ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ನಲಗಂದಿನ್ನಿ ಗ್ರಾಮ

Last Updated 4 ಫೆಬ್ರುವರಿ 2012, 6:05 IST
ಅಕ್ಷರ ಗಾತ್ರ

ಮಾನ್ವಿ: ಮಾನ್ವಿ ತಾಲ್ಲೂಕು ದಾಸಸಾಹಿತ್ಯದ ತವರೂರು. ಊರೂರು ಅಲೆದು ಹರಿದಾಸರು ರಚಿಸಿದ ಸಾಹಿತ್ಯ ಮತ್ತಿತರ ದಾಖಲೆಗಳನ್ನು ಸಂಗ್ರಹಿಸಿ ಸಂಶೋಧನೆ ಮಾಡಿ ಹೆಸರಾದ ಹನುಮನಗೌಡ ವಕೀಲರ ಹುಟ್ಟೂರು ಈ ನಲಗಂದಿನ್ನಿ ಗ್ರಾಮ.

ಪ್ರತಿ ವರ್ಷ ನೆರೆಹಾವಳಿಗೆ ಹಾನಿ ಅನುಭವಿಸುತ್ತಿದ್ದ ಈ ಗ್ರಾಮವನ್ನು 1992ರಲ್ಲಿ ಸಂಭವಿಸಿದ  ಭಾರೀ ನೆರೆಹಾವಳಿ ನಂತರ ಶಾಶ್ವತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಯಿತು. 1996ರಲ್ಲಿ ಸರ್ಕಾರ 6ಎಕರೆ ಭೂಮಿ ಖರೀದಿಸಿ ಎತ್ತರದ ಸ್ಥಳದಲ್ಲಿ ಸುಮಾರು 50 ಆಶ್ರಯ ಮನೆಗಳನ್ನು ಕಟ್ಟಿಸಿಕೊಟ್ಟಿತು.
 
ಪ್ರತಿ ವರ್ಷ ನೆರೆಹಾವಳಿಯ ಅನುಭವ  ಹೊಂದಿದ್ದ ನಲಗಂದಿನ್ನಿ ಗ್ರಾಮಸ್ಥರಿಗೆ  ತಮ್ಮ ಮೂಲ ಊರನ್ನು ಬಿಟ್ಟು ಬರಲು ಇಷ್ಟವಿರಲಿಲ್ಲ. ಕಾರಣ1996ರಲ್ಲಿ ನಿರ್ಮಾಣಗೊಂಡ  ಮನೆಗಳು ಹಾಗೆಯೇ ಖಾಲಿ ಇದ್ದವು. ಕೆಲವು ಮನೆಗಳ ಮೇಲ್ಛಾವಣಿಗಾಗಿ ಹಾಕಲಾದ ಟಿನ್ ಶೀಟ್‌ಗಳು, ಕಬ್ಬಿಣದ ಸಾಮಾಗ್ರಿಗಳು ಕಳ್ಳರ ಪಾಲಾದವು. ಅಂದಿನಿಂದ ಪಾಳು ಬಿದ್ದಿದ್ದ ಆಶ್ರಯ ಮನೆಗಳಿಗೆ  ಕಳೆದ ಮೂರು ವರ್ಷಗಳ ಹಿಂದೆ ದಿಢಿ ೀರ್ ಬೇಡಿಕೆ ಬಂದಿತು.

ಮೂಲ ನಲಗಂದಿನ್ನಿ ಗ್ರಾಮದಲ್ಲಿನ   ಮಕ್ಕಳು, ಯುವಕರಿಗೆ ದಿಢಿ ೀರನೆ ಕಾಣಿಸಿಕೊಂಡ ಕಾಯಿಲೆಗಳಿಂದ ಗ್ರಾಮಸ್ಥರು ಭಯಭೀತರಾದರು. ಗ್ರಾಮಕ್ಕೆ ಬ್ರಹ್ಮರಾಕ್ಷಸಿ ಕಾಟ ಬಂದಿದೆ ಎನ್ನುವ ಹುಸಿನಂಬಿಕೆಯ ಮಾತುಗಳನ್ನು ಹರಡಲಾಯಿತು. ಕಾರಣ ಗ್ರಾಮಸ್ಥರು ಕೂಡಲೇ ಗ್ರಾಮದ ಸ್ಥಳಾಂತರಕ್ಕಾಗಿ ನಿರ್ಮಿಸಲಾಗಿದ್ದ ಮನೆಗಳಲ್ಲಿ ಆಶ್ರಯ ಪಡೆದರು.

ಈಗ ಸ್ಥಳಾಂತರಗೊಂಡ ಈ ನಲಗಂದಿನ್ನಿ ಗ್ರಾಮದಲ್ಲಿರುವ ಹಲವು ಸಮಸ್ಯೆಗಳಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.

ಮೂಲ ಸೌಲಭ್ಯ: ನಲಗಂದಿನ್ನಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮಕ್ಕೆ ಕೊಳವೆಬಾವಿ ಮೂಲಕ ನೀರು ಸಂಗ್ರಹಿಸಿ ಪೂರೈಸಲು ನಾಲ್ಕು ಕುಡಿಯುವ ನೀರಿನ ತೊಟ್ಟಿಗಳನ್ನು ಮಂಜೂರು ಮಾಡಲಾಗಿತ್ತು. ಇದುವರೆಗೆ ಇವುಗಳ ನಿರ್ಮಾಣವಾಗಿಲ್ಲ.
 
ಈ ಮೊದಲು ಇದ್ದ ಕುಡಿಯುವ ನೀರಿನ ತೊಟ್ಟಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ.  ವಿದ್ಯುತ್ ಪೂರೈಕೆ ಇದ್ದರೆ  ಮಾತ್ರ ಕುಡಿಯಲು ಮತ್ತು ಬಳಕೆಗೆ ನೀರು ಸಿಗುತ್ತದೆ. ಈ ನೀರಿನಲ್ಲಿ ಫ್ಲೋರೈಡ್ ಅಂಶ ಇರುವುದರಿಂದ ಜನತೆ ಕುಡಿಯಲು ಸಮೀಪದ ಹಳ್ಳದ ನೀರನ್ನು ಅವಲಂಬಿಸಿದ್ದಾರೆ.
 
ಗ್ರಾಮಕ್ಕೆ ಶಾಶ್ವತವಾಗಿ ಹಳ್ಳದಿಂದ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆ. ಗ್ರಾಮದಲ್ಲಿ ಮಹಿಳಾ ಶೌಚಾಲಯ ಇಲ್ಲ. ಅಂಗನವಾಡಿ ಕೇಂದ್ರಕ್ಕೆ ಕಟ್ಟಡ ಮಂಜೂರಾಗಿಲ್ಲ. ಕಾರಣ ಕಾರ್ಯಕರ್ತೆಯ ಮನೆಯೇ ಸುಮಾರು 40ಮಕ್ಕಳಿಗೆ ಅಂಗನವಾಡಿ ಶಾಲೆಯಾಗಿದೆ. ಗ್ರಾಮದಲ್ಲಿ ಸ್ವಚ್ಛತೆ, ಚರಂಡಿ, ಸುಸಜ್ಜಿತ ರಸ್ತೆ ಇಲ್ಲ.

ಚಿಕ್ಕಕೊಟ್ನೇಕಲ್ ಗ್ರಾಮ ಪಂಚಾಯಿತಿಗೆ ಒಳಪಡುವ ಸುಮಾರು 200 ಮತದಾರರು ಇರುವ ನಲಗಂದಿನ್ನಿ ಗ್ರಾಮ ಚಿಕ್ಕಕೊಟ್ನೇಕಲ್  ಗ್ರಾಮದ ವಾರ್ಡ್‌ನೊಂದಿಗೆ ಸಂಯೋಜನೆ ಹೊಂದಿದ ಕಾರಣ ಇಲ್ಲಿಂದ ಸದಸ್ಯರ ಆಯ್ಕೆ ಸಾಧ್ಯವಾಗುತ್ತಿಲ್ಲ. ಗ್ರಾಮಕ್ಕೆ ಪ್ರತ್ಯೇಕ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಬೇಕು.
 
ದೇವಸ್ಥಾನ ಹಾಗೂ  ಸಮುದಾಯ ಭವನಗಳ ನಿರ್ಮಾಣವಾಗಬೇಕು ಎನ್ನುವುದು ಇಲ್ಲಿನ ಜನತೆಯ ಕೋರಿಕೆ. ಗ್ರಾಮದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕೋಣೆ ಬಿರುಕು ಬಿಟ್ಟು ಶಿಥಿಲಾವಸ್ಥೆಯಲ್ಲಿದೆ. ಈ ಕುರಿತು ಶಿಕ್ಷಣ ಇಲಾಖೆ ಗಮನಹರಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT