ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಶಕ ಕಂಡ ನೈಸರ್ಗಿಕ ಹೊಲ

ಅಮೃತ ಭೂಮಿ 53
Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಸರಿ ಸುಮಾರು 30 ವರ್ಷವಾಯಿತು, ಭೂಮಿಗೆ ಹಿಡಿ ರಸಗೊಬ್ಬರ ಹಾಕಿಲ್ಲ. ಸ್ವಲ್ಪವೂ ಕೀಟನಾಶಕ ಸಿಂಪರಣೆ ಮಾಡಿಲ್ಲ. ಆದರೂ, ಸಮೃದ್ಧ ಬೆಳೆ ಬೆಳೆಯುತ್ತಿದೆ. ಗೃಹೋಪಯೋಗಕ್ಕೆ ಬೇಕಾದ ಸತ್ವಯುತ ತರಕಾರಿ, ಆಹಾರಧಾನ್ಯ ಪಡೆಯುವ ಜೊತೆಗೆ ಹೆಚ್ಚುವರಿ ಕಾಳುಕಡಿ ಮಾರಾಟದಿಂದ ಆದಾಯವೂ ಕೈ ಸೇರುತ್ತಿದೆ...’

ಶೂನ್ಯ ಬಂಡವಾಳದಿಂದ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿರುವ ಚಿಕ್ಕೋಡಿ ತಾಲ್ಲೂಕಿನ ಖಡಕಲಾಟ ಗ್ರಾಮದ ದಿವಾಕರ ಗೋವಿಂದ ಹರಿದಾಸ ಅವರ ಮಾತುಗಳಿವು. ‘ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯಲ್ಲಿ ಲಾಭ ನಷ್ಟದ ಪ್ರಶ್ನೆಯೇ ಇಲ್ಲ. ಬಂದದ್ದೆಲ್ಲ ಆದಾಯವೇ’ ಎನ್ನುವುದು 89ರ ವರ್ಷದ ಗೋವಿಂದ ಅವರ ಮಾತು.

ಇವರು ತಮ್ಮ ಹೊಲದಲ್ಲಿ 1980ರಿಂದ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು ಬಂದಿದ್ದಾರೆ. ಅಲ್ಪ ನೀರಿನಲ್ಲೂ ಬಂಪರ್‌ ಬೆಳೆ ಬೆಳೆಯುತ್ತಿದ್ದಾರೆ. 1960ರಲ್ಲಿ ಬರ ಪೀಡಿತ ಇಸ್ರೇಲ್‌ಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿದರು. ನೈಸರ್ಗಿಕ ಕೃಷಿ ಕುರಿತ ಪುಸ್ತಕಗಳನ್ನು ಓದಿದರು.

1980ರಲ್ಲಿ ಮಧ್ಯಪ್ರದೇಶದ ರಸೂರಿಯಾದಲ್ಲಿನ ನೈಸರ್ಗಿಕ ಕೃಷಿ ಕೇಂದ್ರಕ್ಕೆ ಭೇಟಿ ನೀಡಿದರು. ನಂತರ ತಮ್ಮ 10 ಗುಂಟೆ ಹೊಲದಲ್ಲಿ ನೈಸರ್ಗಿಕ ಕೃಷಿ ಪ್ರಯೋಗ ಆರಂಭಿಸಿದರು. ಕ್ರಮೇಣ ಅದರಲ್ಲಿ ನಿರೀಕ್ಷಿತ ಇಳುವರಿ ಬರಲಾರಂಭಿಸಿದಾಗ ಇಡೀ ಭೂಮಿಯಲ್ಲಿ ಇದೇ ಪದ್ಧತಿಯನ್ನು ಮುಂದುವರಿಸಿದರು. ಸದ್ಯ ಮೂರು ಎಕರೆ ಭೂಮಿಯಲ್ಲಿ ನೈಸರ್ಗಿಕ ಕೃಷಿ ಮೂಲಕ ಸೋಯಾ, ಅವರೆ, ಬಿಳಿಜೋಳ ಹಾಗೂ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮೊದಲಾದ ಬೆಳೆಗಳನ್ನು ಬೆಳೆದಿದ್ದಾರೆ.

ರಾಸಾಯನಿಕ ಎಂಬ ಭ್ರಮೆ
‘ಅತಿಯಾಗಿ ರಾಸಾಯನಿಕ ಗೊಬ್ಬರ, ನೀರು, ಕಳೆನಾಶಕ, ಕೀಟನಾಶಕ ನೀಡಿ ಬೆಳೆಯುವ ಬೆಳೆಯಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂಬುದು ಭ್ರಮೆ. ಇದಕ್ಕೆ ಉತ್ಪಾದನಾ ಖರ್ಚೂ ಅಧಿಕವಾಗಿರುತ್ತದೆ. ಅಲ್ಲದೇ ಕ್ರಮೇಣ ಇಳುವರಿ ಕುಗ್ಗುತ್ತಾ ಹೋಗುತ್ತದೆ. ಅತಿಯಾದ ನೀರಿನ ಬಳಕೆಯಿಂದ ಭೂಮಿ ಸವುಳು–ಜವುಳಾಗಿ ಕೃಷಿಗೆ ಅಯೋಗ್ಯವಾಗಿ ಪರಿಣಮಿಸುತ್ತದೆ. ಈ ಹಿನ್ನೆಲೆಯಲ್ಲಿ ಖುಷ್ಕಿ ಕೃಷಿಯೇ ಶಾಶ್ವತ’ ಎಂಬುದು ದಿವಾಕರ ಅವರ ಪ್ರತಿಪಾದನೆ.

‘ಪದೇ ಪದೇ ಭೂಮಿ ಹದ ಮಾಡುವ ಹಾಗಿಲ್ಲ. ಕಳೆ ಕೀಳುವುದಿಲ್ಲ, ಕಿತ್ತರೂ ಮುಚ್ಚಿಗೆಯಾಗಿ ಬಳಸಿ ಬೆಳೆಗೆ ಗೊಬ್ಬರವಾಗಿ ನೀಡಬೇಕು. ಕೀಟನಾಶಕದ ಖರ್ಚು ಇಲ್ಲವೇ ಇಲ್ಲ. ಇವೇ ನೈಸರ್ಗಿಕ ಕೃಷಿಯ ಮೂಲಮಂತ್ರ. ಈ ಮುಂಚೆ ಬೆಳೆದಿದ್ದ ಎಲೆದೋಟಕ್ಕೆ ನುಸಿ ಬಾಧೆ ತಗುಲಿತ್ತು. ನೆರೆಹೊರೆಯ ಕೃಷಿಕರು ಕೀಟನಾಶಕ ಸಿಂಪರಣೆ ಮಾಡುವ ಸಲಹೆ ನೀಡಿದರು. ಆದರೆ, ನಾನು ಬೇವಿನ ಎಲೆಯ ರಸ ಮತ್ತು ಹಸುವಿನ ಮೂತ್ರ ಮಿಶ್ರಣ ಮಾಡಿ ಎಲೆಬಳ್ಳಿಗೆ ಸಿಂಪರಣೆ ಮಾಡಿದೆ. ನುಸಿಪೀಡೆ ಹೊರಟೇ ಹೋಯಿತು’ ಎಂದು ದಿವಾಕರ ಅನುಭವ ಹಂಚಿಕೊಳ್ಳುತ್ತಾರೆ.

‘ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ರೈತ ಸಾಮಾನ್ಯವಾಗಿ ನಾಟಿ ಹಸುಗಳನ್ನು ಸಾಕಬೇಕು. ಇದರಿಂದ ಭೂಮಿಗೆ ಗೊಬ್ಬರ ಸಿಗುವ ಜೊತೆಗೆ ಹಾಲು ಹೈನಿನ ಉತ್ಪನ್ನವೂ ಕೈಸೇರುತ್ತದೆ. ಮನೆಯಲ್ಲಿ ಮಕ್ಕಳುಮರಿ ಹಾಲುಂಡು ಸದೃಢವಾಗಿ ಬೆಳೆಯುತ್ತಾರೆ. ಮಾರುಕಟ್ಟೆಯಲ್ಲಿ ದುಡ್ಡು ಕೊಟ್ಟು ತರಕಾರಿ, ಆಹಾರ ಧಾನ್ಯದ ರೂಪದಲ್ಲಿ ನಾವು ವಿಷ ಖರೀದಿಸುತ್ತಿದ್ದೇವೆ.

ನೈಸರ್ಗಿಕ ಕೃಷಿಯಿಂದ ಬೆಳೆದ ಕೃಷಿ ಉತ್ಪನ್ನಗಳಲ್ಲಿ ಸತ್ವವಿರುತ್ತದೆ. ಅದನ್ನು ಸೇವಿಸುವ ವ್ಯಕ್ತಿಯೂ ರೋಗಮುಕ್ತನಾಗಿರುತ್ತಾನೆ.  ಕೇವಲ ಭೂಮಿಯ ಫಲವತ್ತತೆ ಕಾಪಾಡುವಲ್ಲಿ ಮಾತ್ರ ನೈಸರ್ಗಿಕ ಕೃಷಿ ಸಾಧನವಲ್ಲ, ಬಲಿಷ್ಠ ಭಾರತ ನಿರ್ಮಾಣದ ನಿಟ್ಟಿನಲ್ಲೂ ಪೂರಕವಾಗಿದೆ’ ಎನ್ನುತ್ತಾರವರು.

‘ಕಾಡು ಇದ್ದರೆ ನಾಡು, ಇಲ್ಲದಿದ್ದರೆ ಸುಡಗಾಡು’ ಎಂಬುದನ್ನು ಮನಗಂಡಿರುವ ದಿವಾಕರ ಅವರು, ತಮ್ಮ ಹೊಲದ ಬದುವಿನಲ್ಲಿ ಜೀವಂತ ಬೇಲಿಯ ತೆರನಾಗಿ ಸುಮಾರು 50 ಜಾತಿಯ ವಿವಿಧ ಗಿಡಮರಗಳನ್ನು ಬೆಳೆಸಿದ್ದಾರೆ. ಮನೆಯ ಸುತ್ತಮುತ್ತ ತುಳಸಿ ಗಿಡಗಳನ್ನು ನೆಟ್ಟಿದ್ದಾರೆ. ಇದರಿಂದ ವಾತಾವರಣ ಶುದ್ಧಗೊಳ್ಳುತ್ತದೆ.

ಒಟ್ಟಿನಲ್ಲಿ ಭವಿಷ್ಯದಲ್ಲಿ ಸದೃಢ ಮಾನವ ಸಂಪನ್ಮೂಲ ಮತ್ತು ಭೂಮಿಯ ಫಲವತ್ತತೆ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ನೈಸರ್ಗಿಕ ಕೃಷಿ ಅನಿವಾರ್ಯವಾಗಿದೆ ಎಂಬುದು ದಿವಾಕರ ಹರಿದಾಸ ಅವರ ಆಶಯ. ದಿವಾಕರ ಅವರ ಬಳಿ ದೂರವಾಣಿ ಸಂಪರ್ಕ ಇಲ್ಲದ ಕಾರಣ ಅವರನ್ನು ಸಂಪರ್ಕಿಸುವವರು ಅವರ ಮನೆಗೆ ಹೋಗಬಹುದು. ಅವರ ವಿಳಾಸ: ದಿವಾಕರ ಹರಿದಾಸ. ಅಂಚೆ : ಖಡಕಲಾಟ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT