ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಗಾಯಕರ ಶ್ರುತಿ ಜ್ಞಾನ ರೂಢಿಸಿಕೊಳ್ಳಿ

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಆಧುನಿಕ ಜಾನಪದ ಗಾಯಕರು ಮೂಲ ಗಾಯಕರಲ್ಲಿನ ಸಾಮರ್ಥ್ಯ, ಶ್ರುತಿ ಜ್ಞಾನವನ್ನು ರೂಢಿಸಿಕೊಳ್ಳುವತ್ತ ಗಮನ ಹರಿಸಬೇಕು~ ಎಂದು ಜಾನಪದ ವಿದ್ವಾಂಸ ಡಾ.ಬಸವರಾಜ ಮಲಶೆಟ್ಟಿ ಕಿವಿಮಾತು ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮೂಲ ಹಾಗೂ ಆಧುನಿಕ ಜಾನಪದ ಗಾಯಕರ ಪ್ರಥಮ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

`ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯಾದಂತೆ ಜಾನಪದದಲ್ಲೂ ಬದಲಾವಣೆಯಾಗಿದೆ. ಕಲಾ ಪ್ರಕಾರದಲ್ಲಾಗುವ ಬದಲಾವಣೆ ಪ್ರವಾಹವಿದ್ದಂತೆ. ಇದನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ ಬದಲಾವಣೆಯ ಬಗ್ಗೆ ವಿಮರ್ಶೆ ಮಾಡುವ ಅಗತ್ಯವಿಲ್ಲ. ಬದಲಾವಣೆಯನ್ನು ಒಪ್ಪಿಕೊಳ್ಳಬೇಕು~ ಎಂದರು.

`ಹಳ್ಳಿಗಳು ಇಂದು ಬದಲಾಗಿವೆ. ಹಳ್ಳಿಗರ ಜೀವನ ಶೈಲಿಯೂ ಬದಲಾಗಿದೆ. ಪರಿಣಾಮವಾಗಿ ವೃತ್ತಿಪರ ಗಾಯಕರು ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ಜನರನ್ನು ರಂಜಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಅವರು ಹೊಸ ಪ್ರಯೋಗ, ಹೊಸ ಸಾಹಿತ್ಯ ಸೃಷ್ಟಿಸುವತ್ತ ಗಮನ ಹರಿಸಬೇಕು~ ಎಂದು ಹೇಳಿದರು.

`ಜಾನಪದ ಸಾಹಿತ್ಯಕ್ಕೆ ಹೊಸ ದಾಟಿ ನೀಡುವ ಪ್ರಯತ್ನ ಉತ್ತಮವಾಗಿದೆ. ಉದ್ದೇಶಿತ ಜಾನಪದ ವಿಶ್ವವಿದ್ಯಾಲಯದಲ್ಲಿ ಜಾನಪದ ಕಲೆಗಳ ದಾಖಲೀಕರಣ ಹಾಗೂ ಪರಿಷ್ಕರಣೆ ಕಾರ್ಯಕ್ಕೆ ಒತ್ತು ನೀಡಬೇಕು. ಇದರಿಂದ ಹೊಸಬರಿಗೆ ಅನುಕೂಲವಾಗಲಿದೆ~ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ, `ರಾಷ್ಟ್ರೀಯ ದೃಷ್ಟಿಯಿಲ್ಲದ ರಾಜಕಾರಣಿಗಳು, ಆಡಳಿತದ ಹೊಣೆಗಾರಿಕೆ ಅರಿಯದ ಅಧಿಕಾರಿಗಳು, ಪ್ರಜೆಗಳನ್ನು ಪೀಡಿಸುವ ಪೊಲೀಸರು, ಸಹಾಯದ ಗುಣವಿಲ್ಲದ ಶ್ರೀಮಂತರು, ವೃತ್ತಿ ಧರ್ಮವಿಲ್ಲದ ವೈದ್ಯರು, ಅಶ್ಲೀಲ ಅಭಿರುಚಿಯ ಕಲಾವಿದರು... ಹೀಗೆ ಎಲ್ಲ ಕ್ಷೇತ್ರಗಳೂ ಹದಗೆಟ್ಟಿರುವ ಪರಿಸ್ಥಿತಿಯಲ್ಲಿ ಜಾನಪದದಿಂದ ಮಾತ್ರ ತುಸು ನೆಮ್ಮದಿ ಸಿಗುತ್ತದೆ~ ಎಂದು ಹೇಳಿದರು.

`ಜಾನಪದ ಕಲಾವಿದರಿಗೆ ಸಹನೆ ಇರಬೇಕು. ಯಾರ ಬಳಿಯೂ ಭಿಕ್ಷೆ ಬೇಡುವ ಅಗತ್ಯವಿಲ್ಲ. ಕಲಾವಿದರಿಗೂ ಒಳ್ಳೆಯ ಕಾಲ ಬರುತ್ತದೆ. ಕಲಾವಿದರು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು~ ಎಂದು ಕಿವಿಮಾತು ಹೇಳಿದರು.

ಮೈಸೂರು ರಂಗಾಯಣದ ನಿರ್ದೇಶಕ ಡಾ.ಬಿ.ವಿ. ರಾಜಾರಾಂ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ವೀರೇಶ್ ಬಳ್ಳಾರಿ, ಅಕಾಡೆಮಿಯ ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ,  ಸದಸ್ಯ ಸಂಚಾಲಕ ಎಂ.ಕೆ. ಸಿದ್ಧರಾಜು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT