ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತರ ಸಂಖ್ಯೆ 28ಕ್ಕೆ ಏರಿಕೆ

ಮುಜಾಫ್ಪರ ನಗರ ಹಿಂಚಾಸಾರ ಘಟನೆ: ತಾರಕಕ್ಕೇರಿದ ರಾಜಕೀಯ ವಾಗ್ಯುದ್ಧ
Last Updated 10 ಸೆಪ್ಟೆಂಬರ್ 2013, 6:05 IST
ಅಕ್ಷರ ಗಾತ್ರ

ಮುಜಾಫ್ಫರ ನಗರ/ಲಖನೌ/ನವದೆಹಲಿ (ಪಿಟಿಐ): ದೇಶದ ಗಮನ ಸೆಳೆದಿರುವ ಮುಜಾಫ್ಪರ ನಗರ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸೋಮವಾರವೂ ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ಸಂಘರ್ಷ ಹಿನ್ನೆಲೆ ಮೃತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಘಟನೆ ಹಿನ್ನೆಲೆ ರಾಜಕೀಯ ಪಕ್ಷಗಳ ಆರೋಪ- ಪ್ರತ್ಯಾರೋಪ ತಾರಕಕ್ಕೇರಿದೆ.

ಪ್ರಕರಣ ಸಂಬಂಧ 200 ಮಂದಿಯನ್ನು ಬಂಧಿಸಲಾಗಿದ್ದು, ನಾಲ್ವರು ಬಿಜೆಪಿ ಶಾಸಕರು ಹಾಗೂ ಕಾಂಗ್ರೆಸ್‌ನ ಒಬ್ಬ ಮಾಜಿ ಸಂಸದ ಸೇರಿದಂತೆ ಒಂದು ಸಾವಿರ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಸಹರನಪುರ ಉಪಪೊಲೀಸ್ ಮಹಾನಿದೇರ್ಶಕ ಡಿ.ಡಿ. ಮಿಶ್ರಾ ಹಾಗೂ ಫುಗನಾ ಠಾಣಾಧಿಕಾರಿ  ಓಂವೀರ್ ಅವರನ್ನು ಉತ್ತರ ಪ್ರದೇಶ ಸರ್ಕಾರ ವರ್ಗವಣೆ ಮಾಡಿದೆ.

`ಘಟನೆಯಲ್ಲಿ ಮೃತರ ಸಂಖ್ಯೆ 28ಕ್ಕೆ ಏರಿದೆ. ಠಾಣಾಧಿಕಾರಿ ಓಂವೀರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಜೊತೆಗೆ ಸಂಘರ್ಷದ ವೇಳೆ ಶಸ್ತ್ರಾಸ್ತ್ರಗಳನ್ನು ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಫುಗನಾ, ಶಾಹಪುರ್  ಹಾಗೂ ದ್ವಾರಕಾಲನ್ ಪ್ರದೇಶದಲ್ಲಿರುವ ಶಾಸ್ತ್ರಾಸ್ತ್ರಗಳ ಪರವಾನಗಿ ರದ್ದು ಪಡೆಸುತ್ತಿದ್ದೇವೆ. ಭಾನುವಾರ ಮಧ್ಯರಾತ್ರಿ ಬಳಿಕ ಜಿಲ್ಲೆಯಲ್ಲಿ ಯಾವುದೇ ಹಿಂಸಾಚಾರ ವರದಿಯಾಗಿಲ್ಲ' ಎಂದು ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅರುಣ್ ಕುಮಾರ್ ಮುಜಾಫ್ಪರ ನಗರದಲ್ಲಿ ಸೋಮವಾರ ತಿಳಿಸಿದ್ದಾರೆ.

ನಿಷೇಧಾತ್ಮಕ ಆದೇಶಗಳನ್ನು ಉಲ್ಲಂಘಿಸಿದಕ್ಕಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಹುಕುಮ್ ಸಿಂಗ್, ಶಾಸಕರಾದ ಸುರೇಶ್ ರಾಣಾ, ಭರ್ತೆಂಡುಮ ಸಂಗೀತ್ ಸೋಮ್ ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದ ಹರೇಂದರ್ ಮಲಿಕ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ರಾಜಕೀಯ ಪಿತೂರಿ: ಮುಜಾಫ್ಪರ ನಗರದಲ್ಲಿ ಸಂಭವಿಸಿದ ಗಲಭೆಯ ಹಿಂದೆ ಸರ್ಕಾರವನ್ನು ಅಸ್ಥಿರಗೊಳಿಸುವ `ರಾಜಕೀಯ ಪಿತೂರಿ' ಅಡಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಆದರೆ ಪ್ರತಿಪಕ್ಷ ಬಿಎಸ್‌ಪಿ ಆಡಳಿತಾರೂಢ ಸಮಾಜವಾದಿ ಪಕ್ಷದತ್ತ ಬೊಟ್ಟು ಮಾಡಿದೆ.

`ಈ ಹಿಂಸಾಚಾರ ಬಡವರು, ಯುವಕರು, ಮುಸ್ಲೀಮರು ಹಾಗೂ ಸಮಾಜದ ಎಲ್ಲಾ ವರ್ಗದವರಿಗೆ ಉತ್ತಮ ಆಡಳಿತ ನೀಡುತ್ತಿರುವ ನನ್ನ ಸರ್ಕಾರದ ಗೌರವ ಕುಂದಿಸಲು ಹಾಗೂ ಅಸ್ಥಿರಗೊಳಿಸಲು ಮಾಡಿದ ರಾಜಕೀಯ ಪಿತೂರಿ' ಎಂದು ಅಖಿಲೇಶ್ ಆರೋಪಿಸಿದ್ದಾರೆ.

ಅಲ್ಲದೇ `ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ರಾಜಕೀಯ ಪಕ್ಷಗಳು ದಾರಿ ಹುಡುಕುತ್ತಿವೆ. ಈ ಹಿಂದೆಯೂ ಇದನ್ನು ಮಾಡಿವೆ. ಈ ಮೊದಲು ಶಮ್ಲಿಯಲ್ಲಿ ಶಾಂತಿ ಕದಡಲು ಯತ್ನಿಸಲಾಯಿತು. ಆದರೆ ಅದನ್ನು ಹತ್ತಿಕ್ಕಲಾಗಿತ್ತು' ಎಂದು ಹಿಂಸಾಚಾರ ಹಿನ್ನೆಲೆ ಟೀಕೆ ಎದುರಿಸುತ್ತಿರುವ ಅಖಿಲೇಶ್ ಅಭಿಪ್ರಾಯ ಪಟ್ಟಿದ್ದಾರೆ.

ಬಿಜೆಪಿ, ಎಸ್‌ಪಿಯತ್ತ ಬೊಟ್ಟು: ಆದರೆ ಮುಜಾಫ್ಪರ ನಗರ ಹಾಗೂ  ಉತ್ತರ ಪ್ರದೇಶದ ಸುತ್ತಲಿನ ಪ್ರದೇಶಗಳಲ್ಲಿ ನಡೆದ ಗಲಭೆಗೆ ಬಿಎಸ್‌ಪಿ ವರಿಷ್ಠೆ ಮಾಯಾವತಿ ಹಾಗೂ ಆರ್‌ಎಲ್‌ಡಿ ನಾಯಕ ಅಜಿತ್ ಸಿಂಗ್ ಅವರು ಆಡಳಿತಾರೂಢ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಬಿಜೆಪಿಯತ್ತ ಬೊಟ್ಟು ಮಾಡಿದ್ದಾರೆ.

`ಘಟನೆಯ ಹಿಂದೆ ಬಿಜೆಪಿ ಹಾಗೂ ಎಸ್‌ಪಿ ಕೈಗಳಿರುವುದು ಯಾರಾದರೂ ಕಾಣಬಹುದು. ಲೋಕಸಭಾ ಚುನಾವಣೆ ಸಮೀಪಿಸಿದ್ದು, ಉಭಯ ರಾಜಕೀಯ ಪಕ್ಷಗಳು ಚುನಾವಣೆಗೆ ಕೋಮವಾದದ ಬಣ್ಣ ನೀಡ ಬಯಸುತ್ತವೆ. ಇದು ಅವರ ರಾಜಕೀಯ ಹುನ್ನಾರ' ಎಂದು ಮಾಯಾವತಿ ನವದೆಹಲಿಯಲ್ಲಿ ದೂರಿದ್ದಾರೆ.

ಅಲ್ಲದೇ, `ಕೇವಲ ಉತ್ತರ ಪ್ರದೇಶ ಮಾತ್ರವಲ್ಲ ಕೋಸಿ ಯಾತ್ರೆ (ವಿಶ್ವ ಹಿಂದೂ ಪರಿಷತ್) ಮೂಲಕ ಅವರು ಇಡೀ ದೇಶದಲ್ಲೆಡೆ ಕೋಮು ಸೌಹಾರ್ದ ಕದಡಲು ಬಯಸುತ್ತಾರೆ. ಆದರೆ ಜನರು ಅವರ ರಾಜಕೀಯ ಆಟವನ್ನು ಬಲ್ಲಿದ್ದಾರೆ' ಎಂದು ಮಾಯಾವತಿ ಕಿಡಿಕಾರಿದ್ದಾರೆ.

ಇನ್ನು, `ಉಭಯ ಪಕ್ಷಗಳು ಲಾಭ ಪಡೆಯುವ ನಿರೀಕ್ಷೆಯಲ್ಲಿವೆ. ಬಿಜೆಪಿ ಏಕೆ ಅಮಿತ್ ಷಾ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆ ಹಾಗೂ ಮಥುರಾಗೆ ಕಳುಹಿಸಿತು' ಎಂದು ಯುಪಿಎ ಅಂಗಪಕ್ಷ ಆರ್‌ಎಲ್‌ಡಿ ಮುಖ್ಯಸ್ಥರೂ ಆಗಿರುವ ಕೇಂದ್ರ ಸಚಿವ ಅಜಿತ್ ಸಿಂಗ್ ಪ್ರಶ್ನಿಸಿದ್ದಾರೆ.

ಕೇಂದ್ರಕ್ಕೆ ವರದಿ: ಮುಜಾಫ್ಪರ ನಗರ ಹಿಂಸಾಚಾರ ಘಟನೆ ಸಂಬಂಧ ಉತ್ತರ ಪ್ರದೇಶದ ರಾಜ್ಯಪಾಲ ಬಿ.ಎಲ್. ಜೋಷಿ ಅವರು ಭಾನುವಾರವೇ  ಕೇಂದ್ರಕ್ಕೆ ವರದಿ ರವಾನಿಸಿದ್ದಾರೆ ಎಂದು ಮೂಲಗಳು ಲಖನೌದಲ್ಲಿ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT