ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳಿಂದ ಕೆಲಸವನ್ನೇ ಕೊಟ್ಟಿಲ್ಲ!

ಧಾರವಾಡ ಜಿಲ್ಲೆಯಲ್ಲಿ ನರೇಗಾ ಅವ್ಯವಸ್ಥೆ, ನಿಯಮ ಪಾಲಿಸುವಲ್ಲಿ ವಿಫಲ
Last Updated 11 ಡಿಸೆಂಬರ್ 2012, 11:05 IST
ಅಕ್ಷರ ಗಾತ್ರ

ಮುಕ್ಕಲ್ (ಧಾರವಾಡ ಜಿಲ್ಲೆ): ಕೂಲಿಗೆ ಬೇಡಿಕೆ ಇಟ್ಟ 15 ದಿನಗಳಲ್ಲಿ ಗ್ರಾಮ ಪಂಚಾಯಿತಿ ಉದ್ಯೋಗ ಒದಗಿಸಬೇಕು. ಕೆಲಸ ಮಾಡಿದ ಕೂಲಿಕಾರರ ಖಾತೆಗೆ 15 ದಿನಗಳಲ್ಲೇ ಹಣ ಜಮಾ ಆಗಬೇಕು ಎಂಬುದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ರೂಪಿಸಿರುವ ನಿಯಮ.

ಆದರೆ ಈ ನಿಯಮವನ್ನು ಪಾಲಿಸುವಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಎರಡು ಗ್ರಾ.ಪಂ.ಗಳು ವಿಫಲವಾಗಿವೆ. 

ಕಲಘಟಗಿ ತಾಲ್ಲೂಕಿನ ಮುಕ್ಕಲ್ ಗ್ರಾಮದಲ್ಲಿ 31 ಜನರಿಗೆ ನೀಡಬೇಕಿದ್ದ ಕೆರೆ ಹೂಳೆತ್ತುವ ಕೆಲಸವನ್ನು ಕಳೆದ ಶನಿವಾರ (ಡಿ 8) ರಾತ್ರಿ ಜೆಸಿಬಿ ಯಂತ್ರ ಬಳಸಿ ಮುಗಿಸಿಯಾಗಿದೆ. ಈ ಬಗ್ಗೆ ಆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೂ (ಪಿಡಿಓ) ಮಾಹಿತಿ ಇಲ್ಲವಂತೆ !

ಕಳೆದ ಆಗಸ್ಟ್ 30ರಂದು ಕೆಲಸ ಕೊಡಬೇಕು ಎಂದು ತಾಯಪ್ಪ ಬೆಳಗಾವಿ, ಪರಶುರಾಮ ಮುಳ್ಳಿರವಿ, ಪ್ರಕಾಶ ಮುಳ್ಳಿರವಿ, ಯಲ್ಲವ್ವ ಹಸರಂಬಿ, ಮಹಾದೇವಿ ಬೆಳಗಾವಿ ಸೇರಿದಂತೆ 31 ಜನರು ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲಸ ಮಾತ್ರ ಸಿಗಲೇ ಇಲ್ಲ.

ಉದ್ಯೋಗ ನೀಡುವಂತೆ ಪಿಡಿಓ ಎಸ್.ಎಲ್.ಜೀವಣ್ಣವರ್ ಅವರನ್ನು ಕೇಳಿದರೆ ನಾಳೆ, ನಾಡಿದ್ದು ಎಂದು ಕಾಲ ತಳ್ಳಿದ್ದಾರೆಯೇ ಹೊರತು ಉದ್ಯೋಗ ಮಾತ್ರ ಕೊಟ್ಟಿಲ್ಲ. ಈ ಬಗ್ಗೆ ಜೀವಣ್ಣವರ್ ಅವರನ್ನು ಕೇಳಿದರೆ ಸ್ಪಷ್ಟ ಉತ್ತರ ಕೊಡಲಿಲ್ಲ.

ಜೆಸಿಬಿಯಿಂದ ಕೆರೆ ಹೂಳೆತ್ತಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಆದರೆ ಈ ಬಗ್ಗೆಯೂ ಜೀವಣ್ಣವರ್ ಅವರಲ್ಲಿ ಮಾಹಿತಿ ಸಿಗಲಿಲ್ಲ. `ಪಂಚಾಯಿತಿ ವತಿಯಿಂದ ಜೆಸಿಬಿ ಬಳಕೆ ಮಾಡಿ ಹೂಳು ತೆಗೆಯಲು ಯಾರಿಗೂ ಹೇಳಿಲ್ಲ.

ಜೆಸಿಬಿ ಮೂಲಕ ಮಾಡಿಸಿದ ಕೆಲಸಕ್ಕೆ ನರೇಗಾ ಯೋಜನೆಯಡಿ ಹಣ ಬಿಡುಗಡೆ ಮಾಡುವುದಿಲ್ಲ' ಎಂದು ಅವರು ಹೇಳಿದರು.

ದೇವಸ್ಥಾನಕ್ಕೆ ಬಳಸುವ ಉದ್ದೇಶ: ಊರಿನಲ್ಲಿ ದೇವಸ್ಥಾನ ನಿರ್ಮಿಸಲು ಬೇಕಿರುವ ಹಣವನ್ನು ಹೊಂದಿಸಿಕೊಳ್ಳಲು ಗ್ರಾಮದ ಕೆರೆಯ ಹೂಳು ತೆಗೆಯಲು ಜೆಸಿಬಿ ಬಳಸಲಾಗಿದೆ. ಆದರೆ ಈ ಕಾಮಗಾರಿಯನ್ನು ಕೂಲಿ ಕಾರ್ಮಿಕರಿಗೆ ವಹಿಸಲಾಗಿದೆ ಎಂದು ತೋರಿಸಿ ಹಣ ಬಿಡುಗಡೆ ಮಾಡಿಸಿಕೊಳ್ಳುವ ಉದ್ದೇಶವನ್ನು ಗ್ರಾಮದ ಕೆಲ ಮುಖಂಡರು ಹೊಂದಿದ್ದರು ಎಂದು ತಿಳಿದುಬಂದಿದೆ.

ಹಾಗಾಗಿ ಉದ್ಯೋಗ ಬಯಸಿದ್ದ 31 ಮಂದಿಗೆ ಕೆಲಸ ಕೊಟ್ಟಿರಲಿಲ್ಲ. ಅಲ್ಲದೇ, ಗ್ರಾಮದ ಮುಖಂಡರ ಉದ್ದೇಶಕ್ಕೆ ತಾಯಪ್ಪ ನೇತೃತ್ವದ ಗುಂಪು ಒಪ್ಪಿಗೆ ನೀಡಿರಲಿಲ್ಲ.

ಜತೆಗೆ ಗ್ರಾಮ ಪಂಚಾಯ್ತಿ ಸದಸ್ಯರನ್ನೂ ಉದ್ಯೋಗಕ್ಕೆ ಶಿಫಾರಸು ಮಾಡುವಂತೆ ಕೇಳಿರಲಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತ ನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಪಿ.ಎ. ಮೇಘಣ್ಣವರ, `ನರೇಗಾ ಯೋಜನೆಯಲ್ಲಿ ಕೂಲಿಕಾರರಿಂದಲೇ ಕೆಲಸ ಮಾಡಿಸಬೇಕೇ ಹೊರತು ಜೆಸಿಬಿಯಿಂದಲ್ಲ.

ಅಲ್ಲದೇ ಜಾಬ್ ಕಾರ್ಡ್ ಹೊಂದಿದ ಯಾರಿಗೇ ಆಗಲಿ ಕೆಲಸ ನೀಡುವುದನ್ನು ನಿರಾಕರಿಸುವಂತಿಲ್ಲ. ಘಟನೆಯ ಬಗ್ಗೆ ಸಮಗ್ರ ಪರಿಶೀಲನೆ ನಡೆಸುತ್ತೇನೆ' ಎಂದರು.

ಪಿಡಿಓ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಿದರು.
ಅದೇ ಕಲಘಟಗಿ ತಾಲ್ಲೂಕಿನ ಜಿನ್ನೂರು ಗ್ರಾ.ಪಂ. ವ್ಯಾಪ್ತಿಯ ಮಲಕನಕೊಪ್ಪ ಗ್ರಾಮದ 15 ಮಂದಿ ಕೂಲಿಕಾರರಿಗೆ ಕಳೆದ ಮೂರು ತಿಂಗಳಿಂದಲೂ ವೇತನ ಪಾವತಿಯಾಗಿಲ್ಲ.

`ಅಲ್ಲಿ ಬ್ಯಾಂಕಿಂಗ್ ಸೇವೆ ನೀಡುತ್ತಿರುವ ಕರ್ನಾಟಕ ವಿಕಾಸ ಬ್ಯಾಂಕ್ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಮುಖ್ಯ ಕಾರಣ' ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್.ಆರ್. ವೀರಕರ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT