ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲ ಮನಿಯ ಪಂಚಮಿ ಸಂಭ್ರಮ

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ನಾಗರ ಪಂಚಮಿ ಅಂದ್ರ ಉತ್ತರ ಕರ್ನಾಟಕದೊಳಗ ಜಿಟಿಜಿಟಿ ಮಳಿ... ಮಳಿಯಷ್ಟೇ ಹೆಣ್ಣುಮಕ್ಕಳ ಮಾತು. ಮದುವೆಯಾದ ಹೆಂಗಳೆಯರೆಲ್ಲ ತವರು ಮನೆಗೆ ಬಂದಿರ್ತಾರೆ. ಮಾತು, ಮಾತು, ಮುಗಿಯದಷ್ಟು ಮಾತು.

ಕೈಗೆ ಮದರಂಗಿ ಬಳಿದುಕೊಂಡು ಕೂತರೂ ಮಾತು. ನುಚ್ಚಿನುಂಡಿ, ಎಳ್ಳುಂಡಿ, ಸೇಂಗಾದುಂಡಿ, ಹೆಸರುಂಡಿ ಎಚ್ಚಾ ಫರಾತ್ನಾಗ ಹಾಕ್ಕೊಂಡು ಕಟ್ಕೊಂತ ಕುಂತ್ರ ಉಂಡಿ ಜೋಡಿ ಮಾತಿನ ಮನೀನೂ ಕಟ್ತಾರ.

ಜಿಟಿಜಿಟಿ ಮಳಿ ಒಂದ್ಸಲ ಸುಮ್ನಾದರೂ ಇವರ ಮಾತು ಮುಗಿಯಾಂಗಿಲ್ಲ. ಗುಬ್ಬಿ ಜೋಳ, ಬಿಳಿ ಜಾಳ ಹುರದು ಪಟಪಟನೆ ಅರಳುವ ಅಳ್ಳಿನಂತೆಯೇ ಮಾತು ಗಗನಕ್ಕೆ ಸಿಡಿದು, ನೆಲಕ್ಕೆ ಬಡಿದು, ಅಲ್ಲಲ್ಲೇ ಹೊರಳಾಡಿ ಸುಮ್ಮನಾಗುತ್ತವೆ.
 
ಒಮ್ಮೆ ಮನೆಯ ಸೂರು ಕಿತ್ತುವಷ್ಟು ಜೋರಾದ ನಗು ಭೋರ್ಗರದ್ರ, ಇನ್ನೊಮ್ಮೆ, ಸಣ್ಣಸಣ್ಣ ಬಿಕ್ಕುಗಳು ಒಲೀಮ್ಯಾಲಿನ ಕಡ್ಲಿಕಾಳು ಹುರಿಯೂಮುಂದಿನ ಸಪ್ಪಳದ್ಹಂಗ ಅಲ್ಲಲ್ಲೇ ಕರಗತಾವ.

ಹೆಣ್ಮಕ್ಕಳ ಸಂಭ್ರಮ, ಅಣ್ಣ-ತಂಗಿಯರ ವಾತ್ಸಲ್ಯ, ತವರಿನ ಮೋಹ, ಮಮತೆ ಇವುಗಳದ್ದೇ ಹಬ್ಬ ನಾಗಪಂಚಮಿ.

ನಾಗಪ್ಪನ ಹಾಲೆರ‌್ಕೊಂತ, ಅವ್ವನಪಾಲು, ಅಪ್ಪನ ಪಾಲು, ಅಣ್ಣನ ಪಾಲು, ಬಂಧು ಬಳಗದ ಪಾಲು... ಎಲ್ಲಾರ ಪಾಲು ಅಂತ ಹೇಳ್ಕೊಂತ ಕೊಬ್ಬರಿ ಬಟ್ಟಲೊಳಗ ಹಾಲು ಬೆಲ್ಲ ಕಲಿಸಿ, ಹಿಟ್ಟಿನ ನಾಗಪ್ಪಗ ಹಾಲೆರಿಯೂದು ದೂರ ಇರೂ ಎಲ್ಲರ ಶ್ರೇಯಸ್ಸಿಗೆ ದೇವರ ಮುಂದ ನಿಂತು ಕೇಳ್ಕೊಳ್ಳೂದೆ ಆಗೇದ.

ಚೌತಿಗೆ ಒಳಗಿನ ನಾಗಪ್ಪ, ಪಂಚಮಿಗೆ ಹೊರಗಿನ ನಾಗಪ್ಪ ಅಂತ ಹಾಲೆರಿಯಾಕ ಹೋಗೂ ಸಂಭ್ರಮವೇ ಬ್ಯಾರೆ ಇತ್ತು. ಹುರಿದ ಅಳ್ಳನ್ನು ಗುಡಿಯಿಂದ ಮನೀತನಾನೂ ಒಂದೊಂದೇ ಕಾಳು ಚಲ್ಕೊಂತ ಬಂದ್ರ, ಕೆಮ್ಮಣ್ಣಾಗ ಬಿಳಿ ಅರಳು ಹೂ ಬಿದ್ದಂಗ ಕಾಣ್ತಿದ್ದವು. ಕ್ರಮೇಣ, ಹೊರಗಿನ ಹಾಲು, ಬೆಳ್ಳಿ ಮೂರ್ತಿಗೆ, ಒಳಗಿನ ಹಾಲು ಹಿಟ್ಟಿನ ನಾಗಪ್ಪಗ ಎರಿಯೂ ಸಂಪ್ರದಾಯನೂ ಶುರು ಆಯಿತು.

ಬೆಂಗಳೂರಿಗೆ ಬಂದ ಮ್ಯಾಲೆ ನಾಗರ ಅಮಾಸಿ ಯಾವತ್ತು ಅನ್ನೂದೆ ನೆನಪಿರೂದಿಲ್ಲ. ಅಮಾಸಿ, ಮರದಿನ ಹೋಗಿ ಕೈತುಂಬ ಬಳಿ ಇಡಸ್ಕೊಂಡು, ಹೊಸ ಸೀರಿ, ಬಟ್ಟಿ ತೊಗೊಳ್ಳು ಸಂಭ್ರಮನೂ ಕಣ್ಮರಿ ಆಯ್ತು. ಹೆಣ್ಣು ಮಕ್ಕಳು ಇರೂ ಮನೀ ಪಂಚಮಿ ನೋಡಬೇಕು ಅಂತಿದ್ರು. ಆದ್ರ ಈಗ ಎಲ್ಲ ಮಕ್ಕಳಿಗೂ ಇಲ್ಲಿ ಸಾಲಿ ಕಲೀಬೇಕು. ಸಾಲಿಗೆ ಸೂಟಿ ಇರೂ ಹಬ್ಬ ಮಾತ್ರ ಮಾಡಬೇಕು ಅನ್ನು ಅನಿವಾರ್ಯ.
 
ಹಂಗಾಗಿ ನಾಗಪಂಚಮಿ ಇದೀಗ ಒಂದು ಹಬ್ಬದ ಹೆಸರಾಗಿ ಮಾತ್ರ ಉಳೀತದ. ತವರಿನ ನೆನಪಿನೊಳಗ `ಕರಿಯಾಕ ಅಣ್ಣಯ್ಯ ಬರಲಿಲ್ಲ~ ಅಂತ ನಿಟ್ಟುಸಿರು ಹಾಕೂದು ಅಷ್ಟೇ ಅಲ್ಲ, `ಹೋಗಾಕ ರಜಾ ಸಿಗಲಿಲ್ಲ~ ಅಂತ ಹಳಹಳಸೂದು ಉದ್ಯೋಗಸ್ಥ ಮಹಿಳೆಗೆ ಸಾಮಾನ್ಯ ಆಗೇದ.

ಒಂದೇ ಸಮಾಧಾನ ಅಂದ್ರ ಬೆಂಗಳೂರಂಬೋ ಬೆಂಗಳೂರಾಗ ಯಾವ ಊರಿನ ಊಟಕ್ಕೂ ಕತ್ತರಿ ಬೀಳೂದಿಲ್ಲ. ಹಬ್ಬದೂಟಕ್ಕಂತೂ ಭರ್ಜರಿ ತಯಾರಿ ಇರ್ತದ. ಎಲ್ಲ ಹಳಹಳಿ, ತಹತಹಕಿಯನ್ನೂ ಮರತು, ಛಂದಗೆ ಊಟಾ ಮಾಡಿ, ಬೀಡಾ ಹಾಕೂವಂಥ ಹಲವು ಹೋಟೆಲ್‌ಗಳು ಆತಿಥ್ಯ ನೀಡಾಕ ಸಜ್ಜಾಗ್ತಾವ.

`ಮೂಡಲಮನಿ~ಯೊಳಗ ಪಂಚಮಿ ಸಂಭ್ರಮ

ನಗರದ ಮಲ್ಲೇಶ್ವರಂನಲ್ಲಿರುವ `ಮೂಡಲಮನಿ~ ಪಂಚಮಿಹಬ್ಬಕ್ಕೆ ಸಿದ್ಧವಾಗಿದೆ. ಅದೇ ಮನೆಯ ಉಂಡಿಗಳನ್ನು ಸಿದ್ಧಪಡಿಸಿದೆ. ಗುಳ್ಳೊಡಕಿ ಉಂಡಿ, ಹೆಸರುಂಡಿ, ಅಂಟಿನುಂಡಿ, ದಾಣಿಉಂಡಿ, ಎಳ್ಳುಂಡಿ, ಬೂಂದಿಉಂಡಿ, ಸೇಂಗಾದುಂಡಿ, ರವೆಯುಂಡಿ, ಬೇಸನ್ ಉಂಡಿ ಮುಂತಾದವನ್ನೆಲ್ಲ ಮಾರಾಟ ಮಾಡಲಾಗುತ್ತಿದೆ. 200 ರೂಪಾಯಿಗೆ ಕೆ.ಜಿಗೆ. ಕನಿಷ್ಠ ಕಾಲು ಕೆ.ಜಿ.ಯಾದರೂ ಕೊಳ್ಳಲೇಬೇಕು.

ಇದಲ್ಲದೆ, ಮೂಡಲಮನೆಯೊಳಗೆ ರೊಟ್ಟಿಯೂಟದ ಬದಲು ಸೋಮವಾರ ಪಂಚಮಿ ಪ್ರಯುಕ್ತ ಹಬ್ಬದೂಟ ನೀಡಲಾಗುತ್ತಿದೆ. ಬೇಳಿ ಹೋಳಿಗೆಯೊಂದಿಗೆ ಒಂದು ಉಂಡಿಯನ್ನೂ ನೀಡಲಾಗುತ್ತದೆ. ಉಳಿದಂತೆ ಎರಡು ಪಲ್ಯ, ಕೋಸಂಬರಿ, ಮೊಸರು, ಅನ್ನ ಸಾರು, ಹಪ್ಪಳವಂತೂ ಇದ್ದೇ ಇರುತ್ತದೆ. ಜೊತೆಗೆ ನಂಜಿಕೊಳ್ಳಲು ಉಪ್ಪಿನಕಾಯಿಯೊಂದಿಗೆ ಖಾರದ ರಂಜಕವೂ ಸೇರಿದೆ.
 
ಕೆಂಪು ಹಸಿಮೆಣಸಿನಕಾಯಿಗೆ ಹುಣಸೇಹಣ್ಣು ಬೆಲ್ಲ ಬೆರೆಸಿ ಅರೆದ ಚಟ್ನಿಗೆ ಬೆಳ್ಳುಳ್ಳಿ ಒಗ್ಗರಣೆ ಹಾಕಿರಲಾಗುತ್ತದೆ. ನಾಲಗೆಗೆ ಹುಳಿ, ಖಾರ, ಬೆಲ್ಲದ ಸವಿ ಎಲ್ಲವೂ ತಾಕುತ್ತದೆ. ಜೊತೆಗೆ ಹಸಿವೂ ಹೆಚ್ಚಿಸುತ್ತದೆ. ಇದರೊಂದಿಗೆ ಹೆಚ್ಚಿಟ್ಟ ಸೌತೆಕಾಯಿ, ಗಜ್ಜರಿ, ಮೂಲಂಗಿ ರೊಟ್ಟಿಯೂಟದ ಸವಿಯನ್ನು ಹೆಚ್ಚಿಸುತ್ತದೆ.

ಸದ್ಯಕ್ಕೆ ವಿದ್ಯಾರ್ಥಿಗಳು ಮತ್ತು ದಿನನಿತ್ಯದ ಗ್ರಾಹಕರಿಗೆ ಅನುಕೂಲವಾಗುವಂತೆ ಕೇವಲ 49 ರೂಪಾಯಿಗೆ ಈ ಊಟವನ್ನು ಸಿದ್ಧಪಡಿಸಲಾಗಿದೆ. ಮಧುಮೇಹ, ರಕ್ತದ ಏರೊತ್ತಡ ಉಳ್ಳವರಿಗೆ ರೊಟ್ಟಿಯೂಟ ಅತಿ ಪೌಷ್ಠಿಕವಾದುದು ಎಂಬುದು ತಿಮ್ಮಣ್ಣ ಹೊಸೂರ ಅವರ ಹೇಳಿಕೆಯಾಗಿದೆ.

ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಅಡುಗೆ, ಊಟವನ್ನು ಆರಂಭಿಸಿದ ಖ್ಯಾತಿಯ ಯು.ಕೆ.ಫುಡ್ ಮೂಡಲಮನೆಯ ಮೂಲ ಕಚೇರಿಯಾಗಿದೆ. ಸದ್ಯ ಬೆಂಗಳೂರಿನಲ್ಲಿ ವಿವಿಧೆಡೆ 10 ಹೋಟೆಲ್‌ಗಳಿವೆ.

ಪಂಚಮಿ ಹಬ್ಬಕ್ಕೂ ಅಳ್ಹಿಟ್ಟಿಗೂ ಬಿಡದ ನಂಟು. ಮಕ್ಕಳಿಗಂತೂ ಅಳ್ಹಿಟ್ಟಿಗೆ ಕಸಕಸಿ, ಒಣಕೊಬ್ಬರಿ ತುರಿ, ಏಲಕ್ಕಿ ಬೆರೆಸಿ ಬಾಯಿತುಂಬ ತುಂಬ್ಕೊಂಡು `ಬುಧವಾರ~ ಅಂತ ಹೇಳಿ ಹಿಟ್ಟು ಸಿಡಿಸುವುದೇ ಒಂದು ಆಟ.

ಅಳ್ಹಿಟ್ಟು ಮಕ್ಕಳಿಗೆ ಸೆರೆಲ್ಯಾಕ್‌ನಂತೆ, ಹಿರಿಯರಿಗೆ ಮಾಲ್ಟ್‌ನಂತೆ ಬಳಸುವುದೂ ಇದೆ. ಅತಿಪೌಷ್ಠಿಕಾಂಶ ಉಳ್ಳ ಈ ಹಿಟ್ಟಿನಲ್ಲಿ ಕೊಬ್ಬಿನಂಶ ಇಲ್ಲವೇ ಇಲ್ಲ. `0~ ಕ್ಯಾಲೊರಿಯ ಅಳ್ಹಿಟ್ಟು ಹೊಟ್ಟೆಗೆ ಹಿತ. 150 ರೂಪಾಯಿಗೆ ಕೆ.ಜಿಯಂತೆ ಮಾರಲಾಗುತ್ತದೆ. ಇದಲ್ಲದೇ ಮಧುಮೇಹಿಗಳಿಗೆ ತೃಣಧಾನ್ಯ ನವಣಕ್ಕಿ ಅನ್ನ, ಜೋಳದ ನುಚ್ಚು, ಗೋಧಿ ನುಚ್ಚು ಮುಂತಾದವನ್ನೂ ಮಾರುವ ವ್ಯವಸ್ಥೆ ಮಾಡಲಾಗಿದೆ.

ಸಾತ್ವಿಕ ಆಹಾರ, ಸಾಂಪ್ರದಾಯಿಕ ಅಡುಗೆಯತ್ತ ಒಲವು ಬೆಳೆಸುವುದು ಯು.ಕೆ. ಫುಡ್ಸ್‌ನ ಮೂಲ ಉದ್ದೇಶವಾಗಿದೆ.

ಹಬ್ಬಕ್ಕೆ ಮನೆಯೂಟ, ಮನೆಯಲ್ಲಿಯೇ ಮಾಡಲಿ ಎಂದು ಆಹಾರ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಮನೆಯವರೆಲ್ಲ ಹಬ್ಬಕ್ಕೆಂದು ಮನೆಯಲ್ಲಿಯೇ ಊಟ ಮಾಡಲು ಇಷ್ಟ ಪಡುತ್ತಾರೆ. ಬಹುತೇಕ ಸಮಯ ಅಡುಗೆಮನೆಯಲ್ಲಿ ಕಳೆಯದಿರಲಿ ಎಂದು ಎಲ್ಲ ಅಡುಗೆಯನ್ನೂ ಮಾರಾಟ ಮಾಡುವ ವ್ಯವಸ್ಥೆಮಾಡಲಾಗಿದೆ ಎನ್ನುತ್ತಾರೆ ಅವರು.

ಬೇಳೆ ಹೋಳಿಗೆ, ಸೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಖರ್ಜೂರದ ಹೋಳಿಗೆ, ಕಾಯಿ ಹೋಳಿಗೆಯೂ ಸಿಗುತ್ತದೆ. ಇನ್ನು ಎಲ್ಲಬಗೆಯ ಚಟ್ನಿಪುಡಿ, ಬದನೆಕಾಯಿಭರ್ತವೂ ಇಲ್ಲಿ ಲಭ್ಯ.

ಹೆಚ್ಚಿನ ಮಾಹಿತಿಗೆ ಉತ್ತರ ಕರ್ನಾಟಕ ಫುಡ್ ಸ್ಟೋರ್ಸ್‌, ಭಾಷ್ಯಂ ಸರ್ಕಲ್, ರಾಜಾಜಿನಗರ, 23209840, ಮೂಡಲಮನೆ ಮಲ್ಲೇಶ್ವರಂ ಸಂಪರ್ಕಿಸಬಹುದು. ಗಾಂಧಿಬಜಾರ್, ಜಯನಗರ, ಬಿ.ಟಿ.ಎಂ ಲೇ ಔಟ್‌ಗಳಲ್ಲೂ ಶಾಖೆಗಳಿವೆ. ಹೆಚ್ಚಿನ ಮಾಹಿತಿಗೆ: 94482 61201

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT