ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ್ಕಿ ಹೆದ್ದಾರಿ ವಿಸ್ತರಣೆ ಸಮಸ್ಯೆ:ವಿವಾದಗಳಿಗೆ ಶೀಘ್ರ ತೆರೆ: ಆಸ್ಕರ್

Last Updated 12 ಮೇ 2012, 8:40 IST
ಅಕ್ಷರ ಗಾತ್ರ

ಮೂಲ್ಕಿ: ಸುರತ್ಕಲ್ ಮತ್ತು ಕುಂದಾಪುರದ ನಡುವೆ ನಡೆಯುತ್ತಿರುವ ಚತುಷ್ಪಥ ಕಾಮಗಾರಿಗೆ ಮೂಲ್ಕಿಯಲ್ಲಿ ಉಂಟಾಗಿರುವ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಕಂಡುಕೊಂಡು ಕಾಮಗಾರಿಗೆ ತೊಡಕಾಗಿರುವ ಎಲ್ಲಾ ವಿವಾದಗಳಿಗೆ ತೆರೆ ಎಳೆಯಲಾಗುವುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದರು.

ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಅವರು ಸ್ಥಳೀಯರ ಜತೆ  ಚರ್ಚೆ ನಡೆಸಿದರು.

ಶಾಸಕ ಅಭಯಚಂದ್ರ ಮಾತನಾಡಿ ಮೂಲ್ಕಿಯಲ್ಲಿ ಬೈಪಾಸ್ ರಚನೆಯಿಂದ ಬಪ್ಪನಾಡು ದೇವಸ್ಥಾನಕ್ಕೆ ಧಕ್ಕೆ, ಹೆದ್ದಾರಿ ವಿಸ್ತರಣೆಯಿಂದ ಅಂಗಡಿಗಳ ಮಾಲೀಕರಿಗೆ ಪಾರ್ಕಿಂಗ್ ಸಮಸ್ಯೆ, ಅಂಡರ್‌ಪಾಸ್ ರಚನೆಯಾದಲ್ಲಿ ವ್ಯವಹಾರಕ್ಕೆ ತೊಡಕು ಈ ಬಗ್ಗೆ ಗಮನ ಸೆಳೆದು ಈ ಎಲ್ಲಾ ಸಮಸ್ಯೆಗೆ  ಫ್ಲೈ ಓವರ್ ರಚಿಸಿದಲ್ಲಿ ಎಲ್ಲಕ್ಕೂ ಪರಿಹಾರ ಆಗಬಹುದು ಎಂದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಮಹಾಪ್ರಬಂಧಕ ಎ.ಕೆ.ಮಾಥುರ್ ಪ್ರತಿಕ್ರಿಯಿಸಿ ಈ ಭಾಗದಲ್ಲಿ ಮೊದಲು ಬೈಪಾಸ್ ನಿರ್ಮಿಸಲು ತೀವ್ರ ಪ್ರತಿಭಟನೆ ನಡೆದು ರದ್ದುಗೊಂಡಿದ್ದು, ಈಗಿರುವ ವೆಚ್ಚದಲ್ಲಿ ಅಂಡರ್ ಪಾಸನ್ನು ಮಾತ್ರ ಮಾಡಬಹುದು ಆದರೆ ಫ್ಲೈ ಓವರ್ ನಿರ್ಮಿಸಲು ಹೆಚ್ಚುವರಿ ಅನುದಾನದ ಅಗತ್ಯ ಇದ್ದು ಯೋಜನಾ ವೆಚ್ಚದಲ್ಲಿ ಸಾಧ್ಯವಿಲ್ಲ ಎಂದರು.

ಶಾಸಕ ಅಭಯಚಂದ್ರ ಉತ್ತರಿಸಿ ಪಕ್ಕದ ಸುರತ್ಕಲ್, ಕೂಳೂರು, ಕೊಟ್ಟಾರ, ಕುಂಟಿಕಾನದ ಮುಖ್ಯ ಪೇಟೆಯಲ್ಲಿ ಫ್ಲೈ ಓವರ್ ನಿರ್ಮಿಸಿಯೇ ಪರಿಹಾರ ಕಂಡು ಕೊಳ್ಳಲಾಗಿದೆ. ಜನರ ಭಾವನೆಗೆ ಧಕ್ಕೆ ಬರದೇ ನಿರ್ಧಾರ ಕೈಗೊಳ್ಳಬೇಕು. ಬಲವಂತದ ನಿರ್ಧಾರ ಮಾಡಬೇಡಿ ಎಂದು ಅಸಮಾಧಾನವನ್ನು ಆಸ್ಕರ್ ಎದುರು ಹೊರಗೆಡಹಿದರು.

`ಎಲ್ಲಾ ಸಮಸ್ಯೆಗೂ ಸೂಕ್ತವಾಗಿ ಪರಿಹಾರ ಕಂಡುಕೊಳ್ಳಲಾಗುವುದು. ಅಲ್ಲದೇ ಮೊದಲು ಬೈಪಾಸ್ ಬೇಡ ಎಂದವರು ಈಗ ಬೇಕು ಎಂದಿರುವುದು ಆಶ್ಚರ್ಯ ತಂದಿದೆ. ಆದ್ದರಿಂದ ಎಲ್ಲಾ ಬೇಡಿಕೆಯನ್ನು ಪರಿಶೀಲಿಸಿ ಕಾಮಗಾರಿಯನ್ನು ನಡೆಸಲಾಗುವುದು~ ಎಂದು ಆಸ್ಕರ್ ಭರವಸೆ ನೀಡಿದರು.

ಈ ನಡುವೆ ಬೈಪಾಸ್ ವಿರೋಧಿ ಸಮಿತಿಯ ಸದಸ್ಯರು ಸ್ಥಳದಲ್ಲಿದ್ದರೂ, ಯಾವುದೇ ಆಕ್ಷೇಪ ಅಥವಾ ಮನವಿ ಸಲ್ಲಿಸಲಿಲ್ಲ.ಹಳೆಯಂಗಡಿಯಲ್ಲಿ ರಸ್ತೆ ವಿಸ್ತರಣೆ ವೇಳೆ ತಾರತಮ್ಯ ಅನುಸರಿಸಿದ್ದಾರೆ ಎಂದು ಉದ್ಯಮಿ ಶಶೀಂದ್ರ ಸಾಲ್ಯಾನ್ ದೂರಿಕೊಂಡರು. ನಂತರ ಹಳೆಯಂಗಡಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮರಳಿ ಅಳತೆ ಮಾಡಲು ಆಸ್ಕರ್ ಸೂಚಿಸಿದರು.

ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್. ಬಿ.ಎಂ.ಆಸಿಫ್, ಹರಿಕೃಷ್ಣ ಪುನರೂರು, ಹರಿಶ್ಚಂದ್ರ ಕೋಟ್ಯಾನ್, ಉದಯ ಶೆಟ್ಟಿ, ತಾರಾನಾಥ ಅಡ್ವೆ, ನೂರು ಅಹ್ಮದ್, ಸುನಿಲ್ ಆಳ್ವಾ, ಸತೀಶ್ ಅಂಚನ್, ಇಲಾಖೆಯ ಅಧಿಕಾರಿಗಳಾದ ಗವಸಾನೆ, ಕೆ.ಎಂ.ಹೆಗ್ಡೆ ಇನ್ನಿತರರು ಹಾಜರಿದ್ದರು.
 

                    ಬೈಪಾಸ್ ರಚಿಸಿ..
ಮೂಲ್ಕಿಯಲ್ಲಿ ರಸ್ತೆ ವಿಸ್ತರಣೆಗೆ ಸೂಕ್ತವಾದ ಪರಿಹಾರ ಕಾಣಬೇಕಾದರೆ ರಾಜಕೀಯ ಉದ್ದೇಶದಿಂದ ರದ್ದಾಗಿರುವ ಬೈಪಾಸ್ ನಿರ್ಮಿಸುವುದನ್ನು ಮರು ಪರಿಶೀಲಿಸಬೇಕು ಎಂದು ಉದ್ಯಮಿಗಳು, ಅಂಗಡಿ ಮಾಲೀಕರು ಮನವಿ ಮಾಡಿಕೊಂಡರು.

              ಮೂಲ್ಕಿ ರೈಲು ನಿಲುಗಡೆ

ಮೂಲ್ಕಿ ರೈಲ್ವೇ ನಿಲ್ದಾಣದಲ್ಲಿ ಕೆಲವು ರೈಲುಗಳಿಗೆ ನಿಲುಗಡೆ ನೀಡುವ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಲಾಗುತ್ತಿದೆ. ರೈಲ್ವೆ ಇಲಾಖೆಯು ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಅಲ್ಲದೇ ಎಲ್ಲಾ ರೈಲು ನಿಂತರೆ ಅದು ಗೂಡ್ಸ್ ಆಗುತ್ತದೆ ಎಂಬುದನ್ನು ಮನಗಂಡು ಯಾವ ರೈಲಿಗೆ ನಿಲುಗಡೆ ಮಾಡಬೇಕು ಎಂದು ಇಲಾಖೆ ನಿರ್ಧರಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT