ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಕಾಮಗಾರಿ: `ಜನಮನ'ದಲ್ಲಿ ವ್ಯಾಪಕ ಆಕ್ರೋಶ

ಜಯದೇವ ವೃತ್ತ ಬಳಿ ಎತ್ತರಿಸಿದ ಮಾರ್ಗದಲ್ಲೇ ಎರಡನೇ ಹಂತ: ಶಿವಶೈಲಂ
Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ನಗರದ ಜಯದೇವ ವೃತ್ತದ ಬಳಿ ನೆಲದಡಿಯಲ್ಲಿ ಮೆಟ್ರೊ ನಿಲ್ದಾಣ ಸ್ಥಾಪಿಸಿದರೆ ಅಧಿಕ ಪ್ರಮಾಣದ ಭೂಮಿ ಒತ್ತುವರಿ ಮಾಡಿಕೊಳ್ಳಬೇಕಿದೆ. ಅಲ್ಲದೆ ಎತ್ತರಿಸಿದ ಮಾರ್ಗದ ಬದಲು ನೆಲದಡಿ ನಿಲ್ದಾಣ ಸ್ಥಾಪಿಸಿದರೆ ನಿಲ್ದಾಣದ ವೆಚ್ಚ ಐದು ಪಟ್ಟು ಜಾಸ್ತಿ ಆಗಲಿದೆ' ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ ತಿಳಿಸಿದರು.

`ಜನಮನ' ಸಂಘಟನೆಯ ಆಶ್ರಯದಲ್ಲಿ ಜಯನಗರದ ಆರ್.ವಿ.ಟೀಚರ್ಸ್‌ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ `ನಮ್ಮ ಮೆಟ್ರೊ- ಒಂದು ಸಂವಾದ' ಕಾರ್ಯಕ್ರಮದಲ್ಲಿ ಅವರು ಮಾತನಾಡಿ, `ನೆಲದಡಿ ನಿಲ್ದಾಣ ಸ್ಥಾಪಿಸಬೇಕು' ಎಂಬ ಯೋಜನಾ ಸಂತ್ರಸ್ತರ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದರು.

`ಜಯದೇವ ಆಸ್ಪತ್ರೆ ಬಳಿ ಪಥ ಬದಲಾವಣೆ ಹಾಗೂ ನಿಲ್ದಾಣ ಸ್ಥಳಾಂತರ ಮಾಡಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಇದರಲ್ಲಿ ನಿಗಮದ ಪಾತ್ರವೂ ಇದೆ. ಆಸ್ಪತ್ರೆ ಬಳಿಯಲ್ಲಿ ನೆಲದಡಿಯಲ್ಲಿ ಕಾಮಗಾರಿ ನಡೆಸಿದರೆ ಹೆಚ್ಚಿನ ಪ್ರಮಾಣದ ಜಾಗ ಬೇಕಿದೆ. ಇದಕ್ಕಾಗಿ ಎತ್ತರಿಸಿದ ಮಾರ್ಗದಲ್ಲೇ ನಿಲ್ದಾಣ ಸ್ಥಾಪಿಸಲು ನಿರ್ಧರಿಸಲಾಗಿದೆ' ಎಂದು ಸ್ಪಷ್ಟಪಡಿಸಿದರು.

`ಎರಡನೇ ಹಂತದ ಯೋಜನೆಯಲ್ಲಿ ನಾಗವಾರದಿಂದ ಡೇರಿ ವೃತ್ತದ ವರೆಗೆ ನೆಲದಡಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಎರಡನೇ ಹಂತದ ಯೋಜನೆಯ ವೆಚ್ಚ ರೂ26,405 ಕೋಟಿ. ಆದರೆ, ಗೊಟ್ಟಿಗೆರೆಯಿಂದ ನಾಗವಾರದ ವರೆಗಿನ ಕಾಮಗಾರಿ ವೆಚ್ಚವೇ ರೂ10 ಸಾವಿರ ಕೋಟಿ ಆಗಲಿದೆ' ಎಂದು ಅವರು ವಿವರಿಸಿದರು.

`ಎಲ್ಲರಿಗೂ ಮೆಟ್ರೊ ರೈಲು ಬೇಕು. ಆದರೆ, ಪಕ್ಕದ ಮನೆಯವರ ಜಾಗದಲ್ಲಿ ಕಾಮಗಾರಿ ನಡೆಸಲಿ ಎಂಬ ಮನೋಭಾವ ಹೆಚ್ಚಿನವರಲ್ಲಿ ಕಂಡುಬರುತ್ತಿದೆ. 2021ರೊಳಗೆ ಮೆಟ್ರೊ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಭರವಸೆ ಮಾತಿಗೂ ಜನರು ಖುಷಿ ಪಡುತ್ತಿಲ್ಲ. ನಾಳೆಯಿಂದಲೇ ರೈಲು ಓಡಬೇಕು ಎಂದು ಬಯಸುವವರೇ ಹೆಚ್ಚು' ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ಇದೊಂದು ದೊಡ್ಡ ಯೋಜನೆ. ನಗರಕ್ಕೆ ಹೊಂದಿಕೆಯಾಗುವಂತೆ ವಿನ್ಯಾಸ ತಯಾರಿಸಬೇಕಿದೆ. ಅಲ್ಲದೆ ಭೂಮಿ ಒತ್ತುವರಿಯಂತಹ ಸಾಮಾಜಿಕ ವಿಷಯಗಳನ್ನು ಪರಿಹರಿಸಬೇಕಿದೆ. ಮಲ್ಲೇಶ್ವರದಲ್ಲಿ ವ್ಯಕ್ತಿಯೊಬ್ಬರು 5.5 ಅಡಿ ಚದರ ಅಡಿ ಜಾಗ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಲ್ಲೇಶ್ವರ ನಿಲ್ದಾಣ ಕಾಮಗಾರಿ 9 ತಿಂಗಳು ವಿಳಂಬವಾಯಿತು.

ವಿಧಾನಸೌಧದ ಬಳಿ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ವಿವಾದ 3.5 ವರ್ಷಗಳ ವರೆಗೆ ಸಾಗಿತು. ಇಂತಹ ಸಂದರ್ಭದಲ್ಲಿ ಜನ ನಿಗಮದ ಜೊತೆ ನಿಲ್ಲದಿರುವುದರಿಂದ ಯೋಜನಾ ವ್ಯವಸ್ಥಾಪಕ ಏಕಾಂಗಿಯಾಗುತ್ತಾನೆ' ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

`ನವದೆಹಲಿ ಮೆಟ್ರೊ ರೈಲು ನಿಗಮ ಎದುರಿಸಿದ ಸವಾಲಿಗಿಂತ ಅಧಿಕ ಪ್ರಮಾಣದ ಸವಾಲುಗಳನ್ನು ನಾವು ಎದುರಿಸಿದ್ದೇವೆ. ನವದೆಹಲಿಯ ರಸ್ತೆಗಳು ಅಗಲವಾದವು. ಆದರೆ, ಬೆಂಗಳೂರಿನ ರಸ್ತೆಗಳು ಕಿರಿದಾದವು. ಹಲಸೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಕಾಮಗಾರಿ ಸಂದರ್ಭ ರಸ್ತೆಗಳ ಅಗಲ ಮಾಡಲಾಗಿದೆ. ಮದ್ರಾಸ್‌ನಲ್ಲೂ ನಿಗಮವು ರಸ್ತೆ ವಿಸ್ತರಣೆ ಮಾಡಿಲ್ಲ. ನಾವೇ ರಸ್ತೆ ವಿಸ್ತರಣೆ ಮಾಡಬೇಕು ಎಂದು ಕೆಲವು ಜನರು ಬಯಸುತ್ತಿದ್ದಾರೆ. ನಿಗಮದಲ್ಲಿ ಮೆಟ್ರೊ ತಜ್ಞರು ಇದ್ದಾರೆ. ರಸ್ತೆ ತಜ್ಞರು ಇಲ್ಲ' ಎಂದರು.

`ಮೊದಲನೇ ಹಂತದ ಕಾಮಗಾರಿಯ ವೆಚ್ಚ ರೂ11,608.92 ಕೋಟಿ. ಈವರೆಗೆ ರೂ9,280 ಕೋಟಿ ವ್ಯಯಿಸಲಾಗಿದೆ. ಶೇ 74ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮೆಟ್ರೊ ಕಾಮಗಾರಿಗಾಗಿ ಪ್ರತಿ ತಿಂಗಳು 180ರಿಂದ 200 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಪೀಣ್ಯದಿಂದ ಸಂಪಿಗೆ ರಸ್ತೆವರೆಗಿನ `ನಮ್ಮ ಮೆಟ್ರೊ'ದ (ರೀಚ್-3 ಮತ್ತು 3ಎ) 9.9 ಕಿ.ಮೀ ಉದ್ದದ ಮಾರ್ಗದ ರೈಲು ಸಂಚಾರ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾಯೋಗಿಕವಾಗಿ ಆರಂಭವಾಗಲಿದೆ' ಎಂದು ಅವರು ಮಾಹಿತಿ ನೀಡಿದರು.

`ಕೆ.ಆರ್.ಮಾರುಕಟ್ಟೆಯ ಬಳಿ ನೆಲದಡಿ ಕಾಮಗಾರಿ ಭರದಿಂದ ಸಾಗುತ್ತಿದೆ. ಒಂದೆರಡು ವಾರದಲ್ಲಿ ಚಿಕ್ಕಪೇಟೆ ವರೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಚಿಕ್ಕಪೇಟೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇದೆ. ಎತ್ತರಿಸಿದ ಮಾರ್ಗದಲ್ಲಿ ಕಾಮಗಾರಿ ನಡೆಸಿದರೆ ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ಜನರಿಗೆ ತೊಂದರೆಯಾಗ ರೀತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಯೋಜನೆ ಅನುಷ್ಠಾನ ಮಾಡುತ್ತಿರುವುದು ಜನರಿಗೆ ನೆರವಾಗಲು. ಜನರೇ ಇಲ್ಲದಿದ್ದ ಮೇಲೆ ಕಾಮಗಾರಿ ನಡೆಸಿ ಏನು ಪ್ರಯೋಜನ' ಎಂದು  ಮಾರ್ಮಿಕವಾಗಿ ನುಡಿದರು. ಸಂಸದ ಪಿ.ಸಿ.ಮೋಹನ್, ಶಾಸಕ ಎಲ್. ಎ.ರವಿಸುಬ್ರಹ್ಮಣ್ಯ,  ಡಿ. ಎಸ್. ವೀರಯ್ಯ, ಜನಮನ ಸಂಘಟನೆಯ ಅಧ್ಯಕ್ಷ ಚೇತನ್ ಇದ್ದರು.

ಜನರ ಅಹವಾಲು ಸ್ವೀಕಾರ
`ಸಂವಾದದಲ್ಲಿ ಜನರು ತಮ್ಮ ಅಹವಾಲುಗಳನ್ನು ಹೇಳಿದ್ದಾರೆ. ಎರಡನೇ ಹಂತದ ಯೋಜನೆಯ ಸಂದರ್ಭ ತೊಂದರೆಯಾಗುತ್ತಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ 15 ದಿನಗಳ ಕಾಲ ಮೆಟ್ರೊ ಕಾಮಗಾರಿ ಸ್ಥಳ ಹಾಗೂ ವಿವಾದಿತ ಸ್ಥಳಗಳಿಗೆ ಭೇಟಿ ನೀಡಿ ಚರ್ಚಿಸಲಾಗುವುದು' ಎಂದು ಸಂಸದ ಅನಂತಕುಮಾರ್ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ನಮ್ಮ ಮೆಟ್ರೊದ ಮೂರು ಹಂತದ ಯೋಜನೆಗಳನ್ನು 2021ರೊಳಗೆ ಪೂರ್ಣಗೊಳಿಸುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿದ್ದಾರೆ. ಯಾವುದೇ ಯೋಜನೆ ಅನುಷ್ಠಾನ ಆಗುವ ಸಂದರ್ಭದಲ್ಲಿ ಜನರು ಸಮಸ್ಯೆ ಎದುರಿಸುವುದು ಸಹಜ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಸೂಚಿಸಲಾಗುವುದು' ಎಂದರು.

`ನವದೆಹಲಿಯಲ್ಲಿ ಮೆಟ್ರೊ ರೈಲು ಅನುಷ್ಠಾನಗೊಳ್ಳುವ ಮೊದಲು ಒಂದು ಮೂಲೆಯಿಂದ ಇನ್ನೊಂದು ಮೂಲೆಯಿಂದ ತೆರಳಲು 2.30 ಗಂಟೆ ಬೇಕಿತ್ತು. ಈಗ ಮೆಟ್ರೊದಲ್ಲಿ 40 ನಿಮಿಷದಲ್ಲಿ ತಲುಪಬಹುದು. ನಗರದಲ್ಲಿ ಈಗ ಪೀಣ್ಯದಿಂದ ಪುಟ್ಟೇನಹಳ್ಳಿಗೆ ಹಾಗೂ ರಾಜರಾಜೇಶ್ವರಿ ನಗರದಿಂದ ಕೆ.ಆರ್.ಪುರಕ್ಕೆ ತೆರಳಲು 2.30 ಗಂಟೆ ಬೇಕು. ಮೆಟ್ರೊ ರೈಲಿನಲ್ಲಿ 40 ನಿಮಿಷದಲ್ಲೇ ತಲುಪಲು ಸಾಧ್ಯವಿದೆ' ಎಂದು ಅವರು ಹೇಳಿದರು.

`ಜಗತ್ತಿನಲ್ಲಿ 126 ನಗರಗಳಲ್ಲಿ ಮೆಟ್ರೊ ರೈಲು ಇದೆ. 110 ನಗರಗಳಲ್ಲಿ ಮಾನೋರೈಲು ಇದೆ. ನಗರದೊಳಗೆ ಮಾನೊರೈಲಿಗಿಂತ ಮೆಟ್ರೊ ರೈಲೇ ಉತ್ತಮ. ಹೀಗಾಗಿ ನಗರದಲ್ಲಿ ಮೆಟ್ರೊ ರೈಲಿಗೆ ಆದ್ಯತೆ ನೀಡಲಾಯಿತು. ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಮುಂಬೈ, ಲಕ್ನೋದಲ್ಲಿ ಮೆಟ್ರೊ ರೈಲಿಗಾಗಿ ವಿಸ್ತೃತಾ ಯೋಜನಾ ವರದಿ ತಯಾರಿಸಲು ಮುಂದಾಯಿತು. ನಗರದಲ್ಲಿ ಕಾಮಗಾರಿ ಆರಂಭವಾಗಿ ಆರು ವರ್ಷಗಳು ಕಳೆದವು. ಆಂಧ್ರದಲ್ಲಿ ಇತ್ತೀಚೆಗೆ ಕಾಮಗಾರಿ ಆರಂಭವಾಗಿದೆ. ಅಹಮದಾಬಾದ್, ಲಖನೌದಲ್ಲಿ ಕಾಮಗಾರಿ ಆರಂಭವಾಗಿಲ್ಲ' ಎಂದರು.

`ಕೋರ್ಟ್‌ಗೆ ಹೋಗಿ'

`ನಗರದಲ್ಲಿ ಮೆಟ್ರೊದಿಂದಾಗಿ ತೊಂದರೆಯಾಗಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಿ' ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಪದೇ ಪದೇ ಹೇಳಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.  ಜಯದೇವ ಆಸ್ಪತ್ರೆಯ ಬಳಿಯ ಸಂತ್ರಸ್ತರು, ಬಿಟಿಎಂ ಬಡಾವಣೆಯ ನಿವಾಸಿಗಳು, ಲಾಲ್‌ಬಾಗ್ ನಿವಾಸಿಗಳು, ಜಯನಗರ ನಿವಾಸಿಗಳ ಅಳಲಿಗೆ ವ್ಯವಸ್ಥಾಪಕ ನಿರ್ದೇಶಕರು, `ನಿಮ್ಮ ಪ್ರಶ್ನೆಗೆ ಈಗಾಗಲೇ ಲಿಖಿತ ಉತ್ತರ ನೀಡಲಾಗಿದೆ. ಪಥ ಬದಲಾವಣೆ ಅಸಾಧ್ಯ. ಹೆಚ್ಚಿನ ಸಮಸ್ಯೆ ಇದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಿ. ಅಲ್ಲದೆ ನ್ಯಾಯಾಲಯದಲ್ಲಿ ದಾವೆ ಹೂಡಿ ಇಲ್ಲಿ ಸಮಸ್ಯೆ ಹೇಳುವುದು ಸರಿಯಲ್ಲ. ನಿಮ್ಮ ಪ್ರಶ್ನೆಗಳಿಗೆ ನ್ಯಾಯಾಲಯದಲ್ಲೇ ಉತ್ತರ ನೀಡುತ್ತೇನೆ' ಎಂದರು.

`ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಎಲ್ಲ ಅರ್ಜಿಗಳಿಗೂ ನಿಗಮದಿಂದ ಉತ್ತರ ನೀಡಲಾಗುತ್ತಿದೆ. ನಿಗಮದಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಸಂಬಂಧಿಸಿದವರು ಕ್ರಮ ಕೈಗೊಳ್ಳುತ್ತಾರೆ' ಎಂದರು. `ಸಂತ್ರಸ್ತರ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲಾಗಿದೆ. ಕೆಲವು ಜನರಿಗೆ ಉತ್ತರ ತೃಪ್ತಿಕರವಾಗಿಲ್ಲ ಎಂದು ಅನಿಸಬಹುದು. ಜನರನ್ನು ನನ್ನಿಂದ ಸಂತೃಪ್ತಿ ಪಡಿಸಲು ಆಗುವುದಿಲ್ಲ. ಆದರೂ, ಉತ್ತರ ನೀಡುತ್ತೇನೆ' ಎಂದು ಅವರು ನುಡಿದರು.

`ನಾವು ನಮ್ಮ ಅಹವಾಲು ಹೇಳಿದ್ದೇವೆ. ಅದಕ್ಕೆ ನ್ಯಾಯಾಲಯಕ್ಕೆ ಹೋಗಿ ಎಂದು ಹೆದರಿಸುವುದು ಸರಿಯಲ್ಲ' ಎಂದು ಸಭಿಕರು ಆಕ್ರೋಶ ವ್ಯಕ್ತಪಡಿಸಿದರು. `ನಾನು ಬ್ಯಾಂಕ್ ಮ್ಯಾನೇಜರ್ ಆಗಿದ್ದೆ. ಎರಡು ವರ್ಷಗಳ ಹಿಂದೆಯಷ್ಟೇ ಮನೆ ಕಟ್ಟಿದ್ದೇನೆ. ಪಥ ಬದಲಾವಣೆಯಿಂದ ಮನೆ ಕಳೆದುಕೊಳ್ಳುತ್ತಿದ್ದೇವೆ. ಪಥ ಬದಲಾವಣೆ ತೀರ್ಮಾನ ಹೊರಬಿದ್ದ ಬಳಿಕ ನಿದ್ರೆ ಮಾಯವಾಗಿದೆ. ಹೃದಯ ಬಡಿತ ಹೆಚ್ಚಿದೆ. ನಿಮ್ಮ ಎದುರು ದಯನೀಯವಾಗಿ ನಿಲ್ಲಲು ಹಿಂಸೆ ಆಗುತ್ತಿದೆ. ವಕೀಲರ ಬಳಿ ಹೋಗುವಷ್ಟು ನನ್ನಲ್ಲಿ ಹಣ ಇಲ್ಲ' ಎಂದು ಬಿಟಿಎಂ ಬಡಾವಣೆಯ ವೈಶ್ಯ ಬ್ಯಾಂಕ್ ಕಾಲೊನಿಯ ವೈ.ಜಯಗೋಪಾಲ್ ಅಳಲು ತೋಡಿಕೊಂಡರು.

ಪರಿಹಾರ ಹೆಚ್ಚಳ
`ಕಾಮಗಾರಿಗಾಗಿ ಭೂಮಿ ಒತ್ತುವರಿ ಮಾಡಿದ ಸಂದರ್ಭದಲ್ಲಿ ಸಂತ್ರಸ್ತರಿಗೆ ನಿಗಮದಿಂದ ಉತ್ತಮ ಪರಿಹಾರ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಈಗ ನಗರದ ಭೂಮಿಯ ಹೊಸ ಮಾರ್ಗಸೂಚಿ ದರವನ್ನು ಪ್ರಕಟಿಸಿದೆ. ಇದರಿಂದಾಗಿ ಪರಿಹಾರ ಮೊತ್ತ ಇನ್ನಷ್ಟು ಹೆಚ್ಚಲಿದೆ' ಎಂದು ಎನ್.ಶಿವಶೈಲಂ ತಿಳಿಸಿದರು.

ಸಂತ್ರಸ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ನಿಗಮವು ಸೊಗಸಾದ ಪರಿಹಾರ ನೀಡುತ್ತಿದೆ. ಪರಿಹಾರ ಮೊತ್ತದ ಬಗ್ಗೆ ಆಕ್ಷೇಪ ಸೂಚಿಸಿ ಈವರೆಗೆ ಒಂದೇ ಒಂದು ದೂರು ಬಂದಿಲ್ಲ. ಪರಿಹಾರದ ಬಗ್ಗೆ ಸಂತ್ರಸ್ತರು ಆತಂಕ ಪಡಬೇಕಿಲ್ಲ' ಎಂದು ಸ್ಪಷ್ಟಪಡಿಸಿದರು.

`ಸದ್ಯ ಬಾಂಡ್ ಇಲ್ಲ'
`ಮಾರುಕಟ್ಟೆಯ ಏರಿಳಿತದ ಹಿನ್ನೆಲೆಯಲ್ಲಿ ಸದ್ಯ ಬಾಂಡ್ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡದಿರಲು ನಿಗಮವು ತೀರ್ಮಾನಿಸಿದೆ' ಎಂದು ಶಿವಶೈಲಂ ತಿಳಿಸಿದರು.

`ಒಂದು ತಿಂಗಳ ಹಿಂದೆ ಬಾಂಡ್ ಮೂಲಕ ಹಣ ಸಂಗ್ರಹಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಮಾರುಕಟ್ಟೆಯಲ್ಲಿ ಕಂಡ ಏರಿಳಿತದ ಹಿನ್ನೆಲೆಯಲ್ಲಿ ಸದ್ಯ  ಮಾರುಕಟ್ಟೆ ಪ್ರವೇಶ ಮಾಡದಿರಲು ಸಲಹೆಗಾರರು ತಿಳಿಸಿದರು. ಹೀಗಾಗಿ ಸದ್ಯ ಈ ಪ್ರಸ್ತಾವ ಕೈಬಿಡಲಾಗಿದೆ. ಮುಂದಿನ ದಿನಗಳಲ್ಲಿ  ಮಾರುಕಟ್ಟೆ ಸ್ಥಿತಿ ನೋಡಿಕೊಂಡು ತೀರ್ಮಾನಿಸಲಾಗುವುದು' ಎಂದರು.

ಮೆಟ್ರೊ ಯಾರದ್ದು?-ದಶಪ್ರಶ್ನೆ

`ನಮ್ಮ ಮೆಟ್ರೊ ಯೋಜನೆಯಲ್ಲಿ ಪಾರದರ್ಶಕತೆಯ ಕೊರತೆ ಇದೆ' ಎಂದು `ಹಸಿರು ಉಸಿರು' ಸಂಘಟನೆಯ  ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹತ್ತು ಪ್ರಶ್ನೆಗಳಿರುವ ಮನವಿ ಪತ್ರವನ್ನು ಸಭೆಯಲ್ಲಿ ಪ್ರದರ್ಶಿಸಿದರು.

  ಹಸಿರು ಉಸಿರು ಸಂಘಟನೆಯ ವಿನಯ್  ಶ್ರೀನಿವಾಸ್ ಅವರು ನಾಲ್ಕು ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ವಿಳಂಬವಾಯಿತು ಎಂಬ ಕಾರಣ ನೀಡಿ ತಡೆ ಒಡ್ಡಲಾಯಿತು.      ಬಳಿಕ ಸಂಘಟನೆಯ ಪದಾಧಿಕಾರಿಗಳು   ಮನವಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಿದರು.

* ಮೆಟ್ರೊ ಮೊದಲನೇ ಹಂತದ ಯೋಜನೆ ಆರಂಭವಾಗುವಾಗ ಯೋಜನೆ ವೆಚ್ಚ ರೂ 6,000 ಕೋಟಿ ಎಂದು ಹೇಳಲಾಗಿತ್ತು. ಈಗ ವೆಚ್ಚ ರೂ 11,000 ಕೋಟಿ ದಾಟಿದೆ. ಎರಡನೇ ಹಂತದ ಯೋಜನಾ ಮೊತ್ತವೂ ದ್ವಿಗುಣವಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ಯೋಜನಾ ವೆಚ್ಚ ದುಪ್ಪಟ್ಟು ಆಗಲು ಕಾರಣವೇನು? ಮೆಟ್ರೊ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಸಿರುವ ಶಂಕೆ ಮೂಡಿದೆ. ಈ ಬಗ್ಗೆ ತನಿಖೆ ನಡೆಸಬೇಕು.

* `ನಮ್ಮ ಮೆಟ್ರೊಗಾಗಿ ಮಾಡಿರುವ ಸಾಲ ಎಷ್ಟು? ಈ ಸಾಲವನ್ನು ಪಾವತಿಸುವವರು ಯಾರು? ಯಾವ ರೀತಿಯಲ್ಲಿ ಪಾವತಿಸಲಾಗುತ್ತದೆ?.

* ಸಾರ್ವಜನಿಕರೊಂದಿಗೆ ಚರ್ಚೆ ನಡೆಸದೆ ಎರಡನೇ ಹಂತದ ಯೋಜನೆಗೆ ಚಾಲನೆ ನೀಡಲು ಗಡಿಬಿಡಿ ಮಾಡುತ್ತಿರುವುದು ಏಕೆ? ಬೆಂಗಳೂರು ಮೆಟ್ರೊಗೆ ಕೆಟಿಸಿಪಿ ಕಾಯ್ದೆ ಅನ್ವಯ ಆಗುವುದಿಲ್ಲವೇ?.

* ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿರುವ ಪ್ರಶ್ನೆಗಳಿಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಉತ್ತರಿಸುತ್ತಿಲ್ಲ. ಈ ಕಾಯ್ದೆ   ನಮ್ಮ ಮೆಟ್ರೊಗೆ ಅನ್ವಯ ಆಗುವುದಿಲ್ಲವೇ?.

* ಮೆಟ್ರೊ ಕಾಮಗಾರಿಗಾಗಿ ಈಗಾಗಲೇ ಸಾವಿರಾರು ಮರಗಳನ್ನು ಕತ್ತರಿಸಲಾಗಿದೆ. ಎರಡನೇ ಹಾಗೂ ಮೂರನೇ ಹಂತದ ಯೋಜನೆಗಾಗಿ ಸಾವಿರಾರು ಮರಗಳ ಮಾರಣಹೋಮ ನಡೆಯಲಿದೆ. ಇದು ಸರಿಯೇ?.

* ಕಾರ್ಮಿಕರ ಸುರಕ್ಷತೆಗಾಗಿ ನಿಗಮವು ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಇದೆ. ಅವಘಡಗಳು ಇತ್ತೀಚೆಗೆ ಹೆಚ್ಚುತ್ತಿವೆ. ಕಾರ್ಮಿಕರ ಬಗ್ಗೆ ಕಾಳಜಿ ವಹಿಸದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ನಿಗಮ ಹಿಂಜರಿಯುತ್ತಿರುವುದು ಏಕೆ?.

* ಬಸ್ ದರ ಕಡಿಮೆ ಮಾಡಲು ರಾಜ್ಯ ಸರ್ಕಾರ ಹಿಂಜರಿಯುತ್ತಿದೆ. ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರದ ಕೊರತೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಶಿಕ್ಷಣ ದೊರಕುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ `ನಮ್ಮ ಮೆಟ್ರೊ'ಗಾಗಿ ರೂ 40,000 ಕೋಟಿ ವೆಚ್ಚ ಮಾಡುವ ಅಗತ್ಯ ಏನಿದೆ?.

* ಎರಡನೇ ಹಂತದ ಯೋಜನೆಗಾಗಿ ವಿಸ್ತೃತಾ ಯೋಜನಾ ವರದಿ ತಯಾರಿಸುವಾಗ ಸಾರ್ವಜನಿಕರನ್ನು ಕಡೆಗಣಿಸಿದ್ದು ಏಕೆ? ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವರದಿ ಸಿದ್ಧಪಡಿಸಬೇಕಿತ್ತು.

ನೆಲದಡಿ ಕಾಮಗಾರಿ ನಡೆಸಿ

ಜಯದೇವ ವೃತ್ತದ ಬಳಿಕ ಹಿರಿಯ ನಾಗರಿಕರೇ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಪಥ ಬದಲಾವಣೆ ತೀರ್ಮಾನದಿಂದ ಹಿರಿಯ ನಾಗರಿಕರು ಹೆಚ್ಚಿನ ತೊಂದರೆ ಅನುಭವಿಸಲಿದ್ದಾರೆ. ರಾಜಕೀಯ ಒತ್ತಡದಿಂದ ಪಥ ಬದಲಾವಣೆ ಮಾಡಲಾಗಿದೆ.

ನಾಗವಾರದಿಂದ ಡೇರಿ ವೃತ್ತದ ವರೆಗೆ ನೆಲದಡಿಯೇ ಕಾಮಗಾರಿ ನಡೆಯಲಿದೆ ಎಂದು ನಿಗಮ ಪ್ರಕಟಿಸಿದೆ. ಅದನ್ನು ಜಯದೇವ ವೃತ್ತದ ವರೆಗೆ ವಿಸ್ತರಿಸಿದರೆ ಜನರಿಗೆ ತೊಂದರೆಯಾಗುವುದಿಲ್ಲ.  ಈ ಎಲ್ಲ ಸಮಸ್ಯೆ ಗಮನದಲ್ಲಿಟ್ಟು ನೆಲದಡಿ ಕಾಮಗಾರಿ ನಡೆಸಬೇಕು.
-ಸುಜಯಾ ಪಾರ್ಥಸಾರಥಿ, ಜಯದೇವ ವೃತ್ತದ ಬಳಿಯ ನಿವಾಸಿ .

ವಿಳಂಬಕ್ಕೆ ಹೊಣೆ ಯಾರು?

`ಮೊದಲನೇ ಹಂತದ ಯೋಜನೆ ಕಾರ್ಯಾರಂಭ ಸಾಕಷ್ಟು ವಿಳಂಬವಾಗಿದೆ. ಎರಡು ಹಾಗೂ ಮೂರನೇ ಹಂತದ ಯೋಜನೆ ಶುರುವಾಗುವುದು ಯಾವಾಗ? ಇದೇ ರೀತಿ ವಿಳಂಬವಾದರೆ ಗತಿ ಏನು?
-ಹರೀಶ್, ಜಯನಗರ ನಿವಾಸಿ .

ಯೋಜನೆ ವಿಳಂಬ

ನಮ್ಮ ಮೆಟ್ರೊ ಯೋಜನೆ ಅನುಷ್ಠಾನ ಸಾಕಷ್ಟು ವಿಳಂಬವಾಗುತ್ತಿದೆ. `ಬೇಗ ಮೆಟ್ರೊ ಕಟ್ರೊ' ಎಂದು ಜನ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ನವದೆಹಲಿಯಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ನಮ್ಮಲ್ಲಿ ವಿಳಂಬ ಮಾಡಲು ಕಾರಣವೇನು?
-ಗೌತಮ್ ಶಾಸ್ತ್ರಿ, ವಿದ್ಯಾರ್ಥಿ.

ಪಾರದರ್ಶಕತೆ ಕೊರತೆ

ನಮ್ಮ ಮೆಟ್ರೊ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ನಿಗಮದ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ನಿಗಮದಲ್ಲಿ ಪಾರದರ್ಶಕತೆಯ ಕೊರತೆ ಇದೆ. ಮಾಹಿತಿ ಹಕ್ಕು ಕಾಯ್ದೆ ನಿಗಮಕ್ಕೆ ಅನ್ವಯ ಆಗುವುದಿಲ್ಲವೇ?
-ಬಾನು ಸಿಂಹ, ಲಾಲ್‌ಬಾಗ್ ಸಮೀಪದ ನಿವಾಸಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT