ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಭತ್ತಕ್ಕೆ ಬೆಂಕಿ ರೋಗ- ರೈತ ಕಂಗಾಲು

Last Updated 22 ಅಕ್ಟೋಬರ್ 2012, 6:20 IST
ಅಕ್ಷರ ಗಾತ್ರ

ಮೂಡಿಗೆರೆ: ಭತ್ತಕ್ಕೆ ಅಂಟಿದ್ದ ಬೆಂಕಿಯ ಬೇಗೆಗೆ ತಾಲ್ಲೂಕಿನ ಅನ್ನದಾತನ ಮುಖ ಕಪ್ಪಾಗಿದೆ. ಶುಂಠಿ ಬೆಳೆಯ ಹಾವಳಿಯ ನಂತರದಲ್ಲಿ ಮಲೆನಾಡಿನ ರೈತನಿಗೆ ಭತ್ತವೇ  ಆಪ್ತಮಿತ್ರನಂತಿತ್ತು. ರೈತರು ಭತ್ತದ ಬೆಳೆಯನ್ನು ಬೆಂಕಿ ರೋಗದಿಂದ ಪಾರು ಮಾಡಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ 11 ಸಾವಿರ ಹೆಕ್ಟೇರ್ ಭತ್ತವನ್ನು ಬೆಳೆಯಲಾಗಿದೆ. ಶೇಕಡ 40 ರಷ್ಟು ಭಾಗ ಈಗಾಗಲೇ ಬೆಂಕಿ ರೋಗಕ್ಕೆ ತುತ್ತಾಗಿದೆ ಎಂದು ಅಂದಾಜಿಸಲಾಗಿದೆ. ತಾಲ್ಲೂಕಿನ ಘಟ್ಟದ ಹಳ್ಳಿ, ಮಾಕೋನಹಳ್ಳಿ, ಕೆಲ್ಲೂರು, ಮೂಡಸಸಿ, ಚಿಕ್ಕಳ್ಳ, ಅಣಜೂರು ಸೇರಿದಂತೆ ಹಲವೆಡೆ ಬೆಂಕಿರೋಗದ ಲಕ್ಷಣ ಗೊಚರಿಸಿದ್ದು, ರೈತರ ಆತಂಕ ಹೆಚ್ಚಾಗಿದೆ.

ಬೆಂಕಿ ರೋಗ ತಗುಳಿದ ಭತ್ತದ ಪೈರು ಆರಂಭದಲ್ಲಿ ಸಣ್ಣ-ಸಣ್ಣ ಚುಕ್ಕಿಗಳಂತೆ ಗೋಚರಿಸಿ ನಂತರ ಪೈರಿನ ಅಡಿ ಗರಿಗಳು ಒಣಗಲು ಶುರುವಾಗುತ್ತದೆ. ಅಂತಿಮವಾಗಿ ಭತ್ತದ ಇಡೀ ಪೈರುಗಳೇ ಸುಟ್ಟು ಸಾಯುತ್ತದೆ.

ಮಲೆನಾಡಿನಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆ ಮಳೆಯಾಗದೇ ಗದ್ದೆ ನಾಟಿ ತಡವಾಗಿ ಪ್ರಾರಂಭವಾಗಿದ್ದು, ಕಳೆದ ಇಪ್ಪತ್ತು ದಿನಗಳಿಂದ ಸರಿಯಾದ ಮಳೆಯಾಗದೇ ಇರುವುದು ಬೆಂಕಿ ರೋಗ ಕಾಣಿಸಲು ಮೊದಲ ಕಾರಣವಾದರೆ ಭತ್ತಕ್ಕೆ ಪೋಟ್ಯಾಷ್ ಅಂಶ ಕಡಿಮೆಯಾದರೆ ಬೆಂಕಿ ರೋಗ ಹರಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. 

ಸ್ಥಳೀಯ ಭತ್ತವಾದ ಪುಟ್ಟಭತ್ತ, ಇಂಟಾನ್ ಭತ್ತದ ತಳಿಗೆ ಹೆಚ್ಚು ರೋಗ ಕಾಡಿದೆ. ಇದು ಬಿತ್ತನೆ ಬೀಜದ ಗುಣಮಟ್ಟವನ್ನು ಪ್ರಶ್ನಿಸುವಂತೆ ಮಾಡಿದೆ. ತಾಲ್ಲೂಕಿನ ಕೆಲವೆಡೆ ಭತ್ತ ತೆನೆ ಹೊಡೆಯುತ್ತಿದ್ದು, ಬೆಂಕಿರೋಗದಿಂದ ಇಡೀ ತೆನೆಯೇ ಸುಟ್ಟು ಹೋಗುತ್ತಿದೆ. ಮಲೆನಾಡಿನಲ್ಲಿ ಬಿಸಿಲ ತಾಪ27 ಡಿಗ್ರಿ ದಾಟುತ್ತಿದ್ದು, ಮಳೆಯಿಲ್ಲದ ಕಾರಣ ಭತ್ತದ ಗದ್ದೆಗಳು ಬೆಂಕಿ ರೋಗದ ಜೊತೆಗೆ ನೀರಿಲ್ಲದೇ ಸೊರಗುವ ಪರಿಸ್ಥಿತಿ ನಿರ್ಮಾಣವಾಗಿದೆ.

  `ಬಿಸಿಲಿನ ಹೊಡೆತಕ್ಕೆ ಬೆಂಕಿ ರೋಗ ಬಂದಿದೆ. ಈಗ ಮಳೆ ಹೋದ್ರೆ ಭತ್ತ ಎನೂ ಕೈಗೆ ಸಿಕ್ಕಲ್ಲ. ಈಗ ಒಂದು ಹದ ಮಳೆಯಾದ್ರೆ ಭತ್ತದ ಬೆಂಕಿ ರೋಗ ಹಿಡಿತಕ್ಕೆ ಬರುತ್ತೆ. ತೆನೆ ಕಟ್ಟುವಾಗ ಮಳೆ ನಿರಂತರವಾಗಿರ‌್ಬಾರ‌್ದು. ಮಳೆ ಹೆಚ್ಚಾದ್ರೆ ಜೊಳ್ಳು ಜಾಸ್ತಿಯಾಗುತ್ತೆ, ಮಳೆ ಇಲ್ಲದಿದ್ರೆ ಸುಟ್ಟೋಗುತ್ತೆ~ ಎಂದು ಆಕಾಶ ನೋಡುತ್ತಾರೆ ಹಿರಿಯ ಕೃಷಿಕ ಘಟ್ಟದಹಳ್ಳಿಯ ರಾಮಜ್ಜ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT