ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳದ ಜತೆ ತೊಗರಿ ಕೃಷಿ ಕಡ್ಡಾಯ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ದಾವಣಗೆರೆ: ಮೆಕ್ಕೆಜೋಳದ ಕಣಜ ಎಂದೇ ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧಿ ಪಡೆದಿರುವ ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಹೊಸ ನೀತಿಯಿಂದಾಗಿ ತೊಗರಿ ಬೆಳೆ ಸದ್ದಿಲ್ಲದೆ ತನ್ನ ಕ್ಷೇತ್ರ ವಿಸ್ತಾರಗೊಳಿಸಿಕೊಳ್ಳುತ್ತಿದೆ.

ಜಿಲ್ಲೆಯ ಒಟ್ಟು 3.40 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಇದ್ದು, ಅದರಲ್ಲಿ 60 ಸಾವಿರ ಹೆಕ್ಟೇರ್ ನೀರಾವರಿ ಹೊರತುಪಡಿಸಿದರೆ ಉಳಿದ ಎಲ್ಲ ಭೂಮಿ ಮಳೆಯನ್ನೇ ಅವಲಂಬಿಸಿದೆ. 2.80 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಪ್ರತಿ ವರ್ಷ 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿನ ಬೆಳೆಯ ಏಕತಾನತೆ ಹೋಗಲಾಡಿಸಲು ಹಾಗೂ ದ್ವಿದಳ ಧಾನ್ಯ ಬಿತ್ತನೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಜಂಟಿ ಕೃಷಿ ನಿರ್ದೇಶಕರು ಹಾಗೂ ಸಹಾಯ ಕೃಷಿ ನಿರ್ದೇಶಕರು ನೂತನ ನೀತಿಯನ್ನು ಜಿಲ್ಲೆಯಲ್ಲಿ ಜಾರಿಗೆ ತಂದಿದ್ದು, ಅದರಂತೆ ಪ್ರತಿ ನಾಲ್ಕು ಪ್ಯಾಕೇಟ್ ಮೆಕ್ಕೆಜೋಳ ಬಿತ್ತನೆಬೀಜ ಕೊಳ್ಳುವ ರೈತರು ಒಂದು ಪ್ಯಾಕೆಟ್ ತೊಗರಿ ಕೊಳ್ಳುವುದನ್ನು ಕಡ್ಡಾಯ ಮಾಡಿದ್ದಾರೆ.

ಜಿಲ್ಲೆಯಲ್ಲಿ ಜಾರಿಗೆ ತಂದಿರುವ ಹೊಸ ನೀತಿಗೆ ಸ್ಪಂದಿಸಿದ ಮೆಕ್ಕೆಜೋಳ ಬಿತ್ತನೆ ಮಾಡುವ ರೈತರು ಅಕ್ಕಡಿ ಬೆಳೆಯಾಗಿ ತೊಗರಿಯನ್ನು ಬಿತ್ತನೆ ಮಾಡುತ್ತಿದ್ದಾರೆ. `ಜಿಲ್ಲೆಯಲ್ಲಿ ಈ ಹಿಂದೆ ಪ್ರತಿ ವರ್ಷ ಸರಾಸರಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗುತ್ತಿತ್ತು.

 ಈ ವರ್ಷ ಮೆಕ್ಕೆಜೋಳದ ಮಧ್ಯೆ ತೊಗರಿಯನ್ನು ಅಕ್ಕಡಿ ಬೆಳೆಯಾಗಿ ಬೆಳೆಯಲು ಉತ್ತೇಜನ ನೀಡಿ, ಹೊಸ ನೀತಿಯನ್ನು ರೂಪಿಸಿದ ಕಾರಣ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ನಿರೀಕ್ಷಿಸಲಾಗಿದೆ.
ಈಗಾಗಲೇ 300 ಕ್ವಿಂಟಲ್ ತೊಗರಿ ವಿತರಿಸಲಾಗಿದೆ~ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಆರ್.ಜಿ. ಗೊಲ್ಲರ್ ಮಾಹಿತಿ ನೀಡಿದರು.

ಸುವರ್ಣಭೂಮಿ ಯೋಜನೆಯನ್ನೂ ಜಿಲ್ಲೆಯಲ್ಲಿ ತೊಗರಿ ಬೆಳೆ ಉತ್ತೇಜನಕ್ಕೆ ಬಳಸಿಕೊಳ್ಳುತ್ತಿದ್ದು, ಕೃಷಿ ಕ್ಷೇತ್ರಕ್ಕೆ ಮೀಸಲಿರುವ 16,347 ಫಲಾನುಭವಿಗಳಲ್ಲಿ ಬಹುತೇಕ ರೈತರು ತೊಗರಿ ಬೆಳೆಯತ್ತ ಒಲವು ತೋರುವಂತೆ ಮಾಡುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

`ಮೆಕ್ಕೆಜೋಳ ಮಾತ್ರ ಬಿತ್ತನೆ ಮಾಡುತ್ತಿದ್ದೆವು. ಹಿಂದಿನ ವರ್ಷ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ರಾಜಶೇಖರ್ ಖ್ದ್ದುದಾಗಿ ಹೊಲಕ್ಕೆ ಬಂದು ತೊಗರಿ ನೀಡಿ, ಅಕ್ಕಡಿ ಬೆಳೆಯಾಗಿ ಬಿತ್ತಲು ಸಲಹೆ ನೀಡಿದ್ದರು. ಮೆಕ್ಕೆಜೋಳದ ಇಳುವರಿ ಕಡಿಮೆಯಾದರೂ ತೊಗರಿ ಕೈಹಿಡಿಯಿತು.

ಈ ಬಾರಿ ತೊಗರಿ ಕಡ್ಡಾಯ ಮಾಡಿರುವುದು ರೈತರಿಗೆ ವರದಾನವಾಗಿದೆ~ ಎನ್ನುತ್ತಾರೆ ಹಿರೇತೊಗಲೇರಿ ರೈತ ರಾಜಪ್ಪ.

ಒಟ್ಟಿನಲ್ಲಿ ಉತ್ತರ ಕರ್ನಾಟಕಕ್ಕೆ ಸೀಮಿತವಾಗಿದ್ದ ತೊಗರಿಯನ್ನು ಮಧ್ಯ ಕರ್ನಾಟಕದಲ್ಲೂ ವಿಸ್ತರಿಸುವಲ್ಲಿ ಜಿಲ್ಲೆಯ ಕೃಷಿ ಅಧಿಕಾರಿಗಳ ಹೊಸ ನೀತಿ ಯಶಸ್ವಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT