ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಗೂರಿನ ತ್ರಿಪುರಸುಂದರಿ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ತಿ.ನರಸೀಪುರ ತಾಲ್ಲೂಕಿನ ಐತಿಹಾಸಿಕ ಸ್ಥಳಗಳಲ್ಲಿ ಮೂಗೂರು ಕೂಡ ಒಂದು. ಇಲ್ಲಿನ ತ್ರಿಪುರಸುಂದರಿ ದೇವಸ್ಥಾನ ಭಕ್ತರಿಗೆ ಪುಣ್ಯ ಕ್ಷೇತ್ರ.
 
ಪವಾಡಗಳ ನೆಲೆಯೂ ಹೌದು. ದೇವಿಗೆ ಹೂವಿನೆಲೆ ಸೀರೆ, ವೀಳ್ಯದೆಲೆ ಅಲಂಕಾರ, ಕುಂಕುಮಾರ್ಚನೆ, ಮಹಾಭಿಷೇಕ ಮಾಡಲಾಗುತ್ತದೆ. ಇಲ್ಲಿ ನಡೆಯುವ ಪೂಜಾ ಕಾರ್ಯಗಳಿಗೆ ಶುಲ್ಕ ನಿಗದಿ ಮಾಡಿಲ್ಲ. ಭಕ್ತರು ಇಚ್ಛಾನುಸಾರ ಅಗತ್ಯ ಪೂಜೆಗಳನ್ನು ಮಾಡಿಸಬಹುದು.

ಈ ದೇವಾಲಯವನ್ನು ಮುಸ್ಲಿಂ ಪಂಗಡದ ಪಾಳೇಗಾರ ವಡ್ನಬಾಬಾ ಸಾಹೇಬ ನಿರ್ಮಿಸಿದ ಎನ್ನುವ ಐತಿಹ್ಯವಿದೆ. ಒಮ್ಮೆ ಸಾಹೇಬ ತನ್ನ ಸೈನಿಕರೊಂದಿಗೆ ದಂಡೆತ್ತಿ ಹೋಗುವಾಗ ವಿಶ್ರಾಂತಿ ಪಡೆಯಲು ಮೂಗೂರು ಸಮೀಪದಲ್ಲಿ ಹೊಸಳ್ಳಿ ಗ್ರಾಮದಲ್ಲಿ ತಂಗಿದ್ದ. ಆಗ ಎಷ್ಟು ಕಾಯಿಸಿದರೂ ನೀರು ಬಿಸಿಯಾಗಲಿಲ್ಲ. ಆಗ ದೇವಿ ಪ್ರತ್ಯಕ್ಷಳಾಗಿ `ಮೂಗೂರಿನಲ್ಲಿ ನನಗೊಂದು ದೇವಾಲಯ ನಿರ್ಮಿಸು~ ಎಂದು ಸೂಚಿಸುತ್ತಾಳೆ. ಅದಕ್ಕೆ ವಡ್ನಬಾಬಾ ಸಾಹೇಬ, `ನೀನು ಮಹಿಮಾವಂತಳೇ ಆದರೆ ನಾನು ಜೋಳದ ಕಡ್ಡಿಯನ್ನು ತಿರುಗು ಮುರುಗಾಗಿ ನೆಡುತ್ತೇನೆ. ಚಿಗುರಿಸು~ ಎಂಬ ಪರೀಕ್ಷೆ ಒಡ್ಡುತ್ತಾನೆ. ಅದನ್ನು ಸಫಲಗೊಳಿಸಿದ ದೇವಿಯ ಮಹಿಮೆ ಕಂಡು ದೇವಾಲಯವನ್ನು ನಿರ್ಮಿಸಿದ ಎನ್ನಲಾಗುತ್ತದೆ.

ಇಲ್ಲಿ ನೆಲೆಸಿದ್ದ ಮೂಕಾಸುರ ಎಂಬ ರಾಕ್ಷಸನು ದೇವತೆಗಳ ಪೀಡಕನಾಗಿದ್ದ. ಅವನನ್ನು ಮಟ್ಟ ಹಾಕಲು ಇಂದ್ರಾದಿ ದೇವತೆಗಳು ಯೋಗಿನಿಗಳ ದೇವತೆಯಾದ ತ್ರಿಪುರ ಸುಂದರಿ ಅಮ್ಮನವರ ಮೊರೆ ಹೋಗುತ್ತಾರೆ. 9 ದಿನ ತಪಸ್ಸು ಮಾಡಿದ ತ್ರಿಪುರ ಸುಂದರಿ ಅಮ್ಮ ಸರ್ವ ಶಕ್ತಿ ಪಡೆದು ಮೂಕಾಸುರನನ್ನು ಕೊಂದು ದೇವತೆಗಳನ್ನು ರಕ್ಷಿಸಿದ ಕಾರಣ ಇಲ್ಲಿ ವಿಜಯದ ಸಂಕೇತವಾಗಿ ಜಾತ್ರಾ ಮಹೋತ್ಸವ ನಡೆಯುತ್ತದೆ.

ಇನ್ನೊಂದು ಐತಿಹ್ಯದ ಪ್ರಕಾರ, ಜೈನರ ಕಾಶಿ ಎಂದೇ ಕರೆಯುವ ಮೂಗೂರಿನಲ್ಲಿ ತೊಯೆಬ್ಬೆ ಮತ್ತು ಮಲ್ಹಣ ಎಂಬ ಜೈನ ದಂಪತಿಗೆ ದೇವಿ ಕನಸಿನಲ್ಲಿ ಕಾಣಿಸಿಕೊಂಡು ಪ್ರತಿಷ್ಠಾಪನೆ ಮಾಡಲು ಕೋರುತ್ತಾಳೆ. ಅವರು ಗರ್ಭಗುಡಿ ನಿರ್ಮಿಸಿ ಅಮ್ಮನನ್ನು ಸ್ಥಾಪಿಸುತ್ತಾರೆ. ತೊಯೆಬ್ಬೆ ದಂಪತಿಯಿಂದ ಪ್ರತಿಷ್ಠಾಪನೆಗೊಂಡ ಕಾರಣ ತಿಬ್ಬಾದೇವಿ ಎನ್ನುವ ಹೆಸರು ಬಂತು ಎನ್ನಲಾಗುತ್ತಿದೆ. ನಂತರ ಗಂಗರಸರ ಕಾಲದಲ್ಲಿ ತಲಕಾಡಿನಲ್ಲಿದ್ದ ಮಾಧವ ಮಂತ್ರಿ ದೇವಾಲಯದ ಪ್ರಾಂಗಣ ನಿರ್ಮಾಣ ಮಾಡಿಸಿದ ಹಾಗೂ ಕೃಷ್ಣದೇವರಾಯರ ಕಾಲದಲ್ಲಿ ನೃತ್ಯ ಮಂಟಪ ನಿರ್ಮಾಣವಾಯಿತು.

ಈ ದೇವಾಲಯದಲ್ಲಿ ಅನೇಕ ವಿಶೇಷಗಳಿವೆ. ಇಲ್ಲಿನ ಮೊದಲನೇ ಉತ್ಸವ ಆರಂಭವಾಗುವುದು ಎಡಗಡೆಯಿಂದಲೇ. ಈ ದೇವಾಲಯಕ್ಕೆ ರಾಜ ಗೋಪುರವಿಲ್ಲ. ವರ್ಷಕ್ಕೆ ಒಮ್ಮೆ ಮಾತ್ರ ದೇವಾಲಯದ ದಕ್ಷಿಣ ದಿಕ್ಕಿನ ಬಾಗಿಲು ತೆರೆಯುತ್ತದೆ. ಜಾತ್ರಾ ಮಹೋತ್ಸವದ ವೇಳೆ ವೈಮಾಳಿಗೆಯಿಂದ ದೇವಿಯ ಉತ್ಸವ ಮೂರ್ತಿಯನ್ನು ದಕ್ಷಿಣ ದಿಕ್ಕಿನ ಮೂಲಕ ಹೊರ ತರಲಾಗುತ್ತದೆ. ಎಲ್ಲಾ ದೇವಾಲಯಗಳಲ್ಲಿ ಮೊದಲು ರಥೋತ್ಸವ ನಂತರ ತೆಪ್ಪೋತ್ಸವ; ಆದರೆ ಇಲ್ಲಿ ಮೊದಲು ತೆಪ್ಪೋತ್ಸವ ನಂತರ ರಥೋತ್ಸವ.

ಈ ಗ್ರಾಮಕ್ಕೆ ಮೂಗೂರು ಎಂಬ ಹೆಸರು ಬರಲು ಕಾರಣವೂ ಇದೆ. ತ್ರಿಪುರ ಸುಂದರಿ ಅಮ್ಮನಿಗೆ ನಮಸ್ಕಾರ ಮಾಡುವಾಗ ಮೂಗನ್ನು ನೆಲಕ್ಕೆ ಸೋಕಿಸಿ ನಮಸ್ಕರಿಸಬೇಕೆಂಬ ನಿಯಮವಿದೆ. ನಮ್ಮಲ್ಲಿನ ಅಹಂಕಾರವನ್ನು ದೇವಿಯ ಮುಂದೆ ತೊರೆಯುವ ಸಂಕೇತ ಇದು.

ಪ್ರತಿ ವರ್ಷ ಜನವರಿಯಲ್ಲಿ ಅಂಕುರಾರ್ಪಣೆಯೊಂದಿಗೆ ಆರಂಭವಾಗುವ ಜಾತ್ರಾ ಮಹೋತ್ಸವದಲ್ಲಿ ಪೂರ್ಣಾಭಿಷೇಕ, ರಾಕ್ಷಸನ ವಧೆಯ ಉತ್ಸವ, ಶೇಷ ವಾಹನೋತ್ಸವ, ರುದ್ರಾಕ್ಷಿ ಮಂಟಪೋತ್ಸವ, ಸಿಂಹವಾಹನೋತ್ಸವ, ಚಂದ್ರ ಮಂಡಲೋತ್ಸವ, ಹೂವಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಬನದ ಹುಣ್ಣಿಮೆಯಂದು ಬಂಡಿ ಉತ್ಸವ. ರಾಕ್ಷಸನ ರಕ್ತ ನೆಲಕ್ಕೆ ಬೀಳಬಾರದೆಂದು ರಕ್ತ ಕುಡಿದ ರಕ್ಕಸಮ್ಮನ ಶಾಂತಿಗಾಗಿ 101 ಹಸಿ ಮಣ್ಣಿನ ಅಭಿಷೇಕ ಮಾಡಲಾಗುತ್ತದೆ.

ಪವಾಡ: ಇಲ್ಲಿನ ಮತ್ತೊಂದು ವಿಶೇಷವೆಂದರೆ `ಚಿಗುರು ಕಡಿಯುವುದು~. ಉತ್ಸವದ ಅವಧಿಯಲ್ಲಿ ಸಮೀಪದ ಹೊಸಳ್ಳಿ ಗ್ರಾಮದ ಬಳಿಯ ನೇರಳೆ ಮರದ ಬಳಿ ರಾತ್ರಿ ವ್ಯಕ್ತಿಯೊಬ್ಬರು ಬೆತ್ತಲೆ ಹೋಗಿ ಕೊಂಬೆಯೊಂದನ್ನು ಸವರಿ ಬರುತ್ತಾರೆ. ಬೆಳಿಗ್ಗೆ ಆ ಕೊಂಬೆ ಚಿಗುರೊಡೆಯುತ್ತದೆ.  ಇದು ದೇವಿಯ ಮಹಿಮೆಯ ಪ್ರತೀಕ ಎಂದೇ ಭಕ್ತರ ನಂಬುಗೆ. ಆಷಾಢ ಮತ್ತು ಕಾರ್ತಿಕ ಮಾಸದಲ್ಲಿ ವಿಶೇಷ ಅಲಂಕಾರ ಇರುತ್ತದೆ. 

 

ನಾಳೆ ರಥೋತ್ಸವ

ಮೂಗೂರು ತ್ರಿಪುರ ಸುಂದರಿ ಅಮ್ಮನವರ ರಥೋತ್ಸವ ನಾಳೆ ಬುಧವಾರ (ಜ.11) ಮಧ್ಯಾಹ್ನ 2.30 ರಿಂದ 3.30 ಗಂಟೆಯೊಳಗೆ ನಡೆಯಲಿದೆ.

ಜ. 12 ರಂದು ಹೊಸಳ್ಳಿಯಲ್ಲಿ ಚಿಗುರು ಕಡಿಯುವುದು, ನಂತರ ಕುದುರೆ ವಾಹನೋತ್ಸವ, ಉಯ್ಯಾಲೋತ್ಸವ. ಜ.13 ರಂದು ಆಳು ಪಲ್ಲಕ್ಕಿ ಉತ್ಸವ, ಮಹಾಭಿಷೇಕ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT