ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ವೈದ್ಯರು ಸೇರಿ 17 ಜನ ಬಂಧನ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) 2011-12ನೇ ಶೈಕ್ಷಣಿಕ ವರ್ಷದ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ (ಪಿಜಿಇಟಿ) ನಡೆದಿದ್ದ ಅಕ್ರಮಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರು ಹಾಗೂ ಪರೀಕ್ಷ್ಷೆಯಲ್ಲಿ ಉನ್ನತ ಶ್ರೇಣಿಯ ‌್ಯಾಂಕ್ ಗಳಿಸಿದ್ದ ಒಂಬತ್ತು ವಿದ್ಯಾರ್ಥಿಗಳು ಸೇರಿದಂತೆ 17 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಆರ್‌ಜಿಯುಎಚ್‌ಎಸ್‌ನ ಸಹಾಯಕ ಗ್ರಂಥಪಾಲಕ ಹೇಮಂತರಾವ್ (32), ಗುಮಾಸ್ತ ಸೋಮಶೇಖರ್ (34), ಕಂಪ್ಯೂಟರ್ ಪ್ರೊಗ್ರ್ಯಾಮರ್ ಡಿ.ಎಚ್.ಕೃಷ್ಣಮೂರ್ತಿ (35), ಕೇರಳದ ಕಣ್ಣೂರಿನಲ್ಲಿ ಮೂಳೆ ಮತ್ತು ಕೀಲು ತಜ್ಞರಾಗಿರುವ ಡಾ.ಪಿ.ಮುರಾರಿ (28), ಇಂಪಾಲದ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿ ಡಾ.ಸಂತೋಷ್ (25), ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ) ವೈದ್ಯಾಧಿಕಾರಿ ಡಾ.ಭರತ್ ಕುಮಾರ್ (35), ಕಂಪ್ಯೂಟರ್ ಆಪರೇಟರ್ ಡೇವಿಡ್ ಪ್ರಭಾಕರ್ (38) ಮತ್ತು ಪ್ರಥಮ ದರ್ಜೆ ಸಹಾಯಕ ಮಲ್ಲಿಕಾರ್ಜುನ ಜೋಗಳೇಕರ್ (40) ಬಂಧಿತರು.

ಪರೀಕ್ಷೆಯಲ್ಲಿ ಅಕ್ರಮವಾಗಿ ರ‌್ಯಾಂಕ್ ಗಳಿಸಿದ್ದ ಬೆಂಗಳೂರು ವೈದ್ಯಕೀಯ ಕಾಲೇಜಿನ ರೇಡಿಯಾಲಜಿ ವಿಭಾಗದ ವಿದ್ಯಾರ್ಥಿ ಡಾ.ಸಂಕೀರ್ತ್ (25), ಜನರಲ್ ಮೆಡಿಸಿನ್ ವಿಭಾಗದ ಡಾ.ಫಿರ್ದೋಸಾ ಸುಲ್ತಾನ್ (28), ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಡಾ.ರೇಣುಕಾ (26), ಬೆಳ್ಳೂರಿನ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ರೇಡಿಯಾಲಜಿ ವಿಭಾಗದ ಡಾ.ಡಿ.ಕೆ.ಭಾರತಿ (39), ವಿಮ್ಸನ ಜನರಲ್ ಮೆಡಿಸಿನ್ ವಿಭಾಗದ ಡಾ.ಸುರೇಶ್ (25), ಸೇವಾನಿರತ ವೈದ್ಯ ಡಾ.ಧನಂಜಯ್, ಗುಲ್ಬರ್ಗದ ಮಹದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ರೇಡಿಯಾಲಜಿ ವಿಭಾಗದ ಡಾ.ಅಭಿಜಿತ್ ಪಟೇಲ್ (25), ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಡಾ.ಕೆ.ಬಸವರಾಜು (35) ಹಾಗೂ ಜನರಲ್ ಮೆಡಿಸಿನ್ ವಿಭಾಗದ ಡಾ.ವಿನೋದ್ ಕರ್ಗಿ (26) ಇತರೆ ಬಂಧಿತ ಆರೋಪಿಗಳು.

`ಪ್ರಕರಣದ ಪ್ರಮುಖ ಆರೋಪಿ ವಿಮ್ಸನ ವಿಧಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿನಾಯಕ ಪ್ರಸನ್ನ ಎಂಬಾತ ತಲೆಮರೆಸಿಕೊಂಡಿದ್ದಾನೆ. ಪರೀಕ್ಷೆಯಲ್ಲಿ ಅಕ್ರಮವಾಗಿ ರ‌್ಯಾಂಕ್ ಗಳಿಸಿದ್ದ ಡಾ.ಶಿಲ್ಪಾ, ಡಾ.ಹರಿ ದತ್ತಾತ್ರೇಯ ಮತ್ತು ವಿನಾಯಕ ಪ್ರಸನ್ನನಿಗೆ ನೆರವು ನೀಡಿದ್ದ ಆರು ವೈದ್ಯರು ಸಹ ತಲೆಮರೆಸಿಕೊಂಡಿದ್ದಾರೆ~ ಎಂದು ಸಿಐಡಿ ಡಿಜಿಪಿ ಶಂಕರ ಬಿದರಿ ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳಿಂದ ಒಂಬತ್ತು ಲ್ಯಾಪ್‌ಟಾಪ್, 25 ಕಂಪ್ಯೂಟರ್ ಹಾರ್ಡ್ ಡಿಸ್ಕ್, 20 ಪೆನ್ ಡ್ರೈವ್ ಹಾಗೂ 28 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಲ್ಯಾಪ್‌ಟಾಪ್‌ಗಳು ಮತ್ತು ಹಾರ್ಡ್ ಡಿಸ್ಕ್‌ನಲ್ಲಿ ಪಿಜಿಇಟಿ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳು, ಕೀ ಉತ್ತರಗಳ ದತ್ತಾಂಶ ಇರುವುದನ್ನು ವಿಧಿವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.

ವಿಮ್ಸನಲ್ಲಿ ಆರು ವರ್ಷಗಳಿಂದ ಸೇವೆಯಲ್ಲಿರುವ ವಿನಾಯಕ ಆರ್‌ಜಿಯುಎಚ್‌ಎಸ್‌ನ ಪರೀಕ್ಷಾ ವಿಭಾಗದ ಅಧಿಕಾರಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ. ಆ ಅಧಿಕಾರಿಗಳ ನೆರವಿನಿಂದಲೇ ಆತ 2009ರಿಂದಲೂ ಇದೇ ರೀತಿ ಆರ್‌ಜಿಯುಎಚ್‌ಎಸ್‌ನ ಪಿಜಿಇಟಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದರು.

ನಗದು ಬಹುಮಾನ: ಆರೋಪಿ ವಿನಾಯಕ ಹೈಕೋರ್ಟ್‌ನ ಧಾರವಾಡದ ಸಂಚಾರಿ ಪೀಠದಲ್ಲಿ ಅ.21ರಂದು ನಿರೀಕ್ಷಣಾ ಜಾಮೀನು ಪಡೆದು ತಲೆಮರೆಸಿಕೊಂಡಿದ್ದಾನೆ. ಆ ನಂತರ ಆತ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿಲ್ಲ. ಆತನಿಗೆ ನೀಡಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ. ಆತನ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ ಎಂದು ಬಿದರಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT