ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಪ್ರತಿಧ್ವನಿಸಿದ ಬಿಜೆಪಿ ಭಿನ್ನಮತ

Last Updated 23 ಏಪ್ರಿಲ್ 2013, 10:44 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಬಣಕಲ್ ಗ್ರಾಮದಲ್ಲಿ ಸೋಮವಾರ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾರೆ ಎಂದು ಕಾದು ಕುಳಿತಿದ್ದ ಕಾರ್ಯಕರ್ತರಿಗೆ ನಿರಾಸೆಯಾಯಿತು. ಮಧ್ಯಾಹ್ನ ಮೂರು ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಮೂರು ಗಂಟೆ ತಡವಾಗಿ ಆಗಮಿಸಿದ್ದರಿಂದ ಕಾರ್ಯಕ್ರಮವನ್ನು ಬಣಕಲ್‌ಗೆ ಬದಲಾಗಿ ಕೊಟ್ಟಿಗೆಹಾರಕ್ಕೆ ಸ್ಥಳಾಂ ತರಿಸಲಾಯಿತು.

ಸುಮಾರು ನೂರೈವತ್ತರಷ್ಟಿದ್ದ ಕಾರ್ಯಕರ್ತರು ಕೊಟ್ಟಿಗೆಹಾರದ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಬಿಜೆಪಿ ಕಾರ್ಯಾಲಯಕ್ಕೆ ಮಾಜಿ ಸಿ.ಎಂ ಅವರನ್ನು ಕರೆತಂದು ಕಾರ್ಯಕರ್ತರ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಕ್ಷೇತ್ರದ ಶಾಸಕರ ಕಾರ್ಯವೈಖರಿಯ ಬಗ್ಗೆ ಅಸಮಾಧಾನದ ಬಗ್ಗೆ ಬಹಿರಂಗವಾಗಿಯೇ ಸದಾನಂದಗೌಡರಿಗೆ ದೂರು ನೀಡಲಾಯಿತು, ಕಳೆದ ಹದಿನೈದು ದಿನಗಳಲ್ಲಿ ಪಕ್ಷದಲ್ಲಿ ನಡೆಯುತ್ತಿರುವ ಅಸಮಾಧಾನದ ಚಟುವಟಿಕೆಗಳನ್ನು ವಿವರಿಸಲಾಯಿತು ಎಂದು ಬಲ್ಲ ಮೂಲಗಳು ತಿಳಿಸಿದವು.

ಕಾರ್ಯಕರ್ತರ ಸಭೆಯ ನಂತರ ಕಚೇರಿಯಿಂದ ಹೊರಬಂದ ಮಾಜಿ ಸಿ.ಎಂ. ಪತ್ರಕರ್ತರ ಜೊತೆ ಮಾತನಾಡಿ, ಶಾಸಕರ ವಿರುದ್ಧ ಅಸಮಾಧಾನದ ಮಾತುಗಳು ಕೇಳಿ ಬಂದಿದ್ದು, ಪಕ್ಷದ ಹಿರಿಯರು ಮತ್ತು ಕ್ಷೇತ್ರದ ನಾಯಕರೊಂದಿಗೆ ಚರ್ಚಿಸಿ ಇನ್ನೆರಡು ದಿನಗಳಲ್ಲಿ ಭಿನ್ನಮತವನ್ನು ಶಮನಗೊಳಿಸುವುದಾಗಿ  ತಿಳಿಸಿದರು.

ಸದಾನಂದಗೌಡರು ಸಿ.ಎಂ. ಆಗಿದ್ದಾಗ ಕ್ಷೇತ್ರಕ್ಕೆ ನೀಡಿದ್ದ ಅನುದಾನದ ಕಾಮಗಾರಿಗಳು ಕಳಪೆ ಎಂಬ ಮಾತು ಕೇಳಿ ಬರುತ್ತಿದ್ದು, ಚುನಾವಣೆಯ ಬಳಿಕ ಎಲ್ಲಾ ಕಾಮಗಾರಿಗಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಸಭೆಯಲ್ಲಿ ಮಾಜಿ ಸಚಿವ ರಾಮಚಂದ್ರೇಗೌಡ, ಬೋಜೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಕೆ. ಪ್ರಾಣೇಶ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕಲ್ಲೇಶ್, ಪುರುಷೋತ್ತಮರಾಜ್ ಅರಸ್, ಜಗದೀಶ್, ರಘು ಮುಂತಾದವರಿದ್ದರು.

ಬಹಿರಂಗವಾಗಿಯೇ ಆಕ್ರೋಶ: ಸದಾನಂದಗೌಡರ ಸುದ್ದಿಗೋಷ್ಠಿಗಾಗಿ ತೆರಳಿದ್ದ ಪತ್ರಕರ್ತರ ಎದುರಿ ನಲ್ಲಿಯೇ ಪಕ್ಷದ ಹಿರಿಯ ಮುಖಂಡರೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದರೂ, ಗಣನೆಗೆ ತೆಗೆದುಕೊಳ್ಳದೇ ವಿರೋಧ ಪಕ್ಷದವರಿಗೆ ಶಾಸಕರು ನೆರವಾದ ವಿಚಾರಗಳನ್ನು ಕುರಿತು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT