ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ಕಲ್ಪಿಸಲು ಕಟ್ಟುನಿಟ್ಟಿನ ಸೂಚನೆ

ಜಿಲ್ಲಾ ಪಂಚಾಯ್ತಿ ಕೆಡಿಪಿ ಮಾಸಿಕ ಸಭೆ: ಶೀಲಾ ಗದ್ದಿಗೇಶ್ ಎಚ್ಚರಿಕೆ
Last Updated 12 ಡಿಸೆಂಬರ್ 2012, 6:33 IST
ಅಕ್ಷರ ಗಾತ್ರ

ದಾವಣಗೆರೆ: `ಸಾಸ್ವೆಹಳ್ಳಿ-ನಲ್ಲೂರು' ರಸ್ತೆಗೆ ಒಂದು ಸಾರಿಯಾದರೂ ನೀವು ಭೇಟಿ ನೀಡಿದ್ದೀರಾ? ಕನಿಷ್ಠ ಸ್ಥಳ ಪರಿಶೀಲನೆಯಾದರೂ ಮಾಡಿದ್ದೀರಾ? ಯಾವುದಾದರೂ ಆಪತ್ತು ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಿ. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತೆ'

-ಇದು ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ ಶೀಲಾ ಗದ್ದಿಗೇಶ್ ತಮ್ಮ ಪ್ರಥಮ ಕೆಡಿಪಿ ಸಭೆಯಲ್ಲಿ ಲೋಕೋಪಯೋಗಿ ಎಂಜಿನಿಯರ್‌ಗೆ ಎಚ್ಚರಿಕೆ ನೀಡಿದ ಪರಿ.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಮಾಸಿಕ ಸಭೆಯಲ್ಲಿ ಅಧ್ಯಕ್ಷೆ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯೆಯರಾದ ಜಯಲಕ್ಷ್ಮೀ ಮಹೇಶ್ ಮತ್ತು ಅಂಬಿಕಾ ರಾಜಪ್ಪ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರುವವರೆಗೂ ಪ್ರಶ್ನಿಸಿದರು.

`ಸಾಸ್ವೆಹಳ್ಳಿ-ನಲ್ಲೂರು ರಸ್ತೆಯಲ್ಲಿ ಸಂಚರಿಸಲು ಅಸಾಧ್ಯ. ನಾನು ಪ್ರತಿನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತೇನೆ. ಜನ ವಾಹನ ತಡೆದು ರಸ್ತೆ ಯಾವಾಗ ಮಾಡಿಸುತ್ತೀರಿ ಎಂದು ಪ್ರಶ್ನಿಸುತ್ತಾರೆ. ನಾನು ಏನೂಂತ ಉತ್ತರ ಹೇಳಲಿ? ಈ ಭಾಗದ ನಾಗರಿಕರು ಜೀವನ ಮಾಡುವುದೇ ಕಷ್ಟವಾಗಿದೆ. ರಸ್ತೆ ಸರಿಯಿಲ್ಲದ ಕಾರಣ ಮಹಿಳೆಯರು ಮರಳಿನ ರಸ್ತೆ ಮೂಲಕ ಸಂಚರಿಸುವಂತಾಗಿದೆ. ಅಲ್ಲಿ ಯಾವುದಾದರೂ ಆಪತ್ತು ಸಂಭವಿಸುವ ಮುನ್ನ ರಸ್ತೆ ಸರಿಪಡಿಸಿ, ಇಲ್ಲವಾದಲ್ಲಿ ನಿಮ್ಮ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು' ಎಂದು ಶೀಲಾ ಎಚ್ಚರಿಸಿದರು.

ಲೋಕೋಪಯೋಗಿ ಎಂಜಿನಿಯರ್ ಉತ್ತರಿಸಿ, ಇದುವರೆಗೆ ನಾನು ರಸ್ತೆ ನೋಡಿಲ್ಲ. ನಮ್ಮ ಹಿರಿಯ ಅಧಿಕಾರಿಗಳು ನೋಡಿದ್ದಾರೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.ಸದಸ್ಯೆ ಜಯಲಕ್ಷ್ಮೀ ಮಹೇಶ್ ಮಾತನಾಡಿ, ಕಳೆದ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಗೈರು ಹಾಜರಾಗಿದ್ದರು. ಈ ಕುರಿತು ಷೋಕಾಸ್ ನೋಟಿಸ್ ನೀಡಲಾಗಿದೆಯೇ? ಎಂದು ಪ್ರಶ್ನಿಸಿದರು.

ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಪ್ರಕಾಶ್ ಮಾತನಾಡಿ, ಸಚಿವರ ಕಾರ್ಯಕ್ರಮದ ನಿಮಿತ್ತ ಸಭೆಗೆ ಹಾಜರಾಗಿರಲಿಲ್ಲ. ಅಲ್ಲದೇ, ಚಿತ್ರದುರ್ಗ-ದಾವಣಗೆರೆ ಎರಡೂ ಜಿಲ್ಲೆಯನ್ನೂ ನಾನೇ ನೋಡಿಕೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶೀಲಾ, ಸಚಿವರ ಕಾರ್ಯಕ್ರಮ ಇದ್ದರೆ ಹಾಜರಾಗಿ. ಆದರೆ, ಸುಖಾಸುಮ್ಮನೆ ಗೈರುಹಾಜರಾಗಕೂಡದು. ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಗೆ ಬಂದು ಕಡ್ಡಾಯವಾಗಿ ಮಾಹಿತಿ ನೀಡಲೇಬೇಕು ಎಂದು ತಾಕೀತು ಮಾಡಿದರು.

ಮಾಹಿತಿ ನೀಡಿ: ಅಧಿಕಾರ ವಹಿಸಿಕೊಂಡು 15 ದಿನಗಳಾಯ್ತು. ಅಂದು ಕಚೇರಿಗೆ ಬಂದು ಶುಭಾಶಯ ಕೋರಿ ಮುಖ ತೋರಿಸಿದ್ದ ಅಧಿಕಾರಿಗಳು ಇದುವರೆಗೂ ಪತ್ತೆಇಲ್ಲ. ಸಮಸ್ಯೆಗಳು ಕುರಿತು ಕನಿಷ್ಠ ಮಾಹಿತಿಯನ್ನಾದರೂ ನೀಡಲು ಇದುವರೆಗೂ ಯಾವ ಅಧಿಕಾರಿಯೂ ನನ್ನನ್ನು ಭೇಟಿ ಮಾಡಿಲ್ಲ. ಹೀಗಾದರೆ ಹೇಗೆ? ಕನಿಷ್ಠ ಮಾಹಿತಿಯನ್ನಾದರೂ ಅಧಿಕಾರಿಗಳು ಕೊಡಬೇಕು ಎಂದು ಅಧ್ಯಕ್ಷೆ ಸೂಚನೆ ನೀಡಿದರು.

ಸದಸ್ಯೆ ಅಂಬಿಕಾ ರಾಜಪ್ಪ ಮಾತನಾಡಿ, ಹೊನ್ನಾಳಿ ತಾಲ್ಲೂಕು ಚೀಲೂರಿನಲ್ಲಿ  ಕುಡಿಯುವ ನೀರಿನ ಸಮಸ್ಯೆ ಇದೆ. ಈ ವಿಚಾರ ನಿಮ್ಮ ಗಮನಕ್ಕೆ ತಂದು 2 ತಿಂಗಳಾಯಿತು. ನೀರು ಮೂಲಅಗತ್ಯ. ಮನುಷ್ಯರು ನೀರಿಲ್ಲದೇ ಹೇಗೆ ಬದುಕಬೇಕು ಹೇಳಿ? ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ನಾಗರಾಜ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ನಾಗರಾಜ, ಈಗಾಗಲೇ ತುರ್ತು ಕಾಮಗಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ನನ್ನ ವ್ಯಾಪ್ತಿಯಲ್ಲಿ ಕೇವಲ ಮೂರು ಬೋರ್‌ವೆಲ್ ಕೊರೆಸಲು ಮಾತ್ರ ಅನುಮತಿ ಇದೆ. ಆದರೂ, ಹೆಚ್ಚುವರಿಯಾಗಿ ಎರಡು ಬೋರ್‌ವೆಲ್ ಕೊರೆಸಿದರೂ ನೀರು ಬಂದಿಲ್ಲ. ಭೂಗರ್ಭಶಾಸ್ತ್ರ ವಿಜ್ಞಾನಿಗಳಿಂದಲೂ ಸ್ಥಳ ಪರಿಶೀಲನೆ ಮಾಡಿಸಲಾಗಿದೆ ಎಂದು ವಿವರಿಸಿದರು.

ಜಿ.ಪಂ. ಉಪ ಕಾರ್ಯದರ್ಶಿ ಷಡಕ್ಷರಪ್ಪ ಮಾತನಾಡಿ, ಬೇಸಿಗೆ ಪ್ರಯುಕ್ತ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಮುಖ್ಯವಾಗಿ ಹರಪನಹಳ್ಳಿ, ಜಗಳೂರು ತಾಲ್ಲೂಕುಗಳಲ್ಲಿ ಹಳ್ಳಿಗಳಲ್ಲಿ ನೀರಿನ ಸೌಲಭ್ಯ ಕಡ್ಡಾಯವಾಗಿ ಕಲ್ಪಿಸಬೇಕು. ಸೆಕ್ಷನ್ ಅಧಿಕಾರಿಗಳ ಮೂಲಕ ಜನರ ಸಮಸ್ಯೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸೂಚಿಸಿದರು.

ಶೀಲಾ ಮಾತನಾಡಿ, ಹರಿಹರ ತಾಲ್ಲೂಕಿನ ಗುತ್ತೂರು, ಅಮರಾವತಿ ಮತ್ತು ಹರ್ಲಾಪುರದಲ್ಲೂ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದಾಗ, ಅದು ನಗರಸಭೆ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ನಗರಸಭೆಯೇ ಆಸಕ್ತಿಯೇ ವಹಿಸುತ್ತಿಲ್ಲ. ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ, ನಗರಸಭೆಯೇ ಕ್ರಮ ಕೈಗೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT