ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ರಾಜಕಾರಣದ ಯಥಾಸ್ಥಿತಿ ಸದ್ಯದ ಅನಿವಾರ್ಯತೆ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

`ರಾಜಕಾರಣದ ಪುನರ್‌ವ್ಯಾಖ್ಯೆ ಇಂದಿನ ಅನಿವಾರ್ಯತೆ~ ಎಂಬುದು ಪ್ರೊ.ಬಿ.ಕೆ. ಚಂದ್ರಶೇಖರ್ ಅವರ ವಿಶ್ಲೇಷಣೆ. (ಸಂಗತ- ಪ್ರವಾ. ಡಿ.26). `ವಸ್ತುಸ್ಥಿತಿಯ ವಿಶ್ಲೇಷಣೆ ಒಪ್ಪಿಕೊಂಡಲ್ಲಿ ಸಿದ್ಧಾಂತ ಸೋಲುತ್ತದೆ. ಆದ್ದರಿಂದ ಪುನರಾವಲೋಕನವೇ ಇಂದಿನ ಅನಿವಾರ್ಯತೆ~ ಎಂಬುದು ಡಿ.ಆರ್.ಪಾಟೀಲರ ಪ್ರತಿಕ್ರಿಯೆ (ಸಂಗತ  ಡಿ.27). ಇದಕ್ಕೆ ಪ್ರೊ.ಬಿ.ಕೆ.ಸಿ. ಅವರು `ಪುನರಾವಲೋಕನ ಸೀಮಿತವಾದುದ್ದು, ಪುನರ್ ವ್ಯಾಖ್ಯೆ ಹಾಗಲ್ಲ, ಅದು ಹಿಂದಿನದು ಮತ್ತು ಇಂದಿನದನ್ನು ನೋಡುವುದರ ಜೊತೆಗೆ ಮುಂದೆ ಆಗಬೇಕಾದ ಬದಲಾವಣೆಯ ಬಗ್ಗೆ ಮಾತನಾಡುತ್ತದೆ ಎಂಬ ಸಮರ್ಥನೆ (ಪ್ರ ವಾ ವಾ- ಜ.4).

ಇಲ್ಲಿ ಪುನರ್ ವ್ಯಾಖ್ಯೆಯೇ ಸರಿ, ಪುನರಾವಲೋಕನ ತಪ್ಪು ಎನ್ನುವುದಕ್ಕಿಂತ ಮುಖ್ಯವಾಗಿ ಪ್ರೊ.ಬಿ.ಕೆ.ಸಿ. ಮತ್ತು ಮಾಜಿ ಶಾಸಕ ಡಿ.ಆರ್.ಪಾಟೀಲರಿಂದ ಈ ಪದಗಳಿಗೆ ನಿಷ್ಪಕ್ಷಪಾತ ನ್ಯಾಯ, ಅರ್ಥವಿವರಗಳು, ವಿಶ್ಲೇಷಣೆಗಳು ಸಿಗಬಹುದೇ ಎಂದು ಚಿಂತಿಸಿದರೆ ಆ ನಿರೀಕ್ಷೆ ಸುಳ್ಳಾಗುತ್ತದೆ. ಏಕೆಂದರೆ ಈ ಇಬ್ಬರು ಮುಖಂಡರು ಕಾಂಗ್ರೆಸ್ ಪಕ್ಷದವರು. ಸಕ್ರಿಯ ರಾಜಕಾರಣಿಗಳು. ಪಕ್ಷದ ಚೌಕಟ್ಟಿಗೆ ಸೀಮಿತವಾಗಿ ಚಿಂತಿಸುವ ಮನಸ್ಥಿತಿಯವರು.

ರಾಜಕಾರಣ (ರಾಜಕೀಯ) ಎಂದರೆ ಅಧಿಕಾರ ಗಳಿಸುವುದೇ ಏಕೈಕ ಗುರಿಯಾಗಿರುವ ತಂತ್ರಗಾರಿಕೆಯ ನೀಚತನ, ಸಮಯ ಸಾಧಕತೆ, ಅವಕಾಶವಾದಿತನ. ಇವನ್ನು ಒಬ್ಬರಿಗೆ ಪುನರ್‌ವ್ಯಾಖ್ಯಾನ ಮಾಡಬೇಕೆನಿಸಿದರೆ ಮತ್ತೊಬ್ಬರಿಗೆ ಪುನರಾವಲೋಕನ ಮಾಡಬೇಕೆನಿಸುತ್ತದೆ!

ಇಬ್ಬರೂ ಅಣ್ಣಾ ಹಜಾರೆ ತಂಡದ ಹೋರಾಟವನ್ನು ಟೀಕಿಸುತ್ತಾರೆ. ಅದರಲ್ಲೂ ಬಿ.ಕೆ.ಸಿ. ಅವರು ತಂಡದ ಕೆಲವರ ವರ್ತನೆ, ಬಳಸಿದ ಭಾಷೆ, ಸಂಸತ್ತು ಹಾಗೂ ರಾಜ್ಯಾಂಗವನ್ನೇ ಅಪಹಾಸ್ಯ ಮಾಡಿದಂತಿತ್ತು ಎಂದು ಅಭಿಪ್ರಾಯಪಡುತ್ತಾರೆ.

ಜನಲೋಕಪಾಲ ಮಸೂದೆಗೆ ಒತ್ತಾಯಿಸಿ ಪ್ರಥಮ ಬಾರಿಗೆ ದೆಹಲಿಯಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಿರಶನಕ್ಕೆ ಅಣಿಯಾಗುತ್ತಿದ್ದಂತೆ ಕಾಂಗ್ರೆಸ್‌ನ ರಾಷ್ಟ್ರೀಯ ಮುಖಂಡರು ಹಜಾರೆ ತಂಡದ ವಿರುದ್ಧ ಬಳಸಿದ ಪದ ಬಳಕೆ ಯಾವ ಮಟ್ಟದಲ್ಲಿತ್ತು ನಂತರ ಹೇಗೆ ಕ್ಷಮೆ ಯಾಚಿಸಿದರು ಎನ್ನುವುದನ್ನು ಒಮ್ಮೆ ಜ್ಞಾಪಿಸಿಕೊಳ್ಳಬೇಕು.

ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ಅಣ್ಣಾ ಹಜಾರೆ ಸುತ್ತಮುತ್ತಲಿರುವವರು ಗೂಂಡಾಗಳು, ಕ್ರಿಮಿನಲ್‌ಗಳು, ಕಳ್ಳರು. ಇವರನ್ನೆಲ್ಲಾ ಕಟ್ಟಿಕೊಂಡು ಹಜಾರೆ ಹೋರಾಟಕ್ಕಿಳಿದಿದ್ದಾರೆ ಎಂದು ಕಟುವಾಗಿ ಟೀಕಿಸಿದರೆ, ದಿಗ್ವಿಜಯಸಿಂಗ್ ಅವರು ಅಣ್ಣಾ ಅವರನ್ನು ಆರ್.ಎಸ್.ಎಸ್. ಮತ್ತು ಬಿಜೆಪಿಯ ಏಜೆಂಟ್ ಎಂದು ಕರೆಯಲು ಹಿಂಜರಿಯಲಿಲ್ಲ. ಇದನ್ನು ಬಿ.ಕೆ.ಸಿ ಉದ್ದೆೀಶ ಪೂರ್ವಕವಾಗಿ ಪ್ರಸ್ತಾಪಿಸುವುದಿಲ್ಲ. 

ಬಿ.ಕೆ.ಸಿ. ಮತ್ತು ಡಿ.ಆರ್.ಪಾಟೀಲರು ಕಾಂಗ್ರೆಸಿಗರಾಗಿರುವುದರಿಂದ ಅವರು ಉಲ್ಲೇಖಿಸುವ ವಿದ್ಯಮಾನಗಳು ವೈಯಕ್ತಿಕ ಹಿತಾಸಕ್ತಿಗೆ ಪೂರಕವಾಗಿರುವುದನ್ನು ಗಮನಿಸಬಹುದು. ಇದೂ ಒಂದು ಬಗೆಯ ತಂತ್ರಗಾರಿಕೆ. ಬಿ.ಕೆ.ಸಿ. ಅವರ ಪ್ರಕಾರ ರಾಜಕಾರಣವೂ ಆಗಬಲ್ಲದು. ಡಿ.ಆರ್.ಪಾಟೀಲರ ಪ್ರಕಾರ ಅಣ್ಣಾ ಹಜಾರೆ ಚಳವಳಿಯು ಹಣವಂತ ಮಧ್ಯಮ ವರ್ಗದಿಂದ ಪ್ರೇರಿತವಾಗಿದ್ದು ಮತ್ತು ಇದೊಂದು ಫ್ಯಾಶನ್ ಆಗಿದೆ. ಈ ನಿಲುವಿನ ವಿಶ್ಲೇಷಣೆ ಭ್ರಷ್ಟಾಚಾರ ವಿರೋಧದ ಬಗ್ಗೆ ಇರುವ ಸಿನಿಕತನವನ್ನು ತೋರಿಸುತ್ತದೆ.

ರಾಜಕಾರಣದ ಪುನರ್‌ವ್ಯಾಖ್ಯೆಯ ಅಗತ್ಯವನ್ನು ಪ್ರತಿಪಾದಿಸುವ ಬಿಕೆಸಿ ಅವರು 1985ರಲ್ಲಿ ರಾಮಕೃಷ್ಣಹೆಗಡೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮೇಲ್ಮನೆ ಸದಸ್ಯರಾಗಿದ್ದರು. ಹೆಗಡೆ ಆಪ್ತರಾಗಿ ಅವರ `ಥಿಂಕ್‌ಟ್ಯಾಂಕ್ ಸದಸ್ಯರಾಗಿ ಸಲಹೆಗಳನ್ನು ಕೊಡುತ್ತಾ ಅಧಿಕಾರಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. 1983ರಲ್ಲಿ ಹೆಗಡೆ ಸರ್ಕಾರಕ್ಕೆ ಬಹುಮತದ ಕೊರತೆ ಇದ್ದಾಗ ಕೋಮುವಾದಿ ಬಿಜೆಪಿ ಪಕ್ಷ ಬೆಂಬಲ ನೀಡಿದಾಗ ಬಿಕೆಸಿ ಅವರ ನಿಲುವು ಏನಾಗಿತ್ತು? 1999ರಲ್ಲಿ ಅವರು ಜನತಾ ಪರಿವಾರವನ್ನು ಮತ್ತು ಮೌಲ್ಯಾಧಾರಿತ ರಾಜಕಾರಣಿ ಹೆಗಡೆಯವರನ್ನು ಕೈಬಿಟ್ಟು ಎಸ್.ಎಂ.ಕೃಷ್ಣರ ಕಾಂಗ್ರೆಸ್ ಸರ್ಕಾರದಲ್ಲಿ ದಿಢೀರನೆ ಮಂತ್ರಿಗಳಾಗಿಬಿಡುತ್ತಾರೆ. ಅದೂ ಮೇಲ್ಮನೆ ಸದಸ್ಯರಾಗುವುದರ ಮೂಲಕ!

2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅವರು ಸಭಾಪತಿಗಳಾಗಿ ಕಾರ್ಯನಿರ್ವಹಿಸಿದ್ದು ಮತ್ತೊಂದು ವಿಶೇಷ! ಬಿಕೆಸಿ ಅವರ ಬೆಳವಣಿಗೆಗೆ ಪೂರಕ ವಿದ್ಯಮಾನಗಳಾದ ಪಕ್ಷ ಬದಲಾವಣೆ, ಸಮ್ಮಿಶ್ರ ಸರ್ಕಾರದಲ್ಲಿ ಸಭಾಪತಿ ಸ್ಥಾನದ ಸಂದರ್ಭಗಳನ್ನು ಇವರು ಅವಕಾಶವಾದಿತನ, ಸಮಯಸಾಧಕತನ ಎನ್ನದೆ ಬೇರೆ ರೀತಿಯಲ್ಲಿಯೇ ವ್ಯಾಖ್ಯಾನಿಸಲು ಹಿಂದೆ ಮುಂದೆ ನೋಡುವುದಿಲ್ಲ! ವಸ್ತುಸ್ಥಿತಿ ಹೀಗಿದ್ದರೂ ಬಿಕೆಸಿ ಅವರು, ಮುಂದೆ ಖಾಲಿ ಆಗುವ ರಾಜ್ಯಸಭಾ ಸ್ಥಾನಕ್ಕಾಗಿ ಉದ್ಯಮಿಯೊಬ್ಬರು ಎಲ್ಲಾ ಪಕ್ಷಗಳೊಂದಿಗೆ ಸ್ನೇಹ ಬಳಸುತ್ತಾರೆ ಎಂದು ಪ್ರಸ್ತಾಪಿಸುತ್ತಾರೆ!

ಅಂದರೆ ಏಕಕಾಲಕ್ಕೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಜೊತೆಗೆ ಸ್ನೇಹವನ್ನು ಬೆಳಸುತ್ತಿರಬಹುದಾದ ಆ ಉದ್ಯಮಿಗಿಂತ, ಚಿಂತಕರ ಚಾವಡಿ ಎಂದೇ ಹೆಸರಾದ ರಾಜ್ಯಸಭಾ, ವಿಧಾನಪರಿಷತ್ ಚುನಾವಣೆಗಳಿಗೆ `ನನ್ನಂಥವರ ಅಭ್ಯರ್ಥಿತನವೇ ಸೂಕ್ತ~ ಎಂದು ಪರೋಕ್ಷವಾಗಿ ಬಿಕೆಸಿ ಆಕಾಂಕ್ಷೆ ವ್ಯಕ್ತಪಡಿಸುತ್ತಾರೆ.

ಇದಕ್ಕೋಸ್ಕರ ಪ್ರಮುಖ ವಿದ್ಯಮಾನಗಳನ್ನು ಬಳಸಿಕೊಳ್ಳುತ್ತಾ ಅಣ್ಣಾ ಹಜಾರೆ ಅವರ ಚಳವಳಿಯನ್ನು ಉಲ್ಲೇಖಿಸಿ ಗಾಂಧೀಜಿ ಅವರಂತೆ ಅಣ್ಣಾ ಅವರಿಗೆ, ಗ್ರಾಮಸ್ವರಾಜ್ಯದ ಬಗ್ಗೆ ಮಾತನಾಡುವ ಶಕ್ತಿ ಇಲ್ಲ ಎಂದು ಜರೆಯುವುದು, ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾಗುವ ಬಯಕೆಯ ಬಗ್ಗೆ ವಿಶ್ಲೇಷಿಸುವುದು, ಧರ್ಮಪೀಠಗಳ ರಾಜಕೀಯ ಮತ್ತು ಜಾತೀಯತೆಯ ಬಗ್ಗೆ ಟೀಕಿಸುವುದು, ಈ ಮಧ್ಯೆ ಶ್ರೀರಾಮುಲು ರಾಜೀನಾಮೆ ಪ್ರಹಸನದಂಥ ಕೆಳಮಟ್ಟದ ವಿದ್ಯಮಾನಗಳನ್ನೂ ತೆಗೆದುಕೊಂಡು ಬಿಜೆಪಿಯ ಶಿಸ್ತಿನ ಬಗ್ಗೆ ಪ್ರತಿಕ್ರಿಯಿಸುವುದಿದೆಯಲ್ಲ, ಅದು ನಿಸ್ಸಂಶಯವಾಗಿ ಬೂಟಾಟಿಕೆ ಎನ್ನಿಸುತ್ತದೆ. ಉನ್ನತ ಶಿಕ್ಷಣ ಹಿನ್ನೆಲೆ ಇರುವ ಬಿಕೆಸಿ ಅವರಿಂದ ನಿಷ್ಪಕ್ಷಪಾತದಿಂದ ಕೂಡಿದ ಅರ್ಥಪೂರ್ಣವಾದ ವಿಶ್ಲೇಷಣೆಗಳನ್ನು ನಿರೀಕ್ಷಿಸುವುದು ಹೇಗೆ?

ತಂತ್ರಗಾರಿಕೆಯಿಂದ ಸದಾನಂದಗೌಡರು ಮೇಲ್ಮನೆಗೆ ಆಯ್ಕೆಯಾದ ಸಂದರ್ಭ, ಜೆಡಿಎಸ್‌ನ ತಟಸ್ಥ ನಿಲುವಿನಿಂದ ಕೋಮುವಾದಿ ಬಿಜೆಪಿಗೆ ಹೇಗೆ ಸಹಾಯವಾಯಿತು, ಈ ಹಿಂದೆ ಉದ್ಯಮಿಯೊಬ್ಬರು ರಾಜ್ಯಸಭೆಗೆ ಆಯ್ಕೆಯಾಗಲು ರಾಜ್ಯದ ಎಲ್ಲಾ ಪ್ರಮುಖ ರಾಜಕೀಯಪಕ್ಷಗಳು ಹೇಗೆ ಸಹಾಯ ಮಾಡಿದವು, ಜನರ ಪರಿಚಯವೇ ಇಲ್ಲದ ಇಂಥವರನ್ನು ಪಕ್ಷಬೇಧ ಮರೆತು ವಿಧಾನಸಭಾ ಸದಸ್ಯರು ಯಾಕೆ ಬೆಂಬಲ ನೀಡುತ್ತಾರೆ ಎಂದು ಬಿಕೆಸಿ ಪ್ರಶ್ನಿಸುತ್ತಾರೆ. ತಮ್ಮ ಪಕ್ಷದ ಪಾತ್ರವೂ ಇದರಲ್ಲಿ ಸಕ್ರಿಯವಾಗಿರುವುದರಿಂದಲೇ ಬಹುಜಾಣ್ಮೆಯಿಂದ `ಪ್ರಮುಖ ರಾಜಕೀಯ ಪಕ್ಷಗಳು~ ಎಂದು ತಿಳಿಸಲು ಅವರಿಗೆ ಸಾಧ್ಯವಾಗುತ್ತದೆ! ಇಲ್ಲೇ ಅವರ ತರ್ಕಗಳು ನೈತಿಕ ನೆಲೆಗಟ್ಟಿಲ್ಲದೆ ಸೊರಗಿಬಿಡುತ್ತವೆ.

ಪಕ್ಷಗಳ ತಂತ್ರಗಾರಿಕೆಯನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಟೀಕಿಸುವುದು. ಈ ತಂತ್ರಗಾರಿಕೆಯನ್ನೇ ರಾಜಕಾರಣವೆಂದು ಪರಿಭಾವಿಸಿದರೆ ಮೂಲ ರಾಜಕಾರಣದ ಪಾವಿತ್ರ್ಯತೆಗೆ ಕುಂದು ಬರುತ್ತದೆ. ಮೂಲ ರಾಜಕಾರಣದ ಮೌಲ್ಯಗಳ ಅಂತಃಸತ್ವ ಹಾಗೇ ಉಳಿಸಿಕೊಳ್ಳುವ ಸೈದ್ಧಾಂತಿಕ ನೆಲೆಗೆಟ್ಟು ಇಂದಿಗೂ ಪ್ರಸ್ತುತ. ಇದು ಸರಿಯಾಗಿ ಅರ್ಥೈಸಿಕೊಂಡಲ್ಲಿ ಹಿಂದಿನದು ಎಂಬ ಪ್ರಶ್ನೆ ಉದ್ಭವವಾಗುವುದಿಲ್ಲ.

ಅಂದರೆ ಮೌಲ್ಯಗಳು ಮೂಲದಲ್ಲಿ ಅಂತರ್ಗತವಾಗಿರುತ್ತವೆ ಮತ್ತು ಚಲನಶೀಲತೆಗೆ ಪೂರಕವಾಗಿರುತ್ತವೆ. ಚಲನಶೀಲತೆಗೆ ಪೂರಕವಾಗಿರುವ ಸಿದ್ಧಾಂತಗಳು ಮುಂದಿನ ಪೀಳಿಗೆಗೆ ಅಥವಾ ಯಾವ ಕಾಲಘಟ್ಟಕ್ಕೂ ಅನ್ವಯವಾಗಿರುತ್ತವೆ. ಹೀಗಾಗಿ ಬಿಕೆಸಿ ಹೇಳುವಂತೆ ರಾಜಕಾರಣದ ಪುನರ್‌ವ್ಯಾಖ್ಯೆಯೇ ಅಪ್ರಸ್ತುತ. ಇವರು ಹೇಳಿದ ಈ ವಿದ್ಯಮಾನಗಳ ಮೂಲಕ `ರಾಜಕಾರಣ~ ಪದದ ಅರ್ಥವನ್ನು ಅಪಮೌಲ್ಯಗೊಳಿಸುವುದು ಸರಿಯಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT