ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯದಲ್ಲಿ ಸೀಳುನಾಯಿ ಮರಿಗಳ ಚಿನ್ನಾಟ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಮೈಸೂರು:  ಕೆಲವು ದಿನಗಳ ಹಿಂದಷ್ಟೇ ಹಸಿರು ಅನಕೊಂಡ ಮರಿಯ ಸಾವಿನ ಸೂತಕದಲ್ಲಿದ್ದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಈಗ ಸಂತಸದ ಹೊನಲು. ಇಲ್ಲಿಯ ಸೀಳುನಾಯಿಯ ಜೋಡಿಯು ಏಳು ಮರಿಗಳಿಗೆ ಜನ್ಮ ನೀಡಿವೆ.

ಸೀಳುನಾಯಿಗಳು ಸಾಮಾನ್ಯವಾಗಿ 4 ರಿಂದ 6 ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ ಮೈಸೂರು ಮೃಗಾಲಯದ ಸೀಳುನಾಯಿಗಳು ಏಳು ಮರಿಗಳಿಗೆ ಜನ್ಮ ನೀಡಿರುವುದು ದಾಖಲೆ. ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮರಿಗಳು ಆರೋಗ್ಯವಾಗಿದ್ದು, ಚುರುಕಾಗಿ ಓಡಾಡುತ್ತಿವೆ. ಪ್ರತಿಯೊಂದು ಮರಿಯ ದೇಹತೂಕವು 2.8 ರಿಂದ 3.3 ಕೆಜಿ ಇದೆ.

2009ರಲ್ಲಿ ಚೆನ್ನೈನ ಅರಿಗನಾರ್ ಅಣ್ಣಾ ಪ್ರಾಣಿಶಾಸ್ತ್ರ ಪಾರ್ಕ್‌ನಿಂದ ಮೈಸೂರು ಮೃಗಾಲಯಕ್ಕೆ ಒಂದು ಹೆಣ್ಣು ಮತ್ತು ಒಂದು ಗಂಡು ಸೀಳುನಾಯಿಯನ್ನು ತರಲಾಗಿತ್ತು. ವಿನಾಶದ ಅಂಚಿನಲ್ಲಿರುವ ಕ್ಯೂಆನ್ ಅಲ್ಫಿನಸ್ ವರ್ಗದ ಈ ಸೀಳುನಾಯಿಗಳು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಸಂತಾನೋತ್ಪತ್ತಿ ಮಾಡಿವೆ. ವಿಶಾಖಪಟ್ಟಣ ಮತ್ತು ಚೆನ್ನೈ ಮೃಗಾಲಯಗಳ ನಂತರ ಭಾರತದಲ್ಲಿ ಸೀಳುನಾಯಿಗಳ ಅಭಿವೃದ್ಧಿಪಡಿಸಿದ ಸಾಲಿಗೆ ಮೈಸೂರು ಕೂಡ ಸೇರಿದಂತಾಗಿದೆ.

ಮೃಗಾಲಯದ ಸಿಬ್ಬಂದಿ ಮತ್ತು ವೈದ್ಯಕೀಯ ತಂಡದ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿರುವ ಕೃತಕ ವಾಸಸ್ಥಾನದಲ್ಲಿ ಇದ್ದ ಸೀಳುನಾಯಿ ಜೋಡಿಗೆ ಸೆಪ್ಟೆಂಬರ್‌ನಲ್ಲಿ ಮಿಲನಕ್ಕೆ ಅವಕಾಶ ಒದಗಿಸಲಾಗಿತ್ತು. 35ನೇ ದಿನದಂದು ಗರ್ಭಧಾರಣೆಯಾಗಿರುವುದು ಪರೀಕ್ಷೆಯಿಂದ ತಿಳಿದು ಬಂದಿತು. ಹೆಣ್ಣುನಾಯಿಯು ಜನ್ಮ ನೀಡಲು ಪ್ರತ್ಯೇಕ ಗುಹೆಯನ್ನು ನಿರ್ಮಿಸಲಾಯಿತು.

ಮೂರು ಕೋಣೆಗಳ ಮಾದರಿಯ ಈ ಕೃತಕ ಗುಹೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಇಡಲಾಯಿತು. ಆ ಮೂಲಕ ಸಂತಾನೋತ್ಪತ್ತಿ ಪ್ರಕ್ರಿಯೆಯ ಹಂತಗಳನ್ನು ಚಿತ್ರಿಸಲಾಗಿದೆ. ಚಳಿಗಾಲದಲ್ಲಿ ತಾಪಮಾನ ಕಾಯ್ದುಕೊಳ್ಳಲು ಗುಹೆಯಲ್ಲಿ ಕಟ್ಟಿಗೆಯ ಹಲಗೆಗಳನ್ನು ಇಡಲಾಗಿತ್ತು.

ಸಂಕೋಚ ಸ್ವಭಾವದ ಸೀಳುನಾಯಿಗಳಿಗೆ ಹೊರಗಡೆಯಿಂದ ಯಾವುದೇ ತೊಂದರೆಯಾಗದಂತೆ ವಾಸಸ್ಥಾನಕ್ಕೆ ಪ್ಲಾಸ್ಟಿಕ್ ಕರ್ಟನ್‌ಗಳನ್ನು ಹಾಕಲಾಗಿತ್ತು. 2011ರ ನವೆಂಬರ್ 19ರಂದು ಹೆಣ್ಣು ಸೀಳುನಾಯಿಯು ಸುಮಾರು ಐದು ತಾಸುಗಳ ಅವಧಿಯಲ್ಲಿ ಏಳು ಮರಿಗಳಿಗೆ ಜನ್ಮ ನೀಡಿತು. ನಂತರದ ದಿನಗಳಲ್ಲಿ ತಾಯಿಯು ಮರಿಗಳಿಗೆ ಆಹಾರ ಉಣಿಸುವಾಗ, ಗಂಡು ಸೀಳುನಾಯಿಯು ಗುಹೆಯ ಬಾಗಿಲಿಗೆ ಕಾವಲು ಇರುತ್ತಿತ್ತು.  ಸದ್ಯ 65 ದಿನಗಳ ಈ ಮರಿಗಳು ಈಗ ಕೋಳಿಮಾಂಸದ ತುಣುಕುಗಳನ್ನು ಸೇವಿಸುತ್ತಿವೆ. ಗಣರಾಜ್ಯೋತ್ಸವದ ದಿನವಾದ ಗುರುವಾರದಿಂದ ಈ ಮರಿಗಳನ್ನು ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಇವುಗಳ ಚಿನ್ನಾಟ ಜನರ ಗಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT