ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕ ಹಕ್ಕಿಯ ಹಾಡುಗಳು...

Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

ಗಲು ರಾತ್ರಿಗಳು ಕವಿಯ ಪಾಲಿಗೆ ಕಾಲ ಎನ್ನುವ ಪಕ್ಷಿಯ ರೆಕ್ಕೆಗಳು. ಈ ರೆಕ್ಕೆಗಳ ರೂಪಕವನ್ನೇ ರವಿ ಮೂರ್ನಾಡು ತಮ್ಮ ಬ್ಲಾಗ್‌ನ ಹೆಸರು ಮಾಡಿಕೊಂಡಿದ್ದಾರೆ. ಒಂದರ್ಥದಲ್ಲಿ ಅವರದೂ ಕಾಲ ದೇಶಗಳ ಪಯಣವೇ. ಒಳಗನ್ನೂ ಹೊರಗನ್ನೂ ಒರೆಗೆ ಹಚ್ಚುವುದು ಬರವಣಿಗೆಯ ಆಶಯಗಳಲ್ಲೊಂದು ಎನ್ನುವುದಾದರೆ, ಅದು ಕಾಲದೊಂದಿಗಿನ ಗುದ್ದಾಟ ತಾನೆ?

ಹಗಲು ರಾತ್ರಿಗಳ ಜಿಜ್ಞಾಸೆ ಬಿಟ್ಟು ರವಿ ಅವರ ಬ್ಲಾಗ್ ಬರಹಗಳ (ravimurnad.blogspot.in) ವಿಷಯಕ್ಕೆ ಬರೋಣ. `ಮೂಕ ಹಕ್ಕಿಯ ಕನಸುಗಳ ಪಯಣ' ಎನ್ನುವುದು ಬ್ಲಾಗ್‌ನ ಅಡಿಬರಹ. ಮಾತಿಗಿಂತಲೂ ಬರಹವೇ ತನ್ನ ಅಭಿವ್ಯಕ್ತಿಗೆ ಸೂಕ್ತ ಮಾಧ್ಯಮ ಎಂದು ಬ್ಲಾಗಿಗರು ಅಂದುಕೊಂಡಿರಬಹುದು. ಅದೇನೇ ಇರಲಿ, ಹಕ್ಕಿಯ ಕನಸುಗಳ ಅಕ್ಷರ ಪಯಣವಂತೂ ಸೊಗಸಾಗಿದೆ. ಪದ್ಯ-ಗದ್ಯದ ಹದವಾದ ಮಿಶ್ರಣ ಇಲ್ಲಿದೆ.

ಬ್ಲಾಗಿಗ ರವಿ ಮೂರ್ನಾಡು ಕೊಡಗಿನ ಮಡಿಕೇರಿಯವರು. ಮಳೆ-ಮಂಜಿನ ಮಡಿಕೇರಿಯ ವ್ಯಕ್ತಿಗೆ ಸುಡಾನ್ ಎನ್ನುವ ಹಿಂದುಳಿದ ದೇಶ ಹೇಗೆ ಕಾಣಿಸಬಹುದು? `ಸುಡಾನ್ ಎಂಬ ಸುಡುಗಾಡು ದೇಶದಲ್ಲಿ ಮಾತನಾಡುವ ಮಾಂಸಖಂಡಗಳು!' ಎನ್ನುವ ಅವರ ಬರಹದಲ್ಲಿ, `ಮಹಸ ಎಂಬ `ರೆಫ್ಯೂಜಿ' ಮಹಿಳೆ ಹೇಳಿದ ಕಥೆ ಮತ್ತು ವಿಳಾಸವಿಲ್ಲದ ಊರು!' ಎನ್ನುವ ಒಂದು ಪ್ರಸಂಗವಿದೆ. ಅಂದಹಾಗೆ, ಇದು `ಆಫ್ರಿಕಾ ಅಕ್ಷರ ಪ್ರವಾಸ' ಬರಹ.

ರೆಫ್ಯೂಜಿ ಮಹಿಳೆಯ ಪ್ರಸಂಗದ ಒಂದು ತುಣುಕು ಕೆಳಗಿನಂತಿದೆ: “ಮಹಸ ಮಹಿಳೆ ಕೇವಲ ಒಂದು ಉದಾಹರಣೆಯಂತೆ ಇಲ್ಲಿನ ಅಸಂಖ್ಯ ಮಹಿಳೆಯರನ್ನು ಪತ್ರಿನಿಧಿಸಿದ ಪ್ರತಿಮೆಯಾಗಿದ್ದಾಳೆ. ತಮ್ಮ ಕುಟುಂಬದ ಮಂದಿಗೆ, ಮಕ್ಕಳ ಹಸಿವು ಇಂಗಿಸಲು ದಿನದ ಹಲವು ಗಂಟೆಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಪರಿ ಇದೆ.

ಇಲ್ಲಿಯೂ ತಮ್ಮತಮ್ಮವರಿಂದಲೇ ಪದಾರ್ಥ ಸಾಗಣೆಗೆ ಜಟಾಪಟಿಗಳು ನಡೆದು ಸಿಕ್ಕಿದ ಪದಾರ್ಥಗಳು ಇನ್ನೊಬ್ಬರ ಪಾಲಾಗುತ್ತದೆ. ಬಲವಂತವಾಗಿ ಮತ್ತೊಂದು ಕುಟುಂಬದ ಮಂದಿಗಳು ಕಸಿದುಕೊಳ್ಳುತ್ತಾರೆ. ಇದು ಜಗತ್ತು ಕಂಡ ಸಮೂಹ  ಅನ್ನದ ಜಗಳ. ಹಸಿವಿನ ತುತ್ತತುದಿಯ ಪರಿತಾಪಗಳು. ಇವೆಲ್ಲಕ್ಕಿಂತಲೂ ಮತ್ತಷ್ಟು ಅಪಾಯವೆಂದರೆ, ಆಹಾರ ಪದಾರ್ಥ ಬೇಯಿಸಲು ಕಟ್ಟಿಗೆ ಸಂಗ್ರಹಿಸುವ ಕೆಲಸ. ಈ ವಿಚಾರವನ್ನು ಸ್ವತಃ ಮಹಸ ಬಿಚ್ಚಿಡುತ್ತಾಳೆ.

ಹೇಗೆಂದರೆ, ಒಲೆ ಬೆಂಕಿಗೆ ಕ್ಯಾಂಪುಗಳ ಸಮೀಪದ ಅರಣ್ಯಗಳಲ್ಲಿ ಕಟ್ಟಿಗೆ ಸಂಗ್ರಹಿಸಲು ಹೋಗುವುದೇ ಹಸಿವಿಗೆ ಅನ್ನ ತಿನ್ನುವ ತ್ರಾಸಕ್ಕಿಂತಲೂ ಅಪಾಯಕಾರಿ. ಅರಣ್ಯಗಳಲ್ಲಿ ಬೀಡು ಬಿಟ್ಟಿರುವ ಬುಡಕಟ್ಟು ಜನಾಂಗದ ಮಂದಿ ರೆಫ್ಯೂಜಿ ಮಹಿಳೆಯರನ್ನು ಕಟ್ಟಿ ಹಾಕಿ ಹಿಂಸೆ ನೀಡುತ್ತಾರೆ. ಅವರಿಂದ ಕಟ್ಟಿಗೆ ಕಡಿಯಲು ಬಳಸುವ ಕತ್ತಿಗಳನ್ನು ಕಸಿದುಕೊಳ್ಳುತ್ತಾರೆ.

ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಅತೀ ಭಯಂಕರವಾಗಿ ಅಲ್ಲಿಂದ ಓಡಿಸುತ್ತಾರೆ. ಈ ಬುಡಕಟ್ಟು ಜನಾಂಗದ ಮಂದಿ ಮತ್ತು ರೆಫ್ಯೂಜಿ ಮಹಿಳೆಯರ ಮಧ್ಯೆ ಆಗಾಗ್ಗೆ ನಡೆಯುತ್ತಿರುವ ಹೋರಾಟಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದರಿಂದ ಮನೆಗೆ ತಂದ ಆಹಾರ ಪದಾರ್ಥ ಬೇಯಿಸಲು ಒಲೆ ಬೆಂಕಿ ಹಚ್ಚುವುದು ಕಷ್ಟಗಳಲ್ಲಿ ಮತ್ತೊಂದು ಸೇರ್ಪಡೆ”.

ಹಸಿವಿನ ದಾರುಣತೆಯನ್ನು ಕವಿತೆಯ ಮೂಲಕ ಕಟ್ಟಿಕೊಡುವ ಪ್ರಯತ್ನವೂ ಬ್ಲಾಗಿನಲ್ಲಿದೆ. `ಈ ಸರದಿ ಸಾಲಿನ ಮಂದಿ' ಕವಿತೆ ಹಸಿದವರ ಪಾಳಿಯ ತಲ್ಲಣಗಳನ್ನು ಅಕ್ಷರಗಳ ಮೂಲಕ ಹಿಡಿದಿಡಲು ಪ್ರಯತ್ನಿಸುತ್ತದೆ. ಕವಿತೆ ಕೊನೆಯಾಗುವುದು- `ಮೂಡಣಕೆ ಬೆಳಕಿನ ಪ್ರಕಾಶ ಉರಿಯುತಿದೆ / ಅದು ಅವರಿಗಲ್ಲ! / ಅಲ್ಲೆಲ್ಲೊ ಮಳೆಗೆ ಬಿರುಸು ಬಂದಿದೆ / ತೊಯ್ದಿದೆ ಇವರ ಗಲ್ಲ'.

ಇಂಥ ಕಥೆಗಳ ಓದುತ್ತಿದ್ದರೆ ಓದುಗರ ಗಲ್ಲಗಳೂ ತೋಯಬೇಕು. ತಲ್ಲಣಿಸುತ್ತಲೇ, ಒಂದು ಹಸಿವಿನ ಕಥೆಯಿಂದ ಇನ್ನೊಂದು ಹಸಿವಿನ ಕಥೆಯನ್ನು ಪ್ರವೇಶಿಸೋಣ. ಇದು ಕಾಮವೆನ್ನುವ ಹಸಿವಿನ ಕಥೆ. `ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆಂದರೆ...' ಎನ್ನುವುದು ಕವಿತೆಯ ಹೆಸರು. ಹುಡುಗಿ ಕಾಮದ ಬಗ್ಗೆ ಪದ್ಯ ಬರೆದಾಗ ಏನಾಗುತ್ತದೆಂದರೆ,
ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆಂದರೆ...

ಗಂಡಸರಿಗೆ ಮೈಯೆಲ್ಲ ಮಿಂಚು
ತಿದ್ದಿ ತೀಡಿ ಕ್ರಾಪು
ಅಲ್ಲಲ್ಲಿ ಬಿಳಿಗೆ ಮೆತ್ತಿ ಕಪ್ಪು
ಹೆಂಡತಿಗೆ ಒಗ್ಗರಣೆ ಮಾತು!

ಹೆಂಗಸರಿಗೆ ಆತಂಕ!
ಒಂದಷ್ಟು ಕನ್ನಡಿ ಮುಂದೆ ಕೆಲಸ
ಅಡುಗೆಗೆ ರುಚಿ ವ್ಯತ್ಯಾಸ
ಗಂಡಸರ ಹೆಜ್ಜೆಗೆ ಹದ್ದಿನ ಕಣ್ಣು!

ಮುಂದೆ, ಯಾರು ಯಾರಿಗೆಲ್ಲ ಏನಾಗುತ್ತದೆ ಎನ್ನುವುದನ್ನು ಬ್ಲಾಗಿನಲ್ಲೇ ಓದಿಕೊಳ್ಳಿ. `ರಸಿಯಾ ಅಕ್ಕ' ರವಿ ಮೂರ್ನಾಡರ ಬ್ಲಾಗಿನ ಮತ್ತೊಂದು ಆರ್ದ್ರ ಕಥನ. ರಸಿಯಾ ಎಂಬ ಹೆಣ್ಣುಮಗಳ ಬದುಕಿನ ದುರಂತದ ಜೊತೆಗೆ ಸಮಾಜದ ಕಾಠಿಣ್ಯವನ್ನೂ ಒಟ್ಟಿಗೆ ತೋರುವ ರಚನೆಯಿದು. `ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು' ಲಹರಿ ರೀತಿಯ ಬರಹ.

ರವಿ ಅವರ ಎಲ್ಲ ಬರಹಗಳ ಹಿನ್ನೆಲೆಯಲ್ಲಿ ತೆಳು ವಿಷಾದವೊಂದು ಹಬೆಯಾಡಿದಂತಿದೆ. ಮೂಕ ಹಕ್ಕಿಯ ಸಂಗೀತದಲ್ಲಿ ವಿಷಾದದ ಹಾಡುಗಳೇ ಹೆಚ್ಚು. ಈ ವಿಷಾದದ ಸ್ಪರ್ಶ ಬರಹಗಳಿಗೆ ಆಪ್ತತೆಯನ್ನು ತಂದುಕೊಟ್ಟಿರುವಂತೆ, ಒಂದು ಚೌಕಟ್ಟನ್ನೂ ಹಾಕಿಬಿಟ್ಟಿದೆ.
-ಸಾಕ್ಷಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT