ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರುಸಾವಿರ ಮಠ, ಉಳವಿ ಚನ್ನಬಸವೇಶ್ವರ ರಥೋತ್ಸವ

Last Updated 3 ಸೆಪ್ಟೆಂಬರ್ 2013, 6:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತುಂತುರು ಮಳೆಯ ನಡುವೆಯೇ ನೆರೆದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಲ್ಲಿನ ಮೂರು ಸಾವಿರ ಮಠದಲ್ಲಿ ಸೋಮವಾರ ಸಂಜೆ ಶ್ರೀ ಗುರುಸಿದ್ಧೇಶ್ವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಶ್ರಾವಣ ಸೋಮವಾರದ ಶುಭದಿನದಂದು ನಡೆಯುವ ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ವಿವಿಧ ಜಿಲ್ಲೆಗಳಿಂದ ಮಠಕ್ಕೆ ಆಗಮಿಸಿದ್ದ ಭಕ್ತರು ಗುರುಸಿದ್ದೇಶ್ವರರ ಮೂಲ ಗದ್ದುಗೆಯ ದರ್ಶನ ಪಡೆದರು. ಜಾತ್ರೋತ್ಸವದ ಅಂಗವಾಗಿ ಭಕ್ತರಿಗೆ ಮಹಾಪ್ರಸಾದ ಆಯೋಜಿಸಲಾಗಿತ್ತು. ದಾಸೋಹ ಸಮಿತಿಯ ಗೌರವ ಅಧ್ಯಕ್ಷ ವಿಜಯ ಶೆಟ್ಟರ ಹಾಗೂ  ಕಾರ್ಯದರ್ಶಿ ವೀರೇಶ ಸಂಗಳದ ಅನ್ನಸಂತರ್ಪಣೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಶ್ರಮಿಸಿದರು.

ಸಂಜೆ ಡೊಳ್ಳುಕುಣಿತ, ಕಂಸಾಳೆ ನೃತ್ಯ, ಕರಡಿ ಮಜಲು, ನಂದಿಕೋಲು, ಕುದುರೆ ಕುಣಿತ, ಹೆಜ್ಜೆಮೇಳ, ಭಜನೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನದ ನಡುವೆ ರಥೋತ್ಸವ ಜರುಗಿತು. ಗುರುಸಿದ್ದೇಶ್ವರರಿಗೆ ಜಯಘೋಷ ಹಾಕುತ್ತಾ, ಕಳಶಕ್ಕೆ ಬಾಳೆಹಣ್ಣು ತೂರಿ ಭಕ್ತರು ಸಂಭ್ರಮಪಟ್ಟರು. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ರಥೋತ್ಸವದ ನೇತೃತ್ವ ವಹಿಸಿದ್ದರು.

ರಥೋತ್ಸವದ ನಂತರ ಶ್ರೀಗಳಿಂದ ರಜತ ಸಿಂಹಾಸನಾರೋಹಣ ಹಾಗೂ ಭಕ್ತರಿಂದ ಭಕ್ತಿ ಸಮರ್ಪಣೆ ಕಾರ್ಯಕ್ರಮ ನಡೆಯಿತು.  ರಥೋತ್ಸವದಲ್ಲಿ ಮೂರು ಸಾವಿರ ಮಠ ಉನ್ನತ ಸಮಿತಿ ಸಂಚಾಲಕ ಮೋಹನ ಲಿಂಬಿಕಾಯಿ, ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ಅರವಿಂದ ಕುಬಸದ, ಹನುಮಂತ ಶಿಗ್ಗಾವ, ಎಸ್.ಎಸ್.ಹಸಬಿ, ಮುರುಗೇಶ ಯಕಲಾಸಪುರ, ಸದಾನಂದ ಡಂಗನವರ ಮತ್ತಿತರರು ಪಾಲ್ಗೊಂಡಿದ್ದರು.

ಸಂಭ್ರಮದ  ರಥೋತ್ಸವ
ಧಾರವಾಡ:
ಶ್ರಾವಣ ಮಾಸದ ಕಡೆಯ ಸೋಮವಾರ ಸಂಜೆ ಇಲ್ಲಿಯ ಪ್ರಸಿದ್ಧ ಉಳವಿ ಚನ್ನಬಸವೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಸಹಸ್ರಾರು ಜನ ಭಕ್ತರು ತೇರನ್ನು ಎಳೆದರು.

ಸಂಜೆ 4.45ರ ಸುಮಾರಿಗೆ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಹೊರಟ ತೇರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ವೃತ್ತದವರೆಗೆ ಸಾಗಿತು. ಚನ್ನಬಸವೇಶ್ವರರ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಯೊಂದಿಗೆ ಪಾದಗಟ್ಟಿಗೆ ತೆರಳಿ ಭಕ್ತರು ಪೂಜೆ ಸಲ್ಲಿಸಿದರು. ಡೊಳ್ಳು ಕುಣಿತ, ನಂದಿಕೋಲು ಧ್ವಜ, ಹೆಜ್ಜೆಮೇಳಗಳು ರಥೋತ್ಸವದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.

ತೇರು ಸಾಗುವ ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ನಿಂತ ಭಕ್ತರು ತೇರಿಗೆ ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣುಗಳನ್ನು ತೇರಿನತ್ತ ತೂರಿದರು.
ಉಳವಿ ಚನ್ನಬಸವೇಶ್ವರ ಧರ್ಮ ಫಂಡ್ ಸಂಸ್ಥೆಯ ಪದಾಧಿಕಾರಿಗಳು ರಥೋತ್ಸವದ ವಿಧಿ ವಿಧಾನಗಳಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿತ್ತು.

ಅಡ್ಡಪಲ್ಲಕ್ಕಿ ಉತ್ಸವ
ಹುಬ್ಬಳ್ಳಿ: 
ಶ್ರಾವಣ ಕಡೆಯ ಸೋಮವಾರದ ಹಿನ್ನೆಲೆಯಲ್ಲಿ ವಿದ್ಯಾನಗರದ ತಿಮ್ಮಸಾಗರ ಬಸವೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಮುಂಜಾನೆ ಐದು ಗಂಟೆಗೆ ಪಂಚಾಮೃತ ಅಭಿಷೇಕದೊಂದಿಗೆ ಬಸವೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭವಾಯಿತು. ಸಹಸ್ರ ನಾಮಜಪದೊಂದಿಗೆ ದಿನವಿಡೀ ನಡೆದ ಪೂಜಾ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

ಬೆಳಿಗ್ಗೆ ಅಲ್ಪೋಪಹಾರ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅನ್ನಸಂತರ್ಪಣೆ ಸಮಿತಿ ಅಧ್ಯಕ್ಷ ಶಿವಪುತ್ರಪ್ಪ ಅಂಗಡಿ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಏಳು ಗಂಟೆಗೆ ಹಳೇಹುಬ್ಬಳ್ಳಿ ಡಾಕಪ್ಪ ವೃತ್ತದ ಮರಿಯಾಲ ತಿಮ್ಮಸಾಗರ ಓಣಿಯಿಂದ ಬಸವೇಶ್ವರ ದೇವರ ಬೆಳ್ಳಿ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆ ಗುಡಿಗೆ ಬಂದಿತು.

ನಂತರ ಮೂರು ಸಾವಿರ ಮಠಕ್ಕೆ ತೆರಳಿ ವಾಪಸ್ ತಿಮ್ಮಸಾಗರ ಓಣಿಗೆ ಬಂದಿತು. ಆರತಿ ಹಿಡಿದ ಮಹಿಳೆಯರೊಂದಿಗೆ ಭಜನೆ, ಜಾಂಜ್ ಮೇಳ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದು ಪಲ್ಲಕ್ಕಿಗೆ ಸ್ವಾಗತ ಕೋರಿದರು. ಇದೇ ಸಂದರ್ಭದಲ್ಲಿ ನವನಗರದ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳು ವಚನ ಗಾಯನ ಹಾಗೂ ಭಕ್ತಗೀತೆಗಳನ್ನು ಹಾಡಿದರು.

ಪಲ್ಲಕ್ಕಿ ಉತ್ಸವದ ಅಂಗವಾಗಿ ಪಿ.ಬಿ.ರಸ್ತೆಯಿಂದ ದೇವಸ್ಥಾನದವರೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಉತ್ಸವದಲ್ಲಿ ತಿಮ್ಮಸಾಗರ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಎಂ.ಬಿ.ಕಲ್ಲೂರ, ಉಪಾಧ್ಯಕ್ಷ ಎನ್.ಎಸ್.ಶೆಲ್ಲಿಕೇರಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT