ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳಲ್ಲಿ ತನಿಖೆ ಮುಗಿಸಲು ಸೂಚನೆ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಿಐಡಿಗೆ ವಹಿಸುವ ಪ್ರಕರಣಗಳ ತನಿಖೆಯಲ್ಲಿನ ವಿಳಂಬವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಡಿಜಿಪಿ ಶಂಕರ ಬಿದರಿ ಅವರು ಸಿಐಡಿಗೆ ವಹಿಸುವ ಯಾವುದೇ ಪ್ರಕರಣದ ತನಿಖೆಯನ್ನು ಮೂರು ತಿಂಗಳೊಳಗೆ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಿಐಡಿಗೆ ವಹಿಸುವ ಪ್ರಕರಣಗಳ ದಾಖಲಾತಿ, ತನಿಖೆ, ಆರೋಪಪಟ್ಟಿ ಸಲ್ಲಿಕೆ, ವಿಚಾರಣೆಯಲ್ಲಿ ಪಾಲ್ಗೊಳ್ಳುವಿಕೆ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸೂಚನೆಗಳನ್ನು ಅವರು ನೀಡಿದ್ದಾರೆ.

ಸಾಮಾನ್ಯವಾಗಿ ಯಾವುದೇ ಪ್ರಕರಣದ ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು. ತನಿಖೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಾಕಾಶ ಬೇಕಾದರೆ ನಿರ್ದಿಷ್ಟ ವಿಭಾಗದ ಡಿಐಜಿಯ ಅನುಮತಿ ಪಡೆಯಬೇಕು. ಒಟ್ಟಾರೆ ಆರು ತಿಂಗಳ ಅವಧಿಯಲ್ಲಿ ತನಿಖೆಯನ್ನು ಮುಗಿಸಬೇಕು. ಆರು ತಿಂಗಳಿಗಿಂತ ಇನ್ನೂ ಹೆಚ್ಚಿನ ಅವಧಿ ಬೇಕಾದರೆ ಐಜಿಪಿ- ಎಡಿಜಿಪಿಯ ಗಮನಕ್ಕೆ ತರಬೇಕು. ಅವರಿಂದ ಅನುಮತಿ ಪಡೆದು (ಎರಡು ತಿಂಗಳ ಹೆಚ್ಚಿನ ಕಾಲಾವಕಾಶ) ತನಿಖೆಯನ್ನು ಪೂರ್ಣಗೊಳಿಸಬೇಕು.

ಒಂದು ವರ್ಷದ ಅವಧಿಯಲ್ಲೂ ತನಿಖೆ ಪೂರ್ಣಗೊಳ್ಳದಂತಹ ಗಂಭೀರ ಪ್ರಕರಣಗಳಿದ್ದರೆ ತನಿಖಾಧಿಕಾರಿ ವಿಷಯವನ್ನು ಡಿಜಿಪಿ ಗಮನಕ್ಕೆ ತರಬೇಕು. ಹೆಚ್ಚಿನ ಅವಧಿ ಕೋರಿಕೆಗೆ ತನಿಖಾಧಿಕಾರಿ ನೀಡಿರುವ ಕಾರಣ ಸಮಾಧಾನಕರವಾಗಿದ್ದರೆ ಅನುಮತಿ ಸಿಗುತ್ತದೆ ಎಂದು ಅವರು ಸೂಚನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಯಾವುದೇ ಪ್ರಕರಣದ ತನಿಖೆ ಅನಗತ್ಯವಾಗಿ ವಿಳಂಬವಾದರೆ ಆ ಬಗ್ಗೆ ಹಿರಿಯ ಅಧಿಕಾರಿ ವಿಚಾರಣೆ ನಡೆಸುತ್ತಾರೆ. ತನಿಖಾಧಿಕಾರಿಯ ನಿರ್ಲಕ್ಷ್ಯದಿಂದ ತನಿಖೆ ವಿಳಂಬವಾಗಿದೆ ಎಂಬ ಅಂಶ ಮನದಟ್ಟಾದರೆ ಆ ತನಿಖಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿದರಿ ಎಚ್ಚರಿಸಿದ್ದಾರೆ.

ತನಿಖೆಗೆ ಸಂಬಂಧಿಸಿದ ವಸ್ತುಗಳು, ಸಾಕ್ಷ್ಯಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಎರಡು ತಿಂಗಳಲ್ಲಿ ವರದಿ ಪಡೆದುಕೊಳ್ಳಬೇಕು. ಎರಡು ತಿಂಗಳ ನಂತರವೂ ವರದಿ ಬರದಿದ್ದರೆ ಸಂಬಂಧಿಸಿದ ಎಸ್ಪಿ ಈ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಗಮನ ಸೆಳೆಯಬೇಕು. ಪ್ರಯೋಗಾಲಯದ ವರದಿ ವಿಳಂಬವಾದರೆ ಡಿಐಜಿ, ಐಜಿಪಿ ದರ್ಜೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ತನಿಖೆಗೆ ಅಗತ್ಯ ವಿರುವ ವರದಿ ಆದಷ್ಟು ಬೇಗ ಪಡೆದುಕೊಳ್ಳಬೇಕು ಎಂದು  ಸೂಚಿಸಿದ್ದಾರೆ.

ಆರೋಪಪಟ್ಟಿಯಲ್ಲಿ ದೋಷಗಳಿರದಂತೆ ಎಚ್ಚರಿಕೆ ವಹಿಸಬೇಕೆಂದು ಅವರು ಹೇಳಿದ್ದಾರೆ. ಆರೋಪಪಟ್ಟಿ ತಯಾರಾದ ನಂತರ ಅದನ್ನು ಕಾನೂನು ಸಲಹಾ ಸಿಬ್ಬಂದಿಗೆ ತೋರಿಸಬೇಕು. ಸಿಬ್ಬಂದಿ ನೀಡುವ ಸಲಹೆಗಳನ್ನು ಪರಿಗಣಿಸಿ ಆರೋಪಪಟ್ಟಿಯಲ್ಲಿ ಅಗತ್ಯ ಬದಲಾವಣೆ ಮಾಡಿದ ನಂತರವಷ್ಟೇ ನ್ಯಾಯಾಲಯಕ್ಕೆ ಸಲ್ಲಿಸಬೇಕು.

ಪ್ರಕರಣದ ವಿಚಾರಣೆ ಆರಂಭವಾದ ನಂತರ ಅಧಿಕಾರಿಗಳು ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಸೂಕ್ತ ನೆರವು ನೀಡಿ ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅತಿ ಮುಖ್ಯ ಪ್ರಕರಣಗಳಲ್ಲಿ ಎಸ್ಪಿ ದರ್ಜೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.

`ಸಿಐಡಿಗೆ ಸರ್ಕಾರ, ಹೈಕೋರ್ಟ್ ಅಥವಾ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರಕರಣವೊಂದನ್ನು ತನಿಖೆಗೆ ವಹಿಸಿದಾಗ ನಿಗದಿತ ಕಾಲಾವಧಿಯಲ್ಲಿ ತನಿಖೆ ಪೂರ್ಣಗೊಳಿಸುವುದು ಮುಖ್ಯ. ಸಮಯ ನಿಗದಿ ಇಲ್ಲದಿದ್ದರೆ ಅನಗತ್ಯ ವಾಗಿ ವಿಳಂಬವಾಗುತ್ತದೆ.
 
ಪ್ರಕರಣದ ತನಿಖೆ ಅಚ್ಚುಕಟ್ಟಾಗಿ ಮಾಡುವುದರ ಜತೆಗೆ ಅವಧಿಯೊಳಗೆ ಪೂರ್ಣಗೊಳಿಸುವುದೂ ಮುಖ್ಯ. ಆದ್ದರಿಂದಲೇ ಕಿರಿಯ ಅಧಿಕಾರಿಗಳಿಗೆ ಲಿಖಿತ ಸೂಚನೆ ನೀಡಲಾಗಿದೆ~ ಎಂದು ಶಂಕರ ಬಿದರಿ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT