ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಕಾಮಗಾರಿ: ಹದಗೆಟ್ಟ ರಸ್ತೆಗಳು

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮೆಟ್ರೊ ಕಾಮಗಾರಿ ನಡೆಯುತ್ತಿರುವ ನಗರದ ಹಲವೆಡೆ ಹದಗೆಟ್ಟಿರುವ ರಸ್ತೆಗಳನ್ನು ಇದೇ 25 ರೊಳಗೆ ದುರಸ್ತಿಗೊಳಿಸದೇ ಇದ್ದಲ್ಲಿ ಮುಂದೆ ಯಾವುದೇ  ಕಾಮಗಾರಿ ಕೈಗೊಳ್ಳಲು ಬೆಂಗಳೂರು ಮೆಟ್ರೊ ರೈಲು ನಿಗಮದವರಿಗೆ ಅವಕಾಶ ನೀಡುವುದಿಲ್ಲ~ ಎಂದು ಮೇಯರ್ ಪಿ.ಶಾರದಮ್ಮ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮೆಟ್ರೊ ಕಾಮಾಗಾರಿ ನಡೆಯುತ್ತಿರುವ ರಸ್ತೆಗಳ ಪರಿಶೀಲನೆ ನಡೆಸಿದ ಅವರು, ಅಲ್ಲಿನ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

`ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದಲೇ ರಸ್ತೆಗಳು ಪೂರ್ಣವಾಗಿ ಹಾಳಾಗಿವೆ. ನೀಡಿರುವ ಗಡುವಿನೊಳಗೆ ರಸ್ತೆಗಳ ಗುಂಡಿ ಮುಚ್ಚದಿದ್ದಲ್ಲಿ ಮುಂದೆ ಮೆಟ್ರೊ ಕಾಮಗಾರಿ ಕೈಗೊಳ್ಳಲು ಬಿಡುವುದಿಲ್ಲ~ ಎಂದು ಮೆಟ್ರೊ ಎಂಜಿನಿಯರ್‌ಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದರು.

ಜನರು ರಸ್ತೆಗಳು ಹಾಳಾಗಿರುವುದಕ್ಕೆ ಪಾಲಿಕೆಯನ್ನು ದೂರುತ್ತಿದ್ದಾರೆ. ಆದರೆ ನಿಮ್ಮಿಂದಲೇ ರಸ್ತೆಗಳೆಲ್ಲಾ ಗುಂಡಿ ಬಿದ್ದಿವೆ. ಹೀಗಾದರೆ ವಾಹನಗಳು ಸಂಚಾರ ಮಾಡುವುದದಾರೂ ಹೇಗೆ ಎಂದು ಪ್ರಶ್ನಿಸಿದ ಅವರು, ಮೊದಲು ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮತ್ತೆ ಪರಿಶೀಲನೆ: ರಸ್ತೆಗಳ ದುರಸ್ತಿ ನಡೆಯದಿದ್ದರೆ ಮತ್ತೆ ಸ್ಥಳ ಪರಿಶೀಲನೆ ಮಾಡುತ್ತೇವೆ. ಕಾಮಗಾರಿ ಮುಗಿಯುವವರೆಗೂ ಬಿಡುವುದಿಲ್ಲ. ಇದಕ್ಕೆ ಪೂರಕವಾದ ಸಹಾಯ ಮಾಡಲು ಬಿಬಿಎಂಪಿ ಸಿದ್ದವಿದೆ ಎಂದು ಹೇಳಿದರು.

ಗಾಳಿ ಆಂಜನೇಯಸ್ವಾಮಿ ದೇವಾಲಯದ ಬಳಿಯಿರುವ ರಾಜ ಕಾಲುವೆಯಲ್ಲಿನ ಹೂಳೆತ್ತುವ ಕಾರ್ಯ ಪರಿಶೀಲಿಸಿದ ಮೇಯರ್ ಪಿ.ಶಾರದಮ್ಮ, ತಿಂಗಳೊಳಗೆ ಹೂಳೆತ್ತುವ ಕಾರ್ಯವನ್ನು ಪೂರ್ಣಗೊಳಿಸಿ. ಹೊರ ಹಾಕಿರುವ ಹೂಳನ್ನು ಕೂಡಲೇ ವಿಲೇವಾರಿ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು.

ಕಾಮಗಾರಿ ಸ್ಥಗಿತ ಎಚ್ಚರ: ವಿಜಯನಗರದ ದೀಪಾಂಜಲಿ ನಗರದ ಬಳಿ ಜಲಮಂಡಳಿ ಅಳವಡಿಸಿರುವ ಒಳಚರಂಡಿ ಕೊಳವೆಯನ್ನು ಮೆಟ್ರೊ ಕಾಮಗಾರಿ ವೇಳೆ ಒಡೆದು ಹಾಕಿರುವುದನ್ನು ಗಮನಿಸಿದ ಉಪ ಮೇಯರ್ ಎಸ್.ಹರೀಶ್ `ನೀವು ವಿನಾ ಕಾರಣ ಜಲಮಂಡಳಿ ಎಂಜಿನಿಯರ್‌ಗಳ ಮೇಲೆ ಆರೋಪ ಮಾಡಬೇಡಿ.

ನೀವು ಹೇಳಿದಂತೆ ಹೊಸ ಕೊಳವೆ ಅಳವಡಿಸಿ ಕೆಲ ದಿನಗಳಷ್ಟೇ ಆಗಿವೆ. ನಿಗಾ ವಹಿಸಿ ಕೆಲಸ ಮಾಡಿ. ಇದರಿಂದ ರಸ್ತೆಗೆಲ್ಲಾ ನೀರು ಹರಿದು ನಾಗರಿಕರು ಸಂಚರಿಸಲು ಅನಾನುಕೂಲವಾಗಿದೆ. ಕೂಡಲೇ ಕೊಳವೆ ಬದಲಾಯಿಸಿ ಕಾಮಗಾರಿ ಮುಂದುವರಿಸಿ. ಇಲ್ಲವಾದಲ್ಲಿ ಕಾಮಗಾರಿ ಸ್ಥಗಿತ ಮಾಡಬೇಕಾಗುವುದು ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ಮೆಟ್ರೊ ಮುಖ್ಯ ಎಂಜಿನಿಯರ್ ಕ್ಯಾಪ್ಟನ್ ದೊಡ್ಡಿಹಾಳ್, `ಮಳೆಯಿಂದಾಗಿ ರಸ್ತೆಗಳನ್ನು ದುರಸ್ತಿಗೊಳಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಹಲವೆಡೆ ಜಲಮಂಡಳಿಯು ಒಳಚರಂಡಿ ಕೊಳವೆಗಳನ್ನು ಸ್ಥಳಾಂತರ ಮಾಡಿಲ್ಲ.

ಜಲಮಂಡಳಿ ಹಾಗೂ ಬಿಎಸ್‌ಎನ್‌ಎಲ್ ಸಹಕಾರ ನೀಡಿದರೆ ರಸ್ತೆಗಳ ಗುಂಡಿಗಳನ್ನು ಮುಚ್ಚುತ್ತೇವೆ. ರಸ್ತೆಗೆ ಡಾಂಬರ್ ಹಾಕುವುದು ನಮ್ಮ ಜವಾಬ್ದಾರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ ರಸ್ತೆಗೆ ಡಾಂಬರ್ ಹಾಕುವುದು ಕೂಡ ನಿಮ್ಮದೇ ಜವಾಬ್ದಾರಿ ಎಂದರು.

ನಂತರ ನವರಂಗ್ ಚಿತ್ರ ಮಂದಿರದ ಬಳಿ (ಹರಿಶ್ಚಂದ್ರಘಾಟ್) ರಸ್ತೆಗಳನ್ನು ವೀಕ್ಷಿಸಿದ ಉಪಮೇಯರ್, ಕಾಮಗಾರಿ ನಡೆಯುತ್ತಿರುವ ಕಾರಣ ಪಾದಾಚಾರಿಗಳು ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ.

ಪಾದಾಚಾರಿಗಳಿಗೆ ಅನುಕೂಲವಾಗುವಂತೆ ಪಾದಾಚಾರಿ ಮಾರ್ಗ (ಫುಟ್‌ಪಾತ್) ನಿರ್ಮಿಸಿ. ಫುಟ್‌ಪಾತ್ ಮೇಲೆಯೇ ಟ್ರಾನ್ಸ್‌ಫಾರ್ಮರ್ ಅಳವಡಿಸಿದ್ದೀರಿ. ಇದರಿಂದ ಜನರಿಗೆ ತೊಂದರೆಯಾಗುತ್ತದೆ. ಕೂಡಲೇ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸಿ. ರಸ್ತೆಗಳಲ್ಲಿ ಸೂಕ್ತವಾದ ಬೀದಿ ದೀಪ ಅಳವಡಿಸಿ ಎಂದು ಬೆಸ್ಕಾಂ ಎಂಜಿನಿಯರ್‌ಗೆ ಆದೇಶಿಸಿದರು.

ಇಸ್ಕಾನ್ ದೇವಾಲಯದ ಮುಂಭಾಗ ಒಳಚರಂಡಿಯ ನೀರು ಮ್ಯಾನ್‌ಹೋಲ್‌ನಿಂದ ಹೊರಬರುತ್ತಿದ್ದು ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ನಿಮಗೆ ಕೈಮುಗಿಯಬೇಕೇನ್ರಿ. ಜನರು ಪಾಲಿಕೆಯನ್ನು ದೂರುವುದಕ್ಕೂ ನೀವು  ಮಾಡುವ ಕೆಲಸಕ್ಕೂ ಸರಿಯಾಗಿದೆ. ಮೊದಲು ಚರಂಡಿ ಸ್ವಚ್ಛಗೊಳಿಸಿ ಎಂದು ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ ಅಧಿಕಾರಿಗಳ ಮೇಲೆ ಬೇಸರ ವ್ಯಕ್ತಪಡಿಸಿದರು.

ಖಾಸಗಿ ಕಂಪೆನಿಗಳ ಕೇಬಲ್ ತೆರವು
ಮೆಟ್ರೊ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಖಾಸಗಿ ಕಂಪೆನಿಗಳು ಅಳವಡಿಸಿರುವ ಒಎಫ್‌ಸಿ ಕೇಬಲ್‌ಗಳನ್ನು ಸ್ಥಳಾಂತರಿಸಲು ಸೂಚಿಸಲಾಗಿತ್ತು. ಈ ಸಂಬಂಧ ಪಾಲಿಕೆಗೆ ಅಫಿಡೆವಿಟ್ ಸಲ್ಲಿಸುವಂತೆ ಕಂಪೆನಿಗಳಿಗೆ ಆದೇಶಿಸಲಾಗಿದೆ.

ಈವರೆಗೆ ಎರಡು ಕಂಪೆನಿಗಳು ಮಾತ್ರ ಅಫಿಡೆವಿಟ್ ಸಲ್ಲಿಸಿವೆ. ಪಾಲಿಕೆ ವತಿಯಿಂದ ಕೇಬಲ್ ತೆರವುಗೊಳಿಸವ ಸಲುವಾಗಿ ಖಾಸಗಿ ಕಂಪೆನಿಗೆ ಸಮೀಕ್ಷೆ ಕಾರ್ಯ ವಹಿಸಲಾಗಿದೆ. ಸೋಮವಾರದಿಂದ ಕೇಬಲ್ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ ತಿಳಿಸಿದರು.

6446 ಮಳಿಗೆ: ನಿಗದಿತ ಅವಧಿಗೆ ಭೋಗ್ಯ
ಬೆಂಗಳೂರು:
ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ 6446 ಅಂಗಡಿ ಮಳಿಗೆಗಳನ್ನು ಮರುಪಾವತಿಸಲಾಗದ ನಿಧಿ ಆಧಾರದ ಮೇಲೆ ನಿಗದಿತ ಅವಧಿಗೆ ಭೋಗ್ಯಕ್ಕೆ ನೀಡಲು ನಿರ್ಧರಿಸಿದೆ.
 

ಜಯನಗರ, ಮಲ್ಲೇಶ್ವರ, ಕೋರಮಂಗಲ, ಕೃಷ್ಣರಾಜ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಬಿಬಿಎಂಪಿಗೆ ಸೇರಿದ ಮಳಿಗೆಗಳಿವೆ. ಪ್ರಸ್ತುತ ಈ ಮಳಿಗೆಗಳಿಂದ 18 ಕೋಟಿ ರೂಪಾಯಿ ಆದಾಯ ಬರುತ್ತಿದೆ. ನಗರದ ವಾಣಿಜ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ವಹಿವಾಟು ಗಮನಿಸಿದರೆ ಈ ಆದಾಯ ಕಡಿಮೆ ಪ್ರಮಾಣದ್ದಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಮಾರುಕಟ್ಟೆ ನೀತಿಯನ್ನು ಬದಲಿಸಿ ಹೆಚ್ಚಿನ ಆದಾಯ ಪಡೆಯಲು ಪಾಲಿಕೆ ಮುಂದಾಗಿದೆ.

ಅನಿರ್ದಿಷ್ಟಾವಧಿಗೆ ಗುತ್ತಿಗೆ ನೀಡಿರುವುದು ಹಾಗೂ ಕಡಿಮೆ ಬಾಡಿಗೆ ಸಂಗ್ರಹಿಸುತ್ತಿರುವುದರಿಂದ ಆದಾಯದಲ್ಲಿ ಕುಸಿತ ಉಂಟಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

`ಹೊಸ ನೀತಿಯಲ್ಲಿ ಗುತ್ತಿಗೆ ಅವಧಿಯನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಹಣವನ್ನು ಮರುಪಾವತಿಸಬೇಕಾದ ಅವಶ್ಯಕತೆ ಇಲ್ಲದೇ ಇರುವುದರಿಂದ ಪಾಲಿಕೆಗೆ ಆದಾಯ ಲಭಿಸುತ್ತದೆ~ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗರದ ಯುಟಿಲಿಟಿ ಕಟ್ಟಡ ಹಾಗೂ ಜಯನಗರ ವಾಣಿಜ್ಯ ಸಂಕೀರ್ಣದ ಮಳಿಗೆಗಳಿಗೆ ಸಂಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಈ ಬದಲಾವಣೆಗೆ ಪಾಲಿಕೆ ನಿರ್ಧರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಪಾಲಿಕೆಗೆ ನೀಡಿತ್ತು. ಪ್ರಸ್ತುತ ಈ ವಿಷಯ ಪಾಲಿಕೆಯ ಮೇಲ್ಮನವಿ ಸ್ಥಾಯಿ ಸಮಿತಿ ಎದುರು ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT