ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ ವಿಶ್ವಪರಂಪರೆ ಪಟ್ಟಿಗೆ: ಮೊಯಿಲಿ

ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್‌ಗೆ ವರ್ಣರಂಜಿತ ಮುಕ್ತಾಯ
Last Updated 23 ಡಿಸೆಂಬರ್ 2013, 9:47 IST
ಅಕ್ಷರ ಗಾತ್ರ

ಮೂಡುಬಿದಿರೆ: ಮೂಡುಬಿದಿರೆಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿರುವ ಶಿಲ್ಪಕಲೆ, ಮಹತ್ವದ ತಾಳೆಗರಿ ಗ್ರಂಥಗಳಿಂದಾಗಿ ಮೂಡುಬಿದಿರೆಗೆ ರಾಷ್ಟ್ರೀಯ ಸ್ಮಾರಕಗಳ ಪಟ್ಟಿಗೆ ಸೇರುವ ಎಲ್ಲಾ ಅರ್ಹತೆಗಳೂ ಇವೆ ಎಂದು ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.

ಸಾವಿರ ಕಂಬದ ಬಸದಿ, ಧವಳ ಗ್ರಂಥಗಳಿಂದಾಗಿ ಮೂಡುಬಿದಿರೆ ದೇಶದಲ್ಲಿ ಹೆಸರುವಾಸಿಯಾಗಿತ್ತು. ಈ ಮುತ್ತಿನಹಾರದಲ್ಲಿ ಈಗ ನುಡಿಸಿರಿಯೂ ಸೇರಿದೆ. ಈ ಬಗ್ಗೆ ವಿಶ್ವಸಂಸ್ಥೆ ಗಮನ ವಹಿಸಬೇಕು. ಈ ಕುರಿತು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರಿಗೂ ಪತ್ರ ಬರೆದಿದ್ದೇನೆ ಎಂದು ಅವರು ಭಾನುವಾರ ಸಂಜೆ ಇಲ್ಲಿ ನಡೆದ ಆಳ್ವಾಸ್‌ ವಿಶ್ವನುಡಿಸಿರಿ ವಿರಾಸತ್‌ನ ಸಮಾರೋಪ ಸಮಾರಂಭದಲ್ಲಿ ತಿಳಿಸಿದರು.

ಇಂಡಿಯನ್ ಆಯಿಲ್ ಫೌಂಡೇಷನ್ ಅನೇಕ ರಾಷ್ಟ್ರೀಯ ಸ್ಮಾರಕಗಳನ್ನು ಅಭಿವೃದ್ಧಿಪಡಿಸುತ್ತಿದೆ. ವೈಷ್ಣೋದೇವಿ, ಖುಜರಾಹೊ, ತಾಜ್‌ಮಹಲ್, ಚಿಕ್ಕಬಳ್ಳಾಪುರದ ಒಂದು ದೇವಾಲಯ ಈ ಪಟ್ಟಿಯಲ್ಲಿವೆ. ಮೂಡುಬಿದಿರೆಯನ್ನೂ ರಾಷ್ಟ್ರಿಯ ಸ್ಮಾರಕಗಳ ಪಟ್ಟಿಗೆ ಸೇರಿಸುವ ಬಗ್ಗೆ ಚಿಂತನೆ ನಡೆದಿದೆ' ಎಂದರು. 

ಅನ್ಯೋನ್ಯತೆ ಕೃತಿಯಲ್ಲಿ ಇರಲಿ
'ಅನ್ಯೋನ್ಯತೆಯನ್ನು ಮಾತಿನ ಮೂಲಕ ವ್ಯಕ್ತಪಡಿಸುವುದಲ್ಲ. ಅದು ಕೃತಿಯ ಮೂಲಕ ಬರಬೇಕು' ಎಂದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನ ಸರ್ವಾಧ್ಯಕ್ಷ  ಡಾ.ಬಿ.ಎ.ವಿವೇಕ ರೈ ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಡೆದ ಅನುಭವಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದ ಅವರು. 'ಈ ಸಮ್ಮೇಳನದಲ್ಲಿ ಜಪಾನ್ ವಿದ್ವಾಂಸರು, ಜರ್ಮನಿಯ ಕಾನ್ಸುಲೇಟ್ ಅಧಿಕಾರಿಗಳು ಬಂದಿದ್ದಾರೆ. ದುಬೈ, ಬಹರೇನ್‌್, ಮಸ್ಕತ್ ನಂತಹ ರಾಷ್ಟ್ರಗಳಿಂದಲೂ ಜನ ಬಂದಿದ್ದಾರೆ. ಅವರ ಜತೆಯಲ್ಲೇ ಕರಾವಳಿಯ ಎಷ್ಟೋ ಮಂದಿ ಕೃಷಿಕರು ಇಲ್ಲಿನ ಸಾಹಿತ್ಯ ಸಂವಾದಗಳನ್ನು ಆಲಿಸಿದ್ದಾರೆ. ಕೃಷಿಕರು, ಜಾನಪದ ಕಲಾವಿದರು, ಮಕ್ಕಳು, ವಿದ್ಯಾರ್ಥಿಗಳನ್ನು ಒಳಗೊಂಡ ಸಾಂಸ್ಕೃತಿಕ ಲೋಕವೇ ಇಲ್ಲಿ ತೆರೆದುಕೊಂಡಿತ್ತು. ನಾನೂ ಅನೇಕ ಸಮ್ಮೇಳನಗಳನ್ನು ನೋಡಿದ್ದೇನೆ. ಮೈಸೂರಿನಲ್ಲಿ 1980ರ ದಶಕದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ ಚೆನ್ನಾಗಿತ್ತು. ಈ ಸಮ್ಮೇಳನ ಅದನ್ನೂ ಮೀರಿಸುವಂತಿತ್ತು. ಇಷ್ಟೊಂದು ಅಚ್ಚುಕಟ್ಟುತನವನ್ನು ಎಲ್ಲೂ ನೋಡಿರಲಿಲ್ಲ. ಇಷ್ಟೊಂದು ಮಂದಿಗೆ ಊಟದ ಜತೆ ಸಾಂಸ್ಕೃತಿಕ ಸೊಬಗನ್ನು ಉಣಬಡಿಸುವುದು ಸುಲಭದ ಮಾತಲ್ಲ' ಎಂದು ಕೊಂಡಾಡಿದರು.

'ಮನುಷ್ಯನನ್ನು ಹೊರಗಿನಿಂದ ನೋಡಿ ತೀರ್ಮಾನಕ್ಕೆ ಬರುತ್ತೇವೆ. ವ್ಯಕ್ತಿಯ ಅಂತರಂಗವನ್ನು ಪ್ರವೇಶ ಮಾಡುವುದಕ್ಕೆ ಇಂತಹ ಸಮ್ಮೇಳನಗಳು ಅವಕಾಶ ಕಲ್ಪಿಸುತ್ತವೆ. ಜನರ ಜತೆ ಬೆರೆಯುವ ಈ ಅವಕಾಶವನ್ನು ಒಪ್ಪದೇ ಇದ್ದರೆ ಬದುಕಿನಲ್ಲಿ ಏನನ್ನೋ ಕಳೆದುಕೊಳ್ಳುತ್ತಿದ್ದೆ' ಎಂದರು.

'ಯುವಜನತೆ, ವಿದ್ಯಾರ್ಥಿಗಳು ಹಾಳಾಗುತ್ತಾರೆ ಎಂಬ ಸಾಮಾನ್ಯ ಮಾತಿದೆ. ಆದರೆ, ವಿದ್ಯಾರ್ಥಿಗಳ  ಉತ್ಸಾಹ ಕಂಡು ನಿಜಕಕ್ಕೂ ಮನತುಂಬಿ ಬರುತ್ತದೆ. ಶತಮಾನಕ್ಕಾಗುವಷ್ಟು ಅಭೂತಪೂರ್ವ ಪರ್ವಗಳನ್ನು ಇಲ್ಲಿ ಕಟ್ಟಿಕೊಡಲಾಗುತ್ತಿದೆ' ಎಂದರು.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಎಂ.ವೀರಪ್ಪ ಮೊಯಿಲಿ ಮಾತನಾಡಿ, 'ನಾಡಿನ ಎಲ್ಲ ಉತ್ಸವಗಳನ್ನು ಮೀರಿಸಿ, ವಿಶ್ವವನ್ನೇ ಆಕರ್ಷಿಸುವ ಸಾಮರ್ಥ್ಯವನ್ನು ವಿಶ್ವ ನುಡಿಸಿರಿ ವಿರಾಸತ್‌ನಂತಹ ಸಮ್ಮೇಳನಕ್ಕಿದೆೆ. ಮುಂದಿನ ದಿನಗಳಲ್ಲಿ ವಿದೇಶಿಯರೂ ಈ ಉತ್ಸವಕ್ಕಾಗಿ ಕಾಯುವ ದಿನಗಳು ದೂರವಿಲ್ಲ'  ಎಂದರು.

ಕವಿ ಜಯಂತ ಕಾಯ್ಕಿಣಿ ಮಾತನಾಡಿ, 'ಇಲ್ಲಿನ ಪ್ರತಿಯೊಂದು ನೆನಪುಗಳು ಎಳೆ ಮನಸುಗಳಲ್ಲಿ ಮೌಲ್ಯಗಳನ್ನು ತುಂಬಿಸುತ್ತದೆ. ಇಲ್ಲಿ ಖರೀದಿಸಿದ ಪುಸ್ತಕವನ್ನೋ ಇಲ್ಲಿ ಆಲಿಸಿದ ಹಾಡನ್ನೋ ಮುಂದೆ ಮೆಲುಕು ಹಾಕುವುದೇ ಈ ಸಮ್ಮೇಳನದ ಸೊಬಗು. ಎಲ್ಲರೂ ನಾನು ಎಂಬ ಕೋಶದಲ್ಲಿ ನಾಶವಾಗುತ್ತಿರುವಾಗ ಆಳ್ವರು  ಅನ್ಯರಲ್ಲಿ ಕಲೆ ಸಂಸ್ಕೃತಿಯ ಬಗ್ಗೆ ಆಸಕ್ತಿ ಹುಟ್ಟಿಸುತ್ತಿರುವುದು ಶ್ಲಾಘನೀಯ. ಸಂಸ್ಕೃತಿಯನ್ನು ಜಂಗಮ ಮಾಡುವ ಕಾರ್ಯ ಇಲ್ಲಿ ನಡೆಯುತ್ತಿದೆ' ಎಂದರು.

ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, 'ಕೊಡುವುದರಲ್ಲಿ ಸಿಗುವ ಆನಂದ ಬೇರಾವುದರಲ್ಲೂ ಸಾಧ್ಯವಿಲ್ಲ. ನಮಗೆ ರುಚಿಕರ ಎನಿಸಿದ್ದನ್ನು ಇತರರಿಗೂ ಹಂಚುವ ಜಾಯಮಾನ ಆಳ್ವ ಅವರದು' ಎಂದರು.

'ಟೀಕಿಸುವವರು ಇರುತ್ತಾರೆ. ಅವರ ಟೀಕೆ ಬಗ್ಗೆ ಚಿಂತಿಸುವುದಕ್ಕಿಂತ ಲಕ್ಷಾಂತರ ಮಂದಿ ನಿಮ್ಮ ಕಾರ್ಯವನ್ನು ಮೆಚ್ಚಿದ್ದಾರೆ. ಅವರಿಗಾಗಿ ಈ ಸಮ್ಮೇಳನವನ್ನು ಮುಂದುವರಿಸಬೇಕು' ಎಂದರು.

ಇದೇ ಸಂದರ್ಭದಲ್ಲಿ ಸಾಹಿತ್ಯ ಸೇವೆಗಾಗಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಡಿ.ಕೆ.ಚೌಟ, ಹಿರೇಮಗಳೂರು ಕಣ್ಣನ್, ಮೂಡ್ನಾಕೂಡು ಚಿನ್ನಸ್ವಾಮಿ, ಕತೆಗಾರ ಫಕೀರ್ ಮಹಮ್ಮದ್  ಕಟಪಾಡಿ, ಡಾ.ಬಿ.ಎಂ.ಹೆಗ್ಡೆ, ಜಯಂತ ಕಾಯ್ಕಿಣಿ, ಉಮಾ ಕುಲಕರ್ಣಿ, ಡಾ.ಕಮಲಾ ಹಂಪನಾ, ಡಾ.ನಾ.ಮೊಗಸಾಲೆ, ಕುಂಬ್ಳೆ ಸುಂದರ ರಾವ್, ಕರ್ನಾಟಕ ಥಿಯಾಲಾಜಿಕಲ್ ಸೊಸೈಟಿ (ಡಾ.ಹನಿಬಾಲ್ ಖಬ್ರಾಲ್)  ಹಾಗೂ ಶಿವಮೊಗ್ಗ ಕರ್ನಾಟಕ ಸಂಘ (ನಾಗಭೂಷಣ ಎಚ್.ಎಸ್.) ಅವರಿಗೆ ಆಳ್ವಾಸ್ ವಿಶ್ವನುಡಿಸಿರಿ 2013 ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಶಾಸಕರಾದ ಸಿ.ಟಿ.ರವಿ, ಗಣೇಶ ಕಾರ್ಣಿಕ್ ಇದ್ದರು.

ಬೇಸರ ತೋಡಿಕೊಂಡ ಆಳ್ವ
ಸಮಾರೋಪ ಸಮಾರಂಭದಲ್ಲಿ 'ಮನಸ್ಸು ಬಿಚ್ಚಿ ಮಾತನಾಡಿದರೆ, ಅದೇ ದೊಡ್ಡ ವಿಷಯ ಆಗುವ ಅಪಾಯವಿದೆ. ವೃಥಾ ನಾನು ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ' ಎನ್ನುತ್ತಲೇ ಮಾತು ಆರಂಭಿಸಿದ  ಸಂಘಟಕ ಡಾ.ಎಂ. ಮೋಹನ ಆಳ್ವ ಅವರು ವಿಶ್ವ ನುಡಿಸಿರಿ ವಿರಾಸತ್ ಬಗ್ಗೆ ವ್ಯಕ್ತವಾದ ಅಪಸ್ವರದ ಬಗ್ಗೆ ಮನದ ಬೇಗುದಿಯನ್ನು ಹೊರ ಹಾಕಿದರು.

'ನಾನು ಯಾವತ್ತೂ ಯಾರ ಕೆಲಸಕ್ಕೂ ಅಡ್ಡ ಬರುವವನಲ್ಲ. ಬೇರೆ ಕಡೆ ನಡೆದ ಸಮ್ಮೇಳನಗಳಿಗೆ ಪರ್ಯಾಯ, ಬಂಡಾಯ, ಸಮಾನಾಂತರ ಎಂಬ ಪದಗಳನ್ನು ಬಳಸಬೇಡಿ. ಅವರ ಕೆಲಸ ಅವರು ಮಾಡಿದ್ದಾರೆ. ಸಂಶಯ ಮತ್ತು ಪ್ರೀತಿ ಒಟ್ಟೊಟ್ಟಿಗೆ ಹೋಗಲು ಸಾಧ್ಯವಿಲ್ಲ. ನಾವು ಮಾಡುತ್ತಿರುವುದು ಕನ್ನಡದ ಮನಸುಗಳನ್ನು ಕಟ್ಟುವ ಕೆಲಸ. ಹಾಲನ್ನು ಹಾಲಾಗಿ ಕಾಪಾಡುವುದು ಕಷ್ಟದ ಕೆಲಸ.

ಕನ್ನಡದ ಮನಸುಗಳನ್ನು ಕೆಡಿಸಬೇಡಿ. ಸಮ್ಮೇಳನದ ಬಗ್ಗೆ ಏನಾದರೂ ಹೇಳಬೇಕೆನಿಸಿದರೆ, ಕಾಗದ ಬರೆಯಿರಿ.  ಇ-ಮೇಲ್ ಮಾಡಿದರೂ ಉತ್ತರಿಸುತ್ತೇನೆ. ಅದು ಬಿಟ್ಟು ಮಾಧ್ಯಮಗಳ ಮೂಲಕ ಬಹಿರಂಗ ಪತ್ರ ಬರೆಯಬೇಡಿ' ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT