ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಗು ಮುಚ್ಚಿಕೊಂಡೇ ನಡೆದಾಡಬೇಕು...

Last Updated 27 ಜನವರಿ 2013, 19:59 IST
ಅಕ್ಷರ ಗಾತ್ರ

ಕರ್ನಾಟಕದ ಉತ್ತರದ ತುದಿಯಲ್ಲಿರುವ ಬೀದರ್ ಜಿಲ್ಲಾ ಕೇಂದ್ರದಲ್ಲಿರುವ ನೆಹರು ಕ್ರೀಡಾಂಗಣ ಅವ್ಯವಸ್ಥೆಯ ಆಗರವೇ ಆಗಿದೆ.  ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯ ದಿನದಂದು ಇಲ್ಲಿಯೇ ಧ್ವಜಾರೋಹಣ ನಡೆಯುವುದು.  ಆಧ್ಯಾತ್ಮ, ಯೋಗ ಶಿಬಿರ ಮತ್ತಿತರ ಚಟುವಟಿಕೆಗಳೂ ಸಾಮಾನ್ಯ. ಆದರೆ ಇಲ್ಲಿ ಲಭ್ಯವಿರುವ ಮೂಲ ಸೌಲಭ್ಯಗಳಂತೂ ಸರ್ಕಾರವೇ ನಾಚಿಕೊಳ್ಳುವಂತಿದೆ.

ಮಳೆ ಬಂದರೆ ಕ್ರೀಡಾಂಗಣದಲ್ಲೇ ನೀರು ನಿಲ್ಲುತ್ತದೆ. ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆಯಿಲ್ಲ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡೆಗಳು ನಡೆದಾಗ ಕ್ರೀಡಾಂಗಣ ಆವರಣದಲ್ಲಿಯೇ ತಾತ್ಕಾಲಿಕವಾಗಿ ಒಂದು ಟ್ಯಾಂಕ್ ಅಳವಡಿಸಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಆಗ ಸೋರುವ ಮತ್ತು ಕೆಳಗೆ ಬೀಳುವ ನೀರು ಹರಿದು ಹೋಗುವ ವ್ಯವಸ್ಥೆಯಿಲ್ಲದೆ ಆವರಣ ಇನ್ನಷ್ಟು ಮಲೀನವಾಗುತ್ತದೆ.

ಪ್ರೇಕ್ಷಕರ ಗ್ಯಾಲರಿಯ ವ್ಯವಸ್ಥೆಯಂತೂ ನಿರ್ಲಕ್ಷ್ಯದ ಪರಮಾವಧಿಯಂತಿದೆ. ಪ್ರೇಕ್ಷಕರು ಕೂರುವ ಸ್ಥಳದಲ್ಲಿ ಬಹುತೇಕ ಕಡೆ ಕಾಂಕ್ರೀಟ್ ಕುಸಿದುಬಿದ್ದಿದೆ. ಕ್ರೀಡಾಂಗಣ ಕಟ್ಟುವಾಗಲೇ ಆಸನಗಳ ಕೆಳಗಿನ ಜಾಗವನ್ನು ರಸ್ತೆಗೆ ಅಭಿಮುಖವಾಗಿ  ಅಂಗಡಿ ಮಳಿಗೆಗಳನ್ನು ಮಾಡಲಾಗಿದ್ದು, ನಿರ್ಮಾಣಕ್ಕೆ ಬಳಸಲಾಗಿದ್ದ ಕಬ್ಬಿಣ ತುಕ್ಕು ಹಿಡಿದು ಬೀಳುವ ಸ್ಥಿತಿಯಲ್ಲಿದೆ. ನಾಲ್ಕು ವರ್ಷಗಳ ಹಿಂದೆ ಈ ಮಳಿಗೆಗಳಲ್ಲಿ ಇದ್ದ ಸಣ್ಣ ಪುಟ್ಟ ವ್ಯಾಪಾರಿಗಳು, ಆಟೋಮೊಬೈಲ್ ದುರಸ್ತಿಗೆ ಸಂಬಂಧಿತ ಮಳಿಗೆಗಳನ್ನು ಹೊರವಲಯದ ಆಟೋ ನಗರಕ್ಕೆ ಸ್ಥಳಾಂತರಿಸಿದ ಬಳಿಕ ಖಾಲಿ ಬಿದ್ದ ಮಳಿಗೆಗಳು ಅಲ್ಲಲ್ಲಿ ಮೂತ್ರಾಲಯಗಳಾಗಿ ಬಿಟ್ಟಿವೆ.

ಕ್ರೀಡಾಂಗಣದ ಆವರಣ ಸದಾ ಧೂಳುಮಯ. ಆಟಗಾರರು ಧೂಳಿನ ನಡುವೆಯೇ ಕ್ರೀಡಾಭ್ಯಾಸ ಮಾಡಬೇಕು. ರಾಜ್ಯಮಟ್ಟದ ಕ್ರೀಡಾಕೂಟಗಳು ನಡೆದಾಗ ನೀರು ಸಿಂಪಡಿಸಿ ಧೂಳು ಏಳದಂತೆ ಕ್ರಮ ಕೈಗೊಳ್ಳಲಾಗುತ್ತದೆ; ಉಳಿದಂತೆ ಪರಿಸ್ಥಿತಿ ಬದಲಾಗುವುದಿಲ್ಲ. ಶೌಚಾಲಯದಲ್ಲಿಯೂ ನೀರು ಹರಿದುಹೋಗುವ ವ್ಯವಸ್ಥೆಯೇ ಇಲ್ಲ. ಕ್ರೀಡಾಂಗಣದ ಆ ದಿಕ್ಕಿನಲ್ಲಿ ಹೋಗುವವರು ಮೂಗು ಮುಚ್ಚಿಕೊಂಡೇ ನಡೆದಾಡಬೇಕು.   ಕಳೆದ ಅಕ್ಟೋಬರ್ ತಿಂಗಳು ರಾಜ್ಯಮಟ್ಟದ ಮಹಿಳೆಯರ ಪೈಕಾ ಕ್ರೀಡಾಕೂಟ ನಡೆದಾಗ ಕ್ರೀಡಾಪಟುಗಳು ಇಲ್ಲಿನ ಕ್ರೀಡಾಂಗಣದ ಅವ್ಯವಸ್ಥೆ ಕಂಡು ಅಚ್ಚರಿ ವ್ಯಕ್ತ ಪಡಿಸಿದ್ದಲ್ಲದೆ, ಪ್ರತಿಭಟನೆಯ ಸೊಲ್ಲೂ ಕೇಳಿ ಬಂದಿತ್ತು.

ಈ ಕುರಿತು ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಹನುಮಂತಪ್ಪ ಭರಶೆಟ್ಟಿ ಅವರನ್ನು ಸಂಪರ್ಕಿಸಿದರೆ, `ಕ್ರೀಡಾಂಗಣ ಸುಸ್ಥಿತಿಯಲ್ಲಿ ಇಲ್ಲ ಎಂಬುದು ಅರಿವಿಗೆ ಬಂದಿದೆ. ಅದರ ಒಟ್ಟು ದುರಸ್ತಿಗೆ ಪತ್ರ ಬರೆಯಲಾಗಿದ್ದು, ಭೂ ಸೇನಾ ನಿಗಮಕ್ಕೆ ಅಂದಾಜು ವೆಚ್ಚ ಸಲ್ಲಿಸಲು ಕೋರಲಾಗಿದೆ' ಎನ್ನುತ್ತಾರೆ.

`ಬೀದರ್ ತಾಲ್ಲೂಕಿನಲ್ಲಿ ಕ್ರೀಡೆಯ ಪ್ರಗತಿ, ಕ್ರೀಡಾಂಗಣದ ನಿರ್ವಹಣೆಗೆ ವಾರ್ಷಿಕ ಒಂದೂವರೆ ಲಕ್ಷ ರೂಪಾಯಿ ಲಭ್ಯವಿದೆ. ಅದರಲ್ಲಿ ಆಗಾಗ್ಗೆ ಸಣ್ಣ ಪುಟ್ಟ ದುರಸ್ತಿ ಮಾಡಿಸುತ್ತೇವೆ. ಆದರೂ, 45 ವರ್ಷದ ಹಿಂದೆ ನಿರ್ಮಾಣ ಆಗಿರುವ ಕಾರಣ ಅಲ್ಲಲ್ಲಿ ಕುಸಿಯುತ್ತಿದೆ' ಎನ್ನುತ್ತಾರೆ. ಕ್ರೀಡಾಂಗಣ ಸುಧಾರಣೆ ಕಾಣಲು ಇನ್ನಷ್ಟು ವರ್ಷ ಕಾಯಬೇಕೋ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT