ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನ ಮರದಲ್ಲೇ ಕೂರಿಸಿದ ಹುಲಿ ಹಿಂಡು!

ಮರಿ ಕೊಂದ ಕಾಡುಗಳ್ಳರ ಮೇಲೆ ಸೇಡು
Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಜಕಾರ್ತ (ಐಎಎನ್‌ಎಸ್): ಮನುಷ್ಯ ಮತ್ತು ಪ್ರಾಣಿ ನಡುವೆ ಎಷ್ಟೇ ವ್ಯತ್ಯಾಸಗಳಿದ್ದರೂ `ಪ್ರತೀಕಾರ'ದ ವಿಷಯದಲ್ಲಿ ಮಾತ್ರ ಇಬ್ಬರಲ್ಲೂ ಎಲ್ಲೋ ಒಂದು ರೀತಿಯ ಸಾಮ್ಯತೆ ಇರಬಹುದೇನೊ. ಹೌದು, ಈ ಮಾತನ್ನು ನಿರೂಪಿಸುವಂತಹ ಘಟನೆಯೊಂದು ಇಂಡೊನೇಷ್ಯಾದಲ್ಲಿ ನಡೆದಿದೆ.

ಇಲ್ಲಿನ ದಟ್ಟ ಅರಣ್ಯದಲ್ಲಿ ಆರು ಜನರ ತಂಡವೊಂದು ಹುಲಿ ಮರಿಯನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಹುಲಿ ಹಿಂಡೊಂದು, ತಂಡದ ಒಬ್ಬನನ್ನು ಕೊಂದು, ಉಳಿದ ಐವರನ್ನು ಮೂರು ದಿನ ಮರದ ಮೇಲೆ ಕಳೆಯುವಂತೆ ಮಾಡಿದೆ.ಸುಮಾತ್ರ ದ್ವೀಪದ ಎಕಿಹ ಪ್ರಾಂತ್ಯದ ಸಿಂಪಾಂಗ್ ಕಿರಿಗೆ ಸೇರಿದ ಆರು ಜನರ ತಂಡವೊಂದು, ಇಲ್ಲಿನ ಗನ್ನುಂಗ್ ಲಿಯೊಸರ್ ರಾಷ್ಟ್ರೀಯ ಉದ್ಯಾನದಲ್ಲಿ ಸುಗಂಧ ದ್ರವ್ಯದ ಕಟ್ಟಿಗೆ ಸಂಗ್ರಹಿಸಲು ಗುರುವಾರ ಕಾಡಿಗೆ ತೆರಳಿತ್ತು.

ಈ ವೇಳೆ ಆಕಸ್ಮಿಕವಾಗಿ ಎದುರಾದ ಹುಲಿಯ ಮರಿಯೊಂದನ್ನು ತಂಡದ ಸದಸ್ಯರು ಕೊಂದುಹಾಕಿದರು. ಮನು ಷ್ಯರ ಈ ಕೃತ್ಯ ನೋಡಿದ ಪಕ್ಕದಲ್ಲೇ ಇದ್ದ ಹುಲಿಗಳ  ಹಿಂಡು ಕೂಡಲೇ ಈ ಜನರ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ  ಹುಲಿಗಳ ಬಾಯಿಗೆ ಸಿಲುಕಿಕೊಂಡು ಅಸುನೀಗಿದರೆ, ಉಳಿದ ಐವರು ಬದುಕಿದೆಯಾ ಬಡ ಜೀವವೇ ಎನ್ನುತ್ತಾ ಸಮೀಪದಲ್ಲೇ ಇದ್ದ ಮರ ಏರಿ ಬಚಾವಾದರು.
ಆದರೂ ಹುಲಿಗಳ ಕೋಪ ತಣ್ಣಗಾಗಲಿಲ್ಲ. ತಮ್ಮ ಮರಿ ಕೊಂದವರ ಮೇಲೆ ಸೇಡು ತೀರಿಸಿಕೊಳ್ಳಲು ಅವು ಆ ಜಾಗ ಬಿಟ್ಟು ಕದಲಲಿಲ್ಲ. ಸತತ ಮೂರು ದಿನದವರೆಗೂ  ಮನುಷ್ಯರಿದ್ದ ಮರದ ಕೆಳಗೆ ಕಾದು ಕುಳಿತ್ತಿದ್ದವು.

ನಂತರ ಈ ಸುದ್ದಿ ತಿಳಿದುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು 30  ಕಾರ್ಯಕರ್ತರ ಸಹಾಯದಿಂದ ಕೊನೆಗೂ ಹುಲಿಗಳನ್ನು ಮರದ ಬಳಿಯಿಂದ ಓಡಿಸಿ, ಮೂರು ದಿನ ಮರದ ಮೇಲೆ ಕಾಲ ಕಳೆದವರನ್ನು ರಕ್ಷಿಸಿದರು. `ಸುಮಾತ್ರ ದ್ವೀಪದ ವಲಯದಲ್ಲಿ ಇತ್ತೀಚೆಗೆ ಮನುಷ್ಯರ ಮೇಲೆ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗಿದ್ದು ಅರಣ್ಯ ಪ್ರದೇಶ ನಾಶವಾಗುತ್ತಿರುವುದು ಹಾಗೂ ಅವುಗಳಿಗೆ ತೀವ್ರ ಆಹಾರದ ಕೊರತೆಯಾಗಿರುವುದು ಕಾರಣ ಎನ್ನಲಾಗಿದೆ.

`ಒಂದು ಅಂದಾಜಿನ ಪ್ರಕಾರ ಇಲ್ಲಿನ ಗನ್ನುಂಗ್ ಲಿಯೊಸರ್ ರಾಷ್ಟ್ರೀಯ ಉದ್ಯಾನದಲ್ಲಿ 100ಕ್ಕೂ ಹೆಚ್ಚು ಹುಲಿಗಳು ಇವೆ' ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT