ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯದ ವಿಕೇಂದ್ರೀಕರಣ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನಮ್ಮಲ್ಲಿ ಕ್ರೀಡಾಭಿವೃದ್ಧಿಗೆ ಸಂಬಂಧಿಸಿದಂತೆ  ಯೋಜನೆ, ಕಾರ್ಯಕ್ರಮಗಳು ತೃಪ್ತಿಕರವಾಗಿಲ್ಲ. ಜತೆಗೆ ದೂರದೃಷ್ಟಿಯ ಕೊರತೆ ಎದ್ದು ಕಾಣುತ್ತದೆ. ಅವೈಜ್ಞಾನಿಕ ದೃಷ್ಟಿಕೋನದಿಂದಾಗಿ ಎಲ್ಲಿ ಏನು ಆಗಬೇಕೋ ಅದು ಆಗುತ್ತಿಲ್ಲ.

ಸರ್ಕಾರ ಮನಸ್ಸು ಮಾಡಿದರೆ ಮಹತ್ವದ್ದನ್ನೇ ಮಾಡಬಹುದು. ಪ್ರತೀ ಜಿಲ್ಲಾ ಕೇಂದ್ರದಲ್ಲಿ ಸರ್ಕಾರ ಕನಿಷ್ಠ ಹತ್ತು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಅದನ್ನು ಕ್ರೀಡಾ ಉದ್ದೇಶಕ್ಕಾಗಿಯೇ ಮೀಸಲಿರಿಸಬೇಕು. ಆ ನೆಲವನ್ನು ಸಮತಟ್ಟು ಮಾಡಬೇಕು.

ನಂತರ ಅಲ್ಲೊಂದು ಬ್ಯಾಸ್ಕೆಟ್‌ಬಾಲ್‌ ಅಂಗಣವನ್ನು ರೂಪಿಸಬೇಕು. ಅದಕ್ಕೆ ಸಮೀಪದಲ್ಲಿಯೇ ಒಂದು ಫಿಟ್‌ನೆಸ್‌ ಕೇಂದ್ರವಿರಬೇಕು. ಜತೆಗೆ ಫುಟ್‌ಬಾಲ್‌ ಮೈದಾನ, ಕಬಡ್ಡಿ ಮತ್ತು ಕೊಕ್ಕೊ ಅಂಗಣಗಳಿರಬೇಕು. ಇಷ್ಟಕ್ಕೆ ದೊಡ್ಡ ಮಟ್ಟದ ವೆಚ್ಚವಂತೂ ಆಗುವುದಿಲ್ಲ.

ಪ್ರತೀ ದಿನ ಅಲ್ಲಿಗೆ ನೂರಾರು ವಿದ್ಯಾರ್ಥಿಗಳು, ಯುವಜನರು ಸಹಜವಾಗಿಯೇ ಬರುತ್ತಾರೆ. ಇಂತಹ ಒಂದು ಸರಳ ಸೌಕರ್ಯದ ನಡುವೆ ಸಹಜವಾಗಿಯೇ ಎಳೆಯರಲ್ಲಿ ಒಂದು ಹಂತದ ಕ್ರೀಡಾಸಕ್ತಿ ಬೆಳೆಯುತ್ತದೆ. ಅಷ್ಟೂ ಮೂಲ ಸೌಕರ್ಯದ ನಿರ್ವಹಣೆ ದುಬಾರಿಯಂತೂ ಆಗಲಾರದು.

ಇಂತಹ ಕೇಂದ್ರಗಳು ಜಿಲ್ಲಾ ಮಟ್ಟದಲ್ಲಿ ಯಶಸ್ವಿಯಾದರೆ, ಬಳಿಕ ಅವುಗಳನ್ನು ತಾಲ್ಲೂಕು ಕೇಂದ್ರಕ್ಕೂ ವಿಸ್ತರಿಸಬಹುದು. ಈ ಕೇಂದ್ರಗಳು ನಂತರದ ದಿನಗಳಲ್ಲಿ ದೇಶದ ಕ್ರೀಡಾ ಪ್ರತಿಭಾವಂತರ ನರ್ಸರಿಯಂತೆ ರೂಪುಗೊಳ್ಳಬೇಕು.

ಇದರ ಜತೆಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಯಾವ ಕ್ರೀಡೆ ಜನಪ್ರಿಯತೆ ಹೊಂದಿದೆಯೋ ಅಂತಹ ಕ್ರೀಡೆಗೆ ಅಲ್ಲಿ ವಿಶೇಷ ಒತ್ತು ನೀಡಬಹುದು. ಉದಾಹರಣೆಗೆ ಹುಬ್ಬಳ್ಳಿ–ಧಾರವಾಡದಂತಹ ಕಡೆ ಮಲ್ಲಕಂಬ, ಆಟ್ಯಪಾಟ್ಯ ಕ್ರೀಡೆ; ಮೈಸೂರಿನಲ್ಲಿ ಹಾಕಿ; ಮಂಡ್ಯದಲ್ಲಿ ಕಬಡ್ಡಿ; ಮಂಗಳೂರಲ್ಲಿ ಫುಟ್‌ಬಾಲ್‌... ಹೀಗೆ ಸ್ಥಳೀಯ ಮಟ್ಟದಲ್ಲಿ ಜನಪ್ರಿಯ ಕ್ರೀಡೆಗೆ ಮೂಲ ಸೌಕರ್ಯವನ್ನು ಅಭಿವೃದ್ಧಿಗೊಳಿಸಬಹುದು.

ಇನ್ನು ಗ್ರಾಮೀಣ ಮಟ್ಟದ ಕ್ರೀಡಾಕೂಟಗಳು, ಮಹಿಳಾ ಕ್ರೀಡಾ ಕೂಟ ಇತ್ಯಾದಿ ವಿಭಿನ್ನ ನೆಲೆಯ ಕೂಟಗಳನ್ನು ಗಂಭೀರವಾಗಿಯೇ ನಡೆಸಬೇಕು. ಅಲ್ಲಿ ವೃತ್ತಿಪರತೆ ಇರುವಂತೆ ನೋಡಿಕೊಳ್ಳಬೇಕು. ಈ ಬಗೆಯ ವೈವಿಧ್ಯಮಯ ಸ್ಪರ್ಧಾಕೂಟಗಳ ಪ್ರಯೋಗಗಳನ್ನು ಭಾರತ ಕ್ರೀಡಾ ಪ್ರಾಧಿಕಾರ ದೊಡ್ಡ ಮಟ್ಟದಲ್ಲಿಯೇ ನಡೆಸಿದೆ.

ಕ್ರೀಡಾ ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ಈ ರೀತಿ ವಿಕೇಂದ್ರೀಕರಣ­ಗೊಳಿಸಬಹುದು. ಈ ಮೂಲಕ ಬೆಂಗಳೂರೆಂಬ ಮಹಾನಗರ ಒಂದರಲ್ಲೇ ಎಲ್ಲಾ ಕ್ರೀಡಾ ಚಟುವಟಿಕೆಗಳು ಕೇಂದ್ರೀಕೃತಗೊಳ್ಳುವುದನ್ನು ತಪ್ಪಿಸಬಹುದಾಗಿದೆ.
(ಲೇಖಕರು:  ನಿವೃತ್ತ ಮಹಾ ನಿರ್ದೇಶಕರು, ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ , ಪಟಿಯಾಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT