ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನಗಳ ಕೃಷಿಮೇಳಕ್ಕೆಅದ್ದೂರಿ ತೆರೆ

Last Updated 7 ಫೆಬ್ರುವರಿ 2012, 8:50 IST
ಅಕ್ಷರ ಗಾತ್ರ

ಚಿಕ್ಕೋಡಿ: ಇಲ್ಲಿನ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು ಕೃಷಿ ಇಲಾಖೆ ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಮಟ್ಟದ ಭವ್ಯ ಕೃಷಿ ಮೇಳ ಲಕ್ಷಾಂತರ ಜನ ರೈತರು ಪಾಲ್ಗೂಳ್ಳುವ ಮೂಲಕ ಸೋಮವಾರ ಅದ್ದೂರಿಯಾಗಿ ಸಮಾರೋಪಗೊಂಡಿದ್ದು, ಕೃಷಿಕರಲ್ಲಿ ಪ್ರಗತಿಪರ ಚಿಂತನೆಗಳಿಗೆ ಗ್ರಾಸ ಒದಗಿಸಿದೆ.

ಮಾರ್ಗದರ್ಶಿ: ರೈತರಿಂದ ರೈತರಿಗಾಗಿ ಎಂಬ ವಿಶಿಷ್ಟ ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿಕರಿಗೆ ಸಂಬಂಧಿಸಿದ ಹತ್ತು ಹಲವು ಸಮಸ್ಯೆಗಳ ಕುರಿತು ಮೇಳದಲ್ಲಿ ಚಿಂತನ ಮಂಥನ ನಡೆದಿದ್ದು, ರೈತರು ತಮ್ಮನ್ನು ಕಾಡುತ್ತಿದ್ದ ಯಕ್ಷಪ್ರಶ್ನೆಗಳಿಗೆ ತಜ್ಞರಿಂದ ಮತ್ತು ಕೃಷಿ ಸಾಧಕರಿಂದ ಉತ್ತರ ಪಡೆದುಕೊಂಡಿದ್ದಾರೆ. ವಿಶೇಷವಾಗಿ ಅಥಣಿಯ ಹುಲ್ಯಾಳದ ರುದ್ರಪ್ಪಾ ಜುಲುಪಿ ಅವರ ಅರಿಶಿಣ ಬೆಳೆಯ ಯಶೋಗಾಥೆ, ಮಹಾದೇವ ತಾರದಾಳೆ, ಶೇಗುಣಸಿಯ ಕಲ್ಮೇಶ ಯಲಡಗಿ, ಜಮಖಂಡಿಯ ರಂಗಪ್ಪ ಬುಡ್ಡಿ ಅವರು ಸಾವಯವ ಕೃಷಿ ಕುರಿತು ನೀಡಿದ ಮಾರ್ಗದರ್ಶನ ಕೃಷಿಕರಿಗೆ ಪ್ರೇರಣೆಯಾದವು.

ಕೃಷಿ ವಿಜ್ಞಾನಿ ಡಾ.ದೊಡ್ಡಮನಿ, ಮಾಂಜರಿಯ ಬಾಳಗೌಡ ಪಾಟೀಲ, ಡಾ.ವಿ.ಎಸ್.ಕೋರಿಕಂಠಿಮಠ, ಅಂಜನಪ್ಪ, ಡಾ.ಎ.ಕೆ.ರೋಖಡೆ, ಡಾ.ನಿರ್ಮಲಾ ಏಣಗಿ, ಡಾ.ಪುಷ್ಪಾ ಭಾರತಿ ಅವರು ನೀಡಿದ ಉಪನ್ಯಾಸಗಳಿಂದ ಸವಳು ಜವುಳು ಭೂಮಿ ಪುನಃ ಫಲವತ್ತತೆ, ಒಣಭೂಮಿಯಲ್ಲಿ  ಹನಿ ನೀರಾವರಿ, ಒಣ ಭೂಮಿಯಲ್ಲಿ ತೋಟಗಾರಿಕೆ ಮುಂತಾದ ವಿಷಯಗಳ ಕುರಿತು ರೈತರಲ್ಲಿ ತಿಳಿವಳಿಕೆ ಮೂಡಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹತ್ತು ಹಲವು ವಿಷಯಗಳ ಕುರಿತು ಮೇಳದಲ್ಲಿ ಗೋಷ್ಠಿಗಳು ನಡೆದವು.

ಭರ್ಜರಿ ವ್ಯಾಪಾರ: ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಂದ ನಿರೀಕ್ಷೆಗೂ ಮೀರಿ 3 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನಸಾಗರದಿಂದ ಮೇಳದಲ್ಲಿ ಪಾಲ್ಗೂಂಡಿದ್ದ ವರ್ತಕರಿಗೆ ಸುಗ್ಗಿಯೋ ಸುಗ್ಗಿ. ತಿಂಡಿ ತಿನಸು, ಚಹಾ, ತಂಪುಪಾನೀಯ, ಆಟಿಕೆ ಸಾಮಗ್ರಿಗಳ ಭರ್ಜರಿ ವ್ಯಾಪಾರ ನಡೆಯಿತು. ಸ್ವಸಹಾಯ ಸಂಘಗಳ ಸದಸ್ಯೆಯರು ತಯಾರಿಸಿದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಬಗೆಬಗೆಯ ಚಟ್ನಿಗಳ ಖರೀದಿಗೆ ಜನ ಮುಗಿ ಬಿದ್ದಿದ್ದರು. ವಿವಿಧ ಕಂಪೆನಿಗಳ ಕೃಷಿ ಉಪಕರಣ, ಗೃಹೋಪಯೋಗಿ ವಸ್ತುಗಳು, ಬಟ್ಟೆ ಬರೆ ಸೇರಿದಂತೆ ಮೂರು ದಿನಗಳ ಅವಧಿಯಲ್ಲಿ 1.5 ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ಅಂದಾಜಿಸಲಾಗಿದೆ.

ಪಲ್ಲವಿಸಿದ ಕೃಷಿ ಸಂಸ್ಕೃತಿ: ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವೈಪರೀತ್ಯ ಮುಂತಾದ ನಿಸರ್ಗ ನಿರ್ಮಿತ ಸಮಸ್ಯೆಗಳ ಜೊತೆಗೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ, ದರಗಳಲ್ಲಿ ಏರಿಳಿತದಂತಹ ಸವಾಲುಗಳನ್ನೇ ಎದುರಿಸುತ್ತಲೇ ರಟ್ಟೆಯ ಕಸುವನ್ನೇ ನಂಬಿ ವರ್ಷವಿಡಿ ಹೊಲಗದ್ದೆಗಳಲ್ಲಿ ವರ್ಷವಿಡೀ ಜೀವ ತೇಯುವ ಕೃಷಿಕನ ಬದುಕಿಗೆ ಕೃಷಿ ಮೇಳ ತೀರ ಹತ್ತಿರವಾಗಿತ್ತು.
 
ಮೇಳದಲ್ಲಿ ಜನಪದ ಕಲೆ ಮತ್ತು ಕ್ರೀಡೆಗಳ ಸಹಭಾಗಿತ್ವ,  ಜಾನುವಾರುಗಳ ಪ್ರದರ್ಶನ ಮುಂತಾದ ಆಯಾಮಗಳು ಕೃಷಿ ಸಂಸ್ಕೃತಿಯನ್ನು ಅನಾವರಣಗೊಳಿಸಿದವು.

ಪ್ರೇರಣೆ: ಪುಣೆ, ಬೆಂಗಳೂರು ಮತ್ತು ಧಾರವಾಡಗಳಂತಹ ನಗರ ಪ್ರದೇಶಗಳಿಗೆ ಸೀಮಿತವಾಗದಿದ್ದ ಕೃಷಿ ಮೇಳವನ್ನು ಈ ಭಾಗದ ರೈತರ ಮನೆಯಂಗಳದಲ್ಲಿ ಏರ್ಪಡಿಸುವ ಮೂಲಕ ಕೃಷಿಕ ಮತ್ತು ಕೃಷಿ ರಂಗದ ಸಮಗ್ರ ಅಭಿವೃದ್ಧಿಗೆ ಪೂರಕವಾದ ರಚನಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಉದ್ದೇಶ ಸಫಲಗೊಂಡಿದೆ.
 
ಮೇಳಕ್ಕೆ ದೊರೆತಿರುವ ಅಭೂತಪೂರ್ವ ಸ್ಪಂದನೆಯಿಂದ ಸಂಘಟಕರಲ್ಲಿ ಸಂತ್ರಪ್ತಿ ಮೂಡಿದ್ದು, ಮುಂಬರುವ ವರ್ಷಗಳಲ್ಲಿ ಇನ್ನೂ ಅದ್ದೂರಿಯಾಗಿ ಮೇಳ ಸಂಘಟಿಸಲು ಸ್ಫೂರ್ತಿ ದೊರಕಿದೆ ಎನ್ನುತ್ತಾರೆ ಕಾರ್ಖಾನೆ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮತ್ತು ನಿರ್ದೇಶಕ ಅಮೀತ ಕೋರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT