ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಕಂಪ್ಯೂಟರ್ ಶಿಕ್ಷಣ ಗಗನ ಕುಸುಮ

Last Updated 8 ಜುಲೈ 2013, 10:24 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಅಳವಡಿಸಿರುವ ಕಂಪ್ಯೂಟರ್‌ಗಳು ದುರಸ್ತಿಗೆ ಬಂದು ವರ್ಷ ಕಲೆಯುತ್ತಾ ಬಂದರೂ ದುರಸ್ತಿಗೊಳಿಸದ ಕಾರಣ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಿ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಮಹದಾಸೆಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅದರಲ್ಲಿ ಕಂಪ್ಯೂಟರ್ ಶಿಕ್ಷಣ ಒಂದಾಗಿದೆ. ಇದಕ್ಕೆ ಪೂರಕವಾಗಿ ಸರ್ವ ಶಿಕ್ಷಣ ಅಭಿಯಾನದ ಯೋಜನೆಯಡಿಯಲ್ಲಿ 2007-08 ನೇ ಸಾಲಿನಲ್ಲಿ ತಾಲ್ಲೂಕಿನ ಅನೇಕ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸಲಾಯಿತು. ಅಲ್ಲದೇ ಇನ್ಫೊಸಿಸ್ ತಾಲ್ಲೂಕಿನ ಆಯ್ದ ಶಾಲೆಗಳಿಗೆ ಐದೈದು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿತ್ತು.

ಈ ಕಂಪ್ಯೂಟರ್‌ಗಳಿಗೆ ಯಾಂತ್ರಿಕ ವಿದ್ಯುತ್‌ನ್ನು ಪೂರೈಕೆ ಮಾಡುವುದಕ್ಕಾಗಿ ಯುಪಿಎಸ್‌ಗಳನ್ನು ಖರೀದಿ ಮಾಡಿದ್ದು, ಇವುಗಳ ನಿರ್ವಹಣೆಗಾಗಿ ಜಿಲ್ಲಾಮಟ್ಟದಲ್ಲಿ ಕಂಪೆನಿಯೊಂದನ್ನು ನಿಯೋಜಿಸಿಕೊಳ್ಳಲಾಗಿತ್ತು. ಆ ಕಂಪೆನಿಯ ಕಾರ್ಯವೈಖರಿಯ ಮೇಲ್ವಿಚಾರಣೆಗಾಗಿ ಶಿಕ್ಷಣ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಇಷ್ಟೆಲ್ಲಾ ಸೌಲಭ್ಯ ಕಲ್ಪಿಸಲಾಗಿದ್ದರೂ ತಾಲ್ಲೂಕಿನ ಅನೇಕ ಶಾಲೆಗಳಲ್ಲಿ ಕಳೆದ ಒಂದೂವರೆ ವರ್ಷದಿಂದ ಕಂಪ್ಯೂಟರ್‌ನ ಸಿಪಿಯು, ವಿದ್ಯುತ್ ಪೂರೈಕೆಯಯುಪಿಎಸ್‌ಗಳು ದುರಸ್ತಿಗೆ ಬಂದಿದ್ದರೂ, ದುರಸ್ತಿ ಕೈಗೊಳ್ಳದೇ ಶಾಲೆಯ ವಿದ್ಯಾರ್ಥಿಗಳು ಕಂಪ್ಯೂಟರ್‌ನ ಪ್ರಾಯೋಗಿಕ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಾಗಿದೆ ಎಂಬುದು ಪೋಷಕರ ದೂರು.

ಇದಕ್ಕೆ ನಿದರ್ಶನ ಎಂಬಂತೆ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿರುವ ಸರ್ಕಾರಿ ಉರ್ದು ಶಾಲೆಗೆ 2007 ರಲ್ಲಿ ಐದು ಕಂಪ್ಯೂಟರ್‌ಗಳನ್ನು ಒದಗಿಸಲಾಗಿದ್ದು, ಶಾಲೆಯಲ್ಲಿರುವ ಐದು ಕಂಪ್ಯೂಟರ್‌ಗಳಿಗೆ ಸೌಲಭ್ಯ ಒದಗಿಸಿರುವ ಏಕೈಕ ಸಿಪಿಯು ದುರಸ್ತಿಗೆ ಬಂದು ವರ್ಷ ಕಳೆದಿದೆ. ಕಂಪ್ಯೂಟರ್‌ಗೆ ಬಳಸುವ ಕೃತಕ ವಿದ್ಯುತ್ ಪೂರೈಸುವ ಯುಪಿಎಸ್ ಕೂಡ ದುರಸ್ತಿಗೆ ಬಂದು ವರ್ಷ ಸಾಗುತ್ತಾ ಬಂದರೂ ಇದುವರೆಗೂ ದುರಸ್ಥಿಗೊಳಿಸಲಾಗಿಲ್ಲ. ಯುಪಿಎಸ್‌ನ್ನು ದುರಸ್ತಿಗೊಳಿಸುವಂತೆ ಖರೀದಿಸಿದ ಕಂಪೆನಿಗೆ ವಾಪಾಸು ಕಳುಹಿಸಿದರೂ ದುರಸ್ತಿ ಪಡಿಸದೇ ಹಿಂತಿರುಗಿಸಲಾಗಿದೆ.

ಪ್ರತಿ ತಿಂಗಳ ಶಾಲಾ ವರದಿಯಲ್ಲೂ ಕಂಪ್ಯೂಟರ್ ದುರಸ್ತಿಗೆ ಬಂದಿರುವುದರ ಬಗ್ಗೆ ವರದಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಮಟ್ಟದಲ್ಲಿ ನಿರ್ವಹಣೆಗಾಗಿ ತಂಡವಿದ್ದರೂ ಶಾಲೆಗೆ ಭೇಟಿ ನೀಡಿ ದುರಸ್ತಿಗೊಳಿಸಿಲ್ಲ. ಶಾಲೆಯಲ್ಲಿ 28 ವಿದ್ಯಾರ್ಥಿಗಳಿದ್ದು, ಅವರೆಲ್ಲರೂ ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗುವಂತಾಗಿದೆ ಎಂಬುದು ಶಾಲಾ ಅಭಿವೃದ್ಧಿ ಸಮಿತಿಯೊಬ್ಬರ ಅಳಲಾಗಿದೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಸಿದ್ಧ ಪಡಿಸುವ ಶಿಕ್ಷಣ ಇಲಾಖೆಯು, ಸರ್ಕಾರಿ ಶಾಲೆಗಳಿಗೆ ಒದಗಿಸಲಾಗಿರುವ ಮೂಲ ಸೌಲಭ್ಯಗಳ ಮೇಲ್ವಿಚಾರಣೆಯನ್ನು ಸಮರ್ಪಕಗೊಳಿಸಿ, ಕಂಪ್ಯೂಟರ್‌ಗಳನ್ನು ದುರಸ್ತಿಗೊಳಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಒತ್ತು ನೀಡಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT