ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಕಾಣದ ತೆರೆಬಾವಿ

Last Updated 5 ಏಪ್ರಿಲ್ 2013, 6:41 IST
ಅಕ್ಷರ ಗಾತ್ರ

ಲಿಂಗಸುಗೂರ (ಮುದಗಲ್ಲ): ಕೆರೆಯ ಅಂಗಳದಲ್ಲಿ ತೆರೆದಬಾವಿಯೊಂದು ಅಸ್ಥಿತ್ವದಲ್ಲಿರುವುದರಿಂದ ಸುತ್ತಮುತ್ತ ಮನೆಗಳಿದ್ದರಿಂದ ಈ ಗ್ರಾಮಕ್ಕೆ ತೆರೆಬಾವಿ ಎಂದು ಕರೆಯಲಾಗುತ್ತದೆ. ಶತಮಾನಗಳಷ್ಟು ಹಿಂದೆ ಈ ಗ್ರಾಮದ ಸುತ್ತ ಕೋಟೆ, ಪೂರ್ವಾಭಿಮುಖವಾದ ಅಗಸಿ ಬಾಗಿಲಿತ್ತು. ದೇವಸ್ಥಾನದ ಬಳಿ ಬಸರಿ ಮರವೊಂದಿತ್ತು. ಪೂರ್ವಾಭಿಮುಖದ ಅಗಸಿ, ಬಸಿರು ಮರದಿಂದ ಶಾಪಗ್ರಸ್ಥವಾಗಿದ್ದ ತೆರೆಬಾವಿ ಗ್ರಾಮ ಈಗ ಮೂಲ ಸೌಕರ್ಯ ಇಲ್ಲದೇ ನಲಗುತ್ತಿದೆ.

ಲಿಂಗಸುಗೂರ ತಾಲ್ಲೂಕಿನ ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರೆಬಾವಿ ಗ್ರಾಮದಲ್ಲಿ ಈ ಹಿಂದೆ ಸಾವಿನ ಸಂಖ್ಯೆ ಹೆಚ್ಚಳವಾಗಿತ್ತು. ಜ್ಯೋತಿಷಿಗಳ ಸಲಹೆಯಂತೆ ಶಾಪಕ್ಕೆ ಕಾರಣವಾಗಿದ್ದ ಬಸರಿ ಮರವನ್ನು ಕಡೆಸಲಾಯಿತು. ಪೂರ್ವಾಭಿಮುಖದ ಅಗಸಿಯನ್ನು ನೆಲಸಮಗೊಳಿಸಿ ಉತ್ತರಾಭಿಮುಖ ಅಗಸಿ ನಿರ್ಮಿಸಿದಾಗಿನಿಂದ ಅನಗತ್ಯ ಸಾವಿನ ಸಂಖ್ಯೆ ಕ್ಷೀಣಿಸಿದೆ. ಶಾಪದಿಂದ ಮುಕ್ತರಾಗಿದ್ದೇವೆ. ಆದರೆ, ಮೂಲಸೌಕರ್ಯಗಳ ಸಮಸ್ಯೆಗಳಲ್ಲಿ ಕೊಳೆಯುತ್ತಿದ್ದೇವೆ ಎಂದು ಹಿರಿಯ ಯಮನಪ್ಪ ದೇವರಮನಿ ವಿವರಿಸಿದರು.

ತೆರೆಬಾವಿ ಅಂದಾಜು 170 ಕುಟುಂಬಗಳನ್ನು ಹೊಂದಿದೆ. 600-700 ಜನಸಂಖ್ಯೆ ಹೊಂದಿದೆ. ತೆರೆಬಾವಿ ಮತ್ತು ಬುದ್ದಿನ್ನಿ ಎರಡು ಗ್ರಾಮಗಳು ಸೇರಿ ಗ್ರಾಮ ಪಂಚಾಯಿತಿಗೆ ಮೂವರು ಸದಸ್ಯರನ್ನು ಆಯ್ಕೆ ಮಾಡುತ್ತೇವೆ. ಈ ಬಾರಿ ಮೂವರು ಸದಸ್ಯರಾದ ಯಮನಮ್ಮ ಬೀರಪ್ಪ, ಗುಂಡಮ್ಮ ಶರಣಪ್ಪ, ರಾಮಣ್ಣ ಸಿದ್ಧಪ್ಪ ಎಂಬುವವರು ತೆರೆಬಾವಿಯವರೆ ಆಯ್ಕೆಯಾಗಿದ್ದು ವಿಶೇಷ. ಮೂವರಲ್ಲಿ ಮಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಗುಂಡಮ್ಮ ಶರಣಪ್ಪ ಆಯ್ಕೆಗೊಂಡಿದ್ದು ತೆರೆಬಾವಿ ಗ್ರಾಮದ ಅದೃಷ್ಟವಾಗಿದೆ ಎಂದು ಬೀರಪ್ಪ ಖುಷಿ ಹಂಚಿಕೊಂಡರು.

ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಸರ್ಕಾರದಿಂದ ತಮ್ಮ ಗ್ರಾಮಕ್ಕೆ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ವಿದ್ಯುತ್ ಸಂಪರ್ಕ, ತಾತ್ಕಾಲಿಕ ಕುಡಿಯುವ ನೀರು ಸೌಲಭ್ಯ ಬಿಟ್ಟರೆ ಇನ್ನ್ಯಾವ ಸೌಕರ್ಯಗಳು ಗ್ರಾಮದತ್ತ ಸುಳಿದಿಲ್ಲ. ನೂರಕ್ಕೆ ನೂರರಷ್ಟು ಕೃಷಿಕರೆ ಇರುವುದರಿಂದ ಹೊಲಮನೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದೇವೆ. ಸಮಸ್ಯೆಗಳ ಪರಿಹಾರಕ್ಕೆ ತಾಲ್ಲೂಕು ಕೇಂದ್ರಕ್ಕೆ ಯಾರು ಹೋಗಿಲ್ಲ. ಹೋದರು ತಮ್ಮಂಥವರ ಗೋಳು ಕೇಳುವ್ವರೆ ಇಲ್ಲ ಎಂದುಕೊಂಡು ಮೌನಕ್ಕೆ ಶರಣಾಗಿದ್ದೇವೆ ಎಂದು ರಾಮಣ್ಣ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಚಿಕ್ಕದಾದ ಗ್ರಾಮಕ್ಕೆ ಅಗಸಿ ನಿರ್ಮಿಸಿಕೊಡಲು ಸಾಕಷ್ಟು ಬಾರಿ ಕೇಳಿದ್ದೇವೆ. ಸಾಮೂಹಿಕ ಶೌಚಾಲಯ, ವಿದ್ಯಾವಂತರಿಗೆ ಓದಲು ಗ್ರಂಥಾಲಯ, ದೂರವಾಣಿ ಸಂಪರ್ಕ, ಚರಂಡಿ, ಶುದ್ಧ ಕುಡಿಯುವ ನೀರು, ದೋಬಿಘಾಟ್ ನಿರ್ಮಿಸಿಲ್ಲ. ಇತರೆ ಗ್ರಾಮಗಳ ಅಭಿವೃದ್ಧಿ ನೋಡಿದರೆ ತಮ್ಮ ಗ್ರಾಮವನ್ನು ಅಭಿವೃದ್ಧಿ ಪಡಿಸುವಲ್ಲಿ ಚುನಾಯಿತ ಪ್ರತಿನಿಧಿಗಳು ನಿರಾಸಕ್ತಿ ಹೊಂದಿದ್ದಾರೆ ಎಂದು ನಾಗಪ್ಪ, ದುರುಗಣ್ಣ, ಬಸಣ್ಣ, ವಿಜಯಲಕ್ಷ್ಮಿ, ಹುಲಿಗೆಮ್ಮ, ಪಾರ್ವತಿ ಮೂಲ ಸೌಕರ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT