ನು ಅವರ ಮೆಚ್ಚಿನ ನಾಯಿ ಪಾಂಡು ತನ್ನ ಮೂಕಭಾಷೆಯಲ್ಲಿ ಪ್ರತಿರೋಧಿಸಿತ್ತು. ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ಕಣ್ಣಾರೆ ಕಂಡ ರಾಧಿಕಾ ಸತ್ಯಮೂರ್ತಿ ಅವರ ಕಣ್ಣಾಲಿಗಳು ಅವರಿಗೆ ತಿಳಿಯದಂತೆ ತುಂಬಿ ಬಂದಿದ್ದವು. ಅಂದೇ ಪ್ರಾಣಿಗಳ ಹಿಂಸೆ ಮಾಡದಿರುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಶುಭಾರಂಭ ನೀಡಿದರು.

ಇದೀಗ ವರ್ಷದ ಆರಂಭದಲ್ಲಿ ಕ್ಯಾಲೆಂಡರ್ ತಯಾರಿಸಿ, ಅದರಲ್ಲಿ ಮೂಕ ಪ್ರಾಣಿಗಳ ವಿವಿಧ ಚಿತ್ರಗಳನ್ನು ಹಾಕಿಸಿ, ಶಾಲಾ, ಕಾಲೇಜುಗಳಲ್ಲಿ ಉಚಿತವಾಗಿ ಹಂಚುತ್ತಿದ್ದಾರೆ.
ಚಿಕನ್, ಮಟನ್ ಅಂಗಡಿಗಳ ಮುಂದೆ, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮುಂದೆ ಹಂಚುತ್ತಿದ್ದಾರೆ.

ಅವರ ಬೀದಿಯಲ್ಲಿನ ನಾಯಿಗಳಿಗೆ ನಿತ್ಯ ಊಟ ನೀಡಿ, ಅವಶ್ಯಕವಾದ ಚುಚ್ಚುಮದ್ದುಗಳನ್ನು ವೈದ್ಯರಿಂದ ನೀಡಿಸಿ ಅವುಗಳ ಮೇಲೆ ನಡೆಯುವ ಹಿಂಸೆಕಡಿಮೆ ಮಾಡಲು ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದಾರೆ.

ಅವರ ಕಳಕಳಿಯ ಮನವಿ ಅಂದರೆ, ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಸುಮ್ಮನೇ ಹಿಂಸೆ ನೀಡಬೇಡಿ. ಪ್ರಾಣಿಗಳು ಮನುಷ್ಯನ ಜೊತೆ ಹುಟ್ಟಿ ಬೆಳೆದಿವೆ. ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ನೋಡಿ, ಅದಕ್ಕೆ ಪ್ರತಿಯಾಗಿ ಅವುಗಳೂ ಸಹ ಪ್ರೀತಿ ತೋರಿಸುತ್ತವೆ ಎಂದು ಮನಬಿಚ್ಚಿ ಮಾತನಾಡುತ್ತಾರೆ ರಾಧಿಕಾ ಸತ್ಯಮೂರ್ತಿ ಅವರು.ಸಂಪರ್ಕಕ್ಕೆ: 2856 6162
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT