ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ ತಾಲ್ಲೂಕಿನಾದ್ಯಂತ ವಿದ್ಯುತ್ ಕೊರತೆ

Last Updated 5 ಅಕ್ಟೋಬರ್ 2012, 9:00 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ವಿದ್ಯುತ್ ಕೊರತೆಯುಂಟಾಗಿದ್ದು, ಪ್ರಸ್ತುತ ಪೂರೈಕೆಯಾಗುತ್ತಿರುವ ಎರಡು ಮೆಗಾವಾಟ್ ವಿದ್ಯುತ್ ಅನ್ನು  ನಾಲ್ಕು ಮೆಗಾವಾಟ್‌ಗೆ ಹೆಚ್ಚಿಸಲು ತಾಲ್ಲೂಕು ಪಂಚಾಯತಿ  ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ತಾಲ್ಲೂಕಿನಲ್ಲಿ ನಿರಂತರವಾಗಿ ಅನಿರ್ದಿಷ್ಟ ವಿದ್ಯುತ್ ಕಡಿತವಾಗುತ್ತಿರುವ ಬಗ್ಗೆ ತಾಪಂ ಸರ್ವ ಸದಸ್ಯರು ತೀವ್ರವಾಗಿ ಆಕ್ಷೇಪಿಸಿದರು. ಮೆಸ್ಕಾಂ ಅಧಿಕಾರಿ ಅನಂತರಾಂ ಸಮಸ್ಯೆಗೆ ಉತ್ತರಿಸಿ, ವಿದ್ಯುತ್‌ಕೊರತೆ ಸರಿದೂಗಿಸುವ ನಿಟ್ಟಿನಲ್ಲಿ ಲೋಡ್‌ಶೆಡ್ಡಿಂಗ್ ನಡೆಯುತ್ತದೆ. ವಿದ್ಯುತ್ ಪೂರೈಕೆ ಮಳೆಯನ್ನು ಅವಲಂಬಿಸಿರುವುದರಿಂದ ನಿರ್ದಿಷ್ಟ ವೇಳೆಯಲ್ಲಿ ಕಡಿತ ಮಾಡಲು ಸಮಸ್ಯೆಯಾಗುತ್ತದೆ ಎಂದರು.

ತಾಲ್ಲೂಕಿಗೆ ನಾಲ್ಕು ಮೆಗಾವಾಟ್ ವಿದ್ಯುತ್ ನೀಡುವಂತೆ ಮೆಸ್ಕಾಂಗೆ ಬೇಡಿಕೆ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಸಿದ್ಧವಾಗಿದ್ದು, ವಿದ್ಯುತ್ ಗುತ್ತಿಗೆದಾರರು ಲೈನ್‌ವರ್ಕ್ ಮಾಡುತ್ತಿಲ್ಲವಾದ್ದರಿಂದ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ ಎಂಬ ಮಾಹಿತಿಯನ್ನು ಸಭೆಗೆ ನೀಡಿದರು.

  ಎಂ.ಜಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಕೆಲ ವೈದ್ಯರು ಸೂಕ್ತ ವೇಳೆಯಲ್ಲಿ ಸಮರ್ಪಕವಾಗಿ ಚಿಕಿತ್ಸೆ ನೀಡದೆ ಶೋಷಣೆ ನಡೆಸಲಾಗುತ್ತಿದೆ. ರೋಗಿಗಳು ಪ್ರಶ್ನಿಸಿದರೆ ಅವರ ವಿರುದ್ಧ ವೈದ್ಯರು ಪೊಲೀಸರಿಗೆ ದೂರು ನೀಡಿ ಜೈಲಿಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಆರೋಪಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಯೋಗೆಶ್ ಉತ್ತರಿಸಿ ಸಂಬಂಧಿಸಿದ ವೈದ್ಯರಿಗೆ ತಿಳಿ ಹೇಳುವುದಾಗಿ ಹೇಳಿದರು. 

  ಬಣಕಲ್ ಹೋಬಳಿಯಲ್ಲಿ ನರ್ಸ್‌ಗಳು ಗ್ರಾಮೀಣ ಪ್ರದೇಶಗಳಿಗೆ ಚಿಕಿತ್ಸೆ ನೀಡಲು ಮನೆಮನೆಗೆ ತೆರಳುತ್ತಿಲ್ಲ. ಮೊರಾರ್ಜಿ ಶಾಲೆಯ ಮಕ್ಕಳಿಗೆ ಸೂಕ್ತ ಆರೋಗ್ಯ ತಪಾಸಣೆ ನಡೆಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದವು. ಬಾಳೆಹೊಳೆ ವೈದ್ಯರು ಕರ್ತವ್ಯಕ್ಕೆ ಧೀರ್ಘ ಕಾಲ ಗೈರುಹಾಜರಾಗಿ ಹಾಜರಾತಿ ಪುಸ್ತಕದಲ್ಲಿ ಹಾಜರಾತಿಯನ್ನು ತಿದ್ದುಪಡಿ ಮಾಡಿದ್ದಾರೆ ಅದನ್ನು ಪರೀಶೀಲಿಸಿ ನೋಟಿಸ್ ನೀಡುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿನ ಪ್ರಗತಿಯನ್ನು ಅಧಿಕಾರಿಗಳು ವಿವರಿಸಿದರು.

 ಸಭೆಯಲ್ಲಿ ತಾಪಂ ಅಧ್ಯಕ್ಷ ರಾಜೇಂದ್ರ ಹಿತ್ಲುಮಕ್ಕಿ, ಉಪಾಧ್ಯಕ್ಷೆ ಸರೋಜ ಬಿ.ಕರ. ರವಿ,ಸ್ಥಾಯಿ ಸಮಿತಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಮತ್ತು ಸರ್ವ ಸದಸ್ಯರು, ಅರಣ್ಯಾಧಿಕಾರಿ ಸುದರ್ಶನ್, ಶಿಶು ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ಸಮಾಜ ಕಲ್ಯಾಣಾಧಿಕಾರಿ ಹರ್ಷಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕುಮಾರಯ್ಯ ಮುಂತಾದವರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT