ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಮಹಿಳೆಯರು ಸೇರಿ ಐವರು ಸಿಡಿಲಿಗೆ ಬಲಿ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು, ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಒಬ್ಬ ಮಹಿಳೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ  ಒಬ್ಬ ಯುವಕ ಸೇರಿ ಒಟ್ಟು ಐವರು ರಾಜ್ಯದಲ್ಲಿ ಭಾನುವಾರ ಸಿಡಿಲಿಗೆ ಬಲಿಯಾಗಿದ್ದಾರೆ.

ಕೊಳ್ಳೇಗಾಲ:  ತಾಲ್ಲೂಕಿನ ಹನೂರು ಬಳಿಯ ಅಲಗಾಪುರ ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದ ಪ್ರತ್ಯೇಕ ಪ್ರಕರಣಗಳಲ್ಲಿ  ಮೂವರು ಮೃತಪಟ್ಟಿದ್ದಾರೆ.ಅಲಗಾಪುರದ ಸಣ್ಣಮಾದಮ್ಮ (55), ರಾಜಮ್ಮ (35) ಮತ್ತು ಸಿದ್ದಪ್ಪ (28) ಮೃತಪಟ್ಟವರು.

ಸಣ್ಣಮಾದಮ್ಮ, ರಾಜಮ್ಮ ಸೇರಿದಂತೆ 20ಕ್ಕೂ ಹೆಚ್ಚು ಮಹಿಳೆಯರು ತೋಮಿಯಾರ್‌ಪಾಳ್ಯದ ರಸ್ತೆ ಸಮೀಪ ಇರುವ ರಾಜಮ್ಮ ಅವರ ಸಂಬಂಧಿಕರ ಜಮೀನಿಗೆ ಕಳೆ ಕೀಳಲು ಹೋಗಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಭಾರಿ ಮಳೆ ಬಂದಾಗ ಕೆಲವು ಮಹಿಳೆಯರು ಜಮೀನಿನಿಂದ ಇತರ ಸ್ಥಳಗಳಿಗೆ ಹೋಗಿ ಆಶ್ರಯ ಪಡೆದರು.

ಸಣ್ಣಮಾದಮ್ಮ ಮತ್ತು ರಾಜಮ್ಮ ಮಾತ್ರ ಜಮೀನಿನ ಬಳಿ ಇದ್ದ ಬೇವಿನ ಮರದ ಅಡಿಯಲ್ಲಿ ಆಶ್ರಯ ಪಡೆದರು. ಆಗ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಸಾವಿಗೀಡಾದರು.

ಯುವಕ ಬಲಿ: ಮಳೆ ಬರುವಾಗ ಸಿದ್ದಪ್ಪ  ಅಲಗಾಪುರದ ಶ್ಯಾಗ್ಯ ರಸ್ತೆಯಲ್ಲಿರುವ ಕೆಂಜಗದಬೋರೆ ಬಳಿ ಹುಣಸೆ  ಮರದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದು ಮೃತಪಟ್ಟರು.

ಅಲಗಾಪುರದ ಹೊರವಲಯದ ಜಿ.ರಾಜೂಗೌಡ ನಗರದ ಮಣಿ ಎಂಬುವವರ ತೋಟದ ಮನೆಯ ಕೊಟ್ಟಿಗೆಯಲ್ಲಿದ್ದ ಹಸು ಕೂಡ ಸಿಡಿಲಿನ ಹೊಡೆತದಿಂದ ಮೃತಪಟ್ಟಿದೆ.


ಪರಿಹಾರಕ್ಕೆ ಸೂಚನೆ: ಸಿಡಿಲು ಬಡಿದು ಮೃತಪಟ್ಟವರ ಕುಟುಂಬಕ್ಕೆ ತಕ್ಷಣ ಪ್ರಕೃತಿ ವಿಕೋಪ ಪರಿಹಾರದಡಿ ತಲಾ ರೂ.1.5 ಲಕ್ಷ ಚೆಕ್ ವಿತರಿಸಲು ಉಪ ವಿಭಾಗಾಧಿಕಾರಿ ಎ.ಬಿ. ಬಸವರಾಜು ಅವರು  ತಹಶೀಲ್ದಾರ್ ಅವರಿಗೆ ಸೂಚಿಸಿದ್ದಾರೆ.

ಎಚ್.ಡಿ.ಕೋಟೆ : ತಾಲ್ಲೂಕಿನ ಗುಜ್ಜಪ್ಪನಹುಂಡಿಯಲ್ಲಿ  ತಮ್ಮಯ್ಯಣ್ಣ ಎಂಬುವವರ ಮಗಳು ಪುಟ್ಟಮ್ಮ (28) ಹೊಲದಲ್ಲಿ ಕೆಲಸ ಮಾಡಿ ಮನೆಗೆ ಮರಳುವಾಗ ಮಳೆಯಿಂದ ರಕ್ಷಣೆಗಾಗಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಮೃತರಾದರು.

ಬೆಳ್ತಂಗಡಿ
: ತಾಲ್ಲೂಕಿನ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಕೋಡಿ ಗ್ರಾಮದಲ್ಲಿ ಬೆದ್ರಡ್ಕ ನಿವಾಸಿ ಮಹಮ್ಮದ್ (18) ಎಂಬ ಯುವಕ ಮನೆ ಬಳಿ ತೆಂಗಿನಮರದ ಬುಡದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾನೆ. ಭಾನುವಾರ ಮಧ್ಯಾಹ್ನ ನಂತರ ತಾಲ್ಲೂಕಿನಾದ್ಯಂತ ಗುಡುಗು ಸಹಿತ ಮಳೆಯಾಗಿದೆ.
ಮಂಗಳೂರು:  ನಗರ ಮತ್ತು ತಾಲ್ಲೂಕಿನಲ್ಲಿ ಸಂಜೆ ಗುಡುಗು, ಸಿಡಿಲಿನಿಂದ ಸುಮಾರು ಒಂದು ಗಂಟೆ ಕಾಲ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT