ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಹೊಸ ಠಾಣೆ, ವಸತಿ ಗೃಹ ನಿರ್ಮಾಣಕ್ಕೆ ಪ್ರಸ್ತಾವ

Last Updated 6 ಜನವರಿ 2012, 9:40 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಉಪವಿಭಾಗಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಹುದ್ದೆ ಮಂಜೂರಾತಿ ಸೇರಿದಂತೆ ಹೊಸ ಪೊಲೀಸ್ ಠಾಣೆಗಳನ್ನು ಆರಂಭಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ್ ಪಾಟೀಲ ತಿಳಿಸಿದರು.

ಚಿಕ್ಕೋಡಿ ಗ್ರಾಮೀಣ, ಹಾರೂಗೇರಿಯಲ್ಲಿ ಹೊಸ ಠಾಣೆ, ಅಥಣಿಯಲ್ಲಿ ಸಂಚಾರಿ ಠಾಣೆ ಆರಂಭಿಸಬೇಕು. ಯಕ್ಸಂಬಾ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಕಿತ್ತೂರಿನ ರಾಣಿ ಚನ್ನಮ್ಮ ಬಾಲಕಿಯರ ವಸತಿ ನಿಲಯದಲ್ಲಿ ಹೊರ ಠಾಣೆ ಆರಂಭಿಸಬೇಕು ಎಂದು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಗುರುವಾರ ಸುದ್ದಿಗಾರರಿಗೆ ಅವರು ತಿಳಿಸಿದರು.

`ಯರಗಟ್ಟಿ, ಮುನವಳ್ಳಿ ಹಾಗೂ ಪಾಶ್ಚಾಪುರ ಹೊರ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಹಾಗೂ ನಗರದ ಮಾಳಮಾರುತಿ ಮತ್ತು ಎಪಿಎಂಸಿ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಿ ಪೊಲೀಸ್ ಇನ್‌ಸ್ಪೆಕ್ಟರ್ ಹುದ್ದೆ ಮಂಜೂರು ಮಾಡಬೇಕೆಂದು ಕೋರಲಾಗಿದೆ~ ಎಂದು ಅವರು ಹೇಳಿದರು.

`ರಾಜ್ಯದಲ್ಲಿಯೇ ಹೆಚ್ಚು ಠಾಣೆಗಳು ಬೆಳಗಾವಿ ಜಿಲ್ಲೆಯಲ್ಲಿವೆ. ಆದರೆ ಜನಸಂಖ್ಯೆ ಜಾಸ್ತಿ ಇರುವುದರಿಂದ ಮತ್ತಷ್ಟು ಠಾಣೆಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಇಲಾಖೆಯನ್ನು ಜನಸ್ನೇಹಿ ಮಾಡುವುದಕ್ಕಾಗಿ ಜನತಾ ದರ್ಶನ ಕಾರ್ಯಕ್ರಮ, ಟ್ರಾಫಿಕ್ ಫೇಸ್‌ಬುಕ್ ಹಾಗೂ ಸ್ಟುಡೆಂಟ್ ಅಸೋಸಿಯೇಶನ್ ಫಾರ್ ರೋಡ್ ಸೇಫ್ಟಿ ರಚನೆ ಮಾಡಲಾಗಿದೆ~ ಎಂದು ಅವರು ವಿವರಿಸಿದರು.

`2011ನೆಯ ಸಾಲಿನಲ್ಲಿ 127 ಕೊಲೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 72 ಪ್ರಕರಣದ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದ್ದು,  ಪಿ.ಎಂ. ಹಾಗೂ ಎಫ್‌ಎಸ್‌ಎಲ್ ವರದಿ ಬರಬೇಕಾಗಿದೆ~ ಎಂದು ಅವರು ತಿಳಿಸಿದರು.

`2010ರಲ್ಲಿ 6 ಕೋಟಿ ರೂಪಾಯಿ ಮೌಲ್ಯದ ಸ್ವತ್ತುಗಳ ಕಳ್ಳತನವಾಗಿತ್ತು. 2011ರಲ್ಲಿ 4.74 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಕಳ್ಳತನವಾಗಿದೆ. 3.86 ಕೋಟಿ ರೂಪಾಯಿ ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಮುಖ ಗ್ಯಾಂಗ್‌ಗಳನ್ನು ಬಂಧಿಸಿರುವುದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ~ ಎಂದು ಹೇಳಿದರು.

`ಸಂಚಾರಿ ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, 75,115 ಪ್ರಕರಣಗಳನ್ನು ದಾಖಲಿಸಿಕೊಂಡು 1,22,90,400 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದ ಮೂವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ~ ಎಂದರು.

`ಪೊಲೀಸ್ ಸಿಬ್ಬಂದಿ ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕಾಗಿ 2,64,500 ರೂಪಾಯಿ, ವೈದ್ಯಕೀಯ ಉಪಚಾರಕ್ಕಾಗಿ 99,487 ರೂಪಾಯಿ ನೀಡಲಾಗಿದೆ. 2011ರಲ್ಲಿ ಪೊಲೀಸ್ ಸಿಬ್ಬಂದಿ ವಸತಿಗೃಹ ದುರಸ್ತಿಗಾಗಿ 1.25 ಕೋಟಿ ರೂ ವೆಚ್ಚ ಮಾಡಲಾಗಿದೆ. ವಸತಿ ಕಟ್ಟಡಗಳ ಕಂಪೌಂಡ್ ನಿರ್ಮಾಣಕ್ಕಾಗಿ 4.60 ಕೋಟಿ ರೂಪಾಯಿ ಹಾಗೂ ಹೊಸ ವಸತಿ ಗೃಹಗಳ ನಿರ್ಮಾಣ ಹಾಗೂ ದುರಸ್ತಿಗಾಗಿ 26.35 ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಸಲಾಗಿದೆ~ ಎಂದು ಅವರು ಹೇಳಿದರು.

`ಸಿಬ್ಬಂದಿಗೆ ಕಾಲ ಕಾಲಕ್ಕೆ ಬಡ್ತಿಗಳನ್ನು ನೀಡಲಾಗಿದೆ. ಡಿಎಆರ್ ಘಟಕದಲ್ಲಿದ್ದ ಬಯಲು ರಂಗ ಮಂದಿರವನ್ನು ಪುನಃ ಆರಂಭಿಸಲಾಗಿದೆ~ ಎಂದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಎಚ್. ಗಂಗರಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT