ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯವಿಲ್ಲದ ಅಂಗನವಾಡಿ ಕೇಂದ್ರ

Last Updated 27 ಡಿಸೆಂಬರ್ 2012, 6:28 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಸ್ವಂತ ಕಟ್ಟಡ ಇಲ್ಲ, ಕೂರಲು ಸ್ವಚ್ಛ ಸ್ಥಳ ಇಲ್ಲ, ಕುಡಿಯುವ ನೀರಿಲ್ಲ, 50 ಮಕ್ಕಳಿದ್ದರೂ ಅಂಗನವಾಡಿ ಕಟ್ಟಡ ಇಲ್ಲ.... ಹೀಗೆ ಇಲ್ಲಗಳ ಸರಮಾಲೆ ಮುಂದುವರಿಯುತ್ತದೆ.   ಈ ರೀತಿ ಮೂಲಸೌಕರ್ಯ ಕೊರತೆ ಇರುವ ತಾಲ್ಲೂಕಿನ ಮಿಟ್ಟೇಮರಿ ಹೋಬಳಿಯ ನಲ್ಲಮಲ್ಲೇಪಲ್ಲಿ ಗ್ರಾಮದ ಅಂಗನವಾಡಿ ಕೇಂದ್ರ ಮನೆಯ ಕೊಠಡಿಯಲ್ಲಿ ನಡೆಯುತ್ತಿದೆ.

ನಲ್ಲಮಲ್ಲೇಪಲ್ಲಿ ಗ್ರಾಮದಲ್ಲಿ 80 ಮನೆಗಳಿವೆ. ಬಹುತೇಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಟುಂಬಗಳೇ ನೆಲೆಸಿವೆ. ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ. ನಲ್ಲಮಲ್ಲೇಪಲ್ಲಿ ಕ್ರಾಸ್‌ಗೆ ಸುಮಾರು 2 ಕಿ.ಮೀ ನಷ್ಟು ನಡೆಯಬೇಕು. ಕುಡಿಯುವ ನೀರಿಗೆ ಕೊಳವೆಬಾವಿ ಇದೆ, ಆದರೆ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ಕುಡಿ ಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಗ್ರಾಮ ದಲ್ಲಿ ಕಲ್ಲು-ಬಂಡೆಗಳೇ ರಸ್ತೆಗಳಾಗಿವೆ. ಬೀದಿ ದೀಪ ಇಲ್ಲದೆ ಗ್ರಾಮಸ್ಥರು ಕಗ್ಗತ್ತಲಿನಲ್ಲಿ ಸಂಚರಿಸ ಬೇಕಾದ ಪರಿಸ್ಥಿತಿ ಇದೆ.

ಪ್ರತಿ ಮಗುವನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಸರ್ಕಾರಗಳು ಹೇಳುತ್ತವೆ. ಆದರೆ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಕಲ್ಪಸ್ಲ್ಲಿಲ. ಗ್ರಾಮದಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ವಿದ್ಯಾರ್ಥಿಗಳು ಸೇರಿ ಸಂಖ್ಯೆ 50 ತಲುಪುತ್ತದೆ. ಅಂಗನವಾಡಿ ಕೇಂದ್ರಕ್ಕೆ ಗ್ರಾಮದಲ್ಲಿ ಸ್ವಂತ ಕಟ್ಟಡ ಇಲ್ಲ. ಮನೆಯೊಂದರ ಕೊಠಡಿಯಲ್ಲಿ ನಡೆಯುತ್ತಿದೆ. ಕೂರಲು ಸ್ಥಳವಿಲ್ಲ.

ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಿಸಿ ಕೊಡುವಂತೆ ವರ್ಷದ ಹಿಂದೆ ಗ್ರಾಮಸಭೆ, ಕುಂದುಕೊರತೆಗಳ ಸಭೆಯಲ್ಲಿ ಶಾಸಕರಿಗೆ, ತಹಶೀಲ್ದಾರ್‌ಗೆ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣವಾಗಿಲ್ಲ. ಗ್ರಾಮದ ಬೇರೆ, ಬೇರೆ ಮನೆಗಳ ಕೊಠಡಿಗಳಲ್ಲಿ ನಡೆಸುವ ಅಂಗನವಾಡಿ ಕೇಂದ್ರಕ್ಕೆ ಗ್ರಾಮಸ್ಥರು ತಮ್ಮ ಮಕ್ಕಳನ್ನು ಕಳುಹಿಸುತ್ತಿಲ್ಲ ಎಂದು ಗ್ರಾಮಸ್ಥ ಲಕ್ಷ್ಮೀಪತಿ `ಪ್ರಜಾವಾಣಿ'ಗೆ ತಿಳಿಸಿದರು.  

2012-13ರ ಅಂಕಿ ಅಂಶ ಪ್ರಕಾರ ತಾಲ್ಲೂಕಿ ನಲ್ಲಿ 363 ಅಂಗನವಾಡಿ ಕೇಂದ್ರಗಳಿವೆ. ಇದರಲ್ಲಿ ಸ್ವಂತ- 137, ಬಾಡಿಗೆ- 146, ಪಂಚಾಯಿತಿ ಗಳಲ್ಲಿ- 13, ಸಮುದಾಯ ಭವನಗಳಲ್ಲಿ- 13, ದೇವಸ್ಥಾನ- 9, ಶಾಲೆ- 42, ಭಜನಾ ಮಂದಿರ-3 ಕೊಠಡಿಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. 11 ಅಂಗನವಾಡಿ ಕಟ್ಟಡಗಳು ಪ್ರಗತಿ ಹಂತದಲ್ಲಿ ಇವೆ. 363 ಅಂಗನವಾಡಿ ಕೇಂದ್ರಗಳ ಪೈಕಿ ಅಡುಗೆ ಮನೆಗಳು-134, ಶೌಚಾಲಯಗಳು- 68, ನೀರಿನ ವ್ಯವಸ್ಥೆ -27 ಇದೆ ಎಂದು ಇಲಾಖೆ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.

`ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗ ವಾಡಿ ಕೇಂದ್ರ, ಶಾಲೆ-ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸಿ ಶಿಕ್ಷಕರನ್ನು ನೇಮಿಸ ಬೇಕು. ಶಿಕ್ಷಕರು, ಮೂಲಸೌಕರ್ಯ ದೊರೆಯದೆ ವಿದ್ಯಾರ್ಥಿಗಳು ಅನಕ್ಷರಸ್ಥರಾಗುತ್ತಾರೆ. ಸರ್ಕಾರಗಳು ಕೂಡಲೇ ಗ್ರಾಮಗಳಲ್ಲಿನ ಅಂಗನವಾಡಿ ಕೇಂದ್ರ, ಶಾಲೆ-ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಿ, ಶಿಕ್ಷರನ್ನು ನೇಮಿಸಬೇಕು' ಎಂದು ಗ್ರಾಮಸ್ಥೆ ರಾಮರತ್ನಮ್ಮ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT