ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ನೀಡಲು ಆಗ್ರಹ

ಬೆಂಕಿ ಅವಘಡ: ಮನೆ ಕಳೆದುಕೊಂಡ ಏಳು ಕುಟುಂಬಗಳು
Last Updated 19 ಡಿಸೆಂಬರ್ 2013, 5:39 IST
ಅಕ್ಷರ ಗಾತ್ರ

ಹಾಸನ: ಬೇಲೂರು ತಾಲ್ಲೂಕಿನ ನಂಜಾಪುರದಲ್ಲಿ ಈಚೆಗೆ ಸಂಭವಿಸಿದ ಆಕಸ್ಮಿಕದಲ್ಲಿ ಮನೆಗಳನ್ನು ಕಳೆದುಕೊಂಡಿರುವ ಏಳು ದಲಿತ ಕುಟುಂಬದವರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ನಂಜಾಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಡಿ. 7 ರಂದು ನಡೆದ ಬೆಂಕಿ ಆಕಸ್ಮಿಕದಲ್ಲಿ ಏಳು ಕುಟುಂಬದವರು ತಮ್ಮ ಗುಡಿಸಲು ಮಾತ್ರವಲ್ಲ, ಬಟ್ಟೆಬರೆ, ಇತರ ಸಾಮಗ್ರಿ, ಬಿಪಿಎಲ್‌ ಕಾರ್ಡ್‌ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅವರಿಗೆ ಜಿಲ್ಲಾಡಳಿತದ ನೆರವಿನ ತುರ್ತು ಅಗತ್ಯವಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಸಂದೇಶ್‌, ‘ಘಟನೆ ನಡೆದು ಇಷ್ಟು ದಿನಗಳಾದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿಟ್ಟರೆ ಸ್ಥಳಕ್ಕೆ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ಭೇಟಿ ನೀಡಿಲ್ಲ. ಮೊದಲು ಜಿಲ್ಲಾಧಿಕಾರಿ ಬಂದು ಪರಿಶೀಲನೆ ನಡೆಸಿ, ನೊಂದವರಿಗೆ ನೆರವು ನೀಡಬೇಕು. ಕೆಲವು ವರ್ಷಗಳ ಹಿಂದೆ ಹಾಸನ ತಾಲ್ಲೂಕಿನ ದ್ಯಾಪಲಾಪುರ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಟ್ಟಿದ್ದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಂದ ಹಿಡಿದು ಜನಪ್ರತಿನಿಧಿಗಳು, ಸಚಿವರು ಗ್ರಾಮಕ್ಕೆ ಭೇಟಿಕೊಟ್ಟು ಸಕಲ ಸನುಕೂಲ ಕೊಡಿಸಿದ್ದರು. ನಂಜಾಪುರಕ್ಕೆ ದೇವೇಗೌಡರೂ ಸಹ ಭೇಟಿಕೊಟ್ಟಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಿ.ಪಿ.ಐ.ಎಂ. ಮುಖಂಡ ಧರ್ಮೇಶ್‌, ‘ನೊಂದವರಿಗೆ ಶಾಲೆಯಲ್ಲಿ ಆಶ್ರಯಕೊಟ್ಟು, ಎಲ್ಲಿಂದಲೋ ಆಹಾರ ತಂದುಕೊಟ್ಟರೆ ಜಿಲ್ಲಾಡಳಿತದ ಜವಾಬ್ದಾರಿ ಮುಗಿದಿಲ್ಲ. ಅವರಿಗೆ ಒಳ್ಳೆಯ ಮನೆಗಳನ್ನು ಕಟ್ಟಿಸಿ ಕೊಡಬೇಕು. ಉದ್ಯೋಗ ಖಾತ್ರಿಯಲ್ಲಿ ದಲಿತರಿಗೆ ಉದ್ಯೋಗವೂ ಸಿಗುತ್ತಿಲ್ಲ, ಅದಕ್ಕೆ ವ್ಯವಸ್ಥೆ ಮಾಡಬೇಕು. ನಂಜಾಪುರದ ದಲಿತರ ಸಮಸ್ಯೆ ಆಲಿಸಿ, ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಬೇಕು. ಜಿಲ್ಲಾಧಿಕಾರಿ ಸ್ವತಃ ಭೇಟಿಕೊಟ್ಟು ಪರಿಶೀಲನೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಇಲ್ಲಿ ದಲಿತರು ಅಕ್ರಮವಾಗಿ ಭೂ ಸಾಗುವಳಿ ಮಾಡುತ್ತಿದ್ದು, ಭೂಮಿಯನ್ನು ಸಕ್ರಮಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು. ಈ ಊರಿಗೆ ಸರಿಯಾದ ರಸ್ತೆ ಹಾಗೂ ಮೂಲ ಸೌಕರ್ಯಗಳ ಕೊರತೆ ಇದ್ದು, ಜಿಲ್ಲಾಧಿಕಾರಿ ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವಿ. ಅನ್ಬು ಕುಮಾರ್‌, ‘ಘಟನೆ ನಡೆದಾಗ ನಾನು ರಜೆಯಲ್ಲಿದ್ದ ಕಾರಣ ಸ್ಥಳಕ್ಕೆ ಭೇಟಿ ನೀಡಲಾಗಿಲ್ಲ.  ಆದರೆ ಸಮಾಜ ಕಲ್ಯಾಣಾಧಿಕಾರಿ ಮೂಲಕ ಎಲ್ಲ ಮಾಹಿತಿ ಸಂಗ್ರಹಿಸಿದ್ದೇನೆ. ಗುರುವಾರ ಮುಂಜಾನೆ 10ಗಂಟೆಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತೇನೆ’ ಎಂದರು.

ಮಾದಿಗ ದಂಡೋರದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಕುಮಾರ್‌, ಲೇಖಕಿ ರೂಪ ಹಾಸನ, ತಾಲ್ಲೂಕು ಘಟಕದ ಅಧ್ಯಕ್ಷ ರವೀಶ್‌, ಕ್ರಾಂತಿ ಎಸ್‌. ತ್ಯಾಗಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT