ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಜೆಸ್ಟಿಕ್‌ನಲ್ಲಿ 1 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಬಸ್ ನಿಲ್ದಾಣ

Last Updated 26 ಫೆಬ್ರುವರಿ 2011, 19:25 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಹಾಗೂ ಮೆಟ್ರೊ ರೈಲು ನಿಲ್ದಾಣಗಳನ್ನು ಒಂದೇ ಜಾಗದಲ್ಲಿ ನಿರ್ಮಿಸುವ ಉದ್ದೇಶದಿಂದ 1000 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ನಿಲ್ದಾಣವನ್ನು ಮೆಜೆಸ್ಟಿಕ್‌ನಲ್ಲಿ ಸ್ಥಾಪಿಸಲಾಗುವುದು’ ಎಂದು ಸಾರಿಗೆ ಸಚಿವ ಆರ್.ಅಶೋಕ ಹೇಳಿದರು.

ನಗರದ ದೊಮ್ಮಲೂರಿನಲ್ಲಿ ಶನಿವಾರ ಜವಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆ (ಜೆ ನರ್ಮ್)ಯಡಿ ರೂ 19.35  ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸಂಚಾರ ಮತ್ತು ಸಾಗಣೆ ನಿರ್ವಹಣಾ ಕೇಂದ್ರ (ಟಿಟಿಎಂಸಿ)ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಯೋಜನೆಗಾಗಿ ಟೆಂಡರ್ ಕರೆಯಲಾಗಿದ್ದು, ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.

ಪ್ರಮುಖ ಹಬ್ಬ ಹಾಗೂ ಸಾಲು ಸಾಲು ರಜಾದಿನಗಳಲ್ಲಿ ವಿವಿಧ ಊರುಗಳಿಗೆ ತೆರಳುವವರು ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಡಬೇಕಾಗಿದೆ. ಇದು ಗಂಟೆಗಳಷ್ಟು ಕಾಲ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದ್ದು, ಈ ಸಮಸ್ಯೆಯನ್ನು ತಪ್ಪಿಸಲು ಪೀಣ್ಯದಲ್ಲಿ ನೂತನ ಟಿಟಿಎಂಸಿಯನ್ನು ರೂ 32 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ. ಕಾಮಗಾರಿ ಮುಗಿದ ನಂತರ ಬೆಳಗಾವಿ, ಹುಬ್ಬಳ್ಳಿ ಕಡೆಗೆ ಹೋಗುವ ಬಸ್ಸುಗಳನ್ನು ಅಲ್ಲಿಂದಲೇ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಕೆಂಪೇಗೌಡ ಬಸ್ ನಿಲ್ದಾಣದ ಮೇಲಿನ ಒತ್ತಡವನ್ನು ತಗ್ಗಿಸಬಹುದು ಎಂದು ತಿಳಿಸಿದರು.

ಕ್ರೀಡಾ ಕೋಟಾ: ಸಾರಿಗೆ ಸಂಸ್ಥೆಯಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮುಂಬರುವ ನೇಮಕಾತಿಯಲ್ಲಿ ಕ್ರೀಡಾ ಕೋಟಾವನ್ನು ಆರಂಭಿಸಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದ ಸಚಿವರು, 25 ವರ್ಷ ಸೇವೆ ಸಲ್ಲಿಸಿದ ಬಸ್ ಡ್ರೈವರ್‌ಗಳಿಗೆ ಬಡ್ತಿ ನೀಡಲಾಗುವುದು ಎಂದೂ ಹೇಳಿದರು.

ನಗರ ಸಾರಿಗೆ: ಮಹಾನಗರ ಪಾಲಿಕೆ ಇರುವ ನಗರಗಳಲ್ಲಿ ನಗರ ಸಾರಿಗೆ ಆರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ತುಮಕೂರಿನಲ್ಲಿ ನಗರ ಸಾರಿಗೆ ಸೇವೆ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ  ಮಂಡ್ಯ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಪ್ರಕಟಿಸಿದರು.

ಶಾಸಕರಾದ ಎಂ.ಕೃಷ್ಣಪ್ಪ, ಎನ್.ಎ.ಹ್ಯಾರಿಸ್, ಡೆರಿಕ್ ಪುಲಿನ್ ಫಾ, ಬಿಬಿಎಂಪಿ ಸದಸ್ಯರಾದ ಗೀತಾ ಶ್ರೀನಿವಾಸರೆಡ್ಡಿ, ಗೌತಮ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಜಮೀರ್ ಪಾಷಾ,  ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ ಉಪಸ್ಥಿತರಿದ್ದರು.

 ಏಪ್ರಿಲ್ 7ರಂದು ಸಿಎಂ ಬಸ್ ಪ್ರಯಾಣ

ಸಾರ್ವಜನಿಕರು ತಮ್ಮ ವಾಹನಗಳ ಬದಲು ಬಸ್‌ಗಳಲ್ಲಿ ಪ್ರಯಾಣ ಮಾಡುವ ಕುರಿತು ಜಾಗೃತಿ ಮೂಡಿಸಲು ಈಗಾಗಲೇ ನಗರದಲ್ಲಿ ಬಸ್ ದಿನ ಆರಂಭಿಸಲಾಗಿದ್ದು, ಅದರ ಮುಂದುವರೆದ ಭಾಗವಾಗಿ ಏಪ್ರಿಲ್ 7ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಸಚಿವರು, ಜನಪ್ರತಿನಿಧಿಗಳು ಹಾಗೂ ನೌಕರರು ಬಸ್‌ನಲ್ಲೇ ಪ್ರಯಾಣಿಸಿ ಕಚೇರಿಗೆ ಆಗಮಿಸಲಿದ್ದಾರೆ ಎಂದು ಸಚಿವರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT