ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃದು ಮನಸ್ಸಿನ ಚಾಲಕ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಂದು ಕೆಲಸ ಮುಗಿಸಿಕೊಂಡು ಆಫೀಸ್ ಬಿಟ್ಟಾಗ ಸಂಜೆ 6.30. ಜೋರಾಗಿ ಮಳೆ ಬರುತ್ತಿತ್ತು. ಕೊಡೆ ಕೂಡ ಇರಲಿಲ್ಲ. ರೂಮ್‌ಗೆ ಹೋಗಿ ಬಟ್ಟೆ ಜೋಡಿಸಿಕೊಂಡು 8 ಗಂಟೆಗೆ ಮಂಗಳೂರಿನ ಬಸ್ ಹತ್ತಬೇಕು. ಎಷ್ಟೇ ಕಾದರೂ ಬ್ರಿಗೇಡ್ ರಸ್ತೆ ಬಳಿ ಜಿ-4 ಬಸ್‌ನ ಸುಳಿವೇ ಇರಲಿಲ್ಲ. ಕೈಯಲ್ಲಿ ಇದ್ದಿದ್ದು ಐವತ್ತು ರೂಪಾಯಿ.
 
ಬ್ರಿಗೇಡ್ ರಸ್ತೆಯಿಂದ ಬನ್ನೇರುಘಟ್ಟದ ಗೋಪಾಲನ್ ಮಾಲ್ ಹತ್ತಿರ ಹೋಗೋಕೆ ಹೆಚ್ಚೆಂದರೆ 75 ರೂಪಾಯಿ ಬೇಕು. ಐವತ್ತು ರೂಪಾಯಿ ಇಟ್ಟುಕೊಂಡು ಅಲ್ಲಿಗೆ ಹೋಗೋದು ಹೇಗೆ ಎಂಬ ಚಿಂತೆ ಕಾಡುತ್ತಿತ್ತು.

ಹತ್ತಿರವಿದ್ದವರ ಬಳಿ ಹಂಚಿಕೊಂಡು ಒಂದೇ ಆಟೊದಲ್ಲಿ ಹೋಗೋಣ್ವಾ ಎಂದು ಕೇಳೋದಕ್ಕೂ ಮುಜುಗರ. ಬರಲ್ಲ ಎಂದು ಹೇಳಿದರೆ ಏನು ಮಾಡಲಿ ಎಂಬ ಆತಂಕ. ಕೊನೆಗೂ ಆಂಟಿ ಬಂದಾಗ ಅವರ ಮುಖ ನೋಡಿ ನೀವು ಎಲ್ಲಿಗೆ ಹೋಗುತ್ತೀರಾ ಎಂದು ಕೇಳಿದಾಗ ಜಯದೇವ ಆಸ್ಪತ್ರೆ ಎಂಬ ಉತ್ತರ ಸಿಕ್ಕಿತು. ನಾನು, `ಅಲ್ಲಿಯೇ ಮುಂದಿನ ನಿಲ್ದಾಣ, ಆಟೊದಲ್ಲಿ ಹೊಗೋಣ್ವಾ~ ಎಂದು ಕೇಳಿದಾಗ, ಆಕೆ `ಹೋಗೋಣ~ ಎಂಬ ಉತ್ತರ ಕೊಟ್ಟರು. ಖುಷಿಯಾಯಿತು.

ಹಣದ ಸಮಸ್ಯೆ ಬಗೆಹರಿಯಿತು ಎಂದುಕೊಳ್ಳುವಾಗ ಮತ್ತೆ ಆಟೊದವರ ಸಮಸ್ಯೆ. ಕೈ ಅಡ್ಡ ಹಿಡಿದು, `ಗೋಪಾಲನ್ ಮಾಲ್ ಹತ್ತಿರ ಬರುತ್ತೀರಾ~ ಎಂದು ಕೇಳಿದರೆ, `ಅಲ್ಲಿ ಟ್ರಾಫಿಕ್ ಜಾಸ್ತಿ~ ಎಂಬ ಉತ್ತರ  ನೀಡುತ್ತಿದ್ದರು. ಇನ್ನು ಕೆಲವರು `150 ಕೊಟ್ಟರೆ ಬರ‌್ತೀನಿ~ ಎಂದು ಷರತ್ತು ಹಾಕುತ್ತಿದ್ದರು. `ಮೀಟರ್ ಯಾಕೆ ಹಾಕಲ್ಲ~ ಎಂದು ಕೇಳಿದರೆ. `ಮೀಟರ್ ಹಾಕಿದರೂ ಅಷ್ಟೇ ಆಗುವುದು~ ಎಂಬ ವ್ಯಂಗ್ಯದ ನುಡಿ.

ಕೊನೆಗೊಬ್ಬ ಆಟೊ ಡ್ರೈವರ್ `10 ರೂಪಾಯಿ ಜಾಸ್ತಿ ಕೊಡಿ~ ಎಂದು ಕೇಳಿದಾಗ ಇನ್ನು ಚೌಕಾಸಿ ಮಾಡುವುದು ಸರಿಯಲ್ಲ ಎನಿಸಿತು. ಮಳೆಯಿಂದ ಚಳಿ ಹಿಡಿದುಬಿಟ್ಟಿತ್ತು ಎಂದು ಆಟೊ ಹತ್ತಿದೆವು. `ಯಾಕಪ್ಪಾ ಮೀಟರ್ ಹಾಕಲ್ಲಾ ಹೀಗೆ ಸುಲಿಗೆ ಮಾಡುವುದು ಸರಿಯಾ...? ಅಗತ್ಯ ಇದ್ದಾಗ ಮಾತ್ರ ತಾನೇ ಜನ ಆಟೊ ಹತ್ತುತ್ತಾರೆ~ ಎಂದು ಆಂಟಿ ಮಾತಿಗೆಳೆದರೆ, `ಇಲ್ಲ ಮೇಡಂ, ನನ್ನ ಮನೆ ಇರುವುದು ಕೋರಮಂಗಲದಲ್ಲಿ.

ನಾನು ಗೋಪಾಲನ್ ಮಾಲ್‌ವರೆಗೆ ಬಂದು ಯೂ ಟರ್ನ್ ತೆಗೆದುಕೊಳ್ಳೋದಕ್ಕೂ ಕಷ್ಟವಾಗುತ್ತದೆ. ಅದೂ ಅಲ್ಲದೆ ತಾಯಿ ಒಬ್ಬರೆ ಇರುವುದು ಮನೆಯಲ್ಲಿ. ಹೋಗಿ ಔಷಧ ಕುಡಿಸಬೇಕು. ಮಳೆ ಬರುತ್ತಿದೆಯಲ್ವಾ ಹಾಗಾಗಿ ನಿಮ್ಮಿಬ್ಬರನ್ನು ಹತ್ತಿಸಿಕೊಂಡೆ ಬಂದೆ~ ಎಂದು ಹೇಳಿದರು. ಅವರ ಮಾನವೀಯತೆಯ ಮಾತು ಕೇಳಿ ನಮಗೆ ಮಾತೇ ಹೊರಡಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT