ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಬೆಂಕಿಗಾಹುತಿ

ಬೀದರ್‌ನ ಚೌಳಿ ಮಠದಲ್ಲಿ ದುರಂತ ಅಂತ್ಯ ಕಂಡ ಸ್ವಾಮೀಜಿಗಳು
Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೀದರ್: ತಾಲ್ಲೂಕಿನ ಚೌಳಿ ಗ್ರಾಮದಲ್ಲಿರುವ ಗಣೇಶ್ವರ ಅವಧೂತರ ಮಠದಲ್ಲಿ ಸೋಮವಾರ ಬೆಳಗಿನ ಜಾವ ಮಠದ ಮೂವರು ಸಾಧಕರು (ಕಿರಿಯ ಸ್ವಾಮೀಜಿಗಳು) `ಅಗ್ನಿಪ್ರವೇಶ' ಮಾಡುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ದುರಂತ ಮುಂಜಾನೆ 4ರಿಂದ 4.30ರ ನಡುವೆ ಸಂಭವಿಸಿದೆ ಎಂದು ಆಂದಾಜು ಮಾಡಲಾಗಿದೆ. ಕಟ್ಟಿಗೆ ರಾಶಿಗೆ ಬೆಂಕಿ ಹೊತ್ತಿರುವುದನ್ನು ಗಮನಿಸಿದ ಇತರ ಸಾಧಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ಸುಟ್ಟ ಕಟ್ಟಿಗೆಗಳ ರಾಶಿ ಕೆದಕಿದಾಗ ಕರಕಲಾದ ದೇಹಗಳು ಪತ್ತೆಯಾದವು.

ಮೂಲತಃ ಔರಾದ್ ತಾಲ್ಲೂಕು ಮಾನೂರು ನಿವಾಸಿ ಈರರೆಡ್ಡಿ ಸ್ವಾಮೀಜಿ (50), ಬೀದರ್ ತಾಲ್ಲೂಕಿನ ನಾಗೋರಾ ನಿವಾಸಿ ಜಗನ್ನಾಥ ಸ್ವಾಮೀಜಿ (32) ಮತ್ತು ಮಠಕ್ಕೆ ಸಮೀಪದ ಚೌಳಿ ಗ್ರಾಮದವರಾದ ಪ್ರಣವ್ ಸ್ವಾಮೀಜಿ (16) ಮೃತಪಟ್ಟವರು. ಗುರುತು ಸಿಗದಷ್ಟು ಕರಕಲಾಗಿದ್ದ ದೇಹಗಳನ್ನು ಬಳಿಕ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ಒಂದೂವರೆ ತಿಂಗಳಲ್ಲಿ ಮಠದಲ್ಲಿ ಸಂಭವಿಸಿದ ಎರಡನೇ ದುರಂತವಿದು. ಮಠದ ಹಿರಿಯ ಸ್ವಾಮೀಜಿ, `ಚೌಳಿ ಮುತ್ಯಾ' ಎಂದೇ ಹೆಸರಾಗಿದ್ದ ಗಣೇಶ್ವರ ಅವಧೂತರು, ಫೆ. 28ರ ಬೆಳಗಿನ ಜಾವ ಅವರು ವಾಸವಿದ್ದ ಮಠದ ಗರ್ಭಗುಡಿ ಬಳಿಯೇ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವಿನ ಕಾರಣ ಈಗಲೂ ನಿಗೂಢವಾಗಿದೆ.

ಪೂರ್ವಯೋಜಿತ?: ಪ್ರಾಥಮಿಕ ಮಾಹಿತಿಗಳ ಪ್ರಕಾರ ಸೋಮವಾರದ ದುರಂತ ಪೂರ್ವಯೋಜಿತ. ಗಣೇಶ್ವರ ಅವಧೂತರ ಮಠದಲ್ಲಿ ಏ. 11ರ ಯುಗಾದಿಯಂದು ವಾರ್ಷಿಕ ಜಾತ್ರೆ ನಡೆಯಲಿದೆ. ಅದಕ್ಕಾಗಿ, ದಾಸೋಹ ಕಾರ್ಯಕ್ರಮಗಳಿಗೆ ಎರಡು ಟ್ರ್ಯಾಕ್ಟರ್‌ಗಳಲ್ಲಿ ಕಟ್ಟಿಗೆ ತರಿಸಲಾಗಿತ್ತು. ಇದನ್ನೇ ಈ ಮೂವರು ಆತ್ಮಹತ್ಯೆಗೆ ಬಳಸಿಕೊಂಡಿದ್ದಾರೆ.

`ಮೊದಲು ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಬಂತು. ಅಗ್ನಿಶಾಮಕ ದಳದ ವಾಹನ ಕರೆಸಿದೆವು. ಬೆಂಕಿ ನಂದಿಸಿ, ಕಟ್ಟಿಗೆ ಕೆದಕಿದಾಗ ದೇಹ ಪತ್ತೆಯಾಯಿತು. ಮೊದಲು ಒಂದು, ನಂತರ ಇನ್ನೊಂದು, ಆಮೇಲೆ ಮತ್ತೊಂದು ಪತ್ತೆಯಾಯಿತು' ಎಂದು ಗ್ರಾಮೀಣ ವೃತ್ತದ ಸಿಪಿಐ  ಆನಂದ ಕಬ್ಬೂರು ತಿಳಿಸಿದರು.

`ಬೆಳಿಗ್ಗೆ 5ರ ಸುಮಾರಿಗೆ ಮಾಹಿತಿ ಬಂತು. ಮೊದಲು ಬೆಂಕಿ ಆಕಸ್ಮಿಕ ಎಂದುಕೊಂಡಿದ್ದೆವು. ಶವ ಪತ್ತೆಯಾದಾಗ ಆತಂಕಗೊಂಡೆವು. ಕೂಡಲೇ ಮಠದ ಆವರಣವನ್ನು ತಪಾಸಣೆಗೆ ಒಳಪಡಿಸಿದಾಗ ಸಾವಿಗೂ ಮುನ್ನ ಬರೆದಿಡಲಾಗಿದ್ದ ಎರಡು ಪತ್ರಗಳು ದೊರೆಕಿದವು' ಎಂದು ಮಾಹಿತಿ ನೀಡಿದರು.

ವಿದ್ಯುತ್ ಕಡಿತದ ಕಾರಣ ಜನರೇಟರ್‌ಗೆ ಬಳಸಲು ತರಿಸಲಾಗಿದ್ದ ಸುಮಾರು ಒಂದು ಡ್ರಮ್ ಸೀಮೆಎಣ್ಣೆಯಲ್ಲಿ ಅರ್ಧಕ್ಕೂ ಹೆಚ್ಚು ಪ್ರಮಾಣದ ಸೀಮೆಎಣ್ಣೆಯನ್ನು ಕಟ್ಟಿಗೆಗೆ ಸುರಿದು ಬೆಂಕಿ ಹಚ್ಚಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ. ಬೆಂಕಿಯ ಜ್ವಾಲೆಯು, ಸುಮಾರು 20 ಅಡಿ ಎತ್ತರದ ಮಠದ ಪ್ರವೇಶ ದ್ವಾರದ ಗೋಪುರದ ಎತ್ತರಕ್ಕೆ ವ್ಯಾಪಿಸಿ ಕಪ್ಪು ಕಲೆಗಳಾಗಿದ್ದವು.

ಕುಳಿತ ಸ್ಥಿತಿಗೆ ಹೊಂದಿಕೆ ಆಗುವಂತೆ ಮೊದಲು ಕಟ್ಟಿಗೆಗಳನ್ನು ಜೋಡಿಸಿ, ಸೀಮೆ ಎಣ್ಣೆ ಸುರಿದು ಬಳಿಕ ಬೆಂಕಿ ಹೊತ್ತಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸ್ ವಾಹನ ಹೊರಗೇ ಇತ್ತು!: ದುರಂತ ನಡೆದ ಸಂದರ್ಭದಲ್ಲಿ ಮಠದ ಕೇಂದ್ರ ಭಾಗದಲ್ಲಿ ಮೃತಪಟ್ಟ ಮೂವರೇ ಇದ್ದರು. ಅವರು ಇದ್ದ ಪ್ರದೇಶದ ಮುಖ್ಯ ಪ್ರವೇಶ ದ್ವಾರಗಳಿಗೆ ಬೀಗ ಹಾಕಲಾಗಿತ್ತು. ಹಿರಿಯ ಸ್ವಾಮೀಜಿ ಶಂಕಾಸ್ಪದ ಸಾವು, ನಂತರದ ವಿಚಾರಣೆ ಬೆಳವಣಿಗೆಯ ಹಿನ್ನೆಲೆಯಲ್ಲಿ ನಿಯೋಜಿಸಿದ್ದ ಪೊಲೀಸರು ಮಠದ ಹೊರಗಡೆ ಇದ್ದರು.

`ಮಠದಲ್ಲಿ ನಾಲ್ಕೈದು ಸಾಧಕರಿದ್ದು, ಪೊಲೀಸರೇ ಅಲ್ಲದೆ ಇತರ ಸಾಧಕರೂ ಆ ಮಠದ ಹೊರಗೆ ಇರುವ ಹೆಚ್ಚುವರಿ ಕೊಠಡಿಗಳಲ್ಲಿ ಮಲಗಿದ್ದರು. ಜಗನ್ನಾಥ ಸ್ವಾಮೀಜಿ ಭಾನುವಾರ ಇಡೀ ದಿನ ಯಾರೊಂದಿಗೂ ಹೆಚ್ಚು ಮಾತನಾಡಿರಲಿಲ್ಲ' ಎಂದು ಸಾಧಕರೊಬ್ಬರ ಮಾತನ್ನು ಆಧರಿಸಿ ಸ್ಥಳೀಯರೊಬ್ಬರು ತಿಳಿಸಿದರು.

ದುರ್ಘಟನೆಯ ಸುದ್ದಿ ಹರಡುತ್ತಿದ್ದಂತೆ ಭಕ್ತರು, ಮೃತರ ಸಂಬಂಧಿಕರು ಮಠದ ಬಳಿ ಸೇರಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಜಗನ್ನಾಥ ಸ್ವಾಮೀಜಿ ಅವರ ತಾಯಿ ಪದ್ಮಿನಿಯಮ್ಮ, ಪ್ರಣವ್ ಅವರ ತಾಯಿ ಶ್ರೀದೇವಿ ಮತ್ತು ಈರರೆಡ್ಡಿ ಅವರ ತಾಯಿ ನಾಗಮ್ಮ ಅವರ ಆಕ್ರಂದನ, ಬಂಧುಗಳು ಸಂತೈಸಿದಷ್ಟೂ ಹೆಚ್ಚಾಗುತ್ತಿತ್ತು.

ಸರ್ಕಾರದಿಂದ ತನಿಖೆ
`ಬೀದರ್‌ನ ಚೌಳಿಮಠದ ಮೂವರು ಕಿರಿಯ ಸ್ವಾಮೀಜಿಗಳ ಆತ್ಮಾಹುತಿ ಘಟನೆ ನಿಗೂಢವಾಗಿದ್ದು, ಈ ಬಗ್ಗೆ  ಸೂಕ್ತ ತನಿಖೆ ನಡೆಸಲಾಗುವುದು' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT