ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲೆ ಸೇರಿದ ಹಳ್ಳಿ ಶಾಲೆ ಕಂಪ್ಯೂಟರ್‌

Last Updated 13 ಡಿಸೆಂಬರ್ 2013, 6:16 IST
ಅಕ್ಷರ ಗಾತ್ರ

ಚಿಕ್ಕೋಡಿ: ಪ್ರತಿ ಹಳ್ಳಿಹಳ್ಳಿಯಲ್ಲೂ ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ. ಮಕ್ಕಳು ಮತ್ತು ಪಾಲಕರಲ್ಲೂ ‘ಕಾನ್ವೆಂಟ್‌ ಸಂಸ್ಕೃತಿ’ ಹೆಚ್ಚುತ್ತಿದೆ. ಆದರೂ, ಬಡ ಮಕ್ಕಳಿಗೆ ಸರ್ಕಾರಿ ಶಾಲೆಗಳೇ ವಿದ್ಯಾಮಂದಿರಗಳಾಗಿವೆ. ಸರ್ಕಾರಿ ಶಾಲೆಗಳ ಕಡೆಗೆ ಮಕ್ಕಳನ್ನು ಆಕರ್ಷಿಸಲು ಸರ್ಕಾರ ಹತ್ತು ಹಲವು ಸವಲತ್ತುಗಳನ್ನು ನೀಡುತ್ತಿದೆ.

ಆದರೆ, ಜಾರಿಗೊಳಿಸಿದ ಯೋಜನೆಗಳನ್ನು ಎಷ್ಟರಮಟ್ಟಿಗೆ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದೆ ಎಂಬುದು ಪ್ರಶ್ನಾರ್ಹ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ಕ್ಯಾಲ್ಕ್‌ ಮತ್ತು ಪ್ರೌಢಶಾಲೆಗಳಲ್ಲಿನ ಐಸಿಟಿ ಯೋಜನೆಗಳೇ ಈ ಆಪಾದನೆಗೆ ಸ್ಪಷ್ಟ ನಿದರ್ಶನ.

ಸರ್ಕಾರಿ ಶಾಲೆಗಳ ಮಕ್ಕಳಿಗೂ ಗಣಕಯಂತ್ರ ತಂತ್ರಜ್ಞಾನ ಕುರಿತು ಕನಿಷ್ಠ ಜ್ಞಾನವನ್ನಾದರೂ ನೀಡುವ ಉದ್ದೇಶದಿಂದ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2005–06ನೇ ಸಾಲಿನಿಂದ ಕ್ಯಾಲ್ಕ್ ಮತ್ತು ಮಾಹಿತಿ ಸಿಂಧು ಯೋಜನೆಯಡಿ ಡಯಟ್‌ ಮೂಲಕ 2007–08ನೇ ವರ್ಷದಿಂದ ಪ್ರೌಢಶಾಲೆಗಳಲ್ಲಿ ಐಸಿಟಿ (ಇನ್‌ಫಾರಮೇಶನ್‌ ಆಫ್‌ ಕಂಪ್ಯೂಟರ್‌ ಟೆಕ್ನಾಲಜಿ) ಯೋಜನೆ ಜಾರಿಗೊಳಿಸಲಾಗಿದೆ.

ಅಂತೆಯೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಂಟು ವಲಯಗಳ ಆಯ್ದ 110ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ  ಶಾಲೆಗಳಿಗೆ ತಲಾ 3 ರಿಂದ 5 ಗಣಕಯಂತ್ರಗಳನ್ನು ಪೂರೈಸಲಾಗಿದೆ. ಬೆಳಗಾವಿ ದಕ್ಷಿಣ ಮತ್ತು ಉತ್ತರ (ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ) ಸೇರಿದಂತೆ ಐಸಿಟಿ ಪೇಜ್‌–1 ರಲ್ಲಿ 32 ಪ್ರೌಢಶಾಲೆಗಳನ್ನು, ಪೇಜ್‌–2 ರಲ್ಲಿ 57 ಶಾಲೆಗಳನ್ನು ಅಳವಡಿಸಿ ಪ್ರತಿ ಶಾಲೆಗೂ 4 ರಿಂದ 5 ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ. ಪೇಜ್‌–3ರಲ್ಲಿ ಅನುದಾನಿತ ಪ್ರೌಢಶಾಲೆಗಳೂ ಸೇರಿದಂತೆ 403 ಶಾಲೆಗಳನ್ನು ಅಳವಡಿಸಲಾಗುತ್ತಿದೆ.

ಆದರೆ, ಯೋೋಜನೆ ಆರಂಭದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಪೂರೈಸಲಾದ ಕಂಪ್ಯೂಟರ್‌ ಹಾಗೂ ಇತರ ಉಪಕರಣಗಳು ಈಗ ದುರಸ್ತಿಗೆ ಬಂದಿದ್ದು, ಶಾಲಾ ಕೊಠಡಿಗಳ ಮೂಲೆಗಳಲ್ಲಿ ದೂಳು ಹಿಡಿದಿವೆ. ಯುಪಿಎಸ್‌, ಬ್ಯಾಟರಿಗಳು ಹಾಳಾಗಿವೆ. ಪ್ರಿಂಟರ್‌ಗಳು ಕೆಟ್ಟು ಹೋಗಿವೆ. ಇಂಟರ್‌ನೆಟ್‌ ಸೇವೆ ಸ್ಥಗಿತಗೊಂಡಂತಾಗಿದೆ. ಕಂಪ್ಯೂಟರ್‌ಗಳು ಆನ್‌ ಆಗುತ್ತಿಲ್ಲ. ಈ ಕಂಪ್ಯೂಟರ್‌ಗಳನ್ನು ಒದಗಿಸಿರುವ ಕಂಪೆನಿಗಳ ನಿರ್ವಹಣಾ ಗುತ್ತಿಗೆಯೂ ಅಂತ್ಯಗೊಂಡಿದೆ. ಮತ್ತೆ ಈ ಕಂಪ್ಯೂಟರ್‌ಗಳ ನಿರ್ವಹಣೆಯತ್ತ ಸರ್ಕಾರ ಗಮನ ಹರಿಸುತ್ತಿಲ್ಲ. ಹೀಗಾಗಿ ಮಕ್ಕಳು ಗಣಕಯಂತ್ರ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

‘ಸರ್ಕಾರಿ ಶಾಲೆಗಳಿಗೆ ಐದಾರು ವರ್ಷಗಳ ಆಚೆ ಒದಗಿಸಲಾದ ಗಣಕಯಂತ್ರಗಳು ದುರಸ್ತಿಯಲ್ಲಿವೆ. ಅವುಗಳ ನಿರ್ವಹಣೆಗೆ ಸೂಕ್ತ ಅನುದಾನ ಒದಗಿಸಲಾಗುತ್ತಿಲ್ಲ. ಈ ಮೊದಲು ಶಿಕ್ಷಕರಿಗೆ ನೀಡಲಾಗುತ್ತಿದ್ದ ಗಣಕಯಂತ್ರ ಶಿಕ್ಷಣ ಕುರಿತ ತರಬೇತಿಯನ್ನೂ ಸ್ಥಗಿತಗೊಳಿಸಲಾಗಿದೆ. ರಾಜ್ಯ ಕಚೇರಿಯಿಂದ ಅನುದಾನ ಬಿಡುಗಡೆಯಾದರೆ ಕಂಪ್ಯೂಟರ್‌ಗಳ ನಿರ್ವಹಣೆಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಪ್ರಾಚಾರ್ಯ ಜಿ.ಆರ್‌. ಕೆಂಚರಡ್ಡೇರ್‌.

‘ಯೋಜನೆ ಆರಂಭದಲ್ಲಿ ನೀಡಲಾಗಿರುವ ಕೆಲವು ಕಂಪ್ಯೂಟರ್‌ಗಳು ದುರಸ್ತಿಗೆ ಬಂದಿವೆ. ನಿರ್ವಹಣಾ ಗುತ್ತಿಗೆ ಪಡೆದ ಕಂಪೆನಿಗಳ ಒಪ್ಪಂದವೂ ಅಂತ್ಯಗೊಂಡಿದೆ. ಕಂಪ್ಯೂಟರ್‌ಗಳ ನಿರ್ವಹಣೆ ಮತ್ತು ದುರಸ್ತಿ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ’ ಎಂದು ಚಿಕ್ಕೋಡಿಯ ಡಿಡಿಪಿಐ ಡಿ.ಎಂ. ದಾನೋಜಿ ಹೇಳುತ್ತಾರೆ.

‘ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗಣಕಯಂತ್ರ ಶಿಕ್ಷಣವನ್ನೂ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗಣಕಯಂತ್ರ ಶಿಕ್ಷಣ ಅವ್ಯವಸ್ಥೆಯಿಂದ ಕೂಡಿದೆ. ಗಣಕಯಂತ್ರಗಳನ್ನು ದುರಸ್ತಿ ಮಾಡಿಸಿ ಮಕ್ಕಳಿಗೆ ಸೂಕ್ತ ಮಾಹಿತಿ ನೀಡುವಲ್ಲಿ ಗಮನ ಹರಿಸುತ್ತಿಲ್ಲ. ಬ್ಯಾಟರಿ, ಯುಪಿಎಸ್‌ಗಳು ಹದಗೆಟ್ಟಿರುವುದರಿಂದ ವಿದ್ಯುತ್‌ ಇದ್ದಾಗ ಮಾತ್ರ ಸುಸ್ಥಿತಿಯಲ್ಲಿರುವ ಕಂಪ್ಯೂಟರ್‌ಗಳ ಮೂಲಕ ಮಕ್ಕಳಿಗೆ ಮಾಹಿತಿ ನೀಡಲಾಗುತ್ತಿದೆ.

ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಸಮಸ್ಯೆಯೂ ಇದೆ. ಹೀಗಾಗಿ ಎಲ್ಲ ಮಕ್ಕಳಿಗೂ ಗಣಕಯಂತ್ರ ಶಿಕ್ಷಣ ದೊರಕುತ್ತಿಲ್ಲ. ಇದೇ ಸ್ಥಿತಿ ಮುಂದುವರಿದಲ್ಲಿ ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಸೂಕ್ತ ಪೈಪೋಟಿ ನೀಡಲು ಸಾಧ್ಯವೇ ಎಂಬ ಆತಂಕ ಕಾಡುತ್ತಿದೆ. ಗಣಕಯಂತ್ರ ಶಿಕ್ಷಣಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕಾತಿ ಮಾಡಬೇಕು.

ಹಾಗೂ ಅವ್ಯವಸ್ಥೆಯ ಆಗರವಾಗಿರುವ ಗಣಕಯಂತ್ರ ಶಿಕ್ಷಣವನ್ನು  ಸಬಲಗೊಳಿಸಬೇಕು’ ಎಂದು ತಾಲ್ಲೂಕಿನ ಚಿಂಚಣಿಯ ಅಲ್ಲಮಪ್ರಭು ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಸದಸ್ಯ ಪರಗೌಡ ಅಮ್ಮಣಗಿ ಆಗ್ರಹಿಸುತ್ತಾರೆ.
-ಸುಧಾಕರ ತಳವಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT