ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯಗಳಿಲ್ಲದ ಲಕ್ಷ್ಮೇಶ್ವರ ಎಪಿಎಂಸಿ

Last Updated 11 ಡಿಸೆಂಬರ್ 2013, 6:02 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಜಿಲ್ಲೆಯ ಎರಡನೇ ದೊಡ್ಡ ಎಪಿಎಂಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ಎಪಿಎಂಸಿಯ ನೂತನ ಪ್ರಾಂಗಣ ಸುವ್ಯವಸ್ಥಿತ ಡಾಂಬರ್‌ ರಸ್ತೆ, ಬೀದಿ ದೀಪಗಳ ಕೊರತೆ ಸೇರಿದಂತೆ ಮತ್ತಿತರ ಮೂಲ ಸೌಲಭ್ಯಗಳಿಂದ ನರಳುತ್ತಿದೆ. ಕಳೆದ 10–12 ವರ್ಷಗಳ ಹಿಂದೆ ಸದ್ಯ ಈಗಿರುವ ಎಪಿಎಂಸಿ ಹಿಂದಿನ ಭಾಗದಲ್ಲಿನ 37 ಎಕರೆ ವಿಶಾಲ ಪ್ರದೇಶದಲ್ಲಿ ಹೊಸ ಮಾರುಕಟ್ಟೆ ಸ್ಥಾಪಿಸಲು ಉದ್ಧೇಶಿಸಿ ಅಲ್ಲಿ ಒಟ್ಟು 106 ಸೈಟ್‌­ಗಳನ್ನು ನಿರ್ಮಿಸಲು ಯೋಜನೆ ರೂಪಿಸ­ಲಾಗಿತ್ತು.

ಅದರಂತೆ ದಲಾಲರು ಹಾಗೂ ಖರೀದಿ­ದಾರರಿಗೆ ಈಗಾಗಲೆ ಸೈಟ್‌ ವಿತರಿಸಲಾಗಿದ್ದು ಅದರಲ್ಲಿ ಕೆಲ ದಲಾಲರು ಹೊಸ ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದು ಇನ್ನೂ ಕೆಲವರು ಅಂಗಡಿ ಕಟ್ಟಿಸಿಕೊಳ್ಳಬೇಕಾಗಿದೆ. ಆದರೆ ಎಪಿಎಂಸಿ ಆಡಳಿತ ಮಂಡಳಿ ಮಾತ್ರ ಹೊಸ ಪ್ರಾಂಗಣಕ್ಕೆ ಮೂಲ ಸೌಲಭ್ಯ ಒದಗಿಸಿ ಕೊಡುವುದನ್ನು ಸಂಪೂರ್ಣ ಮರೆತು ಬಿಟ್ಟಿದೆ.

ಹೊಸ ಮಾರುಕಟ್ಟೆಯಲ್ಲಿ ಡಬಲ್‌ ರಸ್ತೆಯನ್ನು ಎಪಿಎಂಸಿ ನಿರ್ಮಿಸಬೇಕಾಗಿತ್ತು. ಆದರೆ ಅದು ಕಚ್ಚಾ ರೂಪದಲ್ಲಿ ಸಿಂಗಲ್‌ ರಸ್ತೆ ಮಾತ್ರ ನಿರ್ಮಿಸಿ ಕೈ ತೊಳೆದುಕೊಂಡಿದೆ. ಡಾಂಬರ್‌ ರಸ್ತೆ ಮಾಡದೆ ಇರುವುದರಿಂದ ಯಾವಾಗಲೂ ಮಾರುಕಟ್ಟೆಯಲ್ಲಿ ಕೆಂಪುಧೂಳು ತುಂಬಿಕೊಂಡಿರುತ್ತದೆ. ಹೀಗಾಗಿ ಅಂಗಡಿಕಾರರು ಹಾಗೂ ರೈತರು ನಿತ್ಯ ಧೂಳನ್ನು ಸೇವಿಸಬೇಕಾಗಿದ್ದು ಇದು ಇಡೀ ಮಾರುಕಟ್ಟೆಯ ಸೌಂದರ್ಯವನ್ನೇ ಹಾಳುಗೆಡವಿದೆ.

ಇನ್ನು ಮಾರುಕಟ್ಟೆಯಲ್ಲಿ ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಕಾರಣ ಸಂಜೆಯಾಗುತ್ತಿದ್ದಂತೆ ಹೊಸ ಮಾರುಕಟ್ಟೆಯಲ್ಲಿನ ಅಂಗಡಿಗಳತ್ತ ಬರಲು ರೈತರು ಹಾಗೂ ಖರೀದಿದಾರರು ಭಯ ಪಡುತ್ತಿದ್ದಾರೆ. ಶುಕ್ರವಾರ ಹಾಗೂ ಸೋಮವಾರ ಮಾರುಕಟ್ಟೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಫಸಲನ್ನು ಮಾರಾಟ ಮಾಡಲು ಬರುತ್ತಾರೆ. ಈ ಎರಡು ದಿನಗಳಲ್ಲಿ ತಡ ರಾತ್ರಿವರೆಗೆ ಪಟ್ಟಿ ಆಗುತ್ತದೆ. ಕಾರಣ ರಾತ್ರಿ ವೇಳೆಯಲ್ಲಿ ರೈತರು ಹಣ ತೆಗೆದುಕೊಂಡು ಹೋಗಲು ಭಯ ಪಡುತ್ತಿದ್ದಾರೆ.

ಇದೆಲ್ಲ ಎಪಿಎಂಸಿ ಆಡಳಿತ ಮಂಡಳಿಗೆ ಗೊತ್ತಿರುವ ಸಂಗತಿಯೇ. ಆದರೂ ಸಹ ಅವರು ಮೂಲ ಸೌಲಭ್ಯ ಒದಗಿಸಿಕೊಡಲು ಮುಂದೆ ಬರುತ್ತಿಲ್ಲ ಎಂಬುದು ಇಲ್ಲಿನ ದಲಾಲರ ಆರೋಪ. ‘ಎಪಿಎಂಸಿ ಪ್ಯಾಟ್ಯಾಗ ಸರಿಯಾಗಿ ರಸ್ತೆ ಮಾಡಸರ್ರೀ, ಬೀದಿ ದೀಪ ಹಾಕಸರ್ರೀ ಅಂತಾ ಭಾಳ ಸಲ ಹೇಳೇವಿ. ಆದ್ರೂ ಯಾರೂ ಈ ಕಡೆ ಲಕ್ಷ್ಯ ಕೊಟ್ಟಿಲ್ಲ. ಹಿಂಗಾಗಿ ಇಡೀ ಪ್ಯಾಟಿ ಕತ್ತಲದಾಗೈತಿ’ ಎಂದು ಹಿರಿಯ ವ್ಯಾಪಾರಸ್ಥ ಚೆಂಬಣ್ಣ ಬಾಳಿಕಾಯಿ ಆಕ್ರೋಶ ವ್ಯಕ್ತಡಿಸುತ್ತಾರೆ. 

‘ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯ ಒದಗಿಸಲು ಸಾಕಷ್ಟು ಹಣ ಬೇಕು. ಅದಕ್ಕಾಗಿ ಸಾಲಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಬ್ಯಾಂಕಿನಿಂದ ಸಾಲ ದೊರೆತ ಸಿಕ್ಕ ತಕ್ಷಣ ಎಲ್ಲ ರೀತಿಯ ಮೂಲ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳುತ್ತೇವೆ’ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್‌.ಆರ್‌. ಈರಣ್ಣ ಹೇಳುತ್ತಾರೆ.

‘ಬರುವ ಜನೇವರಿ ತಿಂಗಳ ಒಳಗಾಗಿ ನೂತನ ಮಾರುಕಟ್ಟೆಗೆ ಎಲ್ಲ ಮೂಲಸೌಲಭ್ಯ ಒದಗಿಸುವ ಮೂಲಕ ಇಡೀ ಮಾರುಕಟ್ಟೆಗೆ ಖಂಡಿತ ಹೊಸ ರೂಪವನ್ನು ಕೊಡುತ್ತೇವೆ’ ಎಂದು ಎಪಿಎಂಸಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ ಭರವಸೆ ನೀಡುತ್ತಾರೆ. 
-ನಾಗರಾಜ ಹಣಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT