ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯಕ್ಕೆ ಗ್ರಾಮಸ್ಥರ ಒತ್ತಾಯ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ ಕೇಂದ್ರದಿಂದ ಕೇವಲ 12 ಕಿ.ಮೀ. ದೂರವಿರುವ ಶಿವಮೊಗ್ಗ ತಾಲ್ಲೂಕಿನ ಎರೇಕೊಪ್ಪ, ಎರೇಕೊಪ್ಪ ತಾಂಡ ಹಾಗೂ ಹೊಸೂರು ಗ್ರಾಮಗಳಿಗೆ ರಸ್ತೆ, ಸಾರಿಗೆ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಆಗ್ರಹಿಸಿ ಗ್ರಾಮಸ್ಥರು ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಈ ಗ್ರಾಮಗಳು ರಾಷ್ಟ್ರೀಯ ಹೆದ್ದಾರಿ-206 (ಶಿವಮೊಗ್ಗ-ಸಾಗರ ರಸ್ತೆ)ಯಿಂದ ಕೇವಲ 4 ಕಿ.ಮೀ. ದೂರದಲ್ಲಿವೆ. ಆದರೆ, ರಸ್ತೆ, ಸಾರಿಗೆ ವ್ಯವಸ್ಥೆ ಈ ಗ್ರಾಮಗಳಿಗೆ ಇಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.

ರಸ್ತೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಹಿರಿಯ ಪ್ರಾಥಮಿಕ ಶಿಕ್ಷಣ ಪೂರೈಸಿದ ನಂತರ ವಿದ್ಯಾರ್ಥಿಗಳು 3ರಿಂದ 5 ಕಿ.ಮೀ. ದೂರ ನಡೆದುಕೊಂಡು ಹೋಗಿ ಬಸ್ ಸೌಲಭ್ಯ ಪಡೆಯಬೇಕಾಗಿದೆ. ಅಲ್ಲದೇ, ಹಿರಿಯ ನಾಗರಿಕರು ಬೇರೆ ಊರುಗಳಿಗೆ ಹೋಗಿ, ಬರುವುದು ಸಾಧ್ಯವಾಗದ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಲ್ಲದೇ, ರಸ್ತೆ ಇಲ್ಲದಿರುವುದರಿಂದ ಈ ಗ್ರಾಮಗಳಿಗೆ ಅತಿ ತುರ್ತು ಸೇವೆಗಾಗಿ ತುರ್ತು ಚಿಕಿತ್ಸಾ ವಾಹನ ಆರೋಗ್ಯಕವಚ-108 ಮೂರು ಕಿ.ಮೀ. ಕ್ರಮಿಸಲು ಕನಿಷ್ಠ 20ರಿಂದ 25 ನಿಮಿಷಗಳು ಬೇಕಾಗುತ್ತದೆ ಎಂದು ಗ್ರಾಮಸ್ಥರು ಸಮಸ್ಯೆ ತೆರೆದಿಟ್ಟರು.

ರಾಜ್ಯ ಸರ್ಕಾರ ತುರ್ತಾಗಿ ಇತ್ತ ಗಮನ ಹರಿಸಬೇಕು. ಈ ಗ್ರಾಮಗಳಿಗೆ ಶೀಘ್ರ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.  ಎಚ್.ಎಂ. ಸತೀಶ್, ಮಂಜು, ನಾರಾಯಣ, ಸೋಮು, ಜಗದೀಶ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT