ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಗು ಮತ್ತು ಮೂಗುದಾರ...

ವಾರದ ವಿನೋದ
Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

`ಏನಯ್ಯ ತೆಪರೇಸಿ, ಏನನ್ನುತ್ತೋ ನಿಮ್ ಸಿದ್ರಾಮಯ್ಯನೋರ ಬಜೆಟ್ಟು?'
`ಅದಾ ಸಾ, ನೆತ್ತಿಗಂತೂ ಏರಲಿಲ್ಲ, ಪಾದಕ್ಕೆ ಇಳೀತು ಅನ್ನಬಹುದು...'
`ಏನಯ್ಯೊ ಹಾಗಂದ್ರೆ?'

`ಗುಂಡು ದುಬಾರಿ, ಚಪ್ಲಿ ಸೋವಿ ಅಂದೆ ಸಾ. ಅಬ್ಕಾರಿ ಟ್ಯಾಕ್ಸ್‌ನ ತೀರ ಅಷ್ಟಾಕಂದು ಹಾಕಿದ್ರೆ ನಮ್ಮಂತೋರು ಬದುಕೋದಾದ್ರು ಹೆಂಗೆ?'
ಅಲ್ಲಯ್ಯ, ಗುಂಡು ಹಾಕೋಕೆ ಅಂತಾನೆ ಯಾರಾದ್ರು ಬದುಕ್ತಾರಾ? ಬದುಕೋಕೆ ಅಂತ ಸಿದ್ರಾಮಯ್ಯ ರೂಪಾಯಿಗೊಂದು ಕೆ.ಜಿ. ಅಕ್ಕಿ ಕೊಟ್ಟಿಲ್ವಾ? ಇನ್ನೇನ್ ಬೇಕು?'

`ಅಯ್ಯೋ ಬಿಡಿ ಸಾ, ಅಂಗೀಲಿ ಬಿಟ್ಟು ಪಂಚೇಲಿ ಹಿಡ್ಕೊಂಡ್ರು ಅಂತಾರಲ್ಲ, ಹಂಗಾಯ್ತು. ಅಕ್ಕೀಲಿ ಬಿಟ್ರು, ಅಬ್ಕಾರೀಲಿ ಹಿಡ್ಕಂಡ್ರು. ಡೀಸೆಲ್‌ನಲ್ಲಿ ಬಿಟ್ರು, ಪೆಟ್ರೋಲ್‌ನಲ್ಲಿ ದುಡ್ಕಂಡ್ರು. ರೈತರಿಗೆ ಹಾಲಿಗೆ ನಾಲ್ಕು ರೂಪಾಯಿ ಕೊಟ್ರು, ಅದನ್ನ ಪಶು ಆಹಾರ ದುಬಾರಿ ಮಾಡಿ ಕಿತ್ಕಂಡ್ರು. ಎಲ್ಲ ಅಲ್ಲಿಗಲ್ಲಿಗೇ... ದಾನಿಕೀ ದೀನಿಕೀ ಸರಿಪೋಯ...'
ತೆಪರೇಸಿ ಮಾತಿಗೆ ನಗು ಬಂತು `ಅಂದ್ರೇ ನೀ ಹೇಳೋದೇನೀಗ?'

`ಅದೇ ಸಾ, ರೂಪಾಯಿಗೊಂದು ಕೆ.ಜಿ. ಅಕ್ಕಿ ಕೊಟ್ಟು ಸಂಸಾರಕ್ಕೆ ದುಡಿಯೋ ಕಷ್ಟ ತಪ್ಪಿಸಿದ್ರು ಅನ್ಕಂಡಿದ್ದೆ. ಆದ್ರೆ ಈಗ ಗುಂಡಿಗೆ ಜಾಸ್ತಿ ರೊಕ್ಕ ಜೋಡಿಸ್ಬೇಕಲ್ಲ ಸಾ, ಅದಕ್ಕಾದ್ರು ದುಡೀಲೇಬೇಕಲ್ಲ...'
`ಓ ಹಂಗಾ, ಅದಿರ್ಲಿ ಸಿದ್ರಾಮಯ್ಯನೋರು ಎಲ್ಲ ಬಿಟ್ಟು ಚಪ್ಲಿ ಯಾಕೆ ಸೋವಿ ಮಾಡಿದ್ರು ಅಂತ...'

`ಗುಂಡು ಹಾಕಿದ್ಮೇಲೆ ನಮ್ಮಂಥೋರು ಚಪ್ಲಿ ಕಳ್ಕಳ್ಳೋದು ಜಾಸ್ತಿ ಅಲ್ವ ಸಾ, ಎಲ್ಲೋ ಕುಡಿದು ಇನ್ನೆಲ್ಲೋ ಬಿಟ್ಟು ಬರ್ತೀವಿ. ಕೆಲವು ಸಲ ಗಟಾರದಾಗೆ ಬಿದ್ದು ಒಂದೇ ಚಪ್ಲಿ ಹಿಡ್ಕಂಡು ಎದ್ದು ಬರ್ತೀವಿ. ಪಾಪ, ಮುಂಡೇವು ಪದೇ ಪದೇ ಚಪ್ಲಿ ಕಳ್ಕಂತಾವೆ, ಹೊಸವು ತಗೋತಾ ಇರ್ಲಿ ಅಂತ ಚಪ್ಲಿ ರೇಟು ಕಡಿಮೆ ಮಾಡಿರಬೇಕು ಅನ್ಸುತ್ತೆ...'
`ಅಲ್ಲಯ್ಯ, ನೀವು ಗುಂಡಾಕಿ ಗುಂಡಿಗೆ ಬೀಳೋ ಬದ್ಲು ಸುಮ್ನೆ ನೀರಾ ಕುಡಿದು ಯಾಕೆ ನಿರಾಳವಾಗಿರಬಾರ್ದು? ಸಿದ್ರಾಮಯ್ಯ ನೀರಾ ಮಾರೋಕೆ ಪರ‌ಮಿಶನ್ ಕೊಟ್ಟಿದಾರಂತೆ?'

`ನಾನೂ ಅದ್ನೇ ಯೋಚಿಸ್ತಿದ್ದೆ ಸಾ, ನೀರಾ ನಿಜಕ್ಕೂ ಆರೋಗ್ಯಕ್ಕೆ ಒಳ್ಳೇದು. ಮನೇಲಿರೋ ನೀರೆ... ಅಂದ್ರೆ ಹೆಂಡ್ತೀರ್‌ಗಿಂತ ನೀರಾ ನೂರು ಪಾಲು ವಾಸಿ...'
`ಅದೇನಯ್ಯ ಹಾಗೆ ಹೇಳ್ತಿ? ನೀರಾಕ್ಕೂ ನೀರೆಗೂ ಏನು ಸಂಬಂಧ?'


`ಸಂಬಂಧ ಐತಿ ಸಾ, ನೀರಾ ಕೂಲಾಗಿರುತ್ತೆ, ಫ್ರೆಶ್ಯಾಗಿರುತ್ತೆ, ಬೆಳಬೆಳಿಗ್ಗೆ ಕುಡಿದ್ರೆ ಸ್ವೀಟಾಗಿರುತ್ತೆ. ನಿಧಾನಕ್ಕೆ ಕಿಕ್ಕೇರುತ್ತೆ, ಅಷ್ಟೇ ಬೇಗ ಇಳಿದೋಗುತ್ತೆ... ಯಾವ ಹ್ಯಾಂಗೋವರ್ ಇರಲ್ಲ'
`ಮತ್ತೆ ನೀರೆ?'
`ಎಲ್ಲ ಉಲ್ಟಾ ಸಾ, ನೋ ಕೂಲ್, ನೋ ಸ್ವೀಟ್. ಕಿಕ್ ಏರೋಕೆ ಮುಂಚೆನೇ ಇಳಿದುಬಿಡುತ್ತೆ'

`ಇಳಿದುಬಿಡುತ್ತೆ ಅಲ್ಲ, ಇಳಿಸಿಬಿಡ್ತಾರೆ ಅನ್ನು. ಕಂಠಮಟ ಕುಡಿದು ಬಂದ್ರೆ ತಲೆ ಮೇಲೆ ಎರಡು ಕೊಡ ನೀರು ಸುರಿದು ಬಟ್ಟೆ ಒಣಗಿಸೋ ಹಾಗೆ ಹ್ಯಾಂಗರ್‌ಗೆ ನೇತು ಹಾಕಿಬಿಡ್ತಾರೆ. ಅಲ್ಲಯ್ಯೊ, ನೀವಾದ್ರು ಯಾಕೆ ಜಾಸ್ತಿ ಕುಡೀಬೇಕು ಹೇಳು...'
`ನಾವು ಕುಡೀದಿದ್ರೆ ಸರ್ಕಾರ ಹೇಗೆ ನಡೆಯುತ್ತೆ ಸಾ? ನಮ್ಮಿಂದಾನೇ ಸರ್ಕಾರ ನಡೀತಿರೋದು. ವರ್ಷಕ್ಕೆ 12 ಸಾವಿರ ಕೋಟಿ ಅಬ್ಕಾರಿ ಟ್ಯಾಕ್ಸ್ ಯಾರು ಕಟ್ತಿರೋದು? ನಾವೇ. ಆದ್ರೂ ಪರ‌ವಾಗಿಲ್ಲ, ಸಿದ್ರಾಮಯ್ಯ ಚೆನ್ನಾಗಿರಲಿ ಅಂತ ಹಾರೈಸ್ತೀವಿ.

ಈ ಜನಪದದಲ್ಲಿ `ಕಲ್ಲು ಕೊಟ್ಟವ್ವಾಗೆ ಎಲ್ಲ ಭಾಗ್ಯವು ಬರಲಿ' ಅಂತ ಒಂದು ತ್ರಿಪದಿ ಐತಿ ಕೇಳಿರೇನು ? ಬರೀ ಬೀಸೋಕಲ್ಲು ಕೊಟ್ಟಿದ್ದಕ್ಕೇ ಆ ತಾಯಿಗೆ ಎಲ್ಲ ಭಾಗ್ಯ ಬರಲಿ ಅಂತ ಹಾರೈಸೋ ಕನ್ನಡಿಗರು ನಾವು. ಅಂಥದ್ರಲ್ಲಿ ಅಕ್ಕಿ ಕೊಟ್ಟ ಸಿದ್ರಾಮಯ್ಯುಂಗೆ ಹಾರೈಸದೇ ಇರ‌ತೀವಾ? ಟ್ಯಾಕ್ಸ್ ಹೋದ್ರೆ ಹೋಗ್ಲಿ, ಸಿದ್ರಾಮಯ್ಯನೋರ ಸರ್ಕಾರ ಚೆನ್ನಾಗಿರ‌ಲಿ. ಇದರ ಮ್ಯೋಗೆ ಒಂದು ಚುಟುಕ ಬರೆದಿದೀನಿ, ಕೇಳ್ತೀರೇನು?'

`ಅರೆ ಹೇಳೋ ಮಾರಾಯ, ನೀನು ಹೋದ ಸಲ ಹೇಳಿದ್ದ ಚುಟುಕನ ಹೊರಟ್ಟಿ ಸಾಹೇಬ್ರು ವಿಧಾನ ಪರಿಷತ್‌ನಲ್ಲಿ ಹೇಳಿದ್ರಂತೆ?'
`ಹ್ಞೂ ಸಾ, ಈಗ ಇದನ್ನ ಕೇಳಿ, ಹೊಸ ಚುಟುಕ...'
ಅಕ್ಕಿ ಕೊಟ್ಟ `ಅಯ್ಯ'ನಿಗೆ ಎಲ್ಲ ಭಾಗ್ಯವು ಬರಲಿ
ದಿಲ್ಲಿ ಅಮ್ಮನ ಕರುಣೆ ಸದಾ ಕಾಯುತಿರಲಿ 
ಮೂಗುದಾರದ ಮುಖದ್ಲ್ಲಲೂ ತುಸು ನಗುವಿರಲಿ!

`ವಾಹ್, ಚೆನ್ನಾಗಿ ಹೇಳಿದೆ ಕಣಯ್ಯ. ಆದ್ರೆ ನಿನ್ನ ಅರ್ಥ ಮಾಡ್ಕಳೋಕೇ ನನಗೆ ಆಗ್ತಿಲ್ಲಪ್ಪ. ಮೊದಲು ಅಬ್ಕಾರಿ ಟ್ಯಾಕ್ಸ್ ಜಾಸ್ತಿ ಆತು ಅಂತ ಹಾರಾಡಿದೆ. ಈಗ ಟ್ಯಾಕ್ಸ್ ಹೋದ್ರೆ ಹೋಗ್ಲಿ, ಸಿದ್ರಾಮಯ್ಯ ಚೆನ್ನಾಗಿರ‌ಲಿ ಅಂತೀಯ... ಏನು ನಿನ್ಕತೆ?'
`ಏನ್ಮಾಡೋದು ಸಾ, ಎಲೆಕ್ಷನ್‌ನಲ್ಲಿ ಓಟು ಬೇಕಾದಾಗ ಎಲ್ಲ ರಾಜಕಾರಣಿಗಳೂ ಜನಕ್ಕೆ ಹೆಂಡ ಕುಡಿಸ್ತಾರೆ. ಗೆದ್ದ ಮೇಲೆ ಕುಡೀಬೇಡಿ ಅಂತ ಉಪದೇಶ ಮಾಡ್ತಾರೆ. ಅವರು ಹಂಗೆ ಮಾಡ್ತಾರೆ ಅಂತ ನಾವೂ ಹಂಗೆ ಮಾಡೋಕಾಗುತ್ತಾ? ಹೊಸ ಸರ್ಕಾರ, ಹನಿಮೂನ್ ಕಾಲದಲ್ಲಿ ತಪ್ಪು ಹುಡುಕಬಾರ್ದು ಅಲ್ವ ಸಾ?'

`ಆಯ್ತಪ್ಪ, ಆಮೇಲೆ ಸಿದ್ರಾಮಯ್ಯನೋರಿಗೆ ಅದೇನೋ ಮೂಗುದಾರ ಹಾಕ್ತಾರೆ ಅಂತಿದ್ರು?'
`ಮೂಗು ಇದ್ದೋರಿಗೆಲ್ಲ ಮೂಗುದಾರ ಹಾಕೋದು ಒಳ್ಳೇದು ಸಾ, ಇಲ್ಲದಿದ್ರೆ ಎಡವಟ್ಟಾಗಿಬಿಡುತ್ತೆ. ಸಿದ್ರಾಮಯ್ಯ ಒಬ್ರಿಗೇ ಅಲ್ಲ, ಎಲ್ಲ ರಾಜಕಾರಣಿಗಳಿಗೂ ಮೂಗುದಾರ ಬೇಕೇ ಬೇಕು. ಈ ಭಿನ್ನಮತ, ರೆಸಾರ್ಟ್ ರಾಜಕಾರಣ, ಆಪರೇಶನ್ ಅವಾಂತರ ಇಂಥವನ್ನೆಲ್ಲ ಮೂಗುದಾರ ಹಿಡಿದೇ ನಿಯಂತ್ರಿಸಬಹುದು. ನೀವೇನಂತೀರಿ?'

`ಕರೆಕ್ಟ್ ಅಂತೀನಿ. ಸರಿ, ಮತ್ತೇನ್ ಸಮಾಚಾರ? ಯಡ್ಯೂರಪ್ಪ ಮತ್ತೆ ಬಿಜೆಪಿ ಸೇರ‌ತಾರಂತೆ?'
`ಸೇರಬಹುದು ಸಾ, ಮೊನ್ನೆ ವಿಧಾನಸಭೇಲಿ `ತಪ್ಪಾಯ್ತು, ಮತ್ತೆ ನಾವೆಲ್ಲ ಒಂದಾಗಿ ಕಾಂಗ್ರೆಸ್‌ನ ಸೋಲಿಸ್ತೀವಿ ಅಂದ್ರಂತೆ. ರೇಣುಕಾಚಾರ್ಯರು ಇದೇ ಸ್ಟೋರಿ ಇಟ್ಕಂಡು ಒಂದು ಸಿನಿಮಾ ತೆಗೀತಿದಾರಂತೆ. ಟೈಟಲ್ ಏನ್ ಗೊತ್ತಾ?'
`ಏನು?'
`ತಪ್ಪಾಯ್ತು ತಬ್ಕೋತೀವಿ' ಅಂತ !

`ಥೂ ನಿನ್ನ, ನಿಂಗೆ ಮಾತಾಡೋಕೆ ಬಿಟ್ರೆ ಎಲ್ಲೆಲ್ಲಿಗೋ ಹೋಗ್ತೀಯ. ಸೀರಿಯಸ್ ವಿಷಯ ಏನ್ ಗೊತ್ತಾ? ಸರ್ಕಾರ ಶಾಲಾ ಮಕ್ಕಳಿಗೆ ಕೊಡೋ ಕಬ್ಬಿಣಾಂಶದ ಮಾತ್ರೆ ನುಂಗಿ ಡೆಲ್ಲೆಲಿ ಇಪ್ಪತ್ತೊಂದು ಮಕ್ಕಳು ಆಸ್ಪತ್ರೆ ಸೇರಿದಾರಂತೆ...'
`ಅಯ್ಯೋ ಬಿಡಿ ಸಾ, ಹೋದ ಬಿಜೆಪಿ ಸರ್ಕಾರದಲ್ಲಿ ಬಳ್ಳಾರಿ ಕಬ್ಬಿಣಾಂಶ ಜಾಸ್ತಿಯಾಗಿ ಬಿಜೆಪಿಯಂಥ ಬಿಜೆಪಿಯೋರೇ ಅಧಿಕಾರ ಕಳ್ಕೊಂಡು ಮೂಲೆ ಸೇರಿದ್ರು. ಇನ್ನು ಆ ಶಾಲಾ ಮಕ್ಕಳು ಆಸ್ಪತ್ರೆ ಸೇರೋದು ಯಾವ ಲೆಕ್ಕ?...' ತೆಪರೇಸಿಯ ಈ ಎಲ್ಲಿಂದೆಲ್ಲಿಗೋ ತಳಕು ಹಾಕುವ ಕಿಡಿಗೇಡಿತನಕ್ಕೆ ನನಗೆ ನಗು ತಡೆಯಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT