ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳಲ್ಲಿ 49 ಪ್ರಕರಣ ಪತ್ತೆ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ಪ್ರಸಕ್ತ ಸಾಲಿನ ಜುಲೈನಿಂದ ಸೆಪ್ಟೆಂಬರ್ ತಿಂಗಳವರೆಗೆ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ 205 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 49 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಬಿಸನಳ್ಳಿ ತಿಳಿಸಿದರು.

ಒಟ್ಟಾರೆ 205 ಪ್ರಕರಣಗಳಲ್ಲಿ 1,34,27,500 ರೂಪಾಯಿ ಮೌಲ್ಯದ ಮಾಲು ಕಳುವಾಗಿದ್ದವು. ಇದರಲ್ಲಿ 28,99,450 ರೂಪಾಯಿ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದ್ದು, 18,53,650 ರೂಪಾಯಿ ಮೌಲ್ಯದ ಮಾಲುಗಳನ್ನು ಪಿರ‌್ಯಾದುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಅವಧಿಯಲ್ಲಿ ಎರಡು ದರೋಡೆ ಪ್ರಕರಣ ಹಾಗೂ ನಾಲ್ಕು ಸುಲಿಗೆ ಪ್ರಕರಣಗಳನ್ನು ಪತ್ತೆಹಚ್ಚಿ ಕಳುವಾಗಿದ್ದು 4,91,500 ರೂಪಾಯಿ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಇದರಿಂದ 50 ಸಾವಿರ ರೂಪಾಯಿ ಮೌಲ್ಯದ ಮಾಲನ್ನು ಪಿರ‌್ಯಾದುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಅವರು ಹೇಳಿದರು.

ತಾವರೆಕೆರೆ ಪೊಲೀಸ್ ಠಾಣೆಯಲ್ಲಿ 38 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 12 ಪತ್ತೆಯಾಗಿವೆ. ಬಿಡದಿ ಠಾಣೆಯಲ್ಲಿ ದಾಖಲಾಗಿರುವ 35 ಪ್ರಕರಣಗಳಲ್ಲಿ 6 ಪತ್ತೆಯಾಗಿವೆ. ತಲಘಟ್ಟಪುರ ಠಾಣೆಯಲ್ಲಿ ದಾಖಲಾಗಿರುವ 25 ಪ್ರಕರಣಗಳಲ್ಲಿ ಕೇವಲ 2 ಪತ್ತೆಯಾಗಿವೆ ಎಂದು ಅವರು ಪ್ರತಿಕ್ರಿಯಿಸಿದರು.

ಪ್ರಕರಣಗಳ ಬಗೆ: ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಈ ಮೂರು ತಿಂಗಳ ಅವಧಿಯಲ್ಲಿ 11 ಕೊಲೆಗಳಾಗಿದ್ದು, ಅವುಗಳಲ್ಲಿ 6 ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 4 ದರೋಡೆ, 20 ಸುಲಿಗೆ, 44 ರಾತ್ರಿ ಕನ್ನ ಕಳವು, 120 ಹಗಲು ಕನ್ನ/ ಕಳವು/ ಸಮಾನ್ಯ ಕಳವು ಹಾಗೂ 6 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಅವರು ಉತ್ತರಿಸಿದರು.

ಸಿಬ್ಬಂದಿ ಕೊರತೆ: ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಅಂದಾಜು 200 ಪೊಲೀಸರ ಕೊರತೆ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿಸನಳ್ಳಿ ತಿಳಿಸಿದರು. ಜಿಲ್ಲಾ ಕೇಂದ್ರವಾಗಿರುವ ರಾಮನಗರದ ಪುರ ಠಾಣೆಯಲ್ಲಿ ಸುಮಾರು 50 ಪೊಲೀಸರು ಇರಬೇಕು. ಆದರೆ ಇಲ್ಲಿ 18 ಪೊಲೀಸರ ಕೊರತೆ ಇದೆ. ಅದೇ ರೀತಿ ಇತರ ಠಾಣೆಗಳಲ್ಲಿ 18 ಪೊಲೀಸರು ಇರಬೇಕು. ಆದರೆ ಅಲ್ಲೆಲ್ಲ ಏಳು ಪೊಲೀಸರ ಕೊರತೆ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕೊರತೆ ನೀಗಿಸಿಕೊಳ್ಳುವ ಉದ್ದೇಶದಿಂದ ಈಗಾಗಲೇ 69 ಜನ ಪೊಲೀಸರ ನೇಮಕಾತಿಗೆ ಚಾಲನೆ ನೀಡಲಾಗಿದೆ. ಇವರ ಸಿಂಧುತ್ವ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಶೀಘ್ರವೇ ನೇಮಕಾತಿ ಆದೇಶ ದೊರೆಯಲಿದೆ. ಆದರೆ ಇವರಿಗೆ ಒಂದು ವರ್ಷ ತರಬೇತಿ ಅವಧಿ ಇರುವ ಕಾರಣ ಇವರುಗಳ ಸೇವೆ ಕೂಡಲೇ ಜಿಲ್ಲಾ ಪೊಲೀಸ್‌ಗೆ ದೊರೆಯುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿಯಾದರೆ ಪೊಲೀಸರಿಗೆ ಇನ್ನಷ್ಟು ಬಲ ಬಂದಂತಾಗುತ್ತದೆ. ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಅವರು ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದ ವಾತಾವರಣ ಕದಡುವ ವ್ಯಕ್ತಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಈ ಕಾಯ್ದೆಯಡಿ ಇನ್ನೂ ಕೆಲವರನ್ನು ಬಂಧಿಸಲಾಗುತ್ತದೆ. ಈ ಸಂಬಂಧ ಪಟ್ಟಿಯಲ್ಲಿರುವ ವ್ಯಕ್ತಿಗಳ ಅಪರಾಧ ಚಟುವಟಿಕೆಗಳ ಅಧ್ಯಯನ ನಡೆಯುತ್ತಿದೆ ಎಂದು ಅವರು ಹೇಳಿದರು.

ಚನ್ನಪಟ್ಟಣದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟಾರೆ 25 ಜನರನ್ನು ಗುರುತಿಸಲಾಗಿದೆ ಎಂದು ಅವರು ಮಾಹಿತಿ ಒದಗಿಸಿದರು. ಡಿವೈಎಸ್‌ಪಿಗಳಾದ ರಾಮಕೃಷ್ಣಪ್ಪ ಮತ್ತು ಟಿ. ಸಿದ್ದಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT