ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರಕೋಶ ವೈಫಲ್ಯ: ಮನೆಯಲ್ಲೇ ಡಯಾಲಿಸಿಸ್

Last Updated 27 ಜನವರಿ 2012, 19:35 IST
ಅಕ್ಷರ ಗಾತ್ರ

ಬೆಂಗಳೂರು: ಮೂತ್ರಕೋಶ (ಕಿಡ್ನಿ) ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ತಮ್ಮ ಮನೆಯಲ್ಲಿಯೇ `ಡಯಾಲಿಸಿಸ್~ ಮಾಡಿಕೊಳ್ಳುವ ವಿಧಾನವನ್ನು ಜನಪ್ರಿಯಗೊಳಿಸಲು ನಗರದ `ನೆಫ್ರೋ- ಯೂರಾಲಜಿ ಸಂಸ್ಥೆ~ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯನ್ನು ಪ್ರಾಯೀಗಿಕವಾಗಿ ಕೈಗೊಳ್ಳಲು ಸರ್ಕಾರದ ಹಣಕಾಸು ಇಲಾಖೆ ಅನುಮತಿ ನೀಡಿದ್ದು, ಶೀಘ್ರದಲ್ಲಿ ಜಾರಿಗೆ ಬರಲಿದೆ.

ಪ್ರಾಯೋಗಿಕ ಹಂತದಲ್ಲಿ 25 ಮಂದಿಗೆ ಅವರವರ ಮನೆಯಲ್ಲಿಯೇ ಡಯಾಲಿಸಿಸ್ ಮಾಡಿಕೊಳ್ಳುವ ವಿಧಾನವನ್ನು ಹೇಳಿಕೊಟ್ಟು, ಪರಿಣಾಮವನ್ನು ಕೆಲ ತಿಂಗಳ ಕಾಲ ಗಮನಿಸಲಾಗುವುದು. ಅದರ ಯಶಸ್ಸು ನೋಡಿಕೊಂಡು ಯೋಜನೆಯನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ.

ಯೋಜನೆ ಕುರಿತು `ಪ್ರಜಾವಾಣಿ~ಗೆ ವಿವರ ನೀಡಿದ ಸಂಸ್ಥೆಯ ನಿರ್ದೇಶಕ ಡಾ.ಜಿ.ಕೆ.ವೆಂಕಟೇಶ್, `ಕೆನಡಾ, ಚೀನಾ, ಹಾಂಕಾಂಗ್ ಮೊದಲಾದ ಕಡೆಗಳಲ್ಲಿ ಮನೆಯಲ್ಲಿಯೇ ಡಯಾಲಿಸಿಸ್ ವಿಧಾನವನ್ನು ಹೆಚ್ಚೆಚ್ಚು ಜನರು ಬಳಸುತ್ತಿದ್ದಾರೆ. ರಾಜ್ಯದಲ್ಲಿಯೂ ಈ ವಿಧಾನವನ್ನು ಪರಿಚಯಿಸುವ ಮೂಲಕ ರೋಗಿಗಳಿಗೆ ಅನುಕೂಲ ಮಾಡಿಕೊಡುವುದು ಯೋಜನೆಯ ಉದ್ದೇಶವಾಗಿದೆ~ ಎಂದರು.

`ಮನೆಯಲ್ಲಿ ಡಯಾಲಿಸಿಸ್ ವಿಧಾನಕ್ಕೆ ಪ್ರತಿ ರೋಗಿಗೆ ಒಂದು ತಿಂಗಳಿಗೆ 25 ಸಾವಿರ ರೂಪಾಯಿ ಖರ್ಚಾಗಲಿದೆ. ಪ್ರಾಯೋಗಿಕ ಹಂತದಲ್ಲಿ ಡಯಾಲಿಸಿಸ್ ವೆಚ್ಚದ ಶೇ 65ರಷ್ಟನ್ನು ಸರ್ಕಾರ ಭರಿಸಲಿದೆ, ಉಳಿದದ್ದನ್ನು ರೋಗಿ ಪಾವತಿ ಮಾಡಬೇಕು~ ಎಂದು ಅವರು ತಿಳಿಸಿದರು.

`ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಈ ವಿಧಾನದ ಮೂಲಕ ಡಯಾಲಿಸಿಸ್ ಮಾಡಿಕೊಂಡರೆ ವೆಚ್ಚ ಕಡಿಮೆಯಾಗಲಿದೆ. ಡಯಾಲಿಸಿಸ್‌ಗಾಗಿ ಆಸ್ಪತ್ರೆಗಳಿಗೆ ಹೋಗಿ ಬರುವ ಪ್ರಯಾಸ ತಪ್ಪಲಿದೆ. ಸಮಯದ ಉಳಿತಾಯವೂ ಆಗಲಿದೆ~ ಎಂದು ನುಡಿದ ಅವರು `ಈಗಾಗಲೇ ನಮ್ಮ ಸಂಸ್ಥೆಯ ಮಾರ್ಗದರ್ಶನದಲ್ಲಿ ಮೂವರು ರೋಗಿಗಳು ಮನೆಯಲ್ಲೇ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದಾರೆ. ನಗರದ ಒಂದೆರಡು ಖಾಸಗಿ ಆಸ್ಪತ್ರೆಗಳು ಈ ವಿಧಾನವನ್ನು ಪರಿಚಯಿಸಿವೆ~ ಎಂದರು.

ಒತ್ತಡಕ್ಕೆ ಪರಿಹಾರ: `ಸದ್ಯ ರಾಜ್ಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದಾರೆ. ಅವರಲ್ಲಿ ಬಹುತೇಕ ಮಂದಿ ವಾರಕ್ಕೆ ಮೂರು ದಿನ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ.
ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಡಯಾಲಿಸಿಸ್ ಕೇಂದ್ರದ ಮೇಲೆ ಒತ್ತಡವೂ ಹೆಚ್ಚುತ್ತಿದೆ. ಇದಕ್ಕೆ ಪರಿಹಾರವಾಗಿ ಬದಲಿ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ~ ಎಂದು ಅವರು ಹೇಳಿದರು.

`ಒಂದು ಸಲ ಡಯಾಲಿಸಿಸ್ ಮಾಡಿಸಿಕೊಳ್ಳಲು ನಾಲ್ಕು ಗಂಟೆಗಳ ಸಮಯಾವಕಾಶ ಬೇಕಾಗುತ್ತದೆ. ಒಂದು ಸಲದ ಡಯಾಲಿಸಿಸ್‌ಗೆ 500 ರೂಪಾಯಿ ಶುಲ್ಕ ನಿಗದಿ ಪಡಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಶೇಕಡಾ 50ರಷ್ಟು ರಿಯಾಯಿತಿ ಸೌಲಭ್ಯವಿದೆ. ಶಸ್ತ್ರಚಿಕಿತ್ಸೆ ಮತ್ತಿತರ ಕಾರಣಗಳಿಂದ ತಾತ್ಕಾಲಿಕವಾಗಿ ಮೂತ್ರಕೋಶ ವೈಫಲ್ಯಕ್ಕೆ ಒಳಗಾಗುವರು, ಕಡು ಬಡ ರೋಗಿಗಳಿಗೆ ಉಚಿತವಾಗಿ ಈ ಸೇವೆ ಒದಗಿಸಲಾಗುತ್ತಿದೆ~ ಎಂದು ಅವರು ತಿಳಿಸಿದರು. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನಮ್ಮ ಸಂಸ್ಥೆಯಲ್ಲಿ ಸದ್ಯ 25 ಡಯಾಲಿಸಿಸ್ ಯಂತ್ರಗಳಿವೆ. ಪ್ರತಿ ದಿನ ಮೂರು ಪಾಳಿಗಳಲ್ಲಿ 60ರಿಂದ 90 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಇನ್ನು 25 ಯಂತ್ರಗಳ ಖರೀದಿಗಾಗಿ ಟೆಂಡರ್ ಕರೆಯಲಾಗಿದೆ. ಈ ಯಂತ್ರಗಳ ಖರೀದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಂದು ಕೋಟಿ ರೂಪಾಯಿ ಧನ ಸಹಾಯ ನೀಡಿದೆ~ ಎಂದು ಅವರು ಹೇಳಿದರು.

ಮನೆಯಲ್ಲೇ ಡಯಾಲಿಸಿಸ್ ಹೇಗೆ
`ಡಯಾಲಿಸಿಸ್~ ಎಂದರೆ ರಕ್ತದಲ್ಲಿ ಹೆಚ್ಚುವರಿಯಾಗಿರುವ ನೀರು ಮತ್ತು ತ್ಯಾಜ್ಯವನ್ನು ತೆಗೆದು, ಆರೋಗ್ಯಕ್ಕೆ ಪೂರಕವಾದ ದ್ರವಾಂಶಗಳನ್ನು (ಫ್ಲುಯಿಡ್ಸ್) ರಕ್ತಕ್ಕೆ ಸೇರಿಸುವ ಒಂದು ಪ್ರಕ್ರಿಯೆ. ಅರ್ಥಾತ್ ರಕ್ತ ಶುದ್ಧೀಕರಿಸುವ ಕ್ರಿಯೆಯಾಗಿದೆ. ಆರೋಗ್ಯವಂತ ಮೂತ್ರಕೋಶ ಮಾಡುವ ಕೆಲಸ ಇದೇ ಆಗಿದೆ. ಎರಡು ಮೂತ್ರಕೋಶಗಳು ಸಂಪೂರ್ಣ ವಿಫಲವಾದಾಗ ಇರುವ ಪರಿಹಾರಗಳು ಎರಡು. ಒಂದು, `ಡಯಾಲಿಸಿಸ್~ ಯಂತ್ರದ ಮೂಲಕ ಮೂತ್ರಕೋಶದ ಕಾರ್ಯವನ್ನು ಕೃತಕವಾಗಿ ನಿರ್ವಹಿಸುವಂತೆ ಮಾಡುವುದು. ಎರಡು, ವಿಫಲ  ಮೂತ್ರಕೋಶವನ್ನು ತೆಗೆದು ಆರೋಗ್ಯವಂತ ಮೂತ್ರಕೋಶವನ್ನು ಕಸಿ ಮಾಡುವುದು.

ಯಂತ್ರದ ಮೂಲಕ ಮಾಡುವ ರಕ್ತಶುದ್ಧೀಕರಣಕ್ಕೆ `ಹಿಮೋಡಯಾಲಿಸಿಸ್~ ಎಂದು, ಮನೆಯಲ್ಲಿ ಮಾಡುವ ಡಯಾಲಿಸಿಸ್‌ಗೆ `ಪೆರಿಟೋನಿಯಲ್ ಡಯಾಲಿಸಿಸ್~ ಎಂದು ಕರೆಯಲಾಗುವುದು. ಮನೆಯಲ್ಲಿ ಮಾಡುವ ಡಯಾಲಿಸಿಸ್‌ಗೆ ಯಂತ್ರದ ಅಗತ್ಯ ಇಲ್ಲ. ಗ್ಲೂಕೋಸ್ ನೀಡುವ ಮಾದರಿಯಲ್ಲೇ ದ್ರವಾಂಶಗಳು ತುಂಬಿದ ಚೀಲವನ್ನು ನೇತು ಹಾಕಿ, ಅದರ ಟ್ಯೂಬ್ ಅನ್ನು ರೋಗಿಯ ಕರುಳುಗಳ ಸುತ್ತಲೂ ಇರುವ ಪದರಕ್ಕೆ ಜೋಡಿಸಲಾಗುವುದು. ಇದು ಯಾವುದೇ ಯಂತ್ರದ ಸಹಾಯವಿಲ್ಲದೇ ರೋಗಿಯ ರಕ್ತದಲ್ಲಿರುವ ಹೆಚ್ಚುವರಿ ನೀರು ಮತ್ತು ತ್ಯಾಜ್ಯಗಳನ್ನು ಹೊರ ತೆಗೆದು, ಆರೋಗ್ಯಯುಕ್ತ ದ್ರವಾಂಶಗಳನ್ನು ಸೇರಿಸುವ ಕೆಲಸ ಮಾಡುತ್ತದೆ. ಕೆಲಸ ಮುಗಿಸಿ ಸಂಜೆ ಮನೆಗೆ ಬಂದ ರೋಗಿ, ಕುಟುಂಬದ ಸದಸ್ಯರ ನೆರವಿನೊಂದಿಗೆ ಡಯಾಲಿಸಿಸ್ ಮಾಡಿಕೊಳ್ಳಬಹುದು.

ಸುಸಜ್ಜಿತ ಆಸ್ಪತ್ರೆ, ಪ್ರಯೋಗಾಲಯ
ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಇರುವ `ನೆಫ್ರೋ- ಯೂರಾಲಜಿ ಸಂಸ್ಥೆ~ಯು ರಾಜ್ಯ ಸರ್ಕಾರ ಸ್ಥಾಪಿಸಿರುವ ಒಂದು ಸ್ವಾಯತ್ತ ಸಂಸ್ಥೆ. ಮೂತ್ರಕೋಶ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಸೇವೆಗಳನ್ನು ಒದಗಿಸುವ ಸುಸಜ್ಜಿತ ಆಸ್ಪತ್ರೆಯನ್ನು ಸಂಸ್ಥೆಯು ಹೊಂದಿದೆ. ಅತ್ತುತ್ತಮ ಪ್ರಯೋಗಾಲಯವೂ ಇಲ್ಲಿದೆ. ಇಲ್ಲಿ ಉನ್ನತ ಮಟ್ಟದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳು ಹಾಗೂ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ. 2011ರ ಒಂದೇ ವರ್ಷದಲ್ಲಿ 41,916 ಮಂದಿ ಹೊರ ಮತ್ತು 4,591 ಮಂದಿ ಒಳ ರೋಗಿಗಳಾಗಿ ಸೇವೆ ಪಡೆದಿದ್ದಾರೆ. 12,627 ಮಂದಿ ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ. 4,023 ಮಂದಿ ಸಣ್ಣ ಪುಟ್ಟ ಹಾಗೂ  2,450 ಮಂದಿ ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಆರೋಗ್ಯ ಯೋಜನೆಗಳ ಫಲಾನುಭವಿಗಳಿಗೆ ಇಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಲಾಗುತ್ತಿದೆ. ಸಂಸ್ಥೆಯ ದೂರವಾಣಿ ಸಂಖ್ಯೆ:  080- 26706777, 26700527, 26702021. ವೆಬ್‌ಸೈಟ್ ವಿಳಾಸ:  www.nephrourology.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT