ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷಗಳಲ್ಲಿ ಕೇವಲ 206 ಪ್ರಕರಣ ವಿಲೇವಾರಿ

ಮಂದಗತಿಯಲ್ಲಿ ಸಾಗಿದ ಮಕ್ಕಳ ಹಕ್ಕು ಉಲ್ಲಂಘನೆ ಪ್ರಕರಣಗಳ ವಿಚಾರಣೆ
Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ವಿಚಾರಣೆ ಮಂದಗತಿಯಲ್ಲಿ ಸಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕೇವಲ 206 ಪ್ರಕರಣಗಳು ವಿಲೇವಾರಿ ಆಗಿವೆ.

ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಮತ್ತು ಅವರ ಹಕ್ಕುಗಳ ರಕ್ಷಣೆಗೆ 2009ರಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಸ್ತಿತ್ವಕ್ಕೆ ಬಂದಿದೆ. ಮೂರು ವರ್ಷಗಳ ಅವಧಿಯಲ್ಲಿ ದೌರ್ಜನ್ಯ ಮತ್ತು ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಒಟ್ಟು 1,204 ದೂರುಗಳು ಸಲ್ಲಿಕೆಯಾಗಿವೆ. ಆದರೆ, ಆಯೋಗವು ವಿಲೇವಾರಿ ಮಾಡಿರುವ ಪ್ರಕರಣಗಳ ಸಂಖ್ಯೆ 206 ಮಾತ್ರ.

`ಸಲ್ಲಿಕೆಯಾಗಿರುವ ಒಟ್ಟು ದೂರುಗಳ ಪೈಕಿ ಶೇಕಡ 17ರಷ್ಟು ಪ್ರಕರಣಗಳು ಇತ್ಯರ್ಥವಾಗಿವೆ. 741 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ವಿವಿಧ ಇಲಾಖೆಗಳು ಈವರೆಗೂ ವರದಿಯನ್ನೇ ನೀಡಿಲ್ಲ. ಇದರಿಂದಾಗಿ ಈ ಪ್ರಕರಣಗಳ ವಿಲೇವಾರಿ ಆಗಿಲ್ಲ. ಎರಡು ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿದೆ. ನಮ್ಮ ಮುಂದೆ 255 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ' ಎಂದು ಆಯೋಗದ ಅಧ್ಯಕ್ಷ ಎಚ್.ಆರ್. ಉಮೇಶ್ ಆರಾಧ್ಯ `ಪ್ರಜಾವಾಣಿ'ಗೆ ತಿಳಿಸಿದರು.

`ಆಯೋಗವು ಪೂರ್ಣಾವಧಿಯ ಸದಸ್ಯರು, ಸಿಬ್ಬಂದಿ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಯೋಗದ ಕಚೇರಿ ಇರುವುದು ಬೆಂಗಳೂರಿನಲ್ಲಿ. ಆದರೆ, ರಾಜ್ಯದ ಯಾವುದೇ ಭಾಗದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ, ದೂರು ನೀಡುವುದಕ್ಕೆ ಬೆಂಗಳೂರಿಗೆ ಬರುವುದು ಅವರಿಗೆ ಕಷ್ಟ. ಇದರಿಂದಾಗಿ ತಕ್ಷಣವೇ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿಯೂ ಘಟಕಗಳನ್ನು ಸ್ಥಾಪಿಸುವುದರ ಜೊತೆಗೆ ಸಿಬ್ಬಂದಿ ಸಂಖ್ಯೆ, ಆಯೋಗಕ್ಕೆ ನೀಡುವ ಅನುದಾನ ಹೆಚ್ಚಿಸಬೇಕು. ಈ ಸಂಬಂಧ ಸರ್ಕಾರಕ್ಕೆ ಮನವಿ ಮಾಡಲಾಗಿದೆ' ಎಂದು ಅವರು ತಿಳಿಸಿದರು.

`ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇರುವ ಬಗ್ಗೆ ಬಹಳಷ್ಟು ಮಂದಿಗೆ ಮಾಹಿತಿಯೇ ಇಲ್ಲ. ಹೀಗಾಗಿ ಜನರಲ್ಲಿ ತಿಳಿವಳಿಕೆ ಮೂಡಿಸಲು ಭಿತ್ತಿಪತ್ರ, ಕಿರುಹೊತ್ತಿಗೆ ಮುದ್ರಿಸಿ ಹಂಚುವ ಕಾರ್ಯಕ್ಕೆ ಆಯೋಗ ಚಾಲನೆ ನೀಡಿದೆ. ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ಕಾರ್ಯ ಪೂರ್ಣಗೊಂಡಿದೆ' ಎಂದರು.
`ಆಯೋಗವು ಶಿಫಾರಸು ಮಾಡುವ ಪ್ರಕರಣಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ಆಯೋಗಕ್ಕೆ ಸಹಕಾರ ನೀಡಬೇಕು' ಎಂದ ಅವರು, `ಪ್ರಸಕ್ತ ಸಾಲಿನಲ್ಲಿ 3 ಕೋಟಿ ರೂಪಾಯಿ ಮಂಜೂರಾಗಿದೆ. 75 ಲಕ್ಷ ಬಿಡುಗಡೆಯಾಗಿದೆ' ಎಂದರು.

`ಹಲ್ಲು ಕಿತ್ತ ಹಾವು': `ಆಯೋಗಕ್ಕೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಇಲ್ಲವೇ ಇಲಾಖೆಗೆ ಶಿಫಾರಸು ಮಾಡುವ ಅಧಿಕಾರ ಇದೆಯೇ ಹೊರತು, ಶಿಕ್ಷಿಸುವ ಅಧಿಕಾರ ಇಲ್ಲ. ಹೀಗಾಗಿ ಆಯೋಗವು ಹಲ್ಲು ಕಿತ್ತ ಹಾವಿನಂತಿದೆ' ಎಂದು ಆಯೋಗದ ಮಾಜಿ ಸದಸ್ಯ ಡಾ.ವಿ.ಪಿ.ನಿರಂಜನಾರಾಧ್ಯ ದೂರಿದರು.

`ಮಕ್ಕಳ ಹಕ್ಕುಗಳ ರಕ್ಷಣೆಯ ಜತೆಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾಗುವ ದೂರುಗಳ ವಿಚಾರಣೆ ನಡೆಸುವ ಹೊಣೆಗಾರಿಕೆಯನ್ನೂ ಆಯೋಗಕ್ಕೆ ನೀಡಲಾಗಿದೆ. ಆದರೆ, ಅಧ್ಯಕ್ಷರನ್ನು ಹೊರತುಪಡಿಸಿ ಪೂರ್ಣಾವಧಿಯಾಗಿ ಕೆಲಸ ನಿರ್ವಹಿಸುವ ಸದಸ್ಯರೇ ಆಯೋಗದಲ್ಲಿ ಇಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಯೋಗದ ರಚನೆಯಿಂದ ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯವಿಲ್ಲ. ಗ್ರಾ. ಪಂ. ಅಧಿಕಾರ ನೀಡಿದಾಗ ಮಾತ್ರವೇ ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯ ಪರಿಣಾಮಕಾರಿಯಾಗಲು ಸಾಧ್ಯ ಎನ್ನುತ್ತಾರೆ ಸಿಡಬ್ಲ್ಯೂಸಿ  ಸಂಸ್ಥೆಯ ಅಭಿವೃದ್ಧಿ ನಿರ್ದೇಶಕಿ ನಂದನಾ ರೆಡ್ಡಿ.

ವೆಬ್‌ಸೈಟ್
ದೌರ್ಜನ್ಯಕ್ಕೆ ಒಳಗಾದ ಮಕ್ಕಳು ದೂರು ದಾಖಲಿಸಲು ಅನುಕೂಲವಾಗುವಂತೆ ಶೀಘ್ರದಲ್ಲಿಯೇ ವೆಬ್‌ಸೈಟ್ ಆರಂಭಿಸಲಾಗುವುದು. ಇದರಿಂದ ಆಯೋಗದ ಕಾರ್ಯಕ್ಷಮತೆ ಹೆಚ್ಚಿಸಲು ಸಹಾಯ ಆಗಲಿದೆ ಎಂದು ಉಮೇಶ್ ಆರಾಧ್ಯ ತಿಳಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT