ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಗುಂಟೆಯಲ್ಲಿ ಹತ್ತೆಂಟು ಬೆಳೆ

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

`ಮನಸ್ಸಿದ್ದಲ್ಲಿ ಮಾರ್ಗವಿದೆ~ ಎಂಬ ನಾಣ್ಣುಡಿಗೆ ಹಾವೇರಿ ಜಿಲ್ಲೆ ಹಾನಗಲ್ಲ ತಾಲ್ಲೂಕು ಮಹಾರಾಜಪೇಟೆಯ ಶಿಕ್ಷಕ ಶಿವಾನಂದ ಚಕ್ರಸಾಲಿ ಒಳ್ಳೆಯ  ಉದಾಹರಣೆ. ಕೆಲಸ ಮಾಡುವ ಮನಸ್ಸಿದ್ದರೆ ನೂರಾರು ಮಾರ್ಗಗಳಿವೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ತನ್ನ ಮನೆಯ ಹಿತ್ತಲ ಮೂರು ಗುಂಟೆ ಜಾಗದಲ್ಲಿ ಸುಂದರ ಕೈತೋಟ ನಿರ್ಮಿಸಿದ್ದಾರೆ. ಅವುಗಳನ್ನು ಮಕ್ಕಳಂತೆ ಪೋಷಿಸುತ್ತಿದ್ದಾರೆ.

ಅವರು ಶಿಕ್ಷಕ ವೃತ್ತಿ ಸೇರಿದ್ದು 1999 ರಲ್ಲಿ. ಆದರೆ ಗ್ರಾಮೀಣ ಕೃಪಾಂಕದ ಗೊಂದಲದಿಂದ 2003ರಲ್ಲಿ ನೌಕರಿ ಹೋಯ್ತು. ಆ ಸಮಯದಲ್ಲಿ ಪತ್ರಿಕೆಗಳಲ್ಲಿ ಬರುತ್ತಿದ್ದ ಕೃಷಿ ಮತ್ತು ತೋಟಗಾರಿಕೆ ಲೇಖನಗಳನ್ನು ಓದಿ ಆಸಕ್ತಿ ಬೆಳೆಸಿಕೊಂಡರು.
 
ಅದೃಷ್ಟವಶಾತ್ ಆರೇ ತಿಂಗಳಲ್ಲಿ ಮತ್ತೆ ಮಹಾರಾಜಪೇಟೆ ಸರ್ಕಾರಿ ಶಾಲೆ ಶಿಕ್ಷಕರಾಗಿ ನೇಮಕ ಆದೇಶ ಬಂತು. ಉದ್ಯೋಗದ ಜತೆಗೆ ಅಲ್ಲಿಯೇ 4 ಗುಂಟೆ ಜಾಗ ಖರೀದಿಸಿ ಒಂದು ಗುಂಟೆಯಲ್ಲಿ ಮನೆ ಕಟ್ಟಿಸಿದರು.

ಇನ್ನುಳಿದ 3 ಗುಂಟೆ ಜಾಗದಲ್ಲಿ ಏನು ಮಾಡುವುದು ಎನ್ನುತ್ತಿರುವಾಗ ಕೃಷಿ ಪುರವಣಿಯಲ್ಲಿ ಓದಿದ ಹಲವು ಲೇಖನಗಳು ನೆನಪಿಗೆ ಬಂದು `ನಾನೂ ಏಕೆ ಈ ಸಣ್ಣ ಜಾಗದಲ್ಲಿ ಕೃಷಿ ಮಾಡಬಾರದು~ ಎಂದು ಆಲೋಚಿಸಿದರು.
 
ಮೊದಲು ಬರೀ ಕಾಯಿಪಲ್ಲೆ (ತರಕಾರಿ) ಬೆಳೆದರು. ನಂತರ ಅಲ್ಲಿಯೇ 50 ಸಾಗವಾನಿ, 10 ಅಡಿಕೆ, 18 ತೆಂಗು, 25 ಅಕೇಶಿಯಾ, 4 ಚಿಕ್ಕು, 30 ಬಾಳೆ ನೆಟ್ಟರು. 8 ಸಾಗವಾನಿ ಗಿಡಕ್ಕೆ ಎಲೆಬಳ್ಳಿ, ಉಳಿದದ್ದಕ್ಕೆ ವೆನಿಲ್ಲಾ ಬಳ್ಳಿ ಹಬ್ಬಿಸಿದರು.

ಸಾಲದೆಂಬಂತೆ ಹೀರೆ, ಬೆಂಡೆ, ಕುಂಬಳ, ಹಾಗಲ, ಬಿನ್ಸ್, ಎರಡು ರೀತಿಯ ಬಸಳೆ, ಹರಿವೆ, ಮೂಲಂಗಿ, ಕರಿಬೇವು, ಸಬ್ಬಸಿಗೆ, ಮೆಂತೆ, ಕೊತ್ತಂಬರಿ, ಕಿರಕ್‌ಸಾಲಿ ಹೀಗೆ ವಿವಿಧ ತರಕಾರಿ, ಸೊಪ್ಪು ಬೆಳೆಸಿದ್ದಾರೆ. ಮನೆಗೆ ಬಳಸಿ ಹೆಚ್ಚಾದ ತರಕಾರಿಯನ್ನು ಅಕ್ಕಪಕ್ಕದ ಮನೆಗಳಿಗೆ ಕೊಡುವುದಲ್ಲದೆ ಶಾಲೆಗೂ ಒಯ್ದು ಹಂಚುತ್ತಾರೆ.
 
ಮಲ್ಲಿಗೆ, ದಾಸವಾಳ, ಅಬ್ಬಲಿಗೆ, ಗುಲಾಬಿ ಗಿಡ ಹಾಕಿದ್ದಾರೆ. ಈಗ ರಾಸಾಯನಿಕ ಗೊಬ್ಬರ ಉಪಯೋಗಿಸುತ್ತಿದ್ದರೂ ಮುಂದಿನ ದಿನಗಳಲ್ಲಿ ಸಾವಯವ ಪದ್ಧತಿ ಅನುಸರಿಸುವ ಯೋಚನೆಯಲ್ಲಿದ್ದಾರೆ. ಇಷ್ಟೆಲ್ಲ ಬೆಳೆ ಇದ್ದರೂ ಲಭ್ಯ ನೀರನ್ನು ಅಚ್ಚುಕಟ್ಟಾಗಿ ಬಳಸಿ ತೊಂದರೆ ಬಾರದಂತೆ ನೋಡಿಕೊಂಡಿದ್ದಾರೆ.

ತೊಟ್ಟಿ ತುಂಬಿದಾಗ ಹರಿಯುವ ನೀರು, ಬಚ್ಚಲ ನೀರನ್ನು ಗಿಡಗಳಿಗೆ ಉಣಿಸುತ್ತಾರೆ. ಬೇಸಿಗೆ ದಿನಗಳಲ್ಲಿ ಅಕೇಶಿಯಾ, ಸಾಗವಾನಿ ಮರಗಳಿಗೆ ಮಡಿಕೆ ಕಟ್ಟಿ ಪಕ್ಷಿಗಳ ಬಾಯಾರಿಕೆ ತೀರಿಸುತ್ತಾರೆ.


ನೀರು, ಭೂಮಿ, ಬೆಳೆಯ ಪ್ರಾಮುಖ್ಯತೆ ಗೊತ್ತಿರಲಿ ಎಂದು ಶಾಲೆ ಮಕ್ಕಳನ್ನು ತಮ್ಮ ತೋಟಕ್ಕೆ ಕರೆತಂದು ಪ್ರಾತ್ಯಕ್ಷಿಕೆ ಮೂಲಕ ಕಲಿಸುತ್ತಾರೆ. ಇಂಥ ಶಿಕ್ಷಕರಿದ್ದರೆ ಎಷ್ಟೊಂದು ಚೆನ್ನ ಅಲ್ಲವೇ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT